ಹಸಿರು ಮಾಯವಾದ ನೆಲದಲ್ಲಿ
ಉಸಿರು ಬಿಗಿಹಿಡಿದು ನೆಡೆಯುತ್ತಿದ್ದೇನೆ
ಉರಿ ಬಿಸಿಲು-ನೆರಳಿಲ್ಲ ಮರವಿಲ್ಲ
ಸುತ್ತಲೂ ಕಾಂಕ್ರೀಟು ಕಾಡು
ಗಗನ ಚುಂಬಿಸುವ ಮಹಲುಗಳು
ಕೆಳಗೆ ವಿಲವಿಲನೆ ಒದ್ದಾಡುವ ಜೀವಗಳು
ಶ್ರಮದ ಉಸಿರು ಬಸಿದ ಬೆವರು
ಅರ್ಥವಾಗದ ಅಹವಾಲುಗಳು
ಹಾಡಬೇಕೆಂದು ತುಡಿತ…ಸ್ವರವಿಲ್ಲ
ಬರೆಯಬೇಕೆಂಬ ಬಯಕೆ…ಶಕ್ತಿಯಿಲ್ಲ
ಭ್ರಮೆ –ವಾಸ್ತವದ ನಡುವೆ ಅಂತರ
ಧಾವಂತದ ಬದುಕಿನಲ್ಲೂ ಅವಾಂತರ
ಊಳಿಡುವ ನರಿಗಳು
ಘೀಳಿಡುವ ಆನೆಗಳು ಇಲ್ಲಿಲ್ಲ
ಇದು ಕಾಂಕ್ರೀಟಿನ ದಟ್ಟಾರಣ್ಯ
ನಗರೀಕರಣದ ನೆಪದಲ್ಲಿ ಬದಲಾಗಿದೆ
ಕೇಳುವುದಿಲ್ಲ ಹಕ್ಕಿಗಳ ಕಲರವ
ಕಂದಮ್ಮಗಳ ಆಕ್ರಂದನ ಕೇಕೆ
ಮಾಯವಾಗಿದೆ ಮಂದಹಾಸ
ಕಾರ್ಖಾನೆಯ ಸದ್ದಿನಲಿ ಎದ್ದ
ಧೂಳು ದಟ್ಟವಾಗಿ ಸುತ್ತಲೂ
ಗಬ್ಬು ವಾಸನೆಯ ನಡುವೆ
ಅನ್ನದ ಅಗಳು ಹೆಕ್ಕುವ ಅಲೆಮಾರಿಗಳು
ನಗು ಮರೆತ ಮಕ್ಕಳು
ಉತ್ತು ಬಿತ್ತಿದ ನೆಲ ಬತ್ತಿದ ಹೊಳೆ
ಬೆತ್ತಲೆಯಾದ ಜೀವಗಳು
ಸಾಗುತ್ತಿದ್ದೇನೆ ಕಾಂಕ್ರೀಟು ಕಾಡಿನ ಮಧ್ಯೆ
ಬಯಲು ಗದ್ದೆ ಮಳೆ ಬೆಳೆ
ಕಾಡು ಕಣಿವೆಗಳ ನೆನಪನ್ನು ಹೊದ್ದು
ನನ್ನನ್ನು ನಾನೇ ಪ್ರಶ್ನಿಸುತ್ತಿದ್ದೇನೆ
ಉತ್ತರಗಳ ಬುಟ್ಟಿ ಹೊತ್ತು.


ಕವಿ :
ರಾಧಾಕೃಷ್ಣ ಉಳಿಯತ್ತಡ್ಕ,
ಕಾಸರಗೋಡು (ಕೇರಳ)