ಹೆಣ್ಣು ಭ್ರೂಣ ಮಣ್ಣು ಪಾಲು : ಅಪ್ಪ ಅಮ್ಮ ಕೊಲೆಗಾರರು…!

Bhroona Hatye

‘ಬೇಟಿ ಬಚಾವೋ..ಬೇಟಿ ಪಡಾವೋ ..’ ಈ ಘೋಷವಾಕ್ಯದೊಂದಿಗೆ 2015 ರಲ್ಲಿ ಬಾರತ ಸರ್ಕಾರ ಹೆಣ್ಣುಮಕ್ಕಳನ್ನು ಉಳಿಸಿ ಬೆಳೆಸುವ ಕಾಳಜಿಯಿಂದ ವಿನೂತನ ರೀತಿಯಲ್ಲಿ ಕಾರ್ಯಾಚರಣೆಗೆ ಇಳಿಯಿತು. ಈ ಘೋಷಣೆ ಸಾರ್ವಜನಿಕ ವಲಯದಲ್ಲಿ ಪರಿಣಾಮಕಾರಿಯಾಗಿ ಚರ್ಚೆಯಾಗಲಿ ಮತ್ತು ಅರಿವು ಮೂಡಲಿ ಎಂಬ ಕಾರಣಕ್ಕಾಗಿ ವಾಲ್ ಪೇಂಟಿಂಗ್,

,ಮಾಧ್ಯಮಗಳಲ್ಲಿ ಜಾಹೀರಾತುಗಳು, ಕಿರು ಅನಿಮೇಶನ್ ಗಳು , ವಿಡಿಯೋ ತುಣುಕುಗಳು, ಕಿರು ಚಿತ್ರಗಳು, ಅಂಚೆ ಚೀಟಿ, ಶಾಲೆ ಕಾಲೇಜುಗಳಲ್ಲಿ ಪ್ರಬಂಧ-ಭಾಷಣ ಸ್ಪರ್ಧೆ…ಹೀಗೆ ನಾನಾರೀತಿಯಲ್ಲಿ ಸಾರ್ವಜನಿಕ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುತ್ತಿದೆ. ಅದು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ ಅಂದರೆ ಉತ್ತರ ಬಾರತದಿಂದ ಬರುವ ಸಾಮಾನು ಸಾಗಾಟದ ಹಲವು ಲಾರಿಗಳ ಹಿಂಭಾಗದಲ್ಲಿ ‘ಬೇಟಿ ಬಚಾವೋ..ಬೇಟಿ ಪಡಾವೋ’ ಸ್ಲೋಗನ್ ಬರೆದಿರುತ್ತಿದೆ! ಅಂದರೆ ಅಷ್ಟರ ಮಟ್ಟಿಗೆ ಈ ಜಾಗೃತಿ ಜನರ ಮನಸ್ಸಿನಲ್ಲಿ ಬೇರೂರಿದೆ. ಸಾಮಾನ್ಯವಾಗಿ ಸರಕಾರದ ಯೋಜನೆ-ಯೋಚನೆಗಳನ್ನು ಗಾಳಿಗೆ ತೂರಿ ಮೂಗು ಮುರಿಯುವವರೇ ಜಾಸ್ತಿ. ಆದರೆ ಇಲ್ಲಿ ಜನಸಾಮಾನ್ಯರೂ ಕೂಡ ಸರಕಾರದ ಈ ಅಭಿಯಾನಕ್ಕೆ ಸ್ವಯಂ ಇಚ್ಛೆಯಿಂದ ಧ್ವನಿಗೂಡಿಸಿದ್ದಾರೆ.

ದುರಂತವೆಂದರೆ ಕರ್ನಾಟಕದಲ್ಲಿ ಕಳೆದ ಮೂರು ವರ್ಷದಲ್ಲಿ 900 ಹೆಣ್ಣು ಭ್ರೂಣವನ್ನು ಅಬೋಷನ್ ಮಾಡಿದ್ದಾರೆ ಎಂದು ವರದಿ ಬಂದಿರುವುದು. ಇದು ತುಂಬ ಆಘಾತಕಾರಿ. ಪ್ರತಿ ಸ್ಕ್ಯಾನಿಂಗ್ ಸೆಂಟರಿನ ಹೊರಗಡೆ ಭ್ರೂಣ ಲಿಂಗ ಪತ್ತೆ ಹಚ್ಚುವುದು ಶಿಕ್ಷಾರ್ಹ ಅಪರಾಧ ಎಂದು ಸರಕಾರದ ಆದೇಶದ ಮೇರೆಗೆ ಪ್ರಕಟಣೆಯನ್ನು ಅಂಟಿಸಿದ್ದರೂ ಒಳಗಡೆ ಕೆಲ ಕ್ರೂರಿ ವೈದ್ಯರು ಕಾನೂನ್ನು ಗಾಳಿಗೆ ತೂರಿ ಗರ್ಭದಲ್ಲಿರುವ ಶಿಶು ಗಂಡು ಹೆಣ್ಣು ಅಂತ ದಂಪತಿಗೆ ಮುಂಚಿತವಾಗಿಯೇ ಹೇಳಿ ಕಾಸು ಗೋಚುವುದು ಅಮಾನವೀಯ. ಗೊಡ್ಡು ಸಂಪ್ರಾದಯದಲ್ಲಿ ನರಳುತ್ತಿರುವವರಾದರೆ ಭ್ರೂಣವನ್ನು ಯಾವ ಕರುಳ ಪ್ರೀತಿಯೂ ಇಲ್ಲದೇ ಕಿತ್ತೆಸೆಯಲು ಹಿಂದೆ ಮುಂದೆ ನೋಡದ ದಂಪತಿಯೂ ಇರುತ್ತಾರೆ. ಕೆಲವೊಮ್ಮೆ ತಾಯಿ ಇಚ್ಛೆ ವಿರುದ್ಧವಾಗಿ ತಂದೆ ಅನ್ನಿಸಿಕೊಂಡ ಭೂಪ ವೈದ್ಯರಿಗೆ ಕಾಸು ಕೊಟ್ಟು ಹೆಂಡತಿ ಗರ್ಭದಲ್ಲಿ ಇನ್ನೂ ಜಗತ್ತನ್ನೇ ಕಾಣದ ಹೆಣ್ಣು ಭ್ರೂಣವನ್ನು ತೆಗೆಸುವ ಕ್ರೌರ್ಯ ಮೆರೆಯುತ್ತಾನೆ.

ಇದೇ ವಾರ ಬಂದ ವರದಿಯಂತೆ ಮೈಸೂರಿನ ಡಾ. ಚಂದನ್ ಬಲ್ಲಾಳ್ ಮೂರು ವರ್ಷಗಳಲ್ಲಿ 900 ಹೆಣ್ಣು ಭ್ರೂಣ ಹತ್ಯೆ (Foeticide Case) ಮಾಡಿ ‘ಮಹಾನ್ ಸಾಧನೆ’ ಮಾಡಿದ್ದಾನೆ. ಈತ ಮೂರು ತಿಂಗಳಲ್ಲೇ 242 ಹೆಣ್ಣು ಭ್ರೂಣ ಹತ್ಯೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ಗೊತ್ತಾಗುತ್ತದೆ. ಕಾನೂನು

ಇಷ್ಟೆಲ್ಲ ಕಠಿಣವಿದ್ದರೂ ಈ ಆಸಾಮಿ ಡಾ.ಚಂದನ್ ವೈಟ್ ಕಾಲರ್ ಹಾಕಿಕೊಂಡು ಇನ್ನೂ ಕಣ್ಬಿಡದ ಕಂದಮ್ಮಗಳ ಉಸಿರು ನಿಲ್ಲಿಸುತ್ತಿದ್ದಾನೆ. ಹೆಣ್ಣು ಭ್ರೂಣಕ್ಕೆ ಹುಟ್ಟುವ ಹಕ್ಕನ್ನೇ ಪ್ರಸವಪೂರ್ವದಲ್ಲೇ ಕಿತ್ತುಕೊಳ್ಳುವಷ್ಟು ಸಮಾಜ ಕ್ರೂರವಾಗಿದೆ. ಹೆಣ್ಣು ಮಕ್ಕಳನ್ನು ಸಾಮಾಜಿಕ ಮತ್ತು ಆರ್ಥಿಕ ಹೊರೆ ಎಂದು ಬಾವಿಸುವ ಈ ನೆಲದಲ್ಲಿ ಗರ್ಭದೊಳಗಿನ ಹೆಣ್ಣು ಭ್ರೂಣದ ಕರುಳ ಬಳ್ಳಿಗೆ ಕತ್ತರಿ ಹಾಕುವ ರಾಕ್ಷಸೀತನ ತಾಂಡವವಾಡುತ್ತಿದೆ. ಭ್ರೂಣದ ಅಸಹಜತೆಗಳನ್ನು ಪತ್ತೆ ಹಚ್ಚಲು ಆಮ್ನಿಯೋಸೆಂಟೆಸಿಸ್ ಮತ್ತು ಅಲ್ಟ್ರಾಸೌಂಡ್ ಅನ್ನು ಬಳಸಲಾಗುತ್ತಿದೆ. ಆದರೆ ಭಾರತದಲ್ಲಿ ಅದನ್ನು ಲಿಂಗ ನಿರ್ಣಯಕ್ಕಾಗಿ ಬಳಕೆಯಾಗುತ್ತಿರುವುದು ವಿಷಾದದ ಸಂಗತಿ. ವೈಜ್ಞಾನಿಕ ಸಂಶೋಧನೆಯನ್ನು ಹೀಗೆಲ್ಲ ದುರ್ಬಳಕೆ ಮಾಡಿಕೊಳ್ಳುವ ವ್ಯವಸ್ಥೆಯನ್ನು ಹದ್ದು ಬಸ್ತಿನಲ್ಲಿಡದಿದ್ದರೆ ಮುಂದೆ ಬಹು ದೊಡ್ಡ ಬೆಲೆಯನ್ನು ಭಾರತ ತೆರಬೇಕಾಗುತ್ತದೆ.

ಇದೀಗ 990 ಹೆಣ್ಣು ಭ್ರೂಣ ಹತ್ಯೆಯ ವರದಿ ದಿಢೀರನೇ ನಮ್ಮೆದುರು ಬಂದು ಆತಂಕಿತರಾಗಿದ್ದೇವೆ. ಕೆಲ ದಿನಗಳ ವರೆಗೆ ಮಾಧ್ಯಮವು ಈ ಬಗ್ಗೆ ಚರ್ಚೆ, ಚಿಂತನೆ, ವಾಗ್ವಾದ ನಡೆಸಿ ನಂತರ ಇನ್ನೊಂದು ಹಗರಣಗಳತ್ತ ಪುಟ ಮುಗುಚುತ್ತವೆ. ಮುಂದೆ ಈ ಪ್ರಕರಣವೇ ತೆರೆ ಹಿಂದೆ ಸರಿದು ಮರೆಯಾಗಿಬಿಡುತ್ತದೆ. ಅಲ್ಲಿಂದ ಮತ್ತೆ ಡಾ. ಚಂದನ್ ಬಲ್ಲಾಳನಂಥ ವೈದ್ಯರು ಕತ್ತಲೆ ಕೋಣೆಯಲ್ಲಿ ಹೆಣ್ಣು ಭ್ರೂಣಗಳಿಗೆ ಯಮರೂಪಿಯಾಗಿ ಬರುತ್ತಾರೆ.

ಸರಕಾರ ಹೆಣ್ಣು ಭ್ರೂಣ ಹತ್ಯೆಯನ್ನು ತುಂಬ ಗಂಬೀರವಾಗಿ ಪರಿಗಣಿಸಿ ತಪ್ಪಿತಸ್ಥ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸಬೇಕು ಮಾತ್ರವಲ್ಲ, ಸಂಸತ್ತಿನಲ್ಲಿ ಸರ್ವಾನುಮತದಿಂದ ಹೆಣ್ಣು ಭ್ರೂಣ ಹತ್ಯೆಗೆ ಪ್ರಸ್ತುತ ನೀಡಲಾಗುತ್ತಿರುವ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಿ, ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಬೇಕಾದ ತುರ್ತು ಇದೆ. ಅಷ್ಟೇ ಅಲ್ಲ, ಹೆಣ್ಣು ಭ್ರೂಣ ಹತ್ಯೆ ಮಾಡಿಸಿಕೊಳ್ಳಲು ಅವಕಾಶ ನೀಡಿದ ತಂದೆ ತಾಯಿಯನ್ನೂ ಶಿಕ್ಷೆ ವ್ಯಾಪ್ತಿಗೆ ಒಳಪಡಿಸಬೇಕು. ಅದಾಗದಿದ್ದರೆ ಮನೆಯಂಗಳದಲ್ಲಿ ಆಟವಾಡಬೇಕಾಗಿದ್ದ ಮುದ್ದು ಬೇಟಿ ಬಚಾವಾಗುವುದು ತುಂಬ ಕಷ್ಟ. .

Leave a Reply

Your email address will not be published. Required fields are marked *