ಕಾಲೇಜು ರಂಗ ಪ್ರವೇಶದ ಪ್ರಥಮ ದಿನ

shreepad

ಅದು 1979ನೇ ಇಸ್ವಿ. ಜನವರಿ ಒಂದನೇ ತಾರೀಖು. ನಾನು ಖಾಯಂ ನೌಕರಿಗೆ ಸೇರಿದ ದಿನ. ಅದು ಸ್ವಾತಂತ್ರ್ಯ ಸಂಗ್ರಾಮದ ಬಾರ್ಡೋಲಿ ಎಂದೇ ಹೆಸರಾದ ಅಂಕೋಲೆಯ ಗೋಖಲೆ ಶತಾಬ್ದಿ ಮಹಾ ವಿದ್ಯಾಲಯದಲ್ಲಿ. ನಾನು ಆಗ ಹೇಗೆ ಹೇಗೋ ಇದ್ದೆ. ಬಡ ಮಧ್ಯಮ ವರ್ಗದ ಹುಡುಗ. ಕನ್ನಡ ವಿಭಾಗದ ಮುಖ್ಯಸ್ಥರು ಕೊಟ್ಟ ಪಠ್ಯ ತ.ರಾ.ಸು. ಅವರ ‘ಸಿಡಿಲ ಮೊಗ್ಗು’ ಕಾದಂಬರಿ. ವಿದ್ಯಾರ್ಥಿಗಳ ಸಂಖ್ಯೆ ಅಂಕೆ ಮೀರಿತ್ತು. ಅಂಕೆಯಿಲ್ಲದ ಶಿಷ್ಯರ ಗಣ ಅಲ್ಲಿತ್ತು.

ನನಗಿಂತ ದೊಡ್ಡವರು, ನನ್ನ ಓರಗೆಯವರು, ಸ್ವಲ್ಪ ಕಿರಿಯವರು, ಎಲ್ಲರೂ ಅಲ್ಲಿದ್ದರು. ಎಲ್ಲರೂ ಪಿ.ಯು.ಸಿ.ಯವರೋ, ಪದವಿ ತರಗತಿಯಿಂದ ಬಂದವರೋ ಎಂಬ ಅರಿವು ಇರಲಿಲ್ಲ. ತರಗತಿಗೆ ಪ್ರವೇಶಿಸಿದವನೆ ನನ್ನ ಪರಿಚಯ ಮಾಡಿಕೊಂಡು ಪಾಠ ಆರಂಭಿಸಿದೆ. ಅವರ ಪರಿಚಯ ಕೇಳುವ ಧೈರ್ಯ ಇರಲಿಲ್ಲ. ಕೇಳಿದರೂ ಅವರು ಹೇಳುತ್ತಾರೆ ಎಂಬ ಖಾತ್ರಿ ಇರಲಿಲ್ಲ. ಹೇಳದೇ ಇದ್ದರೆ ‘ಪ್ರಥಮ ಚುಂಬನಂ’ ಎಂಬಂತಾಗುತ್ತದೆ ಎಂಬ ಭಯ. ಕೆಲವರು ನಿಂತೇ ಇದ್ದರು. ಇನ್ನು ಕೆಲವರು ವಿವಿಧ ಭಾವ ಭಂಗಿಗಳನ್ನು ಪ್ರದರ್ಶಿಸುತ್ತಿದ್ದರು. ಇನ್ನೂ ಕೆಲವರು ‘ಪಾಠ ಮಾಡಿ ಸಾರ್’ ಎನ್ನುತ್ತಿದ್ದರು. ಹದ್ದೊಂದು ಹಾರಿ ಬಂದಾಗ ಕಾಗೆಗಳೆಲ್ಲ ಹಿಂಡು ಹಿಂಡಾಗಿ ಬೊಬ್ಬೆ ಹಾಕಿ ಆ ಹದ್ದನ್ನು ಅಟ್ಟಿಕೊಂಡು ಹೋಗುವ ಚಿತ್ರ ಮನದಲ್ಲಿ ಮೂಡಿ ಮಾಯವಾಯಿತು. ಆದರೆ ಸಭಾ ಕಂಪನ ಎಂಬುದರ ಅರಿವೇ ಇಲ್ಲದ ನಾನು ಛಲ ಬಿಡದ ಬೇತಾಳನ ಪ್ರಶ್ನೆಗೆ ಉತ್ತರ ಕೊಡಲು ಉದ್ಯುಕ್ತನಾದ ತ್ರಿವಿಕ್ರಮನಂತೆ ಪಾಠ ಆರಂಭಿಸಿದೆ. ಒಬ್ಬ ಹುಡುಗ ಕಾಣಲು ಕಪ್ಪಾಗಿದ್ದ; ಕೈಯನ್ನು ಖಡ್ಗದಂತೆ ಮಾಡಿಕೊಂಡು ಹಿಂದೆ ಮುಂದೆ ತಿರುಗಿಸುತ್ತಿದ್ದ. ಆತನ ಬರಿಗೈ ಕತ್ತಿವರಸೆ ಕಂಡು ನಾನು ಹೆದರಲಿಲ್ಲ. ಊರಿನ ಜನ ಹೇಳಿದ್ದರು, ‘ಅಯ್ಯೋ ಅಂಕೋಲೆಗೆ ಹೋಗ್ತೀಯಾ, ಅಲ್ಲಿ ಜನ್ರ ಜೊತೆ ಕಾಲ ಕಳೆಯುವುದು ಸುಲಭ ಅಲ್ಲ.’ ಈ ಯಾವ ಮಾತೂ ನನ್ನ ಧೃತಿಗೆಡಿಸಲಿಲ್ಲ. ನಾನು ಇಷ್ಟ ಪಟ್ಟ ಉಪನ್ಯಾಸಕ ವೃತ್ತಿ ದೊರಕಿತ್ತು. ವಿದ್ಯಾರ್ಥಿಗಳ ಸಂಖ್ಯೆಯು ಚೆನ್ನಾಗಿತ್ತು. ಅವರ ಮುಖದಲ್ಲಿ ಲವಲವಿಕೆಯಿತ್ತು. ‘ಬಾಳು ಮಗನ ಬೊಳ್ ಕಂಡ್ರೆ ಗುತ್ತಾಗ್ತದೆ’ ಎಂಬ ಗಾದೆ ನೆನಪಾಯ್ತು. ನನ್ನದೇ ಆದ ಶೈಲಿಯಲ್ಲಿ ಪ್ಲಾಟ್ ಫಾರಂನಲ್ಲಿ ಅತ್ತ ಇತ್ತ ತಿರುಗುತ್ತ ಪಾಠ ಮಾಡಿದೆ. ಪಠ್ಯದ ಕತೆಯೊಂದಿಗೆ ಲೋಕಾನುಭವದ ಸಂಗತಿಯನ್ನು ಹೇಳಿದೆ. ಕೆಲವರು ಮೊದಲೇ ಹೊರಟು ಹೋದರು. ಅವರನ್ನು ದಂಡಿಸುವ ಧೈರ್ಯ ನನಗಿರಲಿಲ್ಲ. ಕೆಲವರು ಕಿವಿ ತೆರೆದು ಕುಳಿತರು. ವಿದ್ಯಾರ್ಥಿನಿಯರು ಖುಷಿಯ ಮೂಡಿನಲ್ಲಿದ್ದರು.

ಅವರು ಸರಿಯಾಗಿದ್ದರೆ ಎಲ್ಲ ಸರಿಯಾಗಿರುತ್ತದೆ ಎಂದಿತು ಮನಸ್ಸು. ಪಿರಿಯೆಡ್ ಬೆಲ್ ಆಯಿತು. ಪಾಠ ಮುಗಿಸಿ ಪ್ಲಾಟ್ ಫಾರ್ಂ ಇಳಿದಾಗ ಕೆಲವು ಹುಡುಗರು ಬಂದು ಪರಿಚಯ ಮಾಡಿಕೊಂಡರು. ಆಪ್ತರಾದರು. ಒಳಗಿನವರಾದರು. ಅವರೆಲ್ಲ ಈಗ ದೊಡ್ಡವರಾಗಿದ್ದಾರೆ. ಅವರು ಕೊಟ್ಟ ಪ್ರೀತಿ, ಗೌರವದಿಂದ ನಡೆಸಿಕೊಂಡ ರೀತಿ ಇಂದಿಗೂ ನನ್ನನ್ನು ಅಂಕೋಲೆಯಲ್ಲಿ ಉಳಿಸಿದೆ. ಅಂಕೋಲೆ ನನಗೆ ಸಂಕೋಲೆಯಾಗಲೇ ಇಲ್ಲ. ಹೂವಿನ ಕೋಲಾಗಿತ್ತು.

ನಾಡಿನ ಹಿರಿಯ ಬರಹಗಾರ ಡಾ. ಶ್ರೀಪಾದ ಶೆಟ್ಟಿ ಅವರು ಉತ್ತರ ಕನ್ನಡ ಜಿಲ್ಲಾ ಇಪ್ಪತ್ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ ಎಂದು ಜಿಲ್ಲಾ ಕಸಾಪ ಪ್ರಕಟಿಸಿದೆ. ಈ ಗೌರವ ಡಾ. ಶೆಟ್ಟಿ ಅವರ ಸಾಹಿತ್ಯ ಕೃಷಿಗೆ, ಸಂಘಟನೆಗೆ , ಎಲ್ಲಕ್ಕಿಂತ ಮುಖ್ಯವಾಗಿ ಅವರೊಳಗಿನ ಕನ್ನಡ ಪ್ರೀತಿಗೆ ಸಿಕ್ಕ ಗೌರವ. ಸ್ವಾಭಿಮಾನದ ವಿಷಯ ಬಂದರೆ ಎಂದೂ ತಲೆ ತಗ್ಗಿಸದೇ ತಮ್ಮ ನಿಲುವನ್ನು ಏರಿದ ಧ್ವನಿಯಲ್ಲಿಯೇ ಮಂಡಿಸಿ ಅನಂತರ ಉಸಿರು ಬಿಡುವ ವ್ಯಕ್ತಿತ್ವ ಅವರದ್ದು.

2010 ರಲ್ಲಿ ‘ಹಣತೆ’ ಸಾಹಿತ್ಯಕ ಸಾಂಸ್ಕತಿಕ ಜಗಲಿ ಉತ್ತರ ಕನ್ನಡ – ಪ್ರಕಟಿಸಿದ ‘ಹಣತೆ’ ದೀಪಾವಳಿ ವಿಶೇಷಾಂಕದ ‘ಕ್ಲಾಸ್ ರೂಮಿನಲ್ಲಿ ಸಾಹಿತಿಗಳ ಮೊದಲ ಬ್ಯಾಟಿಂಗ್’ ವಿಭಾಗದಲ್ಲಿ ನಮ್ಮ ವಿನಂತಿ ಮೇರೆಗೆ ಡಾ. ಶೆಟ್ಟಿ ಅವರೂ ಕೂಡ ತಮ್ಮ ನೆನಪಿನ ಬುತ್ತಿ ಬಿಚ್ಚಿಟ್ಟಿದ್ದಾರೆ. ಆಗ ಈ ವಿಭಾಗದಲ್ಲಿ ಶಿಕ್ಷಣ ರಂಗದಲ್ಲೂ ವಿಶಿಷ್ಟ ಕೊಡುಗೆ ನೀಡಿದ ನಾಡಿನ ಹಿರಿಯ ಸಾಹಿತಿಗಳಾದ ಅಮೃತ ಸೋಮೇಶ್ವರ, ಡಾ. ಎನ್.ಆರ್.ನಾಯಕ, ಡಾ. ವಸಂತ ಕುಷ್ಟಗಿ ಮುಂತಾದವರೆಲ್ಲ ಬರೆದು ಆ ದಿನಗಳ ಚೇತೋಹಾರಿ ಕ್ಷಣವನ್ನು ಹಂಚಿಕೊಂಡಿದ್ದರು.

ಇದೀಗ ಡಾ.ಶ್ರೀಪಾದ ಶೆಟ್ಟಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ನೆಪ ಮಾಡಿಕೊಂಡು ‘ಹಣತೆ’ ದೀಪಾವಳಿ ವಿಶೇಷಾಂಕದಲ್ಲಿ ಅವರೇ ಬರೆದ ಆ ಪುಟವನ್ನು ಮತ್ತೊಮ್ಮೆ ನಿಮ್ಮ ಮುಂದೆ ತೆರದಿಟ್ಟು ಈ ರೀತಿಯಾಗಿ ‘ಹಣತೆ ವಾಹಿನಿ’ ಅವರನ್ನು ಅಭಿನಂದಿಸುತ್ತಿದೆ.
– ಸಂಪಾದಕ.

Leave a Reply

Your email address will not be published. Required fields are marked *