ಕಳೆದ ಭಾನುವಾರ ಶಿವಮೊಗ್ಗದ ಈಡಿಗರ ಭವನದಲ್ಲಿ ಧೀರ ದೀವರು ಬಳಗ ಮತ್ತು ಹಳೆಪೈಕ ದೀವರ ಸಂಸ್ಕತಿ ಸಂವಾದ ಬಳಗ ಹಮ್ಮಿಕೊಂಡ ‘ದೀವರ ಸಾಂಸ್ಕೃತಿಕ ವೈಭವ’ ಕಾರ್ಯಕ್ರಮ ತುಂಬ ಸಡಗರದಿಂದ ಅಷ್ಟೇ ಪರಿಣಾಮಕಾರಿಯಾಗಿ ನಡೆಯಿತು. ಶಿವಮೊಗ್ಗ ಸೇರಿದಂತೆ ಉತ್ತರ ಕನ್ನಡ, ಬೆಳಗಾವಿ, ಹಾವೇರಿ, ತುಮಕೂರು, ಬಳ್ಳಾರಿ, ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮುಂತಾದ ಕಡೆಯಿಂದ ದೀವರು ಈಡಿಗ
ಸಮುದಾಯದ ಸಾವಿರಾರು ಜನರು ಪಾಲ್ಗೊಂಡರು. ಇದು ಈ ಸಮುದಾಯದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸಲು ಹಮ್ಮಿಕೊಂಡ ವೇದಿಕೆಯಾಗಿದ್ದು ರಾಜಕೀಯ ಮುಖಂಡರು, ಸಾಹಿತಿಗಳು, ಸಂಶೋಧಕರು, ಜನಪದ ಕಲಾವಿದರು ಹೀಗೆ ಸಮಾಜದ ನೆಲಮೂಲದ ಮನಸ್ಸುಗಳು ಒಂದೆಡೆ ಸೇರಿ ಸಂವಾದ ನಡೆಸಿದರು.
ಇದೇ ಸಂದರ್ಭದಲ್ಲಿ ದೀವರ ಸಾಂಸ್ಕೃತಿಕ ಹಿರಿಮೆಯಾದ ಹಸೆ ಚಿತ್ತಾರ ಮತ್ತು ಭೂಮಣ್ಣಿ ಬುಟ್ಟಿ ಸ್ಪರ್ಧೆಯನ್ನು ಈ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿತ್ತು. ಮಹಿಳೆಯರೇ ರಚಿಸಿದ ಈ ಜನಪದ ಕಲೆ ವಿಶೇಷವಾಗಿ ಜನರ ಗಮನಸೆಳೆದವು. 98 ಮಹಿಳೆಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಬುಟ್ಟಿ ಚಿತ್ತಾರ ಸ್ಪರ್ಧೆಯಲ್ಲಿ ಅಮೃತ ವರ್ಷಿಣಿ ಚಂದ್ರಗುತ್ತಿ ಪ್ರಥಮ ಬಹುಮಾನ ಪಡೆದರೆ, ದ್ವಿತೀಯ ನೀಲಾವತಿ ಕುಗ್ವೆ, ತೃತೀಯ ಕಾವ್ಯ
ಆಲಹಳ್ಳಿ ಪಡೆದರು. ಹಸೆ ಚಿತ್ತಾರ ಸ್ಪರ್ಧೆಯಲ್ಲಿ ಸ್ವಾತಿ ಪುನೀತ್ ಹೆಬ್ಬೂರು ಪ್ರಥಮ ಸ್ಥಾನ ಪಡೆದರೆ, ರಚನಾ ಸಾಗರ್ ದ್ವಿತೀಯ, ರಂಜಿತಾ ಮರಸ ತೃತೀಯ ಸ್ಥಾನ ಪಡೆದರು. ಸಮಾಧಾನಕರ ಬಹುಮಾನವನ್ನು ಎಂ.ಟಿ.ವಿನುತಾ, ನಂದಿತಾ ನೇರಿಗೆ, ಪವಿತ್ರ ಮೋಹನ ನಾಯ್ಕ, ಬಿ.ಎಂ.ಭವಾನಿ, ಸ್ವಾತಿ, ಜಿ.ಎ.ಉಷಾ, ಮೊನಿಕಾ, ಶೃತಿ ಐಗಿನ ಬೈಲು, ಅನುಸೂಯಮ್ಮ, ಕಾವ್ಯಶ್ರೀ, ಅನುಸೂಯ ಮಂಜುನಾಥ್, ಭೂಮಿಕಾ ಐಗಿನಬೈಲು, ವನಿತಾ ಸಿದ್ದಾಪುರ, ರೇಣುಕಾ ಪಡೆದುಕೊಂಡರು..
ಇದೇ ಸಂದರ್ಭದಲ್ಲಿ ಸಿಗಂಧೂರು ಕ್ಷೇತ್ರದ ಧರ್ಮದರ್ಶಿ ಎಸ್. ರಾಮಪ್ಪ, ಹಿರಿಯ ಹಸೆ ಚಿತ್ತಾರ ಕಲಾವಿದೆ ಲಕ್ಷ್ಮಮ್ಮ ಗಡೇಮನೆ, ಡೊಳ್ಳು ಕುಣಿತ ಕಲಾವಿದ ಬಿ.ಟಾಕಪ್ಪ ಕಣ್ಣೂರು ಅವರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಿಕ್ಷಣ ಸಚಿವ ಮಧು ಬಂಗಾರಪ್ಪ ‘ಧೀರದೀವರು’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ ‘ಸಮುದಾಯದವರು ಸಂಘಟಿತರಾಗಿ ಅಭಿವೃದ್ಧಿ ಹೊಂದಬೇಕು’ ಎಂದರು. ಮಾಜಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಮಾತನಾಡಿ, ‘ಕಾಗೋಡು ಚಳುವಳಿಯೂ ಒಂದು ಸಾಂಸ್ಕೃತಿಕ ಹೋರಾಟ. ಈ ಕಾರ್ಯುಕ್ರಮದಲ್ಲಿ ಅದರ ಬಾಗವನ್ನು ಅಳವಡಿಸಬೇಕಿತ್ತುಆಗ ಕಾರ್ಯಕ್ರಮ ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿಯುತ್ತಿತ್ತು ಮುಂದಿನ ದಿನಗಳಲ್ಲಿ ಈ ಬಗ್ಗೆ ಚಿಂತನೆ ನಡೆಯಲಿ’ ಎಂದರು. ಹಸೆ ಚಿತ್ತಾರ ಹಿರಿಯ ಕಲಾವಿದ ಸಿರವಂತೆ ಚಂದ್ರಶೇಖರ್ ಸಮಾರೋಪ ಮಾಡಿದರು. ಶಾಸಕ ಬೇಳೂರು ಗೋಪಾಲಕೃಷ್ಣ, ರೇಣುಕಾ ರಮಾನಂದ ಸ್ವಾಮೀಜಿ, ಸುರೇಶ್ಕೆ.ಬಾಳೆಗುಂಡಿ, ಮಾಜಿ ಶಾಸಕ ಜಿ.ಡಿ. ನಾರಾಯಣಪ್ಪ, ಕೆ.ಎ.ಎಸ್ ಅಧಿಕಾರಿ ಕೆ.ಚೆನ್ನಪ್ಪ, ಎಚ್.ಕೆ.ಕೃಷ್ಣಮೂರ್ತಿ, ಶ್ರೀಧರ ಆರ್.ಹುಲ್ತಿಕೊಪ್ಪ, ಪತ್ರಕರ್ತ ನಾಗರಾಜ ನೇರಿಗೆ, ಡಾ. ಮೋಹನ ಚಂದ್ರಗುತ್ತಿ, ರಾಜನಂದಿನಿ ಕಾಗೋಡು, ಗೀತಾಂಜಲಿ ದತ್ತಾತ್ರೇಯ, ಅಣ್ಣಪ್ಪ ಮಳಿಮಠ, ರವಿರಾಜ್ ಸಾಗರ್, ಸಿನಿಮಟೋಗ್ರಾಫರ್ ದೇವೂ ಸೊರಬ ಮುಂತಾದವರು ಪಾಲ್ಗೊಂಡಿದ್ದರು.