ಅಂದು ಕುಮಟಾ ತಾಲೂಕಿನ ಬಾಡದ ಅಮ್ಮನವರ ದೇವಾಲಯಕ್ಕೆ ನನ್ನ ಮಿತ್ರರೊಬ್ಬರೊಟ್ಟಿಗೆ ಹೋಗಿದ್ದೆ. ದೇವರ ದರ್ಶನ ಪಡೆದು ದೇವಾಲಯದ ಮೆಟ್ಟಿಲು ಇಳಿಯುತ್ತಿದ್ದೆವು. ಆಗ ನನ್ನೊಂದಿಗೆ ಇದ್ದ ನನ್ನ ಮಿತ್ರರು ದೇವಾಲಯದ ಮೆಟ್ಟಿಲುಗಳ ಬದಿಯಲ್ಲಿ ಕುಳಿತ್ತಿದ್ದ ಪುಟ್ಟ ಹುಡುಗಿಯೋರ್ವಳನ್ನು ತೋರಿಸುತ್ತ ” ನೋಡಿ , ಇವಳು ಈ ಬಾರಿ ಎಸ್. ಎಸ್. ಎಲ್. ಸಿ .ಯಲ್ಲಿ ರಾಜ್ಯಕ್ಕೆ ಪ್ರಥಮ ರಾಂಕ್ ಅನ್ನು ಪಡೆದಿರುತ್ತಾಳೆ .

ಇದು ನಮ್ಮೋರ ಹೆಮ್ಮೆಯ ವಿಷಯ ಎಂದರು “. ಇದು ಅವಳ ಗಮನಕ್ಕೂ ಬಂದಿತ್ತು… ಅವಳು ನನ್ನತ್ತ ನೋಡಿ ಸಹಜವೆಂಬಂತೆ ನಗುವನ್ನು ವ್ಯಕ್ತ ಪಡಿಸಿದಳು.. ಆದರೆ ನಾನು ಅವಳಿಗೆ ಅಭಿನಂದನೆಯನ್ನೂ ಹೇಳದೆ ಇಳಿದು ಬರುತ್ತಲೇ ಇದ್ದೆ. ನನ್ನ ಈ ನಡವಳಿಕೆ ಕಂಡು ನನ್ನ ಮಿತ್ರರ ಮುಖದಲ್ಲಿ ” ಇದೆಂತ ದುರ್ನಡತೆ..? ” ಎನ್ನುವ ರೀತಿಯಲ್ಲಿ ಕೊಂಚ ಕೋಪ ಎದ್ದು ಕಾಣುತ್ತಿತ್ತು. ಆದರೆ ಅವರು ಏನೂ ಮಾತಾಡಿರಲಿಲ್ಲ.
ಆದರೆ ಆ ಕ್ಷಣದಲ್ಲಿ ನನ್ನ ನಡತೆ ಅದೇಕೆ ಹಾಗಿತ್ತು ಎಂದು ಯೋಚಿಸತೊಡಗಿದೆ ; ನನ್ನನ್ನೇ ನಾನು ಪ್ರಶ್ನಿಸಿ ಕೊಳ್ಳತೊಡಗಿದೆ…
ಆಗ ಅದೆಷ್ಟೋ ವಿಚಾರಗಳು ಮನದಲ್ಲಿ ಹಾದು ಹೋಗತೊಡಗಿದವು.
ಆ ಯುವತಿಯ ಬಗ್ಗೆ ನಾನು ತುಂಬಾ ಕೇಳಿದ್ದೆ … ಅವಳ ಸಾಧನೆ ನಿಜಕ್ಕೂ ಪ್ರಶಂಶೆಗೆ ಅರ್ಹವಾಗಿತ್ತು… ದಿನಪತ್ರಿಕೆಗಳು ಅವಳ ಬಗ್ಗೆ ತುಂಬಾ ಹೊಗಳಿ ಬರೆದಿದ್ದವು… ಟಿವಿ ಮಾದ್ಯಮದಲ್ಲೂ ಅವಳದ್ದೇ ಕಥೆಯಾಗಿತ್ತು. ಶೋಶಿಯಲ್ ಮೀಡಿಯಾಗಳಲ್ಲಿ ಇವಳ ಬಗ್ಗೆ ಹಾಡಿ ಹೊಗಳಿ ಅದೆಷ್ಟೋ ಪೋಸ್ಟ್ ಗಳು ಹರಿದಾಡುತ್ತಿದ್ದವು. ಇವೆಲ್ಲವನ್ನೂ ನಾನು ಗಮನಿಸಿದ್ದೆ. ಈ ಮದ್ಯೆ , ನಮ್ಮ ಸಮಾಜದ ಮದ್ಯೆ ರಾಂಕ್ ಪಡೆದ ವಿದ್ಯಾರ್ಥಿನಿಗೆ ಈ ರೀತಿಯ ಪ್ರೋತ್ಸಾಹ ಸಿಕ್ಕಿರುವಾಗ ಇತರೆ ರಾಂಕ್ ಪಡೆಯದಿರುವ ವಿದ್ಯಾರ್ಥಿಗಳ ಸ್ಥಿತಿ ಅವರವರ ಮನೆಯವರ ಮದ್ಯೆ , ಸಮಾಜದ ಮದ್ಯೆ ಹೇಗಿರಬಹುದು ಎಂಬ ಯೋಚನೆಯೂ ನನಗೆ ಕಾಡುತ್ತಿತ್ತು. ಹಾಗೆ ಕೆಲವೇ ಕೆಲವು ಮಾರ್ಕ್ಸ್ ಗಳಿಂದ ರಾಂಕ್ ತಪ್ಪಿತು ಎಂದು ಆತ್ಮಹತ್ಯೆಯ ವರೆಗೆ ಮುಟ್ಟಿದ ಕಥೆಗಳೂ ಅದೇಕೋ ನೆನಪಾಗುತ್ತಿದ್ದವು. ಅಂದು ರಾಂಕ್ ಪಡೆದ ಯುವತಿ ಕಣ್ಣೆದುರಿಗೆ ಬಂದಾಗ ಇವೆಲ್ಲ ವಿಚಾರಗಳು ಕಣ್ಣೆದುರಿಗೆ ಸರಿದು ಹೋಗಿದ್ದವು. ಆ ಕ್ಷಣದಲ್ಲಿ ಅವಳಿಗೆ ನಾನೂ ಹೊಗಳುವುದು ಸರಿ ಎನಿಸಿರಲಿಲ್ಲ. ಏಕೆಂದರೆ ಅತಿಯಾದ ಹೊಗಳಿಕೆ ಮನುಷ್ಯನನ್ನು ಶಕ್ತಿಹೀನ ವಾಗಿಸುತ್ತದೆ. ನಮ್ಮ ಸಮಾಜ ರಾಂಕ್ ಪಡೆದವರನ್ನೇ ಹೊಗಳುತ್ತಾ ಪ್ರೋತ್ಸಾಹಿಸುತ್ತ ಹೋದರೆ, ವಿದ್ಯಾರ್ಥಿಗಳಲ್ಲಿ ರಾಂಕ್ ಪಡೆಯುವುದೇ ಜೀವನ ; ರಾಂಕ್ ಪಡೆದರೇ ಮಾತ್ರ ಜೀವನ … ಅದೇ ಜೀವನದಲ್ಲಿ ಯಶಸ್ಸು ನೀಡುತ್ತದೆ ಎಂದು ಮನದಟ್ಟಾಗಿ ಹೋದರೆ ಇದಕ್ಕಿಂತ ಭೀಕರ ಪರಿಸ್ಥಿತಿ ಬೇರೊಂದಿಲ್ಲ. ಈ ನಿಲುವು ರಾಂಕ್ ಪಡೆದವರಿಗೂ, ಪಡೆಯದ ವಿದ್ಯಾರ್ಥಿಗಳಿಗೂ ಕಂಟಕವೇ…
ಇಂದಿನ ಆಧುನಿಕ ಜಗತ್ತಿನಲ್ಲಿ… ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನ ಮುಗಿಸಿ ಉದ್ಯೋಗವೊಂದಕ್ಕೆ ಸೇರಿಕೊಂಡಾಗ ಯಶಸ್ಸು ಕಾಣದ ಉದಾಹರಣೆಗಳು ಅದೆಷ್ಟೋ ಇವೆ. ಇದಕ್ಕೆ ಉದ್ಯೋಗ ಮಾಡುತ್ತಿರುವ ಸ್ಥಳದಲ್ಲಿಯ ವಾತಾವರಣ, ಅಲ್ಲಿನ ಕೆಲಸದ ಪ್ರಕ್ರಿಯೆ, ಶಾಲೆಯಲ್ಲಿ ಕಲಿತ ವಿಷಯಗಳಿಗಿಂತಾ ತೀರಾ ವಿಭಿನ್ನವಾಗಿರುತ್ತದೆ. ಬದಲಾಗುತ್ತಿರುವ ವ್ಯವಹಾರ ರಂಗ ದಿನೇ ದಿನೇ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಾ ಇರುತ್ತದೆ . ಹೀಗಿರುವಾಗ ರಾಂಕ್ ಪಡೆಯುವುದರ ಹಿಂದೆ ಬಿದ್ದು ಕೇವಲ ಸಿಲೇಬಸ್ ನ್ನು ಮಾತ್ರ ತಲೆಯಲ್ಲಿ ತುಂಬಿಕೊಂಡವರ ಗತಿ ಏನಾಗಬಹುದು ನೀವೇ ಯೋಚಿಸಿ..
ವಿದ್ಯಾರ್ಥಿ ಜೀವನ ಕೇವಲ ರಾಂಕ್ ಪಡೆಯುವುದಕ್ಕೆ ಆಗಿರದೆ.. ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಿ ಹೇಗೆ ಪರಿಹರಿಸಿಕೊಳ್ಳಬೇಕು , ಹೊಸ ಹೊಸ ಬದಲಾವಣೆಗಳನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ಕಲಿಸಬೇಕು..
ಆದರೆ ಇಂದು ನಮ್ಮ ಸಮಾಜ ಈ ವಿದ್ಯಾಭ್ಯಾಸದ ಮೂಲ ಗುರಿಯನ್ನೇ ಮರೆತು, ಕೇವಲ ರಾಂಕ್ ಪಡೆದವರಿಗೆ ಮಾತ್ರ ಸನ್ಮಾನಿಸುತ್ತಿದೆ. ಇದು ನಿಜ ಹೇಳಬೇಕೆಂದರೆ ರಾಂಕ್ ಪಡೆದವರನ್ನೂ ಜೀವನದಲ್ಲಿ ಶಕ್ತಿಹೀನರಾಗಿಸುತ್ತದೆ. ಇದನ್ನು ಹೋರಿಯೊಂದು ತನ್ನ ಕೊಂಬಿನಿಂದ ಎದುರಾಳಿಯನ್ನು ಹಾಯುವಂತೆ ಎಂಬ ಹೋಲಿಕೆ ನೀಡುತ್ತೇನೆ… ಏಕೆಂದರೆ ಮೇಲಕ್ಕೆ ತಳ್ಳಲ್ಪಡುತ್ತಿದ್ದೇವೆ ಎನಿಸಿದರೂ ಅದು ನಮಗೆ ಕೆಡುಕೇ ಉಂಟಾಗುತ್ತದೆ.. ಇದರ ಪರಿವೆ ನಮಗೆ ಇರುವುದಿಲ್ಲ… ಇನ್ನು ” ಹಿಂದೆ ಬಂದರೆ (ಹಿಂದೆ ಬಿದ್ದರೆ ) ಒದೆಯಬೇಡಿ” ಎಂಬ ಶೀರ್ಷಿಕೆಯ ಬಗೆಗೆ ತಿಳಿಸಿ ಹೇಳುವುದು ಬೇಡ ಅನಿಸುತ್ತದೆ… ಅಲ್ಲವೇ ?

ಲೇಖಕರು :
ರಾಘವೇಂದ್ರ ಲಕ್ಷ್ಮೇಶ್ವರ್
Founder & Creative Head
Grapito Desings (Design and Marketing agency)