ಹಳಕಾರ ವಿಲೇಜ್ ಪಂಚಾಯತ್ ಫಾರೆಸ್ಟ್ ಇದೀಗ ಕಸದ ತೊಟ್ಟಿ!

ರಾಜ್ಯದ ಹೆಮ್ಮೆಯ ಅರಣ್ಯ ಇದೀಗ ದುರ್ನಾತದಿಂದ ನಾರುತ್ತಿದೆ !

ದೇಶದ ಸಂರಕ್ಷಿತ ಅರಣ್ಯ ವಲಯವಾದ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿನ ಹಳಕಾರ ವಿಲೇಜ್ ಫಾರೆಸ್ಟ್ () ಇಂದು ದಿಕ್ಕುದೆಸೆ ಇಲ್ಲದೇ ಕಸದ ತೊಟ್ಟಿಯಂತಾದದ್ದು ವ್ಯವಸ್ಥೆಯ ವ್ಯಂಗ್ಯ. ರಾಜ್ಯದ ಏಕೈಕ ವಿಲೇಜ್ ಪಂಚಾಯತ್ ಫಾರೆಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಅರಣ್ಯ ವಲಯದಲ್ಲಿ ಇಂದು ಕಂಡ ಕಂಡವರೆಲ್ಲ ಕಸದ ರಾಶಿಯನ್ನು ಎಸೆದು ಬೇಜವಾಬ್ದಾರಿ ತೋರುತ್ತಿದ್ದಾರೆ.

ಹಳಕಾರ ಜನರೇ ಈ ಅರಣ್ಯ ಪ್ರದೇಶದ ಉಸ್ತುವಾರಿ ನೋಡಿಕೊಳ್ಳುತ್ತಿದ್ದು ಯಾರಿಂದಲೂ ಅರಣ್ಯ ಹಾಳಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಅರಣ್ಯ ಪ್ರದೇಶದಲ್ಲಿ ಹಸಿ ಮರ ಗಿಡಗಳನ್ನು ಕಡಿಯದಷ್ಟು ಕಟ್ಟುನಿಟ್ಟಿನ ನಿಯಮಾವಳಿ ಇದೆ. ಒಣಗಿದ ಕಟ್ಟಿಗೆಗಳನ್ನು ಮಾತ್ರ ಉರುವಲಿಗೆ ತೆಗೆದುಕೊಂಡು ಹೋಗಬಹುದಾಗಿದೆ. ಅದೂ ಕೂಡ ಈ ಅವಕಾಶ ಹಳಕಾರದಲ್ಲಿ ಪಹಣಿ ಪತ್ರ ಹೊಂದಿದ ಗ್ರಾಮಸüರಿಗೆ ಮಾತ್ರ. ಅಷ್ಟೆ ಅಲ್ಲ, ಕಾಲ ಕಾಲಕ್ಕೆ ಉರುಳುವ ಒಣಗಿದ ಮರದ ಬದಲಾಗಿ ಊರ ಗ್ರಾಮಸ್ಥರೇ ಅಲ್ಲಿ ನಿಯಮದಿಂತೆ ಸಸಿ ನೆಟ್ಟು ಅರಣ್ಯ ಪ್ರದೇಶದ ಕೊರತೆಯನ್ನು ತುಂಬುತ್ತಾರೆ.


೧೯೨೪ರ ಬ್ರಿಟಿಷ್ ಆಳ್ವಿಯಲ್ಲಿ ಇಂಡಿಯನ್ ಫಾರೆಸ್ಟ್ ಎಕ್ಟ್ ಕಲಂ ನಂಬರ್ ೨೭ರ ಪ್ರಕಾರ ನೋಂದಾಯಿತವಾದ ಈ ವಿಲೇಜ್ ಫಾರೆಸ್ಟ್ಗೆ ಅದರದ್ದೇ ಆದ ಬೈಲೋ ಕೂಡ ಇದೆ. ಅಧ್ಯಕ್ಷ, ಉಪಾದ್ಯಕ್ಷ ಸೇರಿದಂತೆ ಆಡಳಿತ ಸಮಿತಿ ಕೂಡ ಇದೆ. ಮೂರು ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತದೆ. ವಿಲೇಜ್ ಪಂಚಾಯತ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಪಹಣಿ ಪತ್ರ ಇರುವ ಭೂ ಮಾಲಕರು ಮಾತ್ರ ಈ ಪಂಚಾಯತ್‌ನ ಖಾತೆದಾರರಾಗಿದ್ದು, ಅವರೇ ಮತದಾರರೂ ಆಗಿರುತ್ತಾರೆ.
ತುಂಬ ವ್ಯವಸ್ಥಿತವಾಗಿ ತಮ್ಮೂರ ಕಾಡನ್ನು ತಾವೇ ಕಾಪಾಡಿಕೊಂಡು ಬಂದ ಈ ಊರ ಗ್ರಾಮಸ್ಥರ ಎದುರೇ ಈ ಕಾಡು ಇದೀಗ ಕಸದ ತೊಟ್ಟಿಯಂತೆ ಗೋಚರವಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಕುಮಟಾ ಪಟ್ಟಣ ವ್ಯಾಪ್ತಿಯಲ್ಲಿ ಸುಮಾರು ೩೪ ಹಕ್ಟೇರ್ ವ್ಯಾಪ್ತಿಯ ಈ ಹಳಕಾರ ಫಾರೆಸ್ಟ್ ಇಂದು ದಿಕ್ಕುದೆಸೆ ಇಲ್ಲದಂತೆ ಕೊಂಪೆಯಾಗುತ್ತಿದೆ. ಹಳಕಾರ ಫಾರೆಸ್ಟ್ ರಸ್ತೆಯ ಇಕ್ಕೆಲಗಳಲ್ಲೂ ಅಕ್ಕ ಪಕ್ಕದ ಊರಿನವರು ಕಸದ ರಾಶಿಯನ್ನೇ ತಂದು ಇಲ್ಲಿ ಸುರಿದು ಹೋಗುತ್ತಿದ್ದಾರೆ. ಕಸವೆಲ್ಲ ಕೊಳೆತು ಆ ಭಾಗಕ್ಕೆ ಹೋಗದಷ್ಟು ದುರ್ನಾತ ಉಂಟಾಗಿದೆ. ಎಷ್ಟರ ಮಟ್ಟಿಗೆ ಅಂದರೆ ತಮ್ಮ ಮನೆಯ ಕೆಟ್ಟು ಹೋದ, ತುಕ್ಕು ಹಿಡಿದ ಫ್ಯಾನ್, ವಾಶಿಂಗ್ ಮಶೀನ್, ಪ್ರಿಡ್ಜ್ಗಳನ್ನೂ ಇಲ್ಲೇ ಎಸೆದು ಹೋಗುತ್ತಿದಾರೆ. ಹಾಗಾದರೆ ವಿಲೇಜ್ ಪಂಚಾಯತ್ ಪಾರೆಸ್ಟ್ನ ಖಾತೆದಾರ ಮತದಾರರು, ಚುನಾಯಿತ ಸದಸ್ಯರು ಮೌನವಾದರೇ? ಎಂದು ಬೇಸರವಾಗುತ್ತಿದೆ.


ಹಿರಿಯರು ಕಾಯ್ದುಕೊಂಡು ಬಂದ ಈ ಅರಣ್ಯ ಇಂದು ಅನಾಥವಾದಂತೆ ಕಂಡರೆ ಆಶ್ಚರ್ಯವಿಲ್ಲ. ಈ ವಿಲೇಜ್ ಪಂಚಾಯುತ್ ಫಾರೆಸ್ಟ್ಗೆ ಚುನಾವಣೆ ಆಗುವಾಗ ಕುಮಟಾ ತಹಸೀಲ್ದಾರರೇ ಮುಖ್ಯಸ್ಥರಾಗಿರುತ್ತಾರೆ. ಕೇವಲ ಚುನಾವಣೆಗೆ ಮಾತ್ರ ಸೀಮಿತವಾಗದೇ ಅರಣ್ಯ ಪ್ರದೇಶದಲ್ಲಿ ಅನಾಗರಿಕರಂತೆ ಕಸ ಎಸೆದು ಹೋಗುವವರ ವಿರುದ್ಧ ತಹಸೀಲ್ದಾರರು ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದಿದ್ದರೆ ‘ಹತ್ತು ಮಕ್ಕಳ ತಾಯಿ ಹೊಳೆಯಲ್ಲಿ ಬಿದ್ದು ಸಾಯಿ’ ಎಂಬಂಥ ಸ್ಥಿತಿ ಈ ಹಳಕಾರ ವಿಲೇಜ್ ಪಂಚಾಯತ್ ಪಾರೆಸ್ಟ್ಗೆ ಬಂದಂತಾಗುತ್ತದೆ. ಈ ವಿಲೇಜ್ ಪಂಚಾಯತ್ ಪಾರೆಸ್ಟ್ ಸಮಿತಿ ಅಸ್ತಿತ್ವಕ್ಕೆ ಬಂದು ಮುಂದಿನ ವರ್ಷ ಶತಮಾನ ತುಂಬುತ್ತದೆ ಎಂಬುದು ಕೂಡ ಗಮನಾರ್ಹ.


ಉತ್ತಮ ನೈರ್ಮಲ್ಯಕ್ಕಾಗಿ ದೇಶದಲ್ಲಿ ಉತ್ತಮ ಪಟ್ಟಣ ಪಂಚಾಯತ ಎಂದು ಹೆಸರು ಪಡೆದ ಕುಮಟಾ ಪಟ್ಟಣ ಪಂಚಾಯತದ ಮೂಗಿನ ಕೆಳಗೆ ಈ ರೀತಿಯ ದುರ್ನಾತ ಆಗುತ್ತಿದ್ದರೂ ಸಂಬಂಧ ಪಟ್ಟವರು ಜಾಣ ಮೌನ ವಹಿಸಿರುವುದು ವಿಪರ್ಯಾಸವಾಗಿದೆ.
`

Leave a Reply

Your email address will not be published. Required fields are marked *