ಕೇರಳ ಮೀನುಗಾರಿಕೆಯಲ್ಲಿ ಚೀನಿಯರ ಬಲೆ!

china

ಬೆಸ್ತರ ಬದುಕು ಆರಂಭವಾಗುವದೇ ನಸುಕಿನಲ್ಲಿ. ಇವರ ಸಾಂಪ್ರದಾಯಿಕ ಮೀನುಗಾರಿಕೆಯ ಕಸುಬಿಗೆ ಬಲೆಯೇ ಆಧಾರ. ಈ ಬಲೆಗೂ ಬೆಸ್ತರಿಗೂ ಅವಿನಾಭಾವ ನಂಟಿದೆ. ಅದಿಲ್ಲದಿದ್ದರೆ ಅವರ ಬದುಕೇ ಬರಿದು. ಭಾರತದ ಪಶ್ಚಿಮದ ಕಡಲ ತೀರದಲ್ಲಿ ಇವರ ಕಸುಬುದಾರಿಕೆಯ ಚಿತ್ರಣವನ್ನು ಕಾಣಬಹುದು.

ರಾಜ್ಯದ ಮಂಗಳೂರಿನ ಕರಾವಳಿ ತೀರದಿಂದ ಕನ್ಯಾಕುಮಾರಿಯ ಕಡಲ ತೀರದವರೆಗೂ ಬೆಸ್ತರ ಜೀವನ ಶೈಲಿಯ ಹಲವು ಸಾಂಪ್ರದಾಯಿಕತೆಯ ಪುಟಗಳು ತೆರೆದುಕೊಳ್ಳುತ್ತದೆ.ಅದರಲ್ಲಿ ವಿಶೇಷ ವಾಗಿ ಕೇರಳದ ಕೋಚಿನ್ ಹಾಗು ಕೊಲ್ಲಂನಲ್ಲಿ ಮತ್ಸೋದ್ಯಮದಿಂದ ಬದುಕುವ ಬೆಸ್ತರ ಜೀವನವೇ ವೈಶಿಷ್ಟ್ಯ ತೆಯಿಂದ ಕೂಡಿದೆ. ಇಲ್ಲಿಗೆ ಹಲವು ಶತಮಾನಗಳ ಹಿಂದೆ ಚೀನಿಯರು ಮತ್ಸೋದ್ಯಮದಲ್ಲಿ ತೊಡಗಿದ್ದರ ಇತಿಹಾಸವಿದೆ. ಇಲ್ಲಿನ ಕಡಲಂಚುಗಳ ಎರಡು ಪಾರ್ಶ್ವದ ಉದ್ದಕ್ಕೂ ಚೀನಿ ಮಾದರಿಯ ಮೀನಿನ ಬಲೆಗಳನ್ನು ನೋಡಬಹುದು. ಇದನ್ನೆ ಕ್ಯಾಂಟಿಲಿವರ್ (Cantilever fishing net) ಬಲೆಗಳೆಂದು ಕರೆಯುತ್ತಾರೆ. ಈ ಬಲೆಗಳು ಇಲ್ಲಿಗೆ ಹೇಗೆ ಬಂದವು ಎನ್ನುವ ಆನ್ವೇಷಣೆಯಲ್ಲಿ ತೊಡಗಿದರೆ ಇತಿಹಾಸ ಹೊರಹೊಮ್ಮುತ್ತದೆ.

ಈ ಪ್ರಾಂತ್ಯದಲ್ಲಿ ಚೀನಿಯರು ಎಂಟನೆಯ ಶತಮಾನದಿಂದಲೂ ವಾಸಿಸುತ್ತಿರುವ ಬಗ್ಗೆ ಉಲ್ಲೇಖಗಳಿವೆ. 1400 ನೇ ಇಸವಿಯ ಆಸುಪಾಸಿನಲ್ಲಿ ಕುಬ್ಲಾಖಾನ್ ಆಸ್ಥಾನದಲ್ಲಿದ್ದ ಚೀನಾ ಪರಿಶೋಧಕ ಝೆಂಗ್ ಹೇ ಈ ಬಲೆಗಳನ್ನು ಪರಿಚಯಿಸಿದ ಕುರಿತ ಉಲ್ಲೇಖಗಳಿವೆ. ಈ ಬಲೆಗಳು ಸಾಂಪ್ರದಾಯಿಕ ಮೀನುಗಾರಿಕೆಯ ಸಾಧನವಾಗಿದೆ. ಈ ಬಲೆಯನ್ನು ಉಪಯೋಗಿಸಿ ನೀರಿನ ಹತ್ತಿರ ಇರುವ ಮೀನುಗಳನ್ನು ಹಿಡಿಯಲು ಸಾಧ್ಯವಿದೆ.ಮಾನವನಿಂದ
ನಿಯಂತ್ರಿಸಲ್ಪಡುವ ಮೀನು ಹಿಡಿಯುವ ಈ ಯಂತ್ರ ಅಂದು ಮತ್ಸೋದ್ಯಮದಲ್ಲಿ ಹೊಸ ತಿರುವನ್ನೆ ಕೊಟ್ಟಿದೆ. ಇದರಿಂದಾಗಿ ಕೋಚಿನ್ ಪ್ರಾಂತ್ಯದಲ್ಲಿ ಮತ್ಸೋದ್ಯಮ ಒಂದು ಶತಮಾನಕ್ಕಿಂತ ಹೆಚ್ಚು ಕಾಲ ಅಂದರೆ ಅರೇಬಿಯನ್ನರು ಚೀನಿಯರನ್ನು ಓಡಿಸುವವರೆಗೆ ಯಶಸ್ವಿಯಾಗಿ ನಡೆದಿತ್ತು.

ಚೀನಿಯರು ಹೋದನಂತರ ಕ್ಯಾಂಟಿಲಿವರ್ ಬಲೆಗಳನ್ನು ತೆಗೆದು ಹಾಕಲಾಯಿತು.ತದನಂತರ 16 ನೇ ಶತಮಾನದ ಆರಂಭದಲ್ಲಿ ಪೋರ್ಚುಗೀಸ್ ರು ಅರೇಬಿಯನ್ನರನ್ನು ಓಡಿಸಿದರು. ನಂತರ ಪೋರ್ಚುಗೀಸರು ಚೀನಾದ ಕ್ಯಾಂಟಿಲಿವರ್ ಬಲೆಗಳನ್ನು ಪುನಃ ಕೋಚಿನ್ ಗೆ ಪರಿಚಯಿಸಿದರು.ಪೋರ್ಚುಗೀಸ್ ವಸಾಹತಾಗಿದ್ದ ಚೀನಾದ ಮಕಾಓ ಪ್ರದೇಶದಿಂದ ಈ ಬಲೆಗಳನ್ನು ತಂದಿರುವ ಕುರಿತ ಉಲ್ಲೇಖಗಳಿವೆ.

ಕ್ಯಾಂಟಿಲಿವರ್ ಬಲೆಗಳಿಂದ ಮೀನು ಹಿಡಿಯುವ ವಿಧಾನ ಶತಶತಮಾನಗಳಷ್ಟು ಹಳೆಯದಾದರೂ ಇಂದಿಗೂ ಚೀನಾದ ಈ ವಿಧಾನ ಬೆಸ್ತರಿಗೆ ತುಂಬ ಉಪಯೋಗಕ್ಕೆ ಬರುತ್ತಿದೆ. ಆವುಗಳ ಮೂಲ ವಿನ್ಯಾಸವಾಗಲಿ ಉಪಯೋಗಿಸುವ ರೀತಿಯಾಗಲಿ ಇದುವರೆಗೂ ಹೆಚ್ಚಿನ ಬದಲಾವಣೆ ಕಂಡಿಲ್ಲ. ಈ ಬಲೆ ಕಡಲಂಚಿನ ಬೆಸ್ತರಿಗೆ ಜೀವನಾಧಾರವನ್ನು,ಅನೇಕ ಜನರಿಗೆ ಆಹಾರ ಒದಗಿಸುವುದನ್ನು ಮುಂದುವರೆಸಿದೆ.
ಇಲ್ಲಿನ ಹಿರಿಯ ಬೆಸ್ತರೊಬ್ಬರ ಹೇಳಿಕೆಯಂತೆ, ಈ ಬಲೆಗಳಿಂದ ಹಿಡಿಯುವ ಮೀನುಗಳ ರಾಶಿ ಎಷ್ಟಿತ್ತೆಂದರೆ ಇಡೀ ಗ್ರಾಮದ ಜನರಿಗೆ ಅದನ್ನು ಹಂಚಬಹುದು. ಬಲೆಗಳು ತುಂಬ ಉಪಯುಕ್ತ ಹಾಗು ಸುಂದರ. ವಿಶೇಷವಾಗಿ ಬೆಳಗಿನ ಹೊಂಬಣ್ಣದ ಆಕಾಶಕ್ಕೆ ಎದುರಾಗಿ ಕಡಲಂಚಿನಲ್ಲಿ ಇವುಗಳನ್ನು ನೋಡಿದಾಗ ಮೂಡುವ ಸುಂದರ ಛಾಯಾರೂಪದ ದೃಶ್ಯ ಕಣ್ತುಂಬ ನೋಡಿದರೂ ಸಾಲದು. ಇಲ್ಲಿಗೆ ಚೀನಿಯರು, ಅರೇಬಿಯನ್ನರು, ಪೋರ್ಚುಗೀಸರು ಬಂದು ಹೋಗಿದ್ದಾರೆ. ಆದರೆ ಚೀನಾದ ಮೀನಿನ ಬಲೆಗಳು ಮಾತ್ರ ಆರು ನೂರು ವರ್ಷಕ್ಕಿಂತ ಹೆಚ್ಚಿನ ಕಾಲದಿಂದ ಕೋಚಿನ್ ,ಕೊಲ್ಲಂ ಕಡಲನ್ನು ಅಲಂಕರಿಸಿ ಕೆಳಕ್ಕೂ ಮೇಲಕ್ಕೂ ಅಲುಗಾಡಿಸುತ್ತಲೇ ತಮ್ಮ ಕೆಲಸ ಮುಂದುವರಿಸಿಕೊಂಡು ಬಂದಿದೆ. ಇದೀಗ ಈ ಬಲೆಗಳು ಕೋಚಿನ್ ಪ್ರವಾಸೋದ್ಯಮ ನಕ್ಷೆಯಲ್ಲಿ ಪ್ರಮುಖ ಸ್ಥಾನ ತಂದುಕೊಟ್ಟಿದೆ. ಪ್ರವಾಸಿಗರ ಸಾಂಪ್ರದಾಯಿಕ ಆಕರ್ಷಣೆಗಳಲ್ಲಿ ಒಂದಾಗಿದೆ. ಒಂದು ಕಾಲದಲ್ಲಿ ಕೇವಲ ಮೀನುಗಾರಿಕೆಯ ಪರಿಕರವಾಗಿದ್ದ ಕ್ಯಾಂಟಿಲಿವರ್ ಬಲೆಗಳು ಇಂದು ಪ್ರವಾಸೋದ್ಯಮದ ಕೇಂದ್ರ ಬಿಂದು. ಪ್ರಸ್ತುತ ಕೇರಳದ ಸರ್ಕಾರ ಹಿಂದಿನ ಹಳೆಯ ಬಲೆಗಳಿಂದ ಮೀನುಗಾರಿಕೆಗೆ ಅವಕಾಶ ನೀಡಿದ್ದು, ಹೊಸದಾದ ಚೀನಾದ ಬಲೆಗಳಿಂದ ಮೀನುಗಾರಿಕೆ ಗೆ ಅನುಮತಿಸುವುದಿಲ್ಲ ಎಂದು ತಿಳಿಸಿದೆ ಎನ್ನಲಾಗಿದೆ.


ಲೇಖಕರು :
ಎನ್. ಜಯಚಂದ್ರನ್,
ದಾಂಡೇಲಿ

Leave a Reply

Your email address will not be published. Required fields are marked *