ಇಡಗುಂಜಿಯಲ್ಲಿ ಊಟದ ಪಂಕ್ತಿಯಲ್ಲೂ ಜಾತೀಯತೆ ! : ಗಣಪನೆದುರು ಎಂಜಲು ತಟ್ಟೆ ಗಲಾಟೆ !

Idagunji temple

‘ಇಡಗುಂಜಿಯಲ್ಲಿ ಊಟದ ಪಂಕ್ತಿಯಲ್ಲೂ ಜಾತೀಯತೆ !’ ಇದು 20 ವರ್ಷಗಳಷ್ಟು ಹಳೆಯ ಶೀರ್ಷಿಕೆ. 2023ರ ಸಂದರ್ಭದಲ್ಲಿ ನಾನು ‘ಪ್ರಜಾವಾಣಿ’ ವರದಿಗಾರನಾಗಿದ್ದಾಗ ಇದೇ ಶೀರ್ಷಿಕೆಯಡಿ ಶ್ರೀ ಕ್ಷೇತ್ರ ಇಡಗುಂಜಿಯ ಅನ್ನಕ್ಕೂ ಜಾತೀಯತೆಯ ನಂಜು ಅಂಟಿಸುವ ಬಗ್ಗೆ ವರದಿ ಮಾಡಿದ್ದೆ.

ಇಡಗುಂಜಿ ಮಾತ್ರವಲ್ಲ, ಅದೇ ವರದಿಯಲ್ಲಿ ಹೈಗುಂದದ ಅಮ್ಮನವರ ದೇವಸ್ಥಾನದಲ್ಲೂ ಊಟದ ಪಂಕ್ತಿಯಲ್ಲಿ ಜಾತೀಯತೆ ಮಾಡುವ ಬಗ್ಗೂ ಪ್ರಸ್ತಾಪ ಮಾಡಿದ್ದೆ. ಆಗ ವರದಿ ಬಂದ ತಕ್ಷಣ ಜಿಲ್ಲಾದಿಕಾರಿಗಳು ಇಡಗುಂಜಿ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿ ಅನ್ನಛತ್ರದಲ್ಲಿ ನಡು ಮಧ್ಯೆ ಹಾಕಿದ ಬಟ್ಟೆಯ ಪರದೆಯನ್ನು ತೆಗೆಸಿದ್ದರು. ಅನಂತರದ ಕೆಲ ವರ್ಷಗಳ ವರೆಗೆ ಪರದೆ ಇಲ್ಲದೇ ಅನ್ನ ಸಂತರ್ಪಣೆ ನಡೆಯಿತು. ಅದಾದ ನಂತರ ಮತ್ಯಾವತ್ತೋ ಸದ್ದಿಲ್ಲದೇ ಮಡಿ ಪರದೆ ಮನುಷ್ಯ ಮನುಷ್ಯರ ನಡುವಿನ ಗಡಿಯಂತೆ ನಿಂತಿದೆ. ಇದೀಗ ಮತ್ತೆ ಅದೇ ಮಡಿವಂತ ಅನ್ನಛತ್ರದ ಪರದೆ ಬಗ್ಗೆ ಗಣಪನ ಎದುರೇ ಎಂಜಲು ತಟ್ಟೆ ಗಲಾಟೆ ಆದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಕ್ಲಿಪ್ ಒಂದು ಹರಿದಾಡಿ ಚರ್ಚೆಗೆ ಇಂಬು ಕೊಟ್ಟಿದೆ.

ತಾವು ಮೇಲ್ ಜಾತಿ ಎಂಬ ಭ್ರಮೆಯಲ್ಲಿರುವ ಕೆಲವರು ‘ಪರದೆ ಹಾಕಿದ್ದು ಸರಿ ಇದೆ. ನಾವು ಊಟ ಮಾಡುವ ಪದ್ಧತಿ ವಿಶಿಷ್ಟವಾಗಿದೆ. ಹರ್ ಹರ್ ಮಹಾದೇವ್ ಅಂತ ಹೇಳಿ ಊಟ ಮಾಡುತ್ತೇವೆ. ಮಿಕ್ಕವರು ಊಟ ಬಡಿಸುವಾಗಲೇ ಬಾಳೆಗೆ ಕೈ ಹಾಕಿ ಚಪ್ಪರಿಸುತ್ತಾರೆ. ಇದು ತಮಗೆಲ್ಲ ಸರಿ ಬರಲ್ಲವೆಂತಲೂ, ದೇವಸ್ಥಾನ ಇರುವುದರಿಂದಲೇ ಸುತ್ತಮುತ್ತಲ ತಳಸಮುದಾಯದ ಅನೇಕರು ಹಣ್ಣು ಕಡ್ಡಿ ಕರ್ಪೂರ ಹೂವಿನ ಅಂಗಡಿ ಇಟ್ಟುಕೊಂಡು ಅನ್ನದ ದಾರಿ ನೋಡಿಕೊಂಡಿದ್ದಾರೆ; ಒಂದೊಮ್ಮೆ ಅರ್ಚಕರು ಪೂಜೆ ಮಾಡದೇ ದೇವಸ್ಥಾನಕ್ಕೇ ಬೀಗ ಹಾಕಿದರೆ ಇವರೆಲ್ಲ ಎಲ್ಲಿ ಹೋಗುತ್ತಾರೆ. ತಾವು ಪೂಜೆ ಮಾಡುವುದರಿಂದಲೇ ಅನೇಕರು ಬದುಕು ಕಟ್ಟಿಕೊಂಡಿದ್ದಾರೆ ಎಂದು ವಿತಂಡವಾದ ಮುಂದೆ ಇಡುತ್ತಿದ್ದಾರೆ.

ನೂರಾರು, ಸಾವಿರಾರು ವರ್ಷಗಳಿಂದ ರೂಢಿಗೆ ಬಂದ ಜಡ್ಡುಗಟ್ಟಿದ ಜಾತಿ ವ್ಯವಸ್ಥೆ ಇಂದಿಗೂ ಮಡಿ ನೆಪದಲ್ಲಿ ತಾರತಮ್ಯ ಮಾಡುವ ಪರಿ ಅತಿರೇಕ ಅನ್ನದಿರಲಾಗದು. ಗಣಪನ ಬಳಿ ದೂರ ದೂರದಿಂದ ಬರುವ ಭಕ್ತರು ಪೂಜೆ ಮುಗಿಸಿ ಪ್ರಸಾದದ ರೂಪದಲ್ಲಿ ಊಟ ಮಾಡಲು ಛತ್ರದಲ್ಲಿ ಒಂದೆಡೆ ಸೇರುತ್ತಾರೆ. ಅನ್ನ ಅಂದರೆ ಅನ್ನಪೂರ್ಣೇಶ್ವರಿ ಅನ್ನುವ ಇದೇ ಮಡಿವಂತ ಜನ ಜಾತಿ ಹೆಸರಿನಲ್ಲಿ ಮೇಲ್ಜಾತಿಯವರು ಅಲ್ಲಿ, ಕೆಳ ಜಾತಿಯವರು ಇಲ್ಲಿ ಊಟಕ್ಕೆ ಕುಳ್ಳಬೇಕು ಎಂದು ಪರದೆ ಹಾಕುವುದು ಜಾತೀಯತೆಯ ನಿಷ್ಠೆ, ಪರಾಕಾಷ್ಠೆ.

ನಾನು ಆಗ ವರದಿ ಮಾಡುವಾಗ ಹೈಗುಂದದಲ್ಲಿ ಅಮ್ಮನವರ ವಿಶೇಷ ಕಾರ್ಯಕ್ರಮ ನಡೆದಿತ್ತು. ಪತ್ರಕರ್ತರಿಗೂ ವರದಿ ಮಾಡಲು ಆಹ್ವಾನಿಸಿದ್ದರು. ಅಲ್ಲೂ ಇದೇ ಕಥೆ. ದೇವಸ್ಥಾನದ ಪ್ರಾಂಗಣದ ತುಂಬ ಚಪ್ಪರ ಹಾಕಿದ್ದರು. ಅರ್ಚಕ ವೃತ್ತಿಯ ಮೇಲ್ಜಾತಿಯವರೆನಿಸಿಕೊಂಡ 17 ಜನ ಮಹಾಪೂಜೆಯ ನಂತರ ವಿಶಾಲ ಚಪ್ಪರದಡಿ ಊಟಕ್ಕೆ ಕುಳಿತಿದ್ದರು. ಹೊರಡಗೆ ತಳ ಸಮುದಾಯದ ನೂರಾರು ಜನ ರಣರಣ ಬಿಸಿಲಿನಲ್ಲಿ 17 ಜನರ ಊಟ ಮುಗಿಯುವವರೆಗೆ ಕಾಯುತ್ತಿದ್ದರು! ಎಷ್ಟೋ ಹೆಂಗಸರ ಸೊಂಟದಲ್ಲಿದ್ದ ಪುಟಾಣಿ ಮಕ್ಕಳು ಹಸಿವಿನಿಂದ ಅಳುತ್ತಿದ್ದರು. ನಾನು ಚಪ್ಪರದ ಹೊರಗೆ ಊಟಕ್ಕೆ ಕಾಯುತ್ತಿದ್ದ ಜನ ಸಮುದಾಯದ ಫೋಟೊ ಹಾಕಿ ವರದಿ ಮಾಡಿದ್ದೆ. ಒಂದೇ ವರದಿಯಲ್ಲಿ ಇಡಗುಂಜಿ ಮತ್ತು ಹೈಗುಂದ ದೇವಸ್ಥಾನಗಳಲ್ಲಿನ ಊಟದ ಪಂಕ್ತಿಯ ಜಾತಿ ನಂಜಿನ ಬಗ್ಗೆ ಬರೆದಿದ್ದೆ. ಕೆಲ ಮಡಿವಂತರು ವರದಿ ನೋಡಿ ವ್ಯಗ್ರರಾದರು. ಆದರೆ ಮೇಲ್ ಸ್ತರದ ಪ್ರಜ್ಞಾವಂತ ನನ್ನ ಗೆಳೆಯರನೇಕರು ಆ ವರದಿಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಅಂದರೆ ವ್ಯವಸ್ಥೆಯಲ್ಲಿ ಎಲ್ಲ ಮನಸ್ಸುಗಳು ಕಿಲುಬು ಅಲ್ಲವೇ ಅಲ್ಲ ಅಂತಾಯ್ತು. ನಾವು ಆರೋಗ್ಯಕರವಾಗಿ ಚಿಂತನೆ ಮಾಡಿದರೆ ಜಗತ್ತು ಕೂಡ ಆರೋಗ್ಯಕರವಾಗಿಯೇ ಕಾಣುತ್ತದೆ.

ಅನೇಕ ತಳ ಸಮುದಾಯದ ಪ್ರಜ್ಞಾವಂತರು ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ಮಡಿವಂತಿಕೆಯ ನೆಪದಲ್ಲಿ ಆಗುತ್ತಿರುವ ಅವಮಾನ ನುಂಗಿ ಮತ್ತೆ ಅದೇ ವ್ಯವಸ್ಥೆಯಡಿ ಹಲ್ಲುಗಿಂಜುತ್ತ ಪ್ರತ್ಯೇಕ ಪಂಕ್ತಿಯಲ್ಲಿ ಕುಳಿತು ಊಟ ಮಾಡಿ ಬರುತ್ತಾರೆ. ಅದರ ಬದಲು ಜವಾಬ್ದಾರಿಯಿಂದ, ಉದ್ವೇಗಗೊಳ್ಳದೇ ಸಮಾಧಾನದಿಂದ ಇಡಗುಂಜಿಗೆಯ ಅರ್ಚಕ ಬಂಧುಗಳಿಗೆ ತಿಳಿಸಿ ಹೇಳುವ ಪ್ರಯತ್ನ ಮಾಡಿದರೆ ಪಂಕ್ತಿಬೇಧದ ಅನಿಷ್ಟ ದೂರ ಮಾಡಬಹುದು.

ಮೇಲು ಸ್ತರದವರಿಗೂ, ತಳ ಸ್ತರರದವರಿಗೂ ಹೇಳುವುದು ಏನೆಂದರೆ ಇನ್ನೆಷ್ಟು ದಿನ ಈ ಜಾತೀಯತೆಯ ಕಿಡಿ? ಸಿಡಿಮಿಡಿ? ನಾವೆಲ್ಲ ಮನುಷ್ಯರು. ಒಂದೇ ಬಟ್ಟಲಿನಲ್ಲಿ ಊಟ ಮಾಡುವುದು ಬೇಡ. ಅಕ್ಕಪಕ್ಕದಲ್ಲಿಯಾದರೂ ಊಟಕ್ಕೆ ಕುಳಿತುಕೊಳ್ಳೋಣ. ಇಡಗುಂಜಿಯಲ್ಲಿ ಅಂಥ ದಿನ ಬೇಗ ಬರುವಂತೆ ಗಣಪ ಎಲ್ಲರನ್ನೂ ಅನುಗ್ರಹಿಸಲಿ ಎಂಬುದಷ್ಟೇ ಇಲ್ಲಿಯ ಆಶಯ.

Arvind karkikodi

ಲೇಖಕರು
ಅರವಿಂದ ಕರ್ಕಿಕೋಡಿ
ಪ್ರಧಾನ ಸಂಪಾದಕರು
ಹಣತೆವಾಹಿನಿ

Leave a Reply

Your email address will not be published. Required fields are marked *