ಕುಮಟಾ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇಲ್ಲದ ಸಂದರ್ಭದಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕ ಬಿ ಕೆ ಹರಿಪ್ರಸಾದ ಅವರು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅವರಿಗೆ ವಿಧಾನ ಪರಿಷತ್‌ನ ಸಭಾ ನಾಯಕ ಸ್ಥಾನ ನೀಡದೆ.
ಅನ್ಯಾಯ ಮಾಡಲಾಗಿದೆ ಎಂದು ಈಡಿಗ ಬಿಲ್ಲವ ನಾಮಧಾರಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಎಲ್ ನಾಯ್ಕ ಹೇಳಿದರು. ಅವರು ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಅಭಿನಂದಿಸಲು ಕುಮಟಾ ಆರ್ಯ ಈಡಿಗ ನಾಮಧಾರಿ ಸಂಘ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಹರಿಪ್ರಸಾದ್ ಅವರಿಗಾದ ಅನ್ಯಾಯವನ್ನು ಬೆಂಗಳೂರಿನಲ್ಲಿ ನಡೆಯುವ ಈಡಿಗ, ಬಿಲ್ಲವ, ಪೂಜಾರಿ, ನಾಮಧಾರಿ ಸೇರಿ ೨೬ ಪಂಗಡಗಳ ಬೃಹತ್ ಜಾಗೃತಾ ಸಮಾವೇಶದಲ್ಲಿ ಪ್ರಮುಖ
ಹಕ್ಕೋತ್ತಾಯವಾಗಬೇಕು. ಅದು ಅವರಿಗಾದ ಅನ್ಯಾಯವಲ್ಲ. ೨೬ ಪಂಗಡಗಳನ್ನು ಒಳಗೊಂಡ ಈಡಿಗ ನಾಮಧಾರಿ ಬಿಲ್ಲವ ಸಮಾಜಕ್ಕಾದ ಅನ್ಯಾಯವಾಗಿದೆ. ಈ ಅನ್ಯಾಯದ ಬಗ್ಗೆ ಸಮಾವೇಶದಲ್ಲಿ ಜಾಗೃತಿ
ಮೂಡಿಸುವುದರ ಮೂಲಕ ನಮ್ಮ ಹಕ್ಕನ್ನು ಪಡೆಯಬೇಕಾಗಿದೆ ಎಂದು ಸಮಾಜದ ಮುಖಂಡರ ಎದುರು ಮಂಜುನಾಥ ನಾಯ್ಕರು ಆಗ್ರಹಿಸಿದರು.
