ರಾಜ್ಯ ಬಿಜೆಪಿಯದು ವೈಚಾರಿಕ ಸಮಸ್ಯೆ!

BJP

ಮೋದಿಯಂಥ ನಾಯಕನನ್ನು ಹೊಂದಿಯೂ ನೈತಿಕ ಪ್ರಜಾಪ್ರಭುತ್ವದಲ್ಲಿ ರಾಜ್ಯ ಬಿಜೆಪಿ ಹಿಂದಿನ ಅವಧಿಯಲ್ಲಿ ಅಧಿಕಾರ ನಡೆಸದೆ ಸಿದ್ಧಾಂತವನ್ನು ಕೇವಲ ಬಾಯಿಮಾತಿನ ಆದರ್ಶವನ್ನಾಗಿಸಿಕೊಂಡು ಶುದ್ಧ ವ್ಯವಹಾರಸ್ಥ ರಾಜಕೀಯ ಪಕ್ಷವಾಗಿ ಬದಲಾಗಿದ್ದು ದೊಡ್ದ ದುರಂತ!

ಪ್ರಜಾಪ್ರಭುತ್ವವು ಅಂತರಂಗದಲ್ಲಿ ಧರಿಸಿಕೊಳ್ಳುವ ಸರಿಹೊತ್ತಿನ ರಾಜಕಾರಣದಲ್ಲಿ ಬಿಜೆಪಿಗರು ಇನ್ನೂ ಪಳಗಬೇಕು ಎನಿಸಲು ಕಾರಣ, ಅವರಲ್ಲಿನ ಸೆಕ್ಯುಲರ್ ರಾಜಕಾರಣದ ಅನುಭವದ ಕೊರತೆ. ಪ್ರಜಾತಂತ್ರದ ಮೌಲ್ಯಗಳನ್ನು ಜನಪ್ರತಿನಿಧಿಯಾಗಿ ಅಭಿವ್ಯಕ್ತಿಸುವಲ್ಲಿ ಬಿಜೆಪಿಯು ಹಿಂದಿನ ಅವಧಿಯಲ್ಲಿ ಸೋತಿತು! ಹಿಂದುತ್ತ್ವ, ರಾಷ್ಟ್ರೀಯತೆಯನ್ನು ಪಕ್ಷದ ಸೈದ್ಧಾಂತಿಕ ನೆಲೆಯಲ್ಲಿ ಅಭಿವ್ಯಕ್ತಿಸುವಾಗಲೂ ದೇಶ-ಕಾಲದ ಸಮಯೋಚಿತ ಪ್ರಜ್ಞೆ ಇಲ್ಲವೇನೋ ಅನಿಸಿದ್ದು ಸುಳ್ಳಲ್ಲ!

BJP

ಅದರಲ್ಲೂ ಪ್ರಾಮಾಣಿಕ ಆಡಳಿತದ ವಿಚಾರದಲ್ಲಿ ಬಿಜೆಪಿಯದ್ದು ಶೂನ್ಯ ಸಂಪಾದನೆ! ಅಧಿಕಾರದಾಸೆ, ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತ, ಗುಂಪುಗಾರಿಕೆ, ಪರಸ್ಪರ ಕಾಲೆಳೆಯುವುದು, ಆರೋಪಕ್ಕೆ ಒಳಗೊಳಗೆ ಪರ/ವಿರೋಧದ ಮಸಲತ್ತು, ಕೆಳಗಿಳಿಸುವುದು, ಅಪಪ್ರಚಾರ, ನಾಯಕತ್ವದಲ್ಲಿ ಅಗೌರವ, ಅಧಿಕಾರ‌ ದುರುಪಯೋಗ, ಅಧಿಕಾರಕ್ಕಾಗಿ ಸಿದ್ದಾಂತಗಳಿಗೆ ತಿಲಾಂಜಲಿ, ಅಸಂಸದೀಯ ನಡೆ, ಕಾರ್ಯಕರ್ತರ ನಿರ್ಲಕ್ಷ್ಯ, ಹೊಸಬರಿಗೆ ಮಣೆ, ವಲಸಿಗರಿಗೆ ಅಧಿಕಾರ, ಸ್ವಪಕ್ಷೀಯರ ಕಡೆಗಣನೆ, ಅನಾಯಕತ್ವದ ಛಾಪು, ಬೂಟಾಟಿಕೆಯ ಹಿಂದುತ್ವದ ಜಪ-ಒಂದೇ ಎರಡೇ? ಪಟ್ಟಿ ದೊಡ್ಡದಿದೆ! ಮಂತ್ರಿ, ಎಂಎಲ್ಲೆ, ಎಮ್ಮೆಲ್ಸಿ ಎಂಬ ದರ್ಪವನ್ನೇ ಮೆರೆದದ್ದು ಬಿಟ್ಟರೆ ಸೈದ್ಧಾಂತಿಕ ಮುಖವಾಣಿಯಾಗಲಿಲ್ಲ! ಆರೆಸ್ಸೆಸ್ ಮುಖವಾಣಿ, ರಾಷ್ಟ್ರೀಯತೆ, ಹಿಂದುತ್ವ, ಭಾರತೀಯತೆಯ ಸೋಗು ಅಧಿಕಾರದ ಪ್ರಾಪ್ತಿಯ ವಾಂಛೆಯಾಯಿತೇ ವಿನಾ ಹಿಂಬಾಲಕರಿಗೆ ನೈತಿಕ ಸ್ಥೈರ್ಯವಾಗಲಿಲ್ಲ. ಪಕ್ಷದ ಕೆಲವರಿಗೆ ರಿಯಲೈಸ್ ಆಗಲೇ ಇಲ್ಲ!

ಅಭಿವೃದ್ದಿಯ ಮಾದರಿಗಳನ್ನು ಹಿಡಿದು ಜನರ ಮುಂದೆ ಹೋಗಬೇಕೆಂಬ ಸಾಮಾನ್ಯ ಪ್ರಜ್ಞೆಯೂ ಬಿಜೆಪಿಗಿಲ್ಲದೆ ಹೋದದ್ದು ವಿಪರ್ಯಾಸ!‌ ಅಧಿಕಾರ ಮತ್ತು ದುಡ್ಡಿನ‌ ಸೊಕ್ಕನ್ನು ಏನಂತೀರಾ? ಜನರ ಸಮಸ್ಯೆಗಳಿಗೆ ನಿಜವಾಗಿ ಸ್ಪಂದಿಸದ ಜನಪ್ರತಿನಿಧಿಗಳಿಂದ ಮತ್ತೇನಾದೀತು? ಅಷ್ಟಕ್ಕೂ ಜನಪ್ರಿಯ ಯೋಜನೆಗಳು ಬಿಜೆಪಿ ಸರ್ಕಾರದಿಂದ ಬರಲೇ ಇಲ್ಲ. ಬಂದಿದ್ದರೂ ಜನೆತೆಯೆದುರು ಪ್ರೊಮೋಟ್ ಮಾಡಿದ್ದು ಸರಿಯಾಗಿಲ್ಲ! ಆ ಮೂಲಕ ಜನರಿಗೆ ದಕ್ಷರಾಗಿ ಕಾಣಿಸಲೇ ಇಲ್ಲ. ಕಮಿಷನ್ ಹಣ ಹೊಡೆಯುವುದರಲ್ಲೇ ಬಿಜೆಪಿಯ ಹೆಚ್ಚಿನ ಮಂತ್ರಿಗಳು ಮುಳುಗಿಹೋದರು ಎಂದು ಜನರೇ ಆಡಿಕೊಳ್ಳುವಂತಾಯಿತು! ಮಂತ್ರಿಗಿರಿ ಲಾಭಿಗೆ ಮುಂದಾದರೇ ವಿನಾ ಪಕ್ಷಕ್ಕೆ, ಕ್ಷೇತ್ರಕ್ಕೆ ನಿಷ್ಠಾವಂತರಾಗಲಿಲ್ಲ! ಜನರಿಗೆ ಒದಗಲಿಲ್ಲ. ಇನ್ನೇನು ಬೇಕು ಸೋಲಿಗೆ?

ಕೊರೊನಾ ಸಂಕಷ್ಟದಿಂದ ಪಾರುಮಾಡುವುದಕ್ಕೇ ಯಡಿಯೂರಪ್ಪ ಹೆಣಗಿದರೇ ವಿನಾ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಲಾಗಲಿಲ್ಲ. ಅವರನ್ನು ಕೆಳಗಿಳಿಸಿದ್ದನ್ನು ಕಾಂಗ್ರೆಸ್ ಬಹುದೊಡ್ಡ ಅಸ್ತ್ರವಾಗಿಸಿಕೊಂಡು ಗೆಲುವಿಗೆ ಎನ್ ಕ್ಯಾಶ್ ಮಾಡಿಕೊಂಡಿತು. ಹಾಗಂತ, ಗ್ಯಾರಂಟಿಗಳಿಗೆ ಜನ ಓಟು ಹಾಕಿದ್ದು ಸುಳ್ಳಲ್ಲ! ಯಡಿಯೂರಪ್ಪರನ್ನು ಇಳಿಸುವಲ್ಲಿನ ಉತ್ಸಾಹ ಮುಂದೆ ಸಶಕ್ತ ಆಡಳಿತ ನೀಡುವಲ್ಲಿ ಕಾಣಲೇ ಇಲ್ಲ. ಕೇಂದ್ರದ ಬೆಂಬಲದಲ್ಲಿ ಒಳ್ಳೆಯ ಆಡಳಿತಕ್ಕೆ ಮುನ್ನುಡಿ ಬರೆಯಬಹುದಾಗಿದ್ದ ಅವಕಾಶವನ್ನು ಮುಂದಿನ ಅವಧಿಗೂ ಅಧಿಕಾರ ಹಿಡಿಯಲು ಬೇಕಾದಂತೆ ಆಡಳಿತ ಮಾಡಬೇಕೆನ್ನುವ ಮುಂದಾಲೋಚನೆಯೂ ಇಲ್ಲದಿರುವುದು ಬಹುದೊಡ್ಡ ವೈಚಾರಿಕ ಕೊರತೆಯನ್ನು ಸೃಷ್ಟಿಸಿತು.

ಬಿಜೆಪಿಯವರು ಎಂಥಾ ಕಾಯಿದೆಯನ್ನೂ ಮಾಡಬಲ್ಲರು! ಅದನ್ನು ಕೇಳಲು ನೀವು ಯಾರು? ಎಂದು ಧಾರ್ಷ್ಟ್ಯ ಮತ್ತು ಅಹಂಕಾರದಿಂದ ಕೇಳುತ್ತಲೇ ಜನದ್ರೋಹದ ಕಾರ್ಯಗಳನ್ನು ಮಾಡಬಲ್ಲರು! ಆದರೆ, ಕಾಂಗ್ರೆಸ್ಸಿಗರು ಅಹಂಕಾರದಿಂದ ಮಾತನಾಡದೆ ಜನಪರವಾದ ಕಾಯಿದೆಯೊಳಗೇ ಜನದ್ರೋಹದ ಕಾರ್ಯಗಳನ್ನು ಮಾಡಬಲ್ಲರು! ಬಿಜೆಪಿಯಿಂದ ಬೇಸತ್ತ ಜನತೆ ಕಾಂಗ್ರೆಸ್ ಕಡೆ ಅತೀ ಹರ್ಷಿತರಾದ ಈ ಸನ್ನಿವೇಶದಲ್ಲಿ ಈ ಎಚ್ಚರದರಿವನ್ನು ಇಟ್ಟುಕೊಂಡು ಲೋಕಚುನಾವಣೆಗೆ ಸಜ್ಜಾಗಬೇಕು! ಯಾಕೆಂದರೆ, ಪ್ರಭುತ್ವ ಅಡ್ಡದಾರಿ ಹಿಡಿದು ಅವ್ಯವಸ್ಥೆಯಾಗಿ ಕೊನೆಗೆ ದುರವಸ್ಥೆಗೆ ತಲುಪುವುದಕ್ಕೆ ಜನ ಕಾರಣರಾಗಬಾರದು! ಮತದಾನದ ಸಂದರ್ಭದಲ್ಲಿ ವೈಚಾರಿಕತೆ ಸತ್ತರೆ, ಮುಂದೈದು ವರ್ಷ ಕಾಯಬೇಕು; ಅನುಭವಿಸಬೇಕು! ಆಗ ಯಾವ ವೈಚಾರಿಕತೆ ಜನತೆಯಲ್ಲಿ ಬೆಳೆದಿರುತ್ತದೋ? ದೇವರೇ ಬಲ್ಲ!

ಶ್ರೀ ಬಿ.ಎಲ್.ಸಂತೋಷರು, ಕಾಂಗ್ರೆಸ್ಸಿನ ೪೦-೪೫ ಶಾಸಕರು ಬಿಜೆಪಿಯ ಸಂಪರ್ಕದಲ್ಲಿದ್ದಾರೆಂಬ ಮೈಂಡ್ ಗೇಮ್ ಹೇಳಿಕೆ ವಿಪಕ್ಷಗಳ ವೈಚಾರಿಕತೆಯೇ ಅಹುದು! ಮೈಂಡ್ ಗೇಮುಗಳು ಸರ್ಕಾರವನ್ನು ಉರುಳಿಸಿದ್ದೂ ಇದೆ. ಅಂತೂ, ತನ್ನ ರಾಜಕೀಯದ ಅಸ್ಮಿತೆ ಮತ್ತು ವೈಚಾರಿಕತೆಯಲ್ಲಿ ಬದಲಾಗುವುದಕ್ಕೆ ಬಿಜೆಪಿಗಿದು ಸಕಾಲ. ಸಿದ್ಧಾಂತ ಮತ್ತು ಘನತೆಯ ರಾಜಕಾರಣದೊಂದಿಗೆ ಜನರಲ್ಲಿ ಭರವಸೆ, ನಂಬಿಕೆಯನ್ನು ಗಳಿಸುವುದು ಮಹಾಚುನಾವಣೆಗೆ ಸದ್ಯದ ತುರ್ತಾಗಿದೆ!

ಲೇಖಕರು
ದೇವಿದಾಸ್ ಟಿ.

Leave a Reply

Your email address will not be published. Required fields are marked *