ಮೈತ್ರಿಯಲ್ಲಿ ತತ್ವ, ಸಿದ್ಧಾಂತಗಳೆಲ್ಲ ಬರಿ ಮಣ್ಣಂಗಟ್ಟಿ!

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಹಿಂದೆ ಲೋಕಸಭಾ ಚುನಾವಣೆಯ ಗೆಲುವಿನ ರಾಜಕೀಯದ ಲೆಕ್ಕಾಚಾರ ಇದೆಯೆಂಬುದು ಪಬ್ಲಿಕ್ ಸೀಕ್ರೆಟ್ಟು. ಕೇವಲ ಹೈಕಮಾಂಡ್ ಮಟ್ಟದಲ್ಲಾದ ಈ ಮೈತ್ರಿಯಲ್ಲಿ ವಿಧಾನಸಭಾಚು ನಾವಣೆಯಲ್ಲಿನ ಸೋಲಿನ ಒಳಬೇಗುದಿ, ಭಿನ್ನ ಸೈದ್ಧಾಂತಿಕತೆ, ಹಿರಿಯ ನಾಯಕರ ಕಡೆಗಣನೆ,

ಚುನಾವಣಾಪೂರ್ವೋತ್ತರ ಸಂಘರ್ಷವೇ ಆದಿಯಾಗಿ ಎಲ್ಲ ಬಗೆಯ ವಿರಸಗಳಿಂದ ರಾಜ್ಯ ಬಿಜೆಪಿಯ ನಾಯಕರಲ್ಲೂ, ಕಾರ್ಯಕರ್ತರಲ್ಲೂಅಸಮಾಧಾನದ ಹೊಗೆ; ಒಳಗೊಳಗೇ ಸೇಡಿನ ಪ್ರತಿಕಾರದ ಧೂಮ! ಬೆಂಕಿಯೂ ಬಹಿರಂಗವಾದ ಮಾತುಗಳಲ್ಲಿ! ಪರಿಣಾಮ, ಪಕ್ಷಾಂತರ ಮೇಧ! ಈ ಲೋಕಸಭಾ ಚುನಾವಣೆಯ ಮೈತ್ರಿಗೆ ಎರಡೂ ಪಕ್ಷದಲ್ಲಿ ಒಲ್ಲದೊಲ್ಲದ ವಿರುದ್ಧದ ಮನಸ್ಥಿತಿ ವಿಸ್ತಾರವಾದ ವ್ಯಾಪ್ತಿಯಲ್ಲಿದೆ.

ಪ್ರಶ್ನೆಯಿರುವುದು, ಈ ಮೈತ್ರಿಯಿಂದ ಆಗಬಹುದಾದ ರಾಜ್ಯದ ಹಿತವೇನು ಎಂಬುದರಲ್ಲಿ! ಯಾಕೆಂದರೆ ರಾಜಕೀಯದಲ್ಲಿ ಅಧಿಕಾರ ಪ್ರಾಪ್ತಿ ಮತ್ತು ಹಂಚಿಕೆಗಾಗಿಯೇ ಮೈತ್ರಿಗಳು ನಡೆಯುವುದೇ ವಿನಾ ಜನಸೇವೆಯೆಂಬುದು ಹೊರಮುಖವಷ್ಟೆ! ಈ ಹಿಂದೆ ಜೆಡಿಎಸ್ ಎರಡೂ ರಾಷ್ಟ್ರೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಅನುಭವಿಸಿದ್ದು ಮತ್ತು ಅದರಿಂದಾದ ಅದ್ವಾನಗಳೆಲ್ಲವೂ ಈಗ ಇತಿಹಾಸ! ಆದರೆ ಈಗ ಆದ ಮೈತ್ರಿ ಕೇಂದ್ರಮಟ್ಟದ್ದು. ಮೊನ್ನೆಯವರೆಗೆ ಹಾವು ಮುಂಗುಸಿಯಂತೆ ಕಿತ್ತಾಡಿದವರು ಈಗ ಒಂದಾಗುವುದು ಸುಲಭವೂ ಅಲ್ಲ, ಸಲೀಸವೂ ಅಲ್ಲ! ಒಲ್ಲದ ಮನಸಿಂದ ಆತ್ಮಸಂಧಾನ, ಅನುಸಂಧಾನ ಸಾಧ್ಯವೇ? Of course… ರಾಜಕೀಯದಲ್ಲಿ ಸಾಧ್ಯವಿದೆಯೆನ್ನಿ. ಯಾಕೆಂದರೆ, Politics makes strange bed fellows- ರಾಜಕೀಯದ ಹಾಸಿಗೆಯಲ್ಲಿ ವಿಚಿತ್ರರು “ಸಂಗ” ಸ್ನೇಹಿತರಾಗುತ್ತಾರೆ. Bed Fellows ಅಂದರೆ ವಿವಾಹಿತರೇ ಆಗಬೇಕೆಂದಿಲ್ಲ.‌ ಇದರಲ್ಲಿ ಏನಾದರೂ ಹೆಚ್ಚು ಕಮ್ಮಿಯಾದರೆ ತ-ಕರಾರು, ದೊಂಬಿ, ಗಲಾಟೆ, ಕೊಲೆಕೇಸು ದಾಖಲೆ, ತಲೆಮರೆಸಿಕೊಳ್ಳುವುದು, ಅನ್ಯಮಾರ್ಗವಿಲ್ಲದೆ ಕೋರ್ಟಿಗೆ ಶರಣಾಗುವುದು, ಬೇಲ್ ಪಡೆದು ಜೇಲ್ ತಪ್ಪಿಸಿಕೊಳ್ಳುವುದು- ಭ್ರಷ್ಟ ರಾಜಕಾರಣಕ್ಕೆ ಹಿಡಿದ ವಾಸಿಯಾಗದ ಅರ್ಬುದ! ಮೈತ್ರಿ ರಾಜಕಾರಣ ಎಂಬುದು ಲಾಗಾಯ್ತಿನಿಂದಲೂ ಸಾಗಿಬಂದುದು. ಬಹುದೊಡ್ಡ ಗುಮಾನಿಯೊಂದಿಗೆ ನೋಡಬೇಕಾದ ನಿತ್ಯ ರಾಜಕಾರಣದಲ್ಲಿ ಈ ಬಗೆಯ ಕಸರತ್ತುಗಳು ಸರ್ಕಸ್ಸಿನಂತೆ ಮನರಂಜನೆಯಾಗುತ್ತವೆ. ಯಾವುದೂ ಸಾಧ್ಯವಲ್ಲದ ರಾಜಕಾರಣವೆಂಬ ದೊಡ್ಡ ಮನರಂಜನೆಯಲ್ಲಿ ಸೋಲು-ಗೆಲುವು, ಅಧಿಕಾರ ಜಟಾಪಟಿ, ಹಪಾಹಪಿ, ಮೈತ್ರಿ, ಹೆಗಲಮೇಲೆ ಕೈಯಿಡುವುದು, ಕೈಯೆತ್ತುವುದು, ಎಗರುವುದು, ಎಗರಿಸುವುದು, ಮುನಿಸಿಕೊಳ್ಳುವುದು, ಕಾಲೆಳೆಯುವುದು, ಪೊಗರುವುದು, ಹಾರಾಟ-ಹೋರಾಟ, ವ್ಯಂಗ್ಯ-ವಿಡಂಬನೆ, ಅಣಕು, ಶಕುನಿ ತಂತ್ರ- ಇವೆಲ್ಲ ತುಂಡುಡುಗೆ ತೊಟ್ಟ ನಟಿಯೊಬ್ಬಳ ನೃತ್ಯವಲ್ಲದ ನೃತ್ಯವನ್ನು ಮಾನಸಿಕ ಚಾಪಲ್ಯದಿಂದ ನೋಡುವಂತೆ, ನೋಡುವುದಕ್ಕಾಗಿ ಮಾತ್ರ ಚೆನ್ನಾಗಿರುತ್ತದೆ. ಹಾಗಂತ ನಮ್ಮ ಮನೆಯ ಹೆಣ್ಣುಮಕ್ಕಳು ಆ ರೀತಿ ನೃತ್ಯ ಮಾಡೋದನ್ನು ನಾವು ಸಹಿಸೆವು. ಇದು ರಾಜಕೀಯದ ಬಗ್ಗೆ ಮಾನವಂತರ ಬೌದ್ಧಿಕ ನಿಲುವು! ಸಿಕ್ಕರೆ ಒಮ್ಮೆ ಸಿಗಲಿ ಎಂಬ ಆಶಯ ಮಾನವಂತರ ನಿಲುವಲ್ಲ! ೮೦ರ ದಶಕದಲ್ಲಿ ರಾಮಕೃಷ್ಣ ಹೆಗಡೆಯವರು, “ಇನ್ನೆಲ್ಲ ಮೈತ್ರೀ ಸರ್ಕಾರದ ಕಾಲ ಬಂತು; ಏಕಸ್ವಾಮ್ಯ ತತ್ತ್ವದ ಏಕಪಕ್ಷೀಯ ಆಡಳಿತ ಮುಗಿಯಿತು” ಹೇಳಿದ್ದರು. ಹಿಂದೆ ಯುನೈಟೆಡ್ ಫ್ರಂಟ್, ಯುಪಿಎ, ಎನ್.ಡಿ.ಎ.ಗಳು ಚುನಾವಣಾಪೂರ್ವ ಒಕ್ಕೂಟವಾದ್ದರಿಂದ ‘ಮೈತ್ರಿ’ಯ ಪಾವಿತ್ರ್ಯ ಅಥವಾ ನೈತಿಕತೆಯ ಪ್ರಶ್ನೆ ಹುಟ್ಟುವುದಿಲ್ಲ. ಆದರೆ ಈಗ ಕರ್ನಾಟಕವೂ ಸೇರಿ ಬೇರೆಬೇರೆ ರಾಜ್ಯಗಳಲ್ಲಿ ಆದ ಮೈತ್ರಿ ಸರ್ಕಾರಕ್ಕೆ ಸಿದ್ಧಾಂತಗಳ ಹಿನ್ನೆಲೆಯನ್ನು ಹೊರತುಪಡಿಸಿ ಮಿತ್ರಭಾವೇನ ಸಂಪ್ರಾಪ್ತಂ ನ ತ್ಯಜೇಯಂ ಕಥಂಚನ- ಮಿತ್ರನಾಗಿ ಬಂದವನನ್ನು ಹೇಗೂ, ಎಂದೂ ಎಲ್ಲೂ ಕೈಬಿಡಲಾರೆ ಎಂದ ಪ್ರಭು ಶ್ರೀರಾಮಚಂದ್ರ ವಿಭೀಷಣ, ಸುಗ್ರೀವ, ಕಾಕಾಸುರ ಮುಂತಾದವರೊಂದಿಗೆ ಮೈತ್ರಿಯೊಂದಿಗೇ ನಡೆದಂತೆ ಕಾಣುತ್ತದೆ. ಆದರೆ, ಅವರೆಲ್ಲರೂ ಪ್ರಭು ಶ್ರೀರಾಮಚಂದ್ರನಲ್ಲಿ ಶರಣಾಗಿ ಕೂಡಿದವರು. ಪಕ್ಷ, ಸಿದ್ಧಾಂತ ಅಂತ ಇರಲಿಲ್ಲ. ಅಧಿಕಾರದಾಸೆ ಇರಲಿಲ್ಲ. ಅಧಿಕಾರ ಪ್ರಾಪ್ತಿ ಮತ್ತು ಹಂಚಿಕೆಗಾಗಿ ಚುನಾವಣಾಪೂರ್ವ ಮೈತ್ರಿ ಒಕ್ಕೂಟದ ವ್ಯವಸ್ಥೆಯಲ್ಲಿ ಸರಿಯೇನೋ ಅಹುದು. ಆದರೆ, ಇಂಥ ಮೈತ್ರಿಯಿಂದ ಆಗುವ ಪ್ರಭಾವ ಎಂಥದ್ದು? ಪರಿಣಾಮ ಯಾವ ಬಗೆಯದ್ದು? ಇಂಥ ಮೈತ್ರಿಯಲ್ಲಿ ರಾಮ ಇರುವುದಿಲ್ಲ, ವಿಭೀಷಣ, ಸುಗ್ರೀವ, ಕಾಕಾಸುರನಂಥ ಸಾತ್ವಿಕರೂ ಇರುವುದಿಲ್ಲ. ಎಲ್ಲ ಅವರವರ ಅನುಕೂಲಕ್ಕೆ ಬೇಕಾಗಿ ಮೈತ್ರಿಗೆ ಮೈಯಾನಿಸುವವರು! ಮತ್ತು ಹಾಗೆ ಬಯಸುವವರು! ಹಾಗೆ ದೂರಾಗುವವರು. ಪ್ರಶ್ನೆಯಿರುವುದು; ಬಿಜೆಪಿಗೆ, ಜೆಡಿಎಸ್ಸಿನ

ಸಾಥ್ ಬೇಕಾಗಿದೆಯೋ? ಮುಳುಗುತ್ತಿರುವ ಜೆಡಿಎಸ್ಸಿಗೆ, ಬಿಜೆಪಿಯ ಸಖ್ಯ ಹಿತವೆನಿಸಿದೆಯೋ? ಅಷ್ಟಕ್ಕೂ ಮೈತ್ರಿ ಯಾರಿಗೆ ಬೇಕು? ಬೇಕಾದರೆ ಯಾಕೆ? ಜನರು ಭಾವಿಸಿದಂತೆ ಈ ಮೈತ್ರಿ ಲೋಕಸಭಾ ಚುನಾವಣೆಗೆ ಸೀಮಿತವಾಗಿ ಮಾತ್ರ ಅಲ್ಲ ಎನ್ನುವುದಾದರೆ, ಜಾತ್ಯತೀತರು ಹಿಂದೂ ವಿರೋಧಿಗಳಲ್ಲಎಂಬುದನ್ನು ಸಾಬೀತು ಮಾಡಲು ಎರಡೂ ಪಕ್ಷಗಳು ಮೈತ್ರಿ ಆಗುವುದಾದರೆ, Politics makes strange bed fellows ಎಂಬ ಮಾತು ಸತ್ಯ! ಅಂದರೆ,
ರಾಜಕಾರಣದಲ್ಲಿ ತತ್ವ, ಸಿದ್ಧಾಂತಗಳೆಲ್ಲ ಬರಿ ಮಣ್ಣಾಂಗಟ್ಟಿ!

ಲೇಖಕರು
ದೇವಿದಾಸ್ ಟಿ.

ಓದುಗರ ಗಮನಕ್ಕೆ :
‘ಹಣತೆ ವಾಹಿನಿ’ ಮುಂದಿನ ಸಂಚಿಕೆಯಿoದ ಇನ್ನಷ್ಟು
ಬದಲಾವಣೆಯೊಂದಿಗೆ, ಮತ್ತಷ್ಟು ಅಂಕಣಗಳೊoದಿಗೆ
ನಿಮ್ಮೆದುರು ಬರಲಿದೆ.

ಬರಹಗಾರರ ಗಮನಕ್ಕೆ :
‘ಹಣತೆ ವಾಹಿನಿ’ ಬಗ್ಗೆ ಪ್ರತಿಕ್ರಿಯಿಸುವವರು ಮುಂದೆ
ನೀಡಲಾಗಿರುವ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.
____________________________________________ ಸಂಪಾದಕ

Leave a Reply

Your email address will not be published. Required fields are marked *