ಹತ್ತಿರತ್ತಿರ ಇಪ್ಪತ್ತು ಲಕ್ಷ ಜನ ಸಂಖ್ಯೆಯ ಉತ್ತರ ಕನ್ನಡ ಜಿಲ್ಲೆಯ (Uttara Kannada District) ವಿಸ್ತೀರ್ಣ ನಾಲ್ಕು ಗೋವಾ ರಾಜ್ಯಕ್ಕೆ ಸಮನಾಗಿದೆ.ಆದರೆ ಮಲೆನಾಡು,ಅರೆಬಯಲು ಸೀಮೆ ಮತ್ತು ಕರಾವಳಿ ಪ್ರದೇಶಗಳ ಈ ಭೌಗೋಳಿಕ ವೈಶಿಷ್ಟ್ಯ-ಪ್ರಾಕೃತಿಕ ಸೊಬಗಿನ ಜಿಲ್ಲೆ ಮಾತ್ರ ಗೋವಾದಷ್ಟು ಅಭಿವೃದ್ಧಿ ಹೊಂದಿಲ್ಲ.
ನಮ್ಮದೇ ರಾಜ್ಯದ ಪಕ್ಕದ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡದ ಪ್ರಗತಿಗೆ ಹೋಲಿಸಿದರೂ ಅಜಗಜಾಂತರ! ಸ್ವಾತಂತ್ರ್ಯಾ ನಂತರದ ಈ ಮುಕ್ಕಾಲು ಶತಮಾನದಲ್ಲಿ ಸಾಮಾಜಿಕ,ರಾಜಕೀಯ ಬದ್ಧತೆಗಳ ಸಮರ್ಥ ನಾಯಕತ್ವ ಜಿಲ್ಲೆಗೆ ದಕ್ಕದಿರುವುದೆ ಹಿಂದುಳಿದಿರುವಿಕೆಗೆ ಮೂಲ. ಕಳೆದ 75 ವರ್ಷದಿಂದ ಆಳಿದ ಶಾಸಕ,ಸಂಸದ,ಮಂತ್ರಿಗಳ ದೂರದೃಷ್ಟಿ “ದೋಷ”ದಿಂದ ಉತ್ತರ ಕನ್ನಡ ಇವತ್ತಿಗೂ ಶಾಪಗ್ರಸ್ಥ ಗಂಧರ್ವ ಕನ್ಯೆಯಂತಾಗಿ ಚಡಪಡಿಸುತ್ತಲೇ ಇದೆ! ಮಾತಿಗೆ ಅಪವಾದವೆಂದರೆ ಜನಸಾಮಾನ್ಯರ ಬಾಯಲ್ಲಿ “ದೀನಬಂಧು” ಎನಿಸಿದ ಕವಿ,ಕರ್ಮಯೋಗಿ ದಿನಕರ ದೇಸಾಯಿ (Dinakar Desai) ಮಾತ್ರ.ಲೋಕಸಭಾ ಸದಸ್ಯರಾಗಿದ್ದ ದೇಸಾಯರಿಗೆ ಸಿಕ್ಕ ಅವಧಿ ಕಡಿಮೆ;ಜತೆಗೆ “ಭಾರತ ಸೇವಕ ಸಮಾಜ”(Servants Of India Socity)ದ ಅಜೀವ ಕಾರ್ಯಕರ್ತನಾಗಿ ಅರ್ಪಿಸಿಕೊಂಡಿದ್ದ ದೇಸಾಯರು ಮುಂಬೈ ಮಹಾನಗರ ಪಾಲಿಕೆ ಸದಸ್ಯತ್ವ ಮತ್ತು ಮುಂಬೈ ಕಡಲ ಕಾರ್ಮಿಕ ಸಂಘದ ಮುಂದಾಳಾಗಿದ್ದರಿಂದ ಉತ್ತರ ಕನ್ನಡದಲ್ಲಿ ಪೂರ್ಣ ಪ್ರಮಾಣದ ರಾಜಕಾರಣ ಮಾಡಲಾಗದ “ಸೀಮಿತ”ಕ್ಕೆ ಸಿಲುಕಿದ್ದರು.
ಸ್ವಾತಂತ್ರ್ಯೋತ್ತರ ದಿನಗಳಲ್ಲಿ ದಕ್ಷಿಣ ಕನ್ನಡಕ್ಕೆ ಶ್ರೀನಿವಾಸ ಮಲ್ಯ,ರಂಗನಾಥ ಶೆಣೈ ಮತ್ತು ಟಿ.ಎಂ.ಎ.ಪೈರಂಥ ದೂರದರ್ಶಿತ್ವ-ಜನಾದರಣೀಯ ರಾಜಕಾರಣಿಗಳ ನಾಯಕತ್ವ ಸಿಕ್ಕಿತು.ಆದರೆ ಆ ಭಾಗ್ಯ ಉತ್ತರ ಕನ್ನಡಕ್ಕೆ ಇರಲಿಲ್ಲ.ಮಂಗಳೂರಿನ ಜೋಕಿಮ್ ಆಳ್ವ(ಮಾರ್ಗರೆಟ್ ಆಳ್ವರ ಮಾವ-ಗಂಡನ ತಂದೆ) ಸತತ ಮೂರು ಅವಧಿಗೆ ಕೆನರಾ ಕ್ಷೇತ್ರವನ್ನು ಪಾರ್ಲಿಮೆಂಟ್‌ನಲ್ಲಿ ಪ್ರತಿನಿಧಿಸಿದರು.ಉತ್ತರ ಕನ್ನಡದ ಭೌಗೋಳಿಕ ಪರಿಜ್ಞಾನವಿಲ್ಲದಿದ್ದರೂ ೧೫ ವರ್ಷ ಸ್ಥಳಿಯ ಎಂಪಿಯಾಗಿದ್ದರು.ಜಿಲ್ಲೆಯ ಜನರೊಂದಿಗೆ ಭಾವನಾತ್ಮಕವಾಗಿ ಬೆರೆಯದ ಜೋಕಿಮ್ ಆಳ್ವ (Jochachim Alva) ರನ್ನು ತಮ್ಮ ನಾಯಕನೆಂದು ಒಪ್ಪಿಕೊಳ್ಳದ ಉತ್ತರ ಕನ್ನಡಿಗರು ಅನಿವಾರ್ಯವಾಗಿ ಸಹಿಸಿಕೊಂಡಿದ್ದರು.ಇದಕ್ಕೆ ಕಾರಣವೂ ಇತ್ತು.ಇಡೀ ಕರ್ನಾಟಕದಲ್ಲಿ “ಗಾಂಧಿ ಜಿಲ್ಲೆ” ಎಂಬ ಪ್ರತೀತಿ ಉತ್ತರ ಕನ್ನಡಕ್ಕಷ್ಟೇ ಇತ್ತು.“ಕರ್ನಾಟಕದ ಗಾಂಧಿ”ಎಂಬ ಪ್ರಸಿದ್ಧಿಯಿದ್ದದ್ದು ಕುಮಟೆಯ ಮಾದನಗೇರಿಯ ತಿಮ್ಮಪ್ಪ ನಾಯಕರಿಗೆ.ಅಸಹಕಾರ ಆಂದೋಲನ,ಉಪ್ಪಿನ ಸತ್ಯಾಗ್ರಹ,ಕರನಿರಾಕರಣೆ ಹೋರಾಟ,ಚಲೇಜಾವ್ ಚಳುವಳಿಯೇ ಮುಂತಾದ ಪ್ರಮುಖ ರಾಷ್ಟ್ರೀಯ ಆಂಧೋಲನಗಳಲ್ಲಿ ಇಡೀ ದೇಶಕ್ಕೆ ಮಾದರಿ ಎಂಬಂತೆ ಹೋರಾಡಿದ ಖ್ಯಾತಿ ಉತ್ತರ ಕನ್ನಡದಾಗಿತ್ತು.ಹೀಗಾಗಿ ಮಹಾತ್ಮ ಗಾಂಧಿಯೆಂದರೆ ಕಾಂಗ್ರೆಸ್;ಕಾಂಗ್ರೆಸ್ ಎಂದರೆ ಗಾಂಧೀಜಿ ಎಂಬ ಅವಿನಾ ಬಾವನೆಯನ್ನು ಹೊಂದಿದ್ದ ಇಲ್ಲಿಯ ಜನರ ಪ್ರಥಮ ಮತ್ತು ಪರಮೋಚ್ಚ ನಿಷ್ಠೆ ಕಾಂಗ್ರೆಸ್ ಕುರಿತಾಗಿತ್ತು.ಈ ಸೆಂಟಿಮೆಂಟನ್ನು ಬಳಸಿಕೊಂಡ ಕಾಂಗ್ರೆಸ್ ದಿಗ್ಗಜರು ಉತ್ತರ ಕನ್ನಡದ ಜನ ಜೀವನದ ಗಂಧ ಗಾಳಿ ತಿಳಿಯದ ಜೋಕಿಮ್ ಆಳ್ವರನ್ನುಏಕಪಕ್ಷೀಯವಾಗಿ ಜಿಲ್ಲೆಯ ಮೇಲೆ ಹೇರಿದರು.

ಶ್ರೀನಿವಾಸ ಮಲ್ಯರಿಗೆ ದಕ್ಷಿಣ ಕನ್ನಡ ಪಾರ್ಲಿಮೆಂಟ್ ಕ್ಷೇತ್ರ ಕೊಟ್ಟಿದ್ದರಿಂದ ಆ ಭಾಗದಲ್ಲಿ ಗಣನೀಯವಾಗಿದ್ದ ಕ್ರಿಶ್ಚಿಯನ್ನರಿಗೆ ಅವಕಾಶ ಕೊಡಲೇಬೇಕಾದ ದರ್ದು ಕಾಂಗ್ರೆಸ್ನ ದೊಡ್ಡವರಿಗೆ ಎದುರಾಗಿತ್ತು.ನೆಹರು ಕುಟುಂಬಕ್ಕೆ ಬಹುಕಾಲದ ನಿಷ್ಠೆಯನ್ನು ಪ್ರದರ್ಶಿಸುತ್ತ ಬಂದಿದ್ದ ಜೋಕಿಮ್ ಆಳ್ವರಿಗೆ ಉತ್ತರ ಕನ್ನಡಕ್ಕೆ ರಪ್ತು ಮಾಡಲಾಯಿತು.ಜೋಕಿಮ್ ಆಳ್ವರ ಮಡದಿ ವೈಲೆಟ್ ಆಳ್ವ (Violet Alva) ರಿಗೆ ಇಂದಿರಾ ಗಾಂಧಿ ಯುಗದಲ್ಲಿ ರಾಜ್ಯಸಭೆಯ ಉಪಾಧ್ಯಕ್ಷೆಯಾಗುವ ಭಾಗ್ಯವೂ ಬಂದಿತ್ತು.ಈ ಜೋಕಿಮ್ ಆಳ್ವ ಇಂದಿನ ರಾಜಕಾರಣಿಗಳಂತೆ ಭ್ರಷ್ಠ,ಮತೀಯ ಕಿತಾಪತಿಯವರಾಗಿರಲಿಲ್ಲವೇನೋ ನಿಜ.ಆದರೆ ಮೂರ ಬಾರಿ ಸಂಸದನಾಗಿ ಗೆಲ್ಲಿಸಿದ ಜಿಲ್ಲೆಗೆ ಮೂರು ಬಿಲ್ಲಿ ಉಪಕಾರವೂ ಮಾಡಲಿಲ್ಲ.ಅಂದು ಸರ್ವ ಋತು ವಾಣಿಜ್ಯ ಬಂದರಾಗುವ ಸಕಲ ಭೌಗೋಲಿಕ ಅನೂಕೂಲತೆಗಳಿದ್ದ ಕಾರವಾರ ಕಡಲ ತಡಿಯಲ್ಲಿ ಬಂದುರು ಬೇಡ;ಮಂಗಳೂರಲ್ಲಿ ಮಾಡಿಯೆಂದು ಈ ಮಹಾನುಭಾವ ಒಪ್ಪಿಗೆ ಸೂಚಿಸಿದ್ದರು.ಮಂಗಳೂರಲ್ಲಾದ ಬಂದರು ಕಾರವಾದಲ್ಲೇನಾದರೂ ಸ್ಥಾಪಿಸಿದ್ದರೆ,ಜಿಲ್ಲೆಯ ದಿಕ್ಕು-ದೆಸೆ ಅಂದೇ ಬದಲಾಗಿಬಿಡುತ್ತಿತ್ತು!ಒಟ್ಟಿನಲ್ಲಿ ಉತ್ತರ ಕನ್ನಡ ಸ್ವಾತಂತ್ರ್ಯೋತ್ತರದ ಹದಿನೈದು ವರ್ಷಗಳ ಪ್ರಮುಖ ಕಾಲ ಘಟ್ಟದಲ್ಲೇ ಅನಾಯಕತ್ವದಿಂದ ಎಡವಿ ಬೀಳುವಂತಾಯಿತು!!
ಈ ಅವಧಿಯಲ್ಲಿ ಜಿಲ್ಲೆಗೆ ನಾಯಕತ್ವವನ್ನು ಕೊಡಬಲ್ಲ ಅಷ್ಟೂ ಗುಣ-ಲಕ್ಷಣ ಹೊಂದಿದ್ದ ದಿನಕರ ದೇಸಾಯಿ ಜನ ಮನ ಸೆಳೆದಿದ್ದರು.ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ಜಿಲ್ಲೆಯ ಜನರನ್ನು ವಿಶೇಷವಾಗಿ ರೈತ-ಕೂಲಿಕಾರ ಶ್ರಮಜೀವಿಗಳನ್ನು ಎದೆಗೆ ಹಚ್ಚಿಕೊಂಡು ಅವರಲ್ಲಿ ಸಂಘಟನೆಯ ಛಲ-ಬಲ ಹುಟ್ಟುಹಾಕಿದ್ದೇ ದಿನಕರ ದೇಸಾಯಿ ಮತ್ತವರ ಸಂಗಾತಿಗಳಾದ ಎಸ್.ವಿ.ಪಿಕಳೆ(ಗಿರಿ ಪಿಕಳೆ),ಮತ್ತು ದಯಾನಂದ ನಾಡಕರ್ಣಿ.ಈ ತ್ರಿಮೂರ್ತಿಗಳಲ್ಲಿ ಹಲವು ಕಾರಣಗಳಿಗಾಗಿ ಜಿಲ್ಲೆಯ ಉದ್ದಗಲದ ಮನ ಸೂರೆಗೊಂಡಿದ್ದರು.ಬಹುಶಃ ಒಬ್ಬ ಜನ ಸೇವಕ ಕವಿಯೂ ಆಗಿದ್ದದ್ದು ದೇಸಾಯರಿಗೆ ಚುಂಬಕ ವ್ಯಕ್ತಿತ್ವ ರೂಢಿಸಿಕೊಳ್ಳಲು ಸಾಧ್ಯವಾಗಿದ್ದಿರಬಹುದು.ಮಹಾತ್ಮಾ ಗಾಂಧೀಜಿಯವರ ರಾಜಕೀಯ ಗುರು ಎನಿಸಿದ್ದ ಗೋಪಾಕೃಷ್ಣ ಗೋಖಲೆ (Gopal Krishna Gokhale) ಸ್ಥಾಪಿಸಿದ್ಧ ಸರ್ವಂಟ್ಸ್ ಆಫ್ ಇಂಡಿಯಾ ಸೋಸೈಟಿಯ ಮುಂಬೈ ಬ್ರ್ಯಾಂಚಿನ ಅಧ್ಯಕ್ಷರಾಗಿದ್ದ ದೇಸಾಯರು ಅದೇ ಹೊತ್ತಿಗೆ ಮುಂಬೈ ಕಾರ್ಪೋರೇಷನ್‌ನ ವಿರೋಧ ಪಕ್ಷದ ಮೆಂಬರ್ ಆಗಿ ಆಡಳಿತಗಾರರ ಎದೆ ನಡುಗಿಸುತ್ತಿದ್ದರು.ಮುಂಬೈನಲ್ಲಿ ಕಡಲ ಕಾರ್ಮಿಕರ ಸಂಘ ಸ್ಥಾಪಿಸಿದ್ದ ದೇಸಾಯರು ಭಾರತೀಯ ಕಾರ್ಮಿಕ ಸಂಘಗಳ ಪ್ರತಿನಿಧಿಯಾಗಿ ಅಂತರಾಷ್ಟ್ರೀಯ ಕಾರ್ಮಿಕ ಸಮ್ಮೇಲನಗಳಲ್ಲಿ ಭಾಗವಹಿಸಿ ವಿಶ್ವದ ಗಮನ ಸೆಳೆದಿದ್ದರು.ಕಾರ್ಮಿಕ ಕಷ್ಟ-ಸುಖದ ಸ್ಪಷ್ಟ ಪರಿಕಲ್ಪನೆಯಿದ್ದ ದೇಸಾಯರು ಅದೇ ವೇಳೆಗೆ ತನ್ನ ಜನ್ಮ ಭೂಮಿ(ಉತ್ತರ ಕನ್ನಡ)ಯ ಬೆವರಿನ ವರ್ಗವನ್ನು ಕೆಂಬಾವುಟದಡಿ ತಂದು ಶೋಷಿತರ ಧ್ವನಿಯಾಗಿದ್ದರು.
ಈ ಹಿನ್ನಲೆಯಲ್ಲಿ ದೇಸಾಯರಿಗೆ ಜಿಲ್ಲೆಯ ಮುಂದಾಳತ್ವ ವಹಿಸಿಕೊಳ್ಳುವುದಕ್ಕೆ ಅನುಕೂಲಕರವಾದ ವಾತಾವರಣ ಏರ್ಪಟ್ಟಿತ್ತು.ಆದರೆ ಮೊದಲ ಮಹಾಚುನಾವಣೆಯಲ್ಲಿ ಸ್ಪರ್ಧಿಸಿದ್ದ ದೇಸಾಯರಿಗೆ ಲೋಕಸಭೆ ಪ್ರವೇಶಿಸಲಾಗಲಿಲ್ಲ.1952ರಲ್ಲಿ ಎರಡನೇ ಬಾರಿಯೂ ಗೆಲ್ಲಲಾಗಲಿಲ್ಲ.ಆ ಬಳಿಕ ದೇಸಾಯರು ರಾಜಕಾರಣಕ್ಕಿಂತ ಹೆಚ್ಚಾಗಿ ಶ್ರಮಿಕರ ಹೋರಾಟ ಕಟ್ಟುವುದಕ್ಕೆ ತೊಡಗಿಸಿಕೊಂಡರು.ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಷ್ಟೇ ಗಮನ ಕೇಂದ್ರೀಕರಿಸಿದರು.ಜಿಲ್ಲೆಯ ರೈತ ಸಭೆಯನ್ನಷ್ಟೇ ಪ್ರತಿನಿಧಿಸುತ್ತಿದ್ದ ದೇಸಾಯರನ್ನು 1967ರಲ್ಲಿ ಉತ್ತರ ಕನ್ನಡಿಗರು ಲೋಕಕಸಭೆಗೆ ಕಳಿಸಿಕೊಟ್ಟರು.ಆದರೆ ದೇಸಾಯರಿಗೆ ಜಿಲ್ಲೆಯ ಬೇಕು-ಬೇಡಗಳಿಗೆ ಸ್ಪಂದಿಸಲು ಪೂರ್ಣಾವಧಿ ಸಿಗಲಿಲ್ಲ.“ಗರೀಬಿ ಹಠಾವೋ” ತಂತ್ರಗಾರಿಕೆ ಪ್ರಯೋಗಿಸಿ ನಡಗಾಲ ಚುನಾವಣೆ ಸಾರಿದ್ದ ಇಂದಿರಾ ಗಾಂಧಿಯ ಗಾಳಿಯಲ್ಲಿ ಕೊಚ್ಚಿಹೋದ ಗಣ್ಯರಲ್ಲಿ ದೇಸಾಯರೂ ಒಬ್ಬರಾಗಿದ್ದರು.ಈ ನಾಲ್ಕು ವರ್ಷದ ಅವಧಿ ಬಿಟ್ಟರೆ ದೇಸಾಯರಿಗೆ ಮತ್ತೆಂದೂ ಪೂರ್ಣಾವಧಿ ಪ್ರತಿನಿಧಿಯಾಗಿ ಜಿಲ್ಲೆಯನ್ನು ರಾಜ್ಯ ಅಥವಾ ಕೇಂದ್ರ ಸರಕಾರದ ಎದುರು ಪ್ರತಿಧಿಸುವ ಅವಕಾಶ ಬರಲೇಯಿಲ್ಲ.
ದೇಸಾಯರಿಗೂ ಒಂದು ಹಂತದ ವರೆಗೆ ನಾಯಕತ್ವ ಕೊಡುವ ಅವಕಾಶಗಳಷ್ಟೇ ಇತ್ತು.ಸರ್ವಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಅಜೀವ ಸದಸ್ಯರು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಕ್ರಿಯವಾಗಿ ಗುರುಸಿಕೊಳ್ಳದಂತೆ ಕಟ್ಟುನಿಟ್ಟಿನ ಕಟ್ಟುಪಾಡಿತ್ತು.ಹಾಗಾಗಿಯೆ ದೇಸಾಯರು ಸ್ವತಂತ್ರ ಅಬ್ಯರ್ಥಿಯಾಗಿ ಲೋಕಸಭೆಗೆ ಸ್ಫರ್ಧಿಸಿ ಸಮಾಜವಾದಿ ಪಕ್ಷದ ಬೆಂಬಲ ಪಡೆದು ಗೆದ್ದಿದ್ದರೆ ಹೊರತು ರಾಜಕೀಯ ನಾಯಕರಾಗಿ ಬೆಳೆಯಲು ಸಾಧ್ಯವಾಗಲಿಲ್ಲ. ನಾಯಕತ್ವದ ಸಕಲ ಅರ್ಹತೆಗಳಿದ್ದರೂ ರಾಜಕೀಯ ಚಾರಿಷ್ಮಾ ಮಾತ್ರ ದೇಸಾಯರಿಗೆ ಇಲ್ಲದಾಗಿತ್ತು.ಈ ಅಸಹಾಯಕತೆಯಿಂದಾಗಿ ದಢೆಸಾಯರು ಎಲ್ಲ ಕಾಲಕ್ಕೂ,ಎಲ್ಲ ವರ್ಗಕ್ಕೂ ಸಲ್ಲುವ ನಾಯಕರಾಗಿ ರೂಪುಗೊಳ್ಳಲಾಗಲಿಲ್ಲ.ಮೇಲಾಗಿ ೧೯೬೦ರ ದಶಕದಲ್ಲೇ ರೈತ ಕೂಟದಲ್ಲಿ ಭಿನ್ನಾಭಿಪ್ರಾಯ ಜೋರಾಗಿತ್ತು.ದರ್ಬಲ ವರ್ಗದ ಹಿತ ಚಿಂತನೆಯ ಹಠದಲ್ಲಿ ದೇಸಾಯರಿಗಿಂತ ಹಚ್ಚೆಂದು ಉತ್ತರ ಕನ್ನಡಿಗರಿಂದ ಪರಿಗಣಿಸಬಲ್ಪಟ್ಟಿದ್ದ ಗಿರಿ ಪಿಕಳೆ ಬಂಡೆದ್ದಿದ್ದರು.
ಪ್ರಚಂಡ ರೈತ ಹೋರಾಟದ ಬೈಪ್ರಾಡಕ್ಟ್‌ನಂತಿದ್ದ “ಕೆನರಾ ವೆಲ್‌ಫೆರ್ ಟ್ರಸ್ಟ್” ಎಂಬ ಸೇವಾ ಸಂಸ್ಥೆಗೆ ದೇಸಾಯರು ಸ್ಥಾಪಕ ಅಧ್ಯಕ್ಷರಾಗಿದ್ದರೆ, ಪಿಕಳೆಯವರು ಸ್ಥಾಪಕ ಕಾರ್ಯದರ್ಶಿಯಾಗಿದ್ದರು.ದೇಸಾಯರು ಟ್ರಸ್ಟ್‌ನ ವಿದ್ಯಾ ಸಂಸ್ಥೆಗಳಿಗೆ ಬಂಡವಾಳಶಾಹಿಗಳಿಂದ ದೇಣಿಗೆ ಪಡೆಯುವುದು ಪಿಕಳೆಯವರಿಗೆ ಸರಿಕಾಣಿಸುವುದಿಲ್ಲ. ಸೈದ್ಧಾಂತಿಕ ಸಂಘರ್ಷ ಜೋರಾಗುತ್ತದೆ. ದೇಸಾಯರು ಪಿಕಳೆಯವರನ್ನು ಟ್ರಸ್ಟ್‌ನಿಂದ ಹೊರಹಾಕುತ್ತಾರೆ, ಪಿಕಳೆಯವರು ತಮ್ಮ ವಿಚಾರಧಾರೆಯ ಶೈಕ್ಷಣಿಕ ಮತ್ತು ಸೇವಾ ಸಂಸ್ಥೆಗಳನ್ನು ಕಟ್ಟಿಕೊಂಡು ಸಮಾಜ ಸೇವೆ ಮಾಡುತ್ತಾರೆ. ಕವಲಾಗಿ ತಂತಮ್ಮ ದಾರಿಯಲ್ಲಿ ಹೊರಟ ದೇಸಾಯಿ ಮತ್ತು ಪಿಕಳೆ ಕೊನೆವರೆಗೂ ಒಂದೇ ವೇದಿಕೆ ಬರಲೇಯಿಲ್ಲ.ಜಿಲ್ಲೆಯ ಎಲ್ಲ ವರ್ಗದ ಅವಶ್ಯಕತೆ ಗಮನದಲ್ಲಿಟ್ಟುಕೊಂಡು ನಿರ್ದಿಷ್ಟ ಗುರಿಯೊಂದಿಗೆ ತಮ್ಮ ಜನಪರ ಆಂಧೋಲನ ಮುಂದುವರಿಸಿದ್ದರೆ ಖಂಡಿತವಾಗಿ ಈ ತ್ರಿಮೂರ್ತಿಗಳು ಸಮರ್ಥ ನಾಯಕತ್ವ ಕೊಡಬಲ್ಲವರಾಗಿದ್ದರು. ಇಷ್ಟಾಗಿಯೂ ಇವತ್ತಿಗೂ ಉತ್ತರ ಕನ್ನಡ ಅದೊಂಥರ ಆರಾಧನೆ,ಕೃತಜ್ಞತೆಯ ಭಾವದಿಂದ ದೇಸಾಯಿ ಮತ್ತು ಗಿರಿ ಪಿಕಳೆಯವರನ್ನು ಮತ್ತೆ-ಮತ್ತೆ ಸರಿಸಿಕೊಳ್ಳುತ್ತಲೇ ಇದೆ!
ಸಾರ್ವಜನಿಕ ಬದುಕಿನಲ್ಲಿ ಹೆಜ್ಜೆ ಗುರುತುಗಳನ್ನು ಗಟ್ಟಿಯಾಗಿ ದಾಖಲಿಸಿಕೊಳ್ಳಲು 1970 ದಶಕದಲ್ಲಿ ದೇಸಾಯರನ್ನು ಬಿಡದೆ ಕಾಡಿದ ಅನಾರೋಗ್ಯವೂ ದೊಡ್ಡ ಅಡ್ಡಿಯಾಯಿತು. ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದವರು 72ನೇ ವಯಸ್ಸಿನಲ್ಲೇ ಎದ್ದುಹೋಗಿಬಿಟ್ಟರು.ಆಗ ಉತ್ತರ ಕನ್ನಡದಲ್ಲಿ ಒಂದು ರೀತಿಯ ಶೂನ್ಯವೇ ಸೃಷ್ಟಿಯಾದಂತಾಯಿತು!1950 ಮತ್ತು 1960ರ ದಶಕದಲ್ಲಿ ರೈತ-ಕೂಲಿಕಾರರೆಂಬ ಬೆವರಿನ ಸಮುದಾಯಕ್ಕಷ್ಟೇ ನೇತಾರರಾಗಿದ್ದ ದೇಸಾಯರು 1970 ದಶಕದ ಹೊತ್ತಿಗೆ ಹಳ್ಳಿಗಾಡಿನಲ್ಲಿ ಹೈಸ್ಕೂಲು-ಕಾಲೇಜುಗಳ ಸ್ಥಾಪನೆ ಮತ್ತಿತರ ಸಮಾಜ ಸೇವಾ ಕಾರ್ಯಗಳ ಮೂಲಕ ಇಡೀ ಜಿಲ್ಲೆಯನ್ನು ಪ್ರಭಾವಿಸ ತೊಡಗಿದ್ದರು.ಹೀಗಾಗಿ 1970ರ ದಶಕದಲ್ಲಿ ಇತರೆ ವರ್ಗದ ಮಂದಿಯೂ ಸಹ ಸಮೀಪ ಬಂದು ತಮ್ಮ ನಾಯಕನೆಂದು ಒಪ್ಪಿಕೊಳ್ಳಲು ಶುರು ಮಾಡಿದ್ದರು.ಆದರೆ ಅನಾರೋಗ್ಯದಿಂದ ದೇಸಾಯರಿಗೆ ಜನರ ತಲುಪಲು ಸಾದ್ಯವಾಗಲಿಲ್ಲ.1981ರಲ್ಲಿ ಜಿಲ್ಲೆಯ ಜನ ಹಂಬಲಿಸುತ್ತಿದ್ದ ದೇಸಾಯರೇ ಇಲ್ಲವಾಗಿಬಿಟ್ಟರು.
ಹಾಗೆ ನೋಡಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿಭಾನ್ವಿತರಿಗೇನೂ ಕೊರತೆ ಇಲ್ಲ.ಜಿಲ್ಲೆಯ ಪ್ರಭಾವಿ ಹವ್ಯಕ ಬ್ರಾಹ್ಮಣ ಸಮುದಾಯದ ರಾಮಕೃಷ್ಣ ಹೆಗಡೆ (Ramakrishna Hegde) “ಜಾಣ” ರಾಜಕಾರಣಿ ಎಂದೇ ಹೆಸರು ಪಡೆದಿದ್ದರು.ರಾಜಕೀಯ,ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮದೇ “ಛಾಪು” ಮೂಡಿಸಿದವರು. ಹೆಗಡೆಯವರ ಮೌಲ್ಯಾಧಾರಿತ ರಾಜಕಾರಣದ ಹುಸಿ ಆದರ್ಶದ ವರಸೆಗಳೇನೇ ಇರಲಿ, ಆರು ವರ್ಷಗಳ ಕಾಲ ಮುಖ್ಯ ಮಂತ್ರಿಯಾಗಿ ತಮ್ಮ “ನಾಜೂಕು” ರಾಜಕಾರಣದಿಂದ ಇಡೀ ದೇಶದ ಗಮನ ಸೆಳೆದಿದ್ದರು.ರಾಜ್ಯದ ಹಣಕಾಸು ಮಂತ್ರಿಗಿರಿ,ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ, ರಾಜ್ಯಸಭಾ ಸದಸ್ಯತ್ವ, ರಾಷ್ಟ್ರೀಯ ಯೋಜನಾ ಆಯೋಗದ ಉಪಾಧ್ಯಕ್ಷ, ಕೇಂದ್ರ ಮಂತ್ರಿಯಂಥ ಅತ್ಯಂತ ಮಹತ್ವದ ಸ್ಥಾನ-ಮಾನ ಅನುಭವಿಸಿದ್ದರು. 80ರ ದಶಕದಲ್ಲಿ ಪ್ರಧಾನ ಮಂತ್ರಿ ಮಟೇರಿಯಲ್ ಎಂಬಷ್ಟರ ಮಟ್ಟಿನ ಇಮೇಜ್ ದೇಶದಲ್ಲಿ ಹೆಗಡೆಗಿತ್ತು. ಆದರೆ ಹೆತ್ತ ಜಿಲ್ಲೆಯ ಬಗ್ಗೆಂದೂ ಹೆಗಡೆ ತಲೆ ಕೆಡಿಸಿಕೊಂಡವರಲ್ಲ. ಮನಸ್ಸು ಮಾಡಿದರೆ ಹೆಗಡೆ ಸಮಸ್ಯೆ-ಸಂಕಟಗಳಿಂದ ತತ್ತರಿಸುತ್ತಿದ್ದ ಉತ್ತರ ಕನ್ನಡಕ್ಕೆ ನಿರ್ವಾಜ್ಯ ನಾಯಕತ್ವ ಕೊಡಬಹುದಿತ್ತು.ಆದರೆ ರಾಷ್ಟ್ರ ನಾಯಕನಾಗಲು ಹೆಗಡೆ ತಮ್ಮೆಲ್ಲ ಶಕ್ತಿ ಬಳಸಿದರೆ ಹೊರತು ತವರಿಗೆ ನಾಯಕತ್ವ ನೀಡುವ ಕಾಳಜಿ ತೋರಿಸಲಿಲ್ಲ ಎಂಬುದು ದುರಂತವೇ ಸರಿ.
1970ರ ದಶಕದಲ್ಲಿ ರಾಜ್ಯ ರಾಜಕಾರಣದಲ್ಲಿ ಬಲಾಢ್ಯ ಮುಖ್ಯಮಂತ್ರಿ ಎನಿಸಿದ್ದ ದೇವರಾಜ ಅರಸರ ಆಪ್ತ ವಲಯದಲ್ಲಿದ್ದ ಭಟ್ಕಳ ನವಾಯತ ಮುಸಲ್ಮಾನ್ ಸಮುದಾಯದ ಎಸ್.ಎಂ.ಯಾಹ್ಯಾ ಹಣಕಾಸಿನಂಥ ಆಯಕಟ್ಟಿನ ಇಲಾಖೆಯ ಮಂತ್ರಿಯಾಗಿದ್ದರು.ಹಲವು ವರ್ಷ ಬೇರೆ-ಬೇರೆ ಸಿಎಂಗಳ ಸರಕಾರದಲ್ಲಿ ಸಚಿವರಾಗಿದ್ದರು.ಯಾಹ್ಯಾರವರೂ ಜಿಲ್ಲೆಯ ಅಭಿವೃದ್ಧಿ ಕನಸುಗಾರನಾಗಿರಲಿಲ್ಲ. ತವರು ಜಿಲ್ಲೆಯ ಋಣ ತೀರಿಸುವ ಬಧ್ದತೆಯೂ ಪ್ರದರ್ಶಿಸಲಿಲ್ಲ.ದಿನಕರ ದೇಸಾಯರ ಸಮಾಜವಾದಿ ಚಿಂತನೆಯ ಮೂಸೆಯಲ್ಲೇ ಮೂಡಿಬಂದ ಹಿಂದುಳಿದ ದೀವರು ಜನಾಂಗದ ಜಿ.ದೇವರಾಯ ನಾಯ್ಕ್ ಅನಾಯಾಸವಾಗಿ ಮೂರು ಬಾರಿ ಲೋಕಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು.ದೇವರಾಯ ನಾಯ್ಕ್ ಈ 15 ವರ್ಷಗಳನ್ನು ನಿರುಪದ್ರವಿ-ನಿಷ್ಪ್ರಯೋಜಕ ಎಂಪಿ ಎಂಬ “ಹೆಗ್ಗಳಿಕೆ”ಯಲ್ಲೇ ಕಳೆದರೆ ವಿನಃ ಜಿಲ್ಲೆಯ ಎಲ್ಲ ವರ್ಗದ ಮುಂದಾಳಾಗುವ ರೀತಿಯಲ್ಲಿ ಪ್ರಭಾವಳಿ ಬೆಳೆಸಿಕೊಳ್ಳಲಿಲ್ಲ.೧೯೮೩ರ ಬಳಿಕದ ನಾಲ್ಕು ದಶಕದ ಜಿಲ್ಲೆಯ ರಾಜಕಾರಣದಲ್ಲಿ ಶೇಕಡಾ ೮೫ರಷ್ಟು ಕಾಲ ಒಂದಲ್ಲ ಒಂದು ವಜನಿನ ಅಧಿಕಾರ ಸ್ಥಾನದಲ್ಲಿ ಮೆರೆದವರು ಹಳಿಯಾಳದ ಕೊಂಕಣಿ(ಜಿಎಸ್‌ಬಿ) ಜಾತಿಯ ಆರ್.ವಿ.ದೇಶಪಾಂಡೆ! ಸುಧೀರ್ಘ ಸಮಯ ಜಿಲ್ಲೆಯ ಯಜಮಾನಿಕೆಯ ಉಸ್ತುವಾರಿಕೆಯ “ದಂಡ” ಪ್ರಯೋಗಿಸಿದ್ದ ದೇಶಪಾಂಡೆಗೆ ಈ ಅಧಿಕಾರ ಬಳಸಿ ಇಡೀ ಜಿಲ್ಲೆಗೆ ಪ್ರಶ್ನಾತೀತ ನಾಯಕನಾಗಿ ಹೊರಹೊಮ್ಮಲು ಸಾಧ್ಯವಾಗಲಿಲ್ಲ. ದೇಶಪಾಂಡೆ ವರ್ಚಸ್ಸು ಏನಿದ್ದರೂ ಅಧಿಕಾರದಲ್ಲಿರುವವವರೆಗೆ ಮಾತ್ರ ಎಂಬಂತಾಯಿತು. ಜಾಗತೀಕರಣ, ಉದಾರೀಕರಣ, ಕೈಗಾರಿಕಾಕರಣದ ಕಾಲಘಟ್ಟದಲ್ಲಿ ಹಲವು ವರ್ಷ ಬೃಹತ್ ಕೈಗಾರಿಕೆಯಂತಹ ಮಹತ್ವದ ಇಲಾಖೆಯ ಮಂತ್ರಿಯಾಗಿದ್ದ ದೇಶಪಾಂಡೆ ತಾವು ಕಾರ್ಪೋರೇಟ್ ವಲಯದ ಸಖ್ಯ ಕುದುರಿಸಿ ಬೃಹತ್ ಕೈಗಾರಿಕೋದ್ಯಮಿಯಾದರೇ ಹೊರತು ಜಿಲ್ಲೆಯ ದುಡಿಯುವ ಕೈಗಳಿಗೆ ಕೆಲಸ ಕೊಡುವಂಥ ಉದ್ಯಮ ಸ್ಥಾಪನೆಗೆ ಮನಸ್ಸು ಮಾಡಲಿಲ್ಲ ಎಂಬ ಮಾತು ಚಾಲ್ತಿಯಲ್ಲಿದೆ. ವಿಪರ್ಯಾಸವೆಂದರೆ, ದೇಶಪಾಮಡೆ ಕೈಗಾರಿಕಾ ಮಂತ್ರಿಯಾಗಿ ದೇಶ-ವಿದೇಶದ ಉದ್ಯಮಪತಿಗಳೊಂದಿಗೆ ಓಡಾಡುತ್ತಿದ್ದಾಗಲೇ ಜಿಲ್ಲೆಯ ಕೈಗಾರಿಕೆಗಳು ಅವಸಾನ ಕಂಡವು!!
ಸುಮಾರು ಮೂರೂವರೆ ದಶಕಗಳಷ್ಟು ಧೀರ್ಘ ಕಾಲ “ಸರ್ವರಿಗು ಸಮಪಾಲು;ಸರ್ವರಿಗು ಸಮಬಾಳು” ದ್ಯೇಯಾದರ್ಶದ ಸಮಾಜವಾದಿ ಆಂದೋಲನಗಳು ನಡೆದ ನೆಲದಲ್ಲಿ 1990ರ ದಶಕದ ಉತ್ತಾರ್ಧದಲ್ಲಿ ಶುರುವಾದ ಬಲಪಂಥೀಯ ಕೇಸರಿ ರಾಜಕಾರಣ ಆಗಾಗ ಅನಾಹುತ ಮಾಡುತ್ತಿದೆ. ಪಕ್ಕದ ಉಡುಪಿ, ದಕ್ಷಿಣ ಕನ್ನಡದಷ್ಟು ಅನಾಹುತಕಾರಿ ಹಿಂದುತ್ವ ಉತ್ತರ ಕನ್ನಡದಲ್ಲಿ ಇಲ್ಲವಾದರೂ ೯೦ರ ದಶಕದಲ್ಲಿ ನವಾಯತ ಮುಸ್ಲಿಮರು ಹೆಚ್ಚಿರುವ ಭಟ್ಕಳದಲ್ಲಿ ಒಂದಿಡೀ ವರ್ಷ ನಡೆದ ಕೋಮು ಕಿಚ್ಚಿನ ಕುಂಡದಲ್ಲಿ ಶಿರಸಿಯ ಹವ್ಯಕ ಬ್ರಾಹ್ಮಣ ಸಮುದಾಯದ ಅನಂತ್‌ಕುಮಾರ್ ಹೆಗಡೆ (Anantkumar Hegde) ಹಿಂದುತ್ವದ ಸರದಾರನಾಗಿ ಅವತರಿಸಿದ್ದೇನೋ ನಿಜ. ದುರಂತವೆಂದರೆ ಆರು ಬಾರಿ ಸಂಸದನಾದರೂ ಹೆಗಡೆಯವರಲ್ಲಿ ನಾಯಕತ್ವಕ್ಕೆ ಬೇಕಾದ ಪ್ರಬುದ್ಧತೆಯಾಗಲಿ, ದೂರದೃಷ್ಟಿಯಾಗಲಿ ಇದೆಯೆಂಬ ಕುರುಹುಗಳ್ಯಾವುದೂ ಮೂರು ದಶಕದ ಅವರ ಧರ್ಮಕಾರಣದಲ್ಲಿ ಕಾಣಿಸಿದ್ದಿಲ್ಲ.ಜಿಲ್ಲೆಯ ಅಭಿವೃದ್ಧಿ-ಪ್ರಗತಿಯ ಪರಿಕಲ್ಪನೆ ಹೆಗಡೆಯವರಲ್ಲಿಲ್ಲ ಎಂಬ ಭಾವನೆ ಜನರಿಗೆ ಬಂದು ಅದ್ಯಾವುದೋ ಕಾಲವಾಗಿಹೋಗಿದೆ.
ದಿನಕರ ದೇಸಾಯರೊಬ್ಬರ ಬಿಟ್ಟರೆ ಜಿಲ್ಲೆಗೆ ನಾಯಕತ್ವ ನೀಡಬಲ್ಲವನೆಂದು ಹೆಸರಿಸಬಹುದಾದ ವ್ಯಕ್ತಿಯನ್ನು ಈ ಜಿಲ್ಲೆ ಕಂಡೆಯಿಲ್ಲ! ೧೯೬೭ರಿಂದ ಒಂದೂವರೆ ದಶಕಗಳ ಕಾಲ ದೇಸಾಯರನ್ನು ಜಿಲ್ಲೆಯ ಸಕಲ ಸಮುದಾಯದ ಮಂದಿ ಅಂತರಂಗದಲ್ಲಿ “ನಾಯಕ”ನೆಂದು ಒಪ್ಪಿಕೊಂಡಿದ್ದರು.ಆದರೆ ಆ ಹೊತ್ತಿಗವರು ಇಳಿವಯಸ್ಸಿನಲ್ಲಿದ್ದುದರಿಂದ ಬಹುಕಾದಿಂದ ಹಸಿದಿದ್ದ ಈ ಜಿಲ್ಲೆಯ ಬೇಡಿಕೆ ಈಡೇರಿಲು ಸಾಧ್ಯವಾಗಲಿಲ್ಲ.ರಾಜಕೀಯ ನಾಯಕತ್ವ ನೀಡಲಾಗದಿದ್ದರೂ ದೇಸಾಯರು ಜಿಲ್ಲೆಗೆ ಸಾಂಸ್ಕೃತಿಕ ನಾಯಕರಾಗಿದ್ದರೆಂಬುದು ನಿರ್ವಿವಾದ. ಈಗಿತ್ತಲಾಗಿ ಅನೇಕ ನಿಗಿನಿಸುವ ಕೆಂಡದಂಥ ಸಮಸ್ಯೆಗಳನ್ನು ಸೆರಗಲ್ಲಿ ಕಟ್ಟಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಗೆ ಎಲ್ಲ ಅರ್ಥದಲ್ಲೂ “ಇವನೇ ನಮ್ಮ ನಾಯಕ” ಎಂಬಂಥವರ ಅಗತ್ಯ ಅತಿಯಾಗಿದೆ.ಆದರೆ ಅಂಥ ನಿಜನಾಯಕತ್ವ ನೀಡಬಲ್ಲಂಥ ವ್ಯಕ್ತಿ ಯಾವುದೇ ಪಕ್ಷದಲ್ಲಿದ್ದಾನೆ ಅಂತ ಅನ್ನಿಸುತ್ತಿಲ್ಲ.
ನಾಯಕತ್ವವನ್ನು ಹಣ, ಅಧಿಕಾರ ಇಲ್ಲವೇ ಧರ್ಮೋನ್ಮಾದ ಕೆರಳಿಸುವುದರಿಂದ ಪಡೆಯುತ್ತೇನೆಂದು ಭಾವಿಸುವವನೇ ಶತಮೂರ್ಖ. ಸಮಗ್ರ ಜಿಲ್ಲೆಯ ಭೌಗೋಳಿಕ, ಸಾಮಾಜಿಕ,ಆರ್ಥಿಕ ಪರಿಕಲ್ಪನೆಯುಳ್ಳ ಪಕ್ಷ-ಪಂಗಡ, ಜಾತಿ-ಧರ್ಮ ಮೀರಿ ನಿಲ್ಲುವ, ದ್ವೇಷ ರಾಜಕಾರಣ ಮಾಡದೆ ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವ ದೂರದೃಷ್ಟಿ-ಸಮಚಿತ್ತದ ನಿಸ್ಪ್ರಹ ನಾಯಕನಿಗಾಗಿ ಉತ್ತರ ಕನ್ನಡ ಈಗ ಹಸಿದು ಹಂಬಲಿಸುತ್ತಿದೆ!!

ವರದಿಗಾರರು
ಶೂದ್ರ ಶಂಬೂಕ