ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಜನತೆ ಬಹಳ ಸ್ಪಷ್ಟವಾಗಿ ವಿಭಜಿತವಾದದ್ದು ಬಹಶಃ ಜಾತಿ ಗಣತಿಯ (Caste Census) ವಿಷಯಕ್ಕೆ ಇರಬೇಕು. ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗಿನ ಚುನಾವಣೆಗಳೆಲ್ಲದರಲ್ಲಿಯೂ ಸಹ ಗುಪ್ತಗಾಮಿನಿಯಾಗಿಯೇ ವರ್ತಿಸುವ ಇಲ್ಲಿನ ಜನಸಾಮಾನ್ಯ ಜಾತಿ ವಿಚಾರ ಬಂದೊಡನೆ ಸಂಖ್ಯಾ ಬಾಹುಳ್ಯ ಪ್ರದರ್ಶಿಸುವ ಬಲಾಬಲದ ವೇದಿಕೆಯ ಸ್ಪರ್ಧಾಳುವಾಗಿಬಿಡುತ್ತಾನೆ.
ಆದಿ ಕವಿ ಪಂಪನಿಂದ ಮೊದಲ್ಗೊಂಡು, ಬಸವೇಶ್ವರರ ನೇತೃತ್ವದ ವಚನ ಚಳುವಳಿ, ಕೀರ್ತನೆಕಾರರ ಸಿರಿನುಡಿ, ಕುವೆಂಪು ಪ್ರಣೀತ ಆಧುನಿಕ ವರ್ತಮಾನದವರೆಗೂ ಜಾತ್ಯತೀತ ಸೌಹಾರ್ದತೆಯನ್ನೇ ಪಲ್ಲಕಿಯಾಗಿ ಹೊತ್ತಿದ್ದೇವೆಂಬ ಗುಂಗಿನಲ್ಲಿದ್ದವರೆಲ್ಲರ ಮುಖವಾಡಗಳೀಗ ಜಾತಿಗಣತಿಯ ಚರ್ಚೆಯಲ್ಲಿ ಸಡಿಲವಾಗಿದೆ.
ಜಾತಿ ಗಣತಿಯ ಕುರಿತಾದ ಅಪಸ್ವರಗಳನ್ನು ಆತಂಕಗಳೆಂದು ಪರಿಗಣಿಸಬೇಕೋ? ಅಥವಾ ತಥಾಕಥಿತ ವರ್ಣವ್ಯವಸ್ಥೆಯ ಶ್ರೇಣೀಕರಣವನ್ನು ಕಾಪಿಡುವ ಸಂಚಿನ ಭಾಗವಾಗಿ ನೋಡಬೇಕೋ? ಎಂಬ ಸಂದರ್ಭದಲ್ಲಿ ಸತ್ಯದ ತಕ್ಕಡಿ ಸಂಚಿನೆಡೆಗೆ ತೂಗುತ್ತಿರುವುದು ವೇದ್ಯವಾಗುತ್ತದೆ.
ವಸಹಾತುಶಾಹಿ ಬ್ರಿಟಿಷರು 1931ರಲ್ಲಿ ದಾಖಲಿಸಿದ ಭಾರತದ ಜಾತಿ ಗಣತಿಯೇ ಇಂದಿನವರೆಗೂ ಪ್ರಾತಿನಿಧ್ಯದ ಹಂಚಿಕೆಗೆ ಮಾನದಂಡವಾಗಿರುವುದು ಆಧುನಿಕ ಭಾರತದ ವ್ಯಾಖ್ಯಾನಕ್ಕೆ ಶೋಭೆಯಲ್ಲ. ಬಾಬಾ ಸಾಹೇಬ ಅಂಬೇಡ್ಕರರು (Baba Saheb Ambedkar) ಕನಸಿನ ಜಾತಿ ವಿನಾಶದ ಅಡಿಪಾಯವಾಗಿ ‘ಜಾತಿ ಗಣತಿ’ ಅತ್ಯಗತ್ಯವೆನ್ನುವುದು ಎಲ್ಲರ ಅರಿವಾಗಬೇಕಿದೆ.
ಜಾತಿ ಗಣತಿಯ ಮೂಲಕ ಜಾತಿ ವಿನಾಶ ಹೇಗೆ? ಹೌದು, ದೇಶದ ಒಟ್ಟೂ ಜನಸಂಖ್ಯೆಯ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆಗಳ ಗಣಿತ ನಮಗೆ ಅರ್ಥವಾಗಬೇಕಾದರೆ, ಅದರ ಮಾಪನ ಜಾತಿ ಗಣತಿಯೇ ಆಗಿರಬೇಕು. ತನ್ಮೂಲಕ ಸಮಾಜದ ಮುಖ್ಯವಾಹಿನಿಯಿಂದ ಹೊರ ಉಳಿದಿರುವ ಜನಸಮುದಾಯಗಳಿಗೆ ಸಾಂವಿಧಾನಿಕ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಅನುವಾಗುತ್ತದೆ. ನಂತರದಲ್ಲಿ ಅಂತಹ ಸಮುದಾಯಗಳು ತಮ್ಮ ಕೀಳರಿಮೆಯನ್ನು ಮರೆತು ಮುಖ್ಯವಾಹಿನಿಯಲ್ಲಿ ಸೇರತೊಡಗಿದಾಗ ಜಾತಿ ವಿನಾಶದ ಕನಸು ವಾಸ್ತವವಾಗುತ್ತದೆ.
1902ರಲ್ಲಿ ಮೊದಲ ಬಾರಿಗೆ ಮೀಸಲು ಪರಿಕಲ್ಪನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಕೀರ್ತಿ ಕೊಲ್ಹಾಪುರ ಸಂಸ್ಥಾನದ ಮಹಾರಾಜ ಶಾಹು ಮಹಾರಾಜರಿಗೆ (Kollapur Shahu Maharaj) ಸಲ್ಲಬೇಕು. ತನ್ನ ಸಂಸ್ಥಾನದ ಬ್ರಾಹ್ಮಣೇತರ ಸಮುದಾಯಗಳ ಪುರೋಭಿವೃದ್ಧಿಯ ಆಶಯ ಹೊಂದಿದ್ದ ಈ ಪ್ರಯೋಗವು ಬಾಬಾ ಸಾಹೇಬ್ ಅಂಬೇಡ್ಕರಂತಹ ‘ಮಹಾಜ್ಞಾನಿ’ಯ ಉದಯಕ್ಕೆ ಕಾರಣವಾಗಿತ್ತು. ನಂತರದಲ್ಲಿ ಮೈಸೂರು ದೊರೆ ನಾಲ್ವಡಿ ಕೃಷ್ಣರಾಜ ಒಡೆಯರು (Mysore Nalvadi Krishnaraj Odeyar) 1918ರ ಸುಮಾರಿಗೆ ಮೈಸೂರ ಸಂಸ್ಥಾನದಲ್ಲಿ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ದಮನಿತ ವರ್ಗಗಳಿಗೆ ಪ್ರಾತಿನಿಧ್ಯ ಕಲ್ಪಿಸಿದಾಗ, ಸಂಸ್ಥಾನದ ದಿವಾನರಾಗಿದ್ದ ವಿಶ್ವೇಶ್ವರಯ್ಯನವರೇ (Sir M. Vishveshvaryya) ಅದನ್ನು ವಿರೋಧಿಸಿ ತಮ್ಮ ಪದವಿಗೆ ರಾಜಿನಾಮೆ ನೀಡಿದ್ದುಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ಹೀಗೆ ತಳ ಸಮುದಾಯಗಳು ತಮ್ಮ ಸ್ವಾಭಿಮಾನದ ಬದುಕಿಗಾಗಿ ನಡೆಸಿದ ಅನವರತ ಹೋರಾಟ ಈ ಸಮುದಾಯಗಳಲ್ಲಿ ಸಾಮಾಜಿಕ ಸಂಚಲನ ಮೂಡಿಸಿದೆ. ಇದರ ಜೊತೆಗೆ ಜಾತಿ ಗಣತಿಯ ಮೂಲಕ ತಮ್ಮ ಜನಸಂಖ್ಯಾ ಪ್ರಮಾಣವನ್ನು ಅರಿತ ಅಂಚಿನ ಸಮುದಾಯಗಳಲ್ಲಿ ಆತ್ಮ ವಿಶ್ವಾಸ ಬೆಳಗುತ್ತದೆ. ಈ ಕಾರಣಕ್ಕಾಗಿಯೇ ಅಂಬೇಡ್ಕರರು ನಮ್ಮ ಸಂವಿಧಾನದ 340, 341, 342ನೇ ವಿಧಿಗಳಲ್ಲಿ ಸಾಂವಿಧಾನಿಕವಾಗಿಯೇ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಗಣತಿ (SECC) ಗೆ ಅವಕಾಶ ಕಲ್ಪಿಸಿದ್ದಾರೆ.
Article 340, Constitution of India 1950
- The President may by order appoint a Commission consisting of such persons as he thinks fit to investigate the conditions of socially and educationally backward classes within the territory of India and the difficulties under which they labour and to make recommendations as to the steps that should be taken by the Union or any State to remove such difficulties and to improve their condition and as to the grants that should be made for the purpose by the Union or any State and the conditions subject to which such grants should be made, and the order appointing such Commission shall define the procedure to be followed by the Commission.
ಅಹಿಂದ ನೇತಾರ ಸಿದ್ದರಾಮಯ್ಯನವರ ನೇತೃತ್ವದ ಹಿಂದಿನ ಹಾಗೂ ಇಂದಿನ ರಾಜ್ಯ ಸರ್ಕಾರವು ಜಸ್ಟೀಸ್ ಕಾಂತರಾಜು ಅಧ್ಯಕ್ಷತೆಯ ‘ಸಮೀಕ್ಷಾ ವರದಿ’ಗೆ ಪೂರಕ ಹೆಜ್ಜೆಗಳನ್ನುಇಡತೊಡಗಿದ್ದೇ ಪಟ್ಟಭದ್ರರ ದನಿ ಒಡಕಲಾಗಿದೆ. ನೂರಾರು ವರ್ಷಗಳಿಂದ ಯಜಮಾನಿಕೆಯ ಗತ್ತುಗಳನ್ನೇ ಮೈಗೂಡಿಸಿಕೊಂಡಿದ್ದ ಜಾತಿ ಕೇಂದ್ರಿತ ಮನಸ್ಥಿತಿಗಳೀಗ ಅಪಸ್ವರದ ಆಲಾಪ ಹೊರಡಿಸುತ್ತಿರುವುದರ ಸಂಚನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ. ಆ ಮೂಲಕ ಗಟ್ಟಿ ಧ್ವನಿಯಲ್ಲಿ ‘ಕಾಂತರಾಜು ಆಯೋಗ ವರದಿ’ಯ ಜಾರಿಗೆ ಇರುವ ಅಡ್ಡಿಗಳ ವಿರುದ್ಧ ನಿಲ್ಲಬೇಕಿದೆ.
ವರದಿ ಪ್ರಕಾರ ಕರ್ನಾಟಕದಲ್ಲಿ ಪ್ರಮುಖ ಜಾತಿಗಳ ಜನಸಂಖ್ಯೆಗಳ ಯಾದಿ ಹೀಗಿದೆ. ಎಸ್.ಸಿ.- ಎಸ್.ಟಿ.-1.45 ಕೋಟಿ, ಮುಸ್ಲಿಂ-70 ಲಕ್ಷ, ಲಿಂಗಾಯತ-65 ಲಕ್ಷ, ಒಕ್ಕಲಿಗ-60 ಲಕ್ಷ, ಕುರುಬ-45 ಲಕ್ಷ, ಬ್ರಾಹ್ಮಣ-14 ಲಕ್ಷ, ಕ್ರಿಶ್ಚಿಯನ್-4.5 ಲಕ್ಷ. ನಮ್ಮ ಸಾಮಾಜಿಕ ವ್ಯವಸ್ಥೆಯ ಪ್ರತಿಯೊಂದು ಸಮುದಾಯವು ಸಹ ‘ಸಾಮುದಾಯಿಕ ಮೇಲ್ಮುಖ ಚಲನೆ’ಯ ಕಾರಣಕ್ಕಾಗಿ ತಮ್ಮ ಜಾತಿಗಳ ಅಸ್ಮಿತೆಯೊಡನೆ ನಿಲ್ಲಬೇಕಾಗಿದೆ. ಆ ನಂತರವಷ್ಟೇ ಸಮುದಾಯಗಳು ಸಾಮೂಹಿಕವಾಗಿ ಸಂವಿಧಾನದ ನೇತೃತ್ವದಲ್ಲಿ ಜಾತಿ ವಿನಾಶದೆಡೆಗೆ
ಸಾಗಲು ಸಾಧ್ಯವಾಗುತ್ತದೆ. ಭಾರತದಂತಹ ಜಾತಿ-ಶ್ರೇಣೀಕೃತ ರಾಷ್ಟ್ರದಲ್ಲಿ ಜಾತೀಯ ಅಸ್ಮಿತೆಗಳನ್ನು ಗುರುತಿಸದೆ ಜಾತಿ ವಿನಾಶದ ಮಾತುಗಳನ್ನಾಡುವುದು ನಿಜಕ್ಕೂಆತ್ಮವಂಚನೆಯೇ ಸರಿ.
ಕರ್ನಾಟಕದ ಸಂದರ್ಭದಲ್ಲಿಯೂ ಸಹ ಜಾತಿ ಗಣತಿಯ ಕುರಿತಾದ ಎಲ್ಲ ಗೊಂದಲಗಳನ್ನು ಪರಿಹರಿಸಿ ವರದಿಯನ್ನು ಸರ್ಕಾರವು ಸ್ವೀಕರಿಸಬೇಕಿಕೆ. ಈ ಹಂತದಲ್ಲಿ ಭಿನ್ನ ಸ್ವರಗಳನ್ನೂ ಆಲಿಸಿ, ಸಾಂವಿಧಾನಿಕವಾಗಿ ಉತ್ತರಿಸಿ ನಿಜವಾಗಿ ಹಿಂದುಳಿದ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಸರಕಾರವು ನಿಲ್ಲುತ್ತದೆಂಬ ಆಶಯ ಹೊಂದಲು ಸಕಾರಣಗಳಿರುವುದು ನಿಜಕ್ಕೂ ಆಶಾದಾಯಕ.