( ಡಿಸೆಂಬರ್ 6: ಬಾಬಾ ಸಾಹೇಬ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ನೆನಪಿನಲ್ಲಿ)
‘ಡಿಸೆಂಬರ್ 6’ ಭಾರತದ ಇತಿಹಾಸದ ಪುಟಗಳಲ್ಲಿ ಎರಡು ಪ್ರಮುಖ ಘಟನೆಗಳ ಕಾರಣಕ್ಕಾಗಿ ಬಹಳ ಮುಖ್ಯವಾದ ದಿನಾಂಕ. ಮೊದಲನೆಯದಾಗಿ, ಈ ದೇಶದ ದೀನ ದುರ್ಬಲರ ಪಾಲಿಗೆ ಆಕಾಶದಗಲಕ್ಕೂ ನಿಂತ ಆಲದ ಮರವಾಗಿರುವ ಡಾ. ಬಾಬಾ ಸಾಹೇಬ ಅಂಬೇಡ್ಕರ್ (Dr. Baba Saheb Ambedkar) ಅವರು ನಮ್ಮಿಂದ ಭೌತಿಕವಾಗಿ ಕಣ್ಮರೆಯಾದ ದಿನ.
ಎರಡನೆಯದಾಗಿ, ಅಂಬೇಡ್ಕರ್ ಪ್ರಣೀತ ವರ್ಗ ಸಮಾನತೆಯ ಸಂವಿಧಾನವನ್ನು ಅಣಕಿಸುವಂತೆ ಮನುವ್ಯಾಧಿಗಳು ಉತ್ತರ ಪ್ರದೇಶದಲ್ಲಿ ಬಾಬ್ರಿ ಮಸೀದಿಯ ಕಟ್ಟಡವನ್ನು ಧ್ವಂಸಗೈದ ಕಾರಣಕ್ಕಾಗಿ.
ಇಲ್ಲೊಂದಿಷ್ಟು ಹೇಳಿಬಿಡಬೇಕು : ತಮ್ಮ ಪೂರ್ವ ನಿಯೋಜಿತ ದಂಗೆಗೆ ‘ಡಿಸೆಂಬರ್ 6’ನ್ನು ಆಯ್ದುಕೊಳ್ಳಲು ಕಾರಣವೇನು? ಅಂಬೇಡ್ಕರ್ ಸ್ಮೃತಿಯ ಪ್ರಖರತೆಯನ್ನು ಮಂಕುಗೊಳಿಸಿ, ಧಾರ್ಮಿಕ ರಾಜಕಾರಣದ ಬಣ್ಣವನ್ನು ದೇಶವಾಸಿಗಳ ಮನದಲ್ಲಿ ಅಚ್ಚೊತ್ತುವ ಸಂಚಲ್ಲದೇ ಇದು ಮತ್ತೇನಲ್ಲ.
ಇರಲಿ, ಈ ನೆಲದ ಕೋಟಿ-ಕೋಟಿ ಕಪ್ಪು ಜನರ ಮೊಟ್ಟ ಮೊದಲ ಮಾತಾದ ಅಂಬೇಡ್ಕರ್ ಅವರ ವ್ಯಕ್ತಿತ್ವ ಮೊದಲ ಮಳೆಗೆ ಹಸಿರಾಗುವ ಇಳೆಯ ಚೆಲುವಂತೆ ನಿತ್ಯ ನೂತನ ಹಾಗೂ ಯಾವತ್ತಿನ ಅನಿಕೇತನ. ಭಾರತದ ಅಸ್ಪೃಷ್ಯರ ಪಾಲಿನ ಮಹಾನ್ ಐಕಾನ್ ಬಾಬಾ ಸಾಹೇಬರ ಕೊನೆಯ ದಿನಗಳು, ತಾವು ಕೈಗೊಂಡ ಸಂಕಲ್ಪಗಳ ಪೂರ್ಣತೆಯ ಕಾರಣಕ್ಕಾಗಿ ಮಾಡಿದ ದಣಿವರಿಯದ ದುಡಿಮೆಯಿಂದ ನೋವು-ಅನಾರೋಗ್ಯ-ಸಂಕಟ ಹಾಗೂ ಆತಂಕಗಳಿಂದ ತುಂಬಿ ಹೋಗಿದ್ದವು.
ತಮ್ಮ ನಂತರದಲ್ಲಿ ಈ ದೇಶದ ದಲಿತರು ದಿಕ್ಕಿಲ್ಲದ ಅನಾಥರಾಗುತ್ತಾರೆಂಬ ಅರಿವು, ಅವರನ್ನು ಕಂಗೆಡಿಸಿತ್ತು. ಡಿಸೆಂಬರ್ 5, 1956 ಮಧ್ಯರಾತ್ರಿ 12ರ ಸುಮಾರಿಗೆ ಬಾಬಾ ಸಾಹೇಬರ ಮನೆಯಿಂದ ಹೊರಟ ಅವರ ‘ಆಪ್ತಬಂಧು’ ನಾನಕ್ ಚಂದ್ ರತ್ತು (Nanak Chand Rattu) ಅವರಿಗೆ, ಬಾಬಾ ಸಾಹೇಬರು ತಮ್ಮ ಈಡೇರದ ಉದ್ದೇಶದ ಕುರಿತಾಗಿ ಹೇಳುತ್ತ, ‘ನನ್ನ ಜನ ಈ ದೇಶದ ಎಲ್ಲರೊಡನೆ ಸಮಾನ ರಾಜಕೀಯ ಅಧಿಕಾರ ಪಡೆದು ಆಳುವ ವರ್ಗವಾಗಬೇಕು ಹಾಗೂ ಅಕ್ಷರದ ಅರಿವು ಪಡೆದ ಸಮುದಾಯದ ವಿದ್ಯಾವಂತರು ಆ ಅರಿವನ್ನು ಎಲ್ಲರ ಎದೆಯಲ್ಲಿ ಬಿತ್ತಬೇಕು ಎಂಬ ಮಹೋನ್ನತ ಆಸೆ ನನ್ನಲ್ಲಿದೆ. ಆದರೆ ನನ್ನ ನಂತರವಾದರೂ ಅದು ಕೈಗೂಡುವುದೇ’ ಎಂದು ಆತಂಕ ಭರಿತರಾಗಿ ರತ್ತು ಅವರನನ್ನು ಪ್ರಶ್ನಿಸಿದ್ದರು. ಬಾಬಾ ಸಾಹೇಬರ ಈ ಪ್ರಶ್ನೆಗೆ ಧೈರ್ಯದ ಸಕಾರಾತ್ಮಕ ಉತ್ತರವನ್ನು ಕೊಡಲು ನಾವು ಅಸಮರ್ಥರಾಗಿದ್ದೇವೆಯೇ? ಚರ್ಚೆ ಕ್ಲೀಷೆಯಾಗುವುದೆಂಬ ಭಯವಿದೆ.
ರಾತ್ರಿ 8 ರ ಸುಮಾರಿಗೆ ಜೈನ ನಿಯೋಗವೊಂದು ನೀಡಿದ ‘ಜೈನ್ ಔರ್ ಬೌದ್ಧ’ ಪುಸ್ತಕದ ಮೇಲೆ ಕಣ್ಣಾಡಿಸಿ ಬಾಬಾ ಸಾಹೇಬರು ಮೆಲು ದನಿಯಿಂದ ‘ಬುದ್ದಂ ಶರಣಂ ಗಚ್ಛಾಮಿ’ ಎನ್ನುತ್ತಲೇ ಕಪಾಟಿನಿಂದ ಪುಸ್ತಕಗಳನ್ನನ್ನೊಂದಿಷ್ಟು ತೆಗೆದು ಮೇಜಿನ ಮೇಲಿಡಲು ರತ್ತುಅವರಿಗೆ ಹೇಳಿ ಕಬೀರ್ ದಾಸರ ‘ಚಲ್ ಕಬೀರ್ ಭವ ಸಾಗರ ಡೇರಾ…’ ಹಾಡತೊಡಗಿದರು.
ಹೊರಬಿದ್ದ ರತ್ತು ಅವರನ್ನು ಮತ್ತೊಮ್ಮೆ ಬರಹೇಳಿ ತಮ್ಮ ‘ದಿ ಬುದ್ಧ ಆ್ಯಂಡ್ ಹಿಸ್ ಧಮ್ಮ’ (The Buddha and his Dhamma)ದ ಮುನ್ನುಡಿಯನ್ನು ತರಿಸಿಕೊಂಡು ತಿದ್ದಲು ಅನುವಾಗಿ ರತ್ತು ಅವರನ್ನು ಬೀಳ್ಕೊಟ್ಟರು. ಮರು ದಿನದ ದಿನಕರನಿಗೆ ಈ ನೆಲದ ‘ಅಮರ ಸೂರ್ಯ’ ದರ್ಶನ ಕೊಡಲೇ ಇಲ್ಲ. ದೇಶ ದಿಗ್ಭ್ರಮೆಗೊಳಗಾಯಿತು. ಬಾಬಾ ಸಾಹೇಬರ ಬದುಕಿನುದ್ದಕ್ಕೂ ತಡೆಗೋಡೆಯಾಗಿ ವರ್ತಿಸಿದ ಈ ದೇಶದ ‘ಜಾತಿ ರಾಜಕಾರಣ’ ಸಂಸ್ಕಾರದಲ್ಲೂ ‘ಶವ ರಾಜಕಾರಣ’ ಮಾಡಿತು.
‘ಮಹತ್ತರವಾದ ಕಷ್ಟಗಳೊಡನೆ, ನಾನು ಈ ‘ವಿಮೋಚನಾ ರಥ’ವನ್ನು ಇಂದು ನೀವು ಕಾಣುತ್ತಿರುವಲ್ಲಿಗೆ ಎಳೆದು ತಂದಿದ್ದೇನೆ. ಇದರ ದಾರಿಯಲ್ಲಿ ಅಡೆತಡೆಗಳು, ಅಪಾಯದ ಜಾಗಗಳು ಹಾಗೂ ಸಂಕಷ್ಟಗಳು ಬರಬಹುದಾದರೂ ಸಹ ಈ ‘ವಿಮೋಚನಾ ರಥ’ವು ಮುಂದೆ ಸಾಗಲಿ ಮತ್ತು ಇನ್ನೂ ಮುಂದೆ ಸಾಗಲಿ. ಒಂದು ವೇಳೆ ನನ್ನ ಜನರು, ನನ್ನ ಅನುಯಾಯಿ ನಾಯಕರು ಈ ‘ವಿಮೋಚನಾ ರಥ’ವನ್ನು ಮುಂದೊಯ್ಯಲು ಶಕ್ತರಾಗದಿದ್ದರೆ ಅವರು ಅದನ್ನು ಈ ದಿನ ಎಲ್ಲಿ ಕಾಣುತ್ತಿದೆಯೋ ಅಲ್ಲಿಯೇ ಬಿಟ್ಟುಬಿಡಬೇಕು. ಆದರೆ ಯಾವುದೇ ಸಂದರ್ಭದಲ್ಲಿಯೂ ಅವರು ‘ವಿಮೋಚನಾ ರಥ’ವು ಹಿಂದೆ ಹೋಗಲು ಬಿಡಬಾರದು. ಇದು ನನ್ನ ಎಲ್ಲ ಗಂಭೀರತೆಯಿಂದ, ನನ್ನ ಜನರಿಗೆ ನೀಡುತ್ತಿರುವ ಸಂದೇಶವಾಗಿದೆ, ಬಹುಶಃ ಕೊನೆಯ ಸಂದೇಶವಾಗಿದೆ. ನನ್ನ ಈ ಮಾತುಗಳನ್ನು ನನ್ನ ಜನ ಖಂಡಿತವಾಗಿಯೂ ಕಡೆಗಣಿಸುವುದಿಲ್ಲ ಎಂದು ನನಗನ್ನಿಸಿದೆ. ಹೋಗು ಅವರಿಗೆ ಹೇಳು, ಹೋಗು ಅವರಿಗೆ ಹೇಳು, ಹೋಗು ಅವರಿಗೆ ಹೇಳು’ ಎಂದು ಅವರು ಮೂರು ಬಾರಿ ಪುನರುಚ್ಚರಿಸಿದರು. ಹೀಗೆ ಹೇಳುತ್ತು ಕಣ್ಣೀರು ಸುರಿಸುತ್ತ ಬಿಕ್ಕಿ ಬಿಕ್ಕಳಿಸಿ ಅತ್ತರು. ಅವರು ಅಷ್ಟೊಂದು ಹತಾಶರಾಗಿದ್ದರು (ಜುಲೈ 31,1956, ಬಾಬಾ ಸಾಹೇಬರ ಕೊನೆಯ ದಿನಗಳು, ಪುಟ 6, ಮೂಲ : ನಾನಕ್ ಚಂದ್ ರತ್ತು. ಅನುವಾದ ವಿಜಯ ನರಸಿಂಹ ಜೆ.)
ದೆಹಲಿಯಿಂದ ಮುಂಬೈಗೆ ತರಲಾದ ಬಾಬಾ ಸಾಹೇಬರ ಭೌತಿಕ ಶರೀರ ಮುಂಬೈ ಹಿಂದೆಂದೂ ಕಂಡರಿಯದ ಜನ ಸಾಗರದ ಅಶ್ರು ತರ್ಪಣಗಳ ನಡುವೆ ದಾದರ್ ನ ಸ್ಮಶಾನದ ಪಕ್ಕ ಇಂದು ನೆಲೆ ನಿಂತಿರುವ ಚೈತ್ಯ ಭೂಮಿಯಲ್ಲಿ ಬೂದಿಯಾಗಿತ್ತು.
ಲೇಖಕರು :
ಪ್ರೊ. ಸಂದೇಶ ಎಚ್ ರತ್ನಪುರಿ
ಮೈಸೂರು