ಉತ್ತರಕಾಣದಉತ್ತರಕನ್ನಡ: ಸೂಪರ್‌ ಸ್ಪೇಷಾಲಿಟಿಆಸ್ಪತ್ರೆ, ಕ್ರಿಮ್ಸ್‌ ಮತ್ತುಹೋರಾಟ-ಹಾರಾಟ!

KRIMs

ಪ್ರಾಕೃತಿಕ ಬೆಡಗು-ಬಿನ್ನಾಣಗಳ ಉತ್ತರ ಕನ್ನಡ ಜಿಲ್ಲೆಯ ಸೆರಗಲ್ಲಿ ಸಮಸ್ಯೆ-ಸಂಕಷ್ಟಗಳ ದೊಡ್ಡ ಗಂಟೇ ಇದೆ.ಈ ಗಂಟನ್ನು ಬಿಚ್ಚುವ ಕೆಚ್ಚು ಕಳೆದ ಏಳು ದಶಕಗಳಲ್ಲಿ ಇಲ್ಲಿಂದ ಸಚಿವ, ಸಂಸದ, ಶಾಸಕರಾದವರ್ಯಾರಿಂದಲೂ ಆಗೇ ಇಲ್ಲ.

ರಾಜಧಾನಿಯ “ಶಕ್ತಿ ಸೌಧ” ದಿಂದ ಸುಮಾರು ೫೦೦ ಕೀಮೀ ದೂರದಲ್ಲಿರುವ ಉತ್ತರ ಕನ್ನಡದ ಅಳಲು ಆಡಳಿತಗಾರರ ಕಿವಿಗೆ ತಲುಪುದೇ ಇಲ್ಲ. ನತದೃಷ್ಟ ಉತ್ತರ ಕನ್ನಡದ ಕೂಗು ಕೇಳಿಸಿದರೂ ಮೂಗು ಮುರಿದ ಮಹಾನುಭಾವರೇ ಹಚ್ಚು. ಉತ್ತರ ಕನ್ನಡವೆಂದರೆ ಸರಕಾರಿ ಯೋಜನೆಗಳ ಪ್ರಯೋಗ ಶಾಲೆ. ಇಲ್ಲಿಗೆ ಬಂದ ಜಲ ವಿದ್ಯುತ್‌ ಯೋಜನೆಗಳು, ಅಣುಸ್ಥಾವರ, ಬಂದರು, ಕೊಂಕಣ ರೈಲು, ನೌಕಾನೆಲೆ,…ಯೋಜನೆಗಳು ಜಿಲ್ಲೆಯನ್ನು ದೊಡ್ಡದೊಂದು ನಿರಾಶ್ರಿತರ ಡೇರೆಯಂತಾಗಿಸಿದೆ. ರೈತ, ತೋಟಿಗ, ಮೀನುಗಾರರ ಸಮಸ್ಯೆಗಳು ದಿನಗಳೆದಂತೆ ಹಚ್ಚಾಗುತ್ತಿದೆ. ಮತ್ತೊಂದೆಡೆ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಮಾನವ ಸಂಪತ್ತು ವ್ಯರ್ಥವಾಗುತ್ತಿದೆ. ಕಾರವಾರದಲ್ಲಿದ್ದ ಕಾಸ್ಟಿಕ್‌ ಸೂಡಾ ಫ್ಯಾಕ್ಟರಿಗಾಗಿ ರೈತರ ಕೈಯಿಂದ ಕಸಿದುಕೊಂಡಿದ್ದ ಮಾದನಗೇರಿ ಸುತ್ತಲಿನ ಸಾವಿರಾರು ಎಕರೆ ಭೂಮಿ ಪಾಳು ಬಿದ್ದಿದೆ. ಈ ಜಾಗದಲ್ಲಿ ಕೈಗಾರಿಕಾಕರಣದ ಪ್ರಯತ್ನ ಮಾಡಿದ್ದರೆ ಒಂದಿಷ್ಟು ಯುವಕರಾದರೂ ಮತೀಯ ಮಸಲತ್ತಿನ ಧರ್ಮಕಾರಣದ ಕಾಲಾಳುಗಳಾಗುವುದಾರೂ ಕಮ್ಮಿಯಾಗುತ್ತಿತ್ತೇನೋ?!

ಉತ್ತರ ಕನ್ನಡದ ದುರಂತ ನೋಡಿ; ಸ್ವಾತಂತ್ರ್ಯ ಬಂದು ಏಳೂವರೆ ದಶಕ ಕಳೆದರೂ ಜಿಲ್ಲೆಯಲ್ಲಿ ಒಂದು ಸುಸಜಿತ ಆಸ್ಪತ್ರೆ ಇಲ್ಲ! ಮೂರು ರಾಷ್ಟ್ರೀಯ ಹೆದ್ದಾರಿ ಹಾದುಹೋಗಿರುವ ಜಿಲ್ಲೆಯಲ್ಲಿ ಪ್ರತಿ ದಿನ ಹತ್ತಾರು ಅಪಘಾತಗಳಾತ್ತಿದೆ. ತಲೆಗೆ ಪೆಟ್ಟಾದವರಂತೂ ಬದುಕುವುದೇ ಅಪರೂಪ. ಕಾರಣ ತಕ್ಷಣಕ್ಕೆ ಚಿಕೆತ್ಸೆ ಕೊಡುವ ವ್ಯವಸ್ಥೆಯಿಲ್ಲ. ಕರಾವಳಿ ಭಾಗದವರು ಗಾಯಾಳುವನ್ನು ಪಣಜಿ, ಮಂಗಳೂರು ಇಲ್ಲವೆ ಉಡುಪಿ-ಮಣಿಪಾಲಿಗೆ ಕರೆದೊಯ್ಯಬೇಕು; ಘಟ್ಟದ ಮೇಲಿನವರು ಹತ್ತಿರದ ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿಗೆ ಅಪಘಾತಕ್ಕೀಡಾದವರನ್ನು ಸಾಗಿಸಬೇಕು. ೨೦೦ ರಿಂದ ೨೫೦ ಕೀಮೀ ದೂರದ ಸೂಪರ್‌ ಆಸ್ಪೇಷಾಲಿಟಿ ಅಸ್ಪತ್ರೆ ಅರಸಿ ಹೋಗುವ ತನಕ ಗಾಯಾಳುವಿನ ನಸೀಬು ಗಟ್ಟಿ ಇದ್ದರಷ್ಟೇ ಬಚಾವ್; ಇಲ್ಲದಿದ್ರೆ ಅದೇ ಆಂಬುಲೆನ್ಸ್‌ ಸ್ಮಶಾನದತ್ತ ಹೊರಳಿಸಬೇಕಾದಂತ ಕರುಣಾಜನಕ ಸ್ಥಿತಿ ಉತ್ತರ ಕನ್ನಡದ್ದು.

ಈ ಹತಾಶೆ, ಸಿಟ್ಟು ಸಹಜವಾಗೇ ಇತ್ತೀಚಿನ ವರ್ಷದಲ್ಲಿ ಜಿಲ್ಲೆಗೊಂದು ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಬೇಕೆಂಬ ಕೂಗೆಬ್ಬಿಸಿದೆ. ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಗಾಗಿ ಸಾಮಾಜಿಕ ಜಾಲ ತಾಣದಲ್ಲಿ ದೊಡ್ಡ ಅಭಿಯಾನವೇ ನಡೆದಿತ್ತು. ಕೆಲಸಕ್ಕೆ ಬಾರದ ಸ್ಥಳೀಯ ಶಾಸಕ, ಸಂಸದರ “ಪೌರುಷʼ ಹರಾಜಾಗಿತ್ತು. ಜಿಲ್ಲೆಯ ನೊಂದ ಜನರ, ಅದರಲ್ಲೂ ವಿಶೇಷವಾಗಿ ಯುವ ಸಮೂಹದ ಆಕ್ರೋಶ ತಮ್ಮ ಸ್ವಪ್ರತಿಷ್ಠೆಯ ರಾಜಕಾರಣಕ್ಕೆ ಮುಳುವಾಗುತ್ತದೆಂದು ಗಾಬರಿಬಿದ್ದ ಶಾಸಕರು ಸೂಪರ ಸ್ಪೇಶಾಲಿಟಿ ಆಸ್ಪತ್ರೆ ಸ್ಥಾಪನೆಗೆ ಪಣ ತೊಟ್ಟಂತೆ ನಾಟಕ ಶುರು ಹಚ್ಚಿಕೊಂಡಿದ್ದರು. ಕುಮಟಾದ ದಿಕರ ಶೆಟ್ಟಿ, ಕಾರವಾರದ ರೂಪಾಲಿ ನಾಯ್ಕ್‌ ಪೈಪೋಟಿಗೆ ಬಿದ್ದವರಂತೆ ಸದ್ದು ಮಾಡಿದ್ದರು. ಅಂದು ಸ್ಪೀಕರ್‌ ಆಗಿದ್ದ ಕಾಗೇರಿ ಮತ್ತು ಮಂತ್ರಿಯಾಗಿದ್ದ ಹೆಬ್ಬಾರ್‌ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಅವರು ಪ್ರತಿನಿಧಿಸುವ ಘಟ್ಟದ ಮೇಲೆ ಸೂಪರ್‌ ಸ್ಪೇಷಾಲಿಟಿ ಕಾವು ಏರಿರಲಿಲ್ಲ. ಸಂಸದ ಅನಂತ ಹೆಗಡೆಯಂತೂ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ಬಗ್ಗೆ ಕೂಗು ಹಾಕುತ್ತಿರುವವರತ್ತ ಕಣ್ಣೆತ್ತಿಯೂ ನೋಡಲಿಲ್ಲ. ಬೊಗಸೆ ತುಂಬಾ “ಇಸ್ಲಾಮೋಫೋಬಿಯಾ” ಮಂಕುಬೂದಿ ತುಂಬಿಕೊಂಡಿರುವ ಅನಂತ್‌ ಹೆಗಡೆ ಅದನ್ನು ಚುನಾವಣೆ ಹೊತ್ತಲ್ಲಿ ಯಾರ ಮೇಲೆ ಯಾವ ಪ್ರಮಾಣದಲ್ಲಿ ಎರಚಿ ಮತ ಪಡೆಯಬೇಕೆಂಬ ಕಲೆ ಕರಗತ ಮಾಡಿಕೊಂಡಿದ್ದಾರೆ. ವಿಕಟ ವ್ಯಂಗವೆದರೆ, ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ವಿಷಯದಲ್ಲಿ ಸಂಸದರ ಕರ್ಮಗೇಡಿತನದ ಬಗ್ಗೆ ಅಸಹ್ಯದಿಂದ ಮಾತಾಡುವವರೆ ಹಿಂದುತ್ವ ಮುಂದೆ ಬಂದಾಗ ಅದೇ ವ್ಯಕ್ತಿಗೆ ಮತಹಾಕುತ್ತಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ದುರಂತವೆಂದರೆ, ಈ ರೂಪಾಲಿ ಮತ್ತು ದಿನಕರ ಎಂಬ ಅಂದಿನ ಆಡಳಿತಾರೂಢ ಪಕ್ಷವಾಗಿದ್ದ ಬಿಜೆಪಿ ಶಾಸಕರು ತಂತಮ್ಮ ಕ್ಷೇತ್ರದಲ್ಲೇ ಜಿಲ್ಲಾ ಮಟ್ಟದ ಸೂಪರ್‌ ಆಸ್ಪತ್ರೆ ಸರಕಾರದಿಂದ ತರುತ್ತೇವೆಂದು ಕಿತ್ತಾಡಿ ಸುದ್ದಿಯಾದರೇ ವಿನಃ ಅಪಘಾತವಾದಾಗ ಅನಿವಾರ್ಯವಾದ ಟ್ರಮಾ ಸೆಂಟರ್‌ (Truma Center) ಸಹ ಇವರಿಂದ ತರಲಾಗಲಿಲ್ಲ. ಶಾಸಕರು ಜನರನ್ನು ಯಾವ ಮಟ್ಟಕ್ಕೆ ಯಾಮಾರಿಸಿದರೆಂದರೆ, ಅಂದಿನ ಆರೋಗ್ಯ ಮಂತ್ರಿ ಸುಧಾಕರ್‌ರನ್ನು ಜಿಲ್ಲೆಗೆ ಕರೆಸಿ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಗೆ ಜಾಗ ಗುರುತಿದಂತೆ ಪ್ರಹಸನವೂ ಮಾಡಿದ್ದರು. ಈಗ ಸರಕಾರ ಬದಲಾಗಿದೆ; ಕಾಂಗ್ರೆಸ್‌ ಸರಕಾರದ ಜಿಲ್ಲಾ ಉಸ್ತುವಾರಿ ಮಂತ್ರಿ ಮಂಕಾಳು ವೈದ್ಯ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ತನ್ನ ಮೊದಲ ಆದ್ಯತೆ ಅನ್ನುತ್ತಿದ್ದಾರೆ. “ಸೂಪರ್‌”ಗಾಗಿ ಕರಾವಳಿಯಲ್ಲಿ ಜಾಗವೂ ಮನದಲ್ಲೇ ಗುರುತಿಸಿದ್ದೇನೆ; ಸರಕಾರದಿಂದ “ಸೂಪರ್‌” ಸ್ಥಾಪಿಸಲಾಗದಿದ್ದರೆ ತಾನೇ ಸ್ವಂತ ಕಾಸಿಂದ “ಸೂಪರ್”‌ ಕಟ್ಟುತ್ತೇನೆ ಎಂಬ ಆರ್ಭಟದ ಮಾತಾಡುತ್ತಿದ್ದಾರೆ. ಇಂಥ ವೀರಾವೇಷವೇ ಮಂಕಾಳು ವೈದ್ಯರ ರಾಜಕೀಯದ ಅಂತಃಶಕ್ತಿ ಎಂಬುದು ಬಹಿರಂಗ ರಹಸ್ಯ.

ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಯೆಂದರೆ ಪೆಟ್ರೋಲ್‌ ಬಂಕ್‌, ಸ್ಟಾರ್‌ ಹೊಟೇಲ್‌, ಸಿಬಿಎಸ್‌ಸಿ ಶಾಲೆ ಕಟ್ಟಿದಷ್ಟು ಸುಲಭ ವೆಂದು ಮಂಕಾಳು ವೈದ್ಯ ಭಾವಿಸಿದಂತಿದೆ ಎಂದು ಹೇಳುವವರೂ ಇದ್ದಾರೆ. ಇದಕ್ಕೆ ಒಂದು ತರ್ಕವೂ ಇದೆ. ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಯೆಂದರೆ ಸುಮ್ಮನೆ ಮಾತಲ್ಲ. ಇದು ರೂಪಾಲಿ ನಾಯ್ಕ್, ದಿನಕರ ಶೆಟ್ಟಿ ಅವರಿಗೂ ಅರ್ಥವಾಗಿರಲಿಲ್ಲ; ದಿನಕರ ಶೆಟ್ಟಿಯವರಂತೂ ಸರಕಾರದ ಮಟ್ಟದಲ್ಲಿ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಗೆ ಪ್ರಯತ್ನ ಮಾಡಲಾಗದೆ ಹೆಸರಾಂತ ಹೃದ್ರೋಗ ತಜ್ಞ ಪದ್ಮನಾಭ ಕಾಮತ್‌ ಬಳಿಗೆ ನಿಯೋಗ ಕರೆದುಕೊಂಡು ಹೋಗಿ “ನಮ್ಮಜಿಲ್ಲೆಗೆ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ತರಲು ಸಹಾಯಮಾಡಿ” ಎಂದು ಅಂಗಲಾಚಿ ತನ್ನ ಅಸಾಮರ್ಥ್ಯ ಸ್ವಯಂ ಸಾಬೀತು ಪಡಿಸಿಕೊಂಡಿದ್ದರು. ದಿನಕರ ಶೆಟ್ಟರು ಡಾ.ಪದ್ಮನಾಭ ಕಾಮತ್‌ರನ್ನು ಭೇಟಿಯಾಗಿ ಬಂದಿದ್ರಿಂದ ಪ್ರಯೋಜವೇನೆಂಬುದೇ ಜನರಿಗಿನ್ನೂ ತಿಳಿಯದಾಗಿದೆ. ಎಲ್ಲವೂ ಜನರನ್ನು ದಿಕ್ಕ ತಪ್ಪಿಸುವ ತಂತ್ರ ರಾಜಕಾರಣವಷ್ಟೇ. ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಯೆಂದರೆ ಬರೀ ಬೃಹತ್‌ ಕಟ್ಟವಷ್ಟೇ ಅಲ್ಲ; ಅತ್ಯಾಧುನಿಕ ದುಬಾರಿ ಯಂತ್ರ, ಸಲಕರಣೆ ಬೇಕು; ಅದನ್ನು ಬಳಸಲು ನುರಿತ ತಜ್ಞ ವೈದ್ಯರ ತಂಡಬೇಕು. ಕನಿಷ್ಟ ೨೫-೩೫ ವೈದ್ಯರೇ ಬೇಕಾಗುತ್ತದೆ.ಈ ಟೀಮ್‌ ಸರಿಯಿದ್ದರಷ್ಟೇ ಸೂಪರ್‌ ಸಕ್ಸಸ್‌ ಆಗುತ್ತದೆ. ಉತ್ತರ ಕನ್ನಡದಂಥ ಕಡೆ ಸೂಪರ್‌ ಸ್ಪೇಷಾಲಿಟಿ ವೈದ್ಯರು ಬರುವುದು ಅನಮಾನವೆಂದು ಆರೋಗ್ಯ ಕ್ಷೇತ್ರದ ಅನುಭವಿಗಳು ಹೇಳುತ್ತಾರೆ. ಕಾರವಾರದ ಮೆಡಿಕಲ್ ಕಾಲೇಜಿಗೆ ಅಗತ್ಯವಿರುವ ವೃದ್ಯಕೀಯ ಸಿಬ್ಬಂದಿ ಪೂರೈಸಲಾಗದ ಸರಕಾರಕ್ಕಕೆ ಸೂಪರ್‌ ಸ್ಪೇಷಾಲಿಟಿ ಕಲಿತ ವೈದ್ಯರ ನೇಮಿಸಲು ಮತ್ತು ಬಂದವರು ತಪ್ಪಿಸಿಕೊಂಡು ಹೋಗದಂತೆ ತಡೆಯಲು ಸಾಧ್ಯವೇ? ಯಡಿಯೂರಪ್ಪ,ಈಶ್ವರಪ್ಪರಂಥ ಘಟಾನುಘಟಿಗಳಿದ್ದರೂ ಶಿವಮೊಗ್ಗೆಯ ಸೂಪರ ಸ್ಪೇಷಾಲಿಟಿ ಆಸ್ಪತ್ರೆ ವಿಫಲವಾಗಿದೆ ಎಂಬುದಿಲ್ಲಿ ಗಮನಾರ್ಹ.

ಹಾಗಿದ್ದರೆ ಜಿಲ್ಲೆಯ ಸೂಪರ್‌ ಸ್ಪೇಷಾಲಿಟಿ ಬೇಡಿಕೆಗೆ ಪರಹಾವಿಲ್ಲವೇ? ಖಂಡಿತವ ಇದೆ. ಈಗಿರುವ ಕಾರವಾರ ಮೆಡಿಕಲ್ ಕಾಲೇಜಿನ (Karwar Institute of Medical Sciences, Karwar – KRIMS) ಅವ್ಯವಹಾರ-ಅವಾಂತರಗಳಿಗೆ ಕಡಿವಾಣ ಹಾಕಿ ಸುಸಜ್ಜಿತಗೊಳಿಸಿದರೆ ಒಂದು ಹಂತದ ಸಮಸ್ಯೆ ನೀಗುತ್ತದೆ.ಇಲ್ಲಿ ಟ್ರಾಮಾ ಸೆಂಟರ್ ತೆರೆದರೆ ಅಪಘಾತದ ಗಾಯಾಳುಗಳಿಗೆ, ಹೃದಯಾಘಾತವಾದ ರೋಗಿಗಳಿಗೆ ತಕ್ಷಣದ ಚಿಕಿತ್ಸ ಕೊಡಿಸಿ ನಂತರ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಗೆ ಅವಶ್ಯವಿದ್ದರಷ್ಟೇ ಕಳಿಸಬಹುದು. ಕೋಟ್ಯಂತರ ರೂ.ಗಳ ಮೆಡಿಕಲ್‌ ಕಾಲೇಜು ಮತ್ತು ಜಿಲ್ಲಾ ಆಸ್ಪತ್ರೆ ಪರಸೆಂಟೇಜ್‌ ಪರಾಕ್ರಮಿಗಳು, ಹೆರಿಗೆಗೂ ಬಡವರಿಂದ ಕಾಸು ಪೀಕಿಸುವ ಧನ ಹದ್ದುಗಳ ಹಿಡಿತಕ್ಕೆ ಸಿಲುಕಿದೆ ಎಂಬ ಆರೋಪ ಸಾಮಾನ್ಯವಾಗಿದೆ. ಕಾರವಾರ ಮೆಡಿಕಲ್‌ ಕಾಲೇಜೆಂದರೆ ಅನರ್ಹರ ಅಡ್ಡೆಯಂತಾಗಿದೆ.ಇಲ್ಲಿಯ ಡೈರೆಕ್ಟರ್‌ ಡಾ.ಗಜಾನನ ನಾಯಕ್‌ ಮತ್ತುವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತರ್ಕರ್ ಇಬ್ಬರಿಗೂ ಆ ಹುದ್ದೆಗೆ ಬೇಕಾದ ಶೈಕ್ಷಣಿಕ ಮತ್ತಿತರ ಅರ್ಹತೆಗಳಿಲ್ಲ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗವೇ (National Medical Commission – NMC) ಹೇಳಿದೆ.

ಡಾ.ಗಜಾನನ ನಾಯಕ್‌ ತಾನು ಡೀನ್‌ ಮತ್ತು ನಿರ್ದೇಶಕ ಹುದ್ದೆಗೆ ಲಾಯಕ್‌ ಅಲ್ಲವೆಂದು ಹಲವುಬಾರಿ ಸ್ವಯಂ ಸಾಬೀತುಪಡಿಸಿಕೊಂಡಿದ್ದಾರೆ. ಈಚೆಗೆ ಜಿಲ್ಲಾ ಉಸ್ತುವಾರಿ ಮಂತ್ರಿ ಮಂಕಾಳ್‌ ವೈದ್ಯ ಮತ್ತು ಶಾಸಕ ಸತೀಶ್‌ ಸೈಲ್‌ ನಡೆಸಿದ ಒಂಥರಾ ಬಹಿರಂಗ ವಿಚಾರಣೆಯಲ್ಲಿ ಡಾ.ಗಜಾನನ ನಾಯಕ್‌ ಸರಿಯಾದ ಉತ್ತರ ಕೊಡಲಾಗದೆ ಪ್ರತಿಯೊಂದಕ್ಕೂ ದೇವರಾಣೆ ಹಾಕಿ ಬಚಾವಾಗಲು ತಿಣುಕಾಡಿದ್ದು ಸಾರ್ವಜನಿಕ ಗೇಲಿಯ ಸಂಗತಿಯಾಗಿತ್ತು. ವಿದ್ಯಾರ್ಥಿಗಳು ಮತ್ತು ಕಾಲೇಜಿನ ಬೋಧಕ,ಬೋಧಕೇತರ ಸಿಬ್ಬಂದಿ ನಿರ್ದೇಶಕರ ನಿಯಮ ಬಾಹೀರ ಕುಕೃತ್ಯಗಳನ್ನು ಒಂದೊಂದಾಗಿ ಬಿಚ್ಚಿಟ್ಟಿದ್ದರು. ಜಿಲ್ಲಾಧಿಕಾರಿಯೂ ಡೀನ್‌ರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಮಂತ್ರಿ ವೈದ್ಯರಿಂದ ಈ ರೋಗಗ್ರಸ್ಥ ಕಾಲೇಜು ಮತ್ತು ಆಸ್ಪತ್ರೆಗೆ ಸಮರ್ಪಕ ಚಿಕಿತ್ಸೆ ಕೊಡಲಾಗಿಲ್ಲ. ಯಥಾ ಪ್ರಕಾರ ಡಾ.ಗಜಾನನ ನಾಯ್ಕ್‌ ಮತ್ತು ಶಿವಾನಂದ ಕುಡ್ತರಕರ್‌ ಅಂಧಾ ದರ್ಬಾರು ನಡೆದಿದೆ. ಜಿಲ್ಲಾಸ್ಪತ್ರೆಯಲ್ಲಿ ಬಡವರಿಗೆ ಸರಿಯಾದ ಚಿಕಿತ್ಸೆ ಸಿಗದೆಂಬ ದೂರಿಗಿನ್ನೂ ಪರಿಹಾರ ಸಿಕ್ಕಿಲ್ಲ. ಒಟ್ಟಿನಲ್ಲಿ ಕಾರವಾರ ಮಡಿಕಲ್ ಕಾಲೇಜು ಆಸ್ಪತ್ರೆ ಇದ್ದೂ ಇಲ್ಲದಂತಾಗಿದೆ.ದುರಂತವೆಂದರೆ, ಜಿಲ್ಲೆಯ ಪ್ರಗತಿ, ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ಬಗ್ಗೆ ಉದ್ದುದ್ದ ವ್ಯಾಖ್ಯಾನಗಳನ್ನು ಕೊಡುವ ಪತ್ರಕರ್ತರು, ಸೋಕಾಲ್ಡ್‌ ಹೋರಾಟಗಾರರು ಅಸಹಾಯಕರ ಜೀವ ಹಿಂಡುವ ಜಿಲ್ಲಾಸ್ಪತ್ರೆಯ ಹೆಗ್ಗಣಗಳನ್ನು ಸ್ವಾರ್ಥಕ್ಕಾಗಿ ಸಾಕುತ್ತಿದ್ದಾರೆ.

ಕಾರವಾರ ಜಿಲ್ಲಾ ಆಸ್ಪತ್ರೆಯನ್ನು ಹಳಿಗೆ ತಂದು ಕುಮಟಾ ಮತ್ತು ಶಿರಸಿಯಲ್ಲಿ ಸರಕಾರ ಟ್ರಾಮಾ ಸೆಂಟರ್‌ ತೆರೆದರೆ ಸೂಪರ ಸ್ಪೇಷಾಲಿಟಿ ಆಸ್ಪತ್ರೆ ಬೇಡಿಕೆಗೆ ಒಂದು ಹಂತದ ಪರಿಹಾರ ಸಿಗಬಹುದು. ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ಸಾಧ್ಯವೇ ಇಲ್ಲವೆಂದು ಟ್ರಾಮಾ ಸೆಂಟರ್‌ಗೂ ನಿರ್ಲಕ್ಷ ಮಾಡಿದರೆ ಉತ್ತರ ಕನ್ನಡ ನರಕವಾಗೇ ಇರುತ್ತದೆ. ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಗೆ ಆಗ್ರಹಿಸುವ ಕಾಳಜಿಯ ಮನಸ್ಸುಗಳು ಆಡಳಿತಗಾರರ ಹುನ್ನಾರಗಳನ್ನು ಅರ್ಥಮಾಡಿಕೊಳ್ಳಬೇಕು. ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಅವಕಾಶ-ಅನುಕೂಲವಿಲ್ಲವೆಂದು ಬಾಯಿಮುಚ್ಚಿಸುವ ಇಲ್ಲವೆ ಕಾರ್ಯಸಾಧ್ಯವಲ್ಲದ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಮಾಡುವ ಹುಸಿ ಭರವಸೆಕೊಟ್ಟು ಕಾಲ ಹರಣ ಮಾಡುತ್ತ ಅಧಿಕಾರಸ್ಥರು ಬೇಳೆ ಬೇಯಿಕೊಳ್ಳುವ ಅಪಾಯವಿದೆ. ಹಾಗಾಗಿ ಜಿಲ್ಲೆಯ ಮೂರ್ನಾಲ್ಕು ಕಡೆ ಟ್ರಾಮಾ ಸೆಂಟರ್‌ ಬೇಡಿಕೆಯಿಟ್ಟು ಸರಕಾರಿ ಮದ್ದಾನೆಗಳ ಮಣಿಸುವ ಯೋಚನೆ ಮಾಡಬೇಕಾಗಿದೆ.

ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ಹೆಸರಲ್ಲಿ ತಮಾಷೆಯೊಂದು ತುಂಬ ಅಬ್ಬರದಲ್ಲಿ ನಡೆಯುತ್ತಿದೆ. ಶಿರಸಿ ಕಡೆಯ ಅನಂತಮೂರ್ತಿ ಹೆಗಡೆ ಎಂಬ ಎಂಪಿಗಿರಿ ಆಸೆಯ ಆಸಾಮಿ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ಮತ್ತು ಜಿಲ್ಲೆಯಲ್ಲಿ ಮತ್ತೆರಡು ಮೆಡಿಕಲ್ ಕಾಲೇಜು ಬೇಕೆಂದು ಧರಣಿ, ಪಾದಯಾತ್ರೆಯ ನಾಟಕ ನಡೆಸಿದ್ದಾರೆ. ಮಡಿಕಲ್‌ ಕಾಲೇಜೆಂದರೆ ಅದೇನು ಅಂಗನವಾಡಿ ಕೇಂದ್ರಗಳೇ? ಬೆಂಗಳೂರಿನಂಥ ಬೃಹತ್‌ ನಗರದಲ್ಲೇ ಇರುವುದು ಒಂದೇ ಒಂದು ಸರಕಾರಿ ಮೆಡಿಕಲ್‌ ಕಾಲೇಜು! ಯಾವ ಜಿಲ್ಲೆಯಲ್ಲೂ ಎರಡು ಸರಕಾರಿ ವೈದ್ಯಕೀಯ ಕಾಲೇಜಿಲ್ಲ; ಕೆಲವು ಜಿಲ್ಲೆಗಳಲ್ಲಿ ಮೆಡಿಕಲ್‌ ಕಾಲೇಜೇ ಇಲ್ಲ; ಮತ್ತೊಂದು ಮಜಾ ಎಂದರೆ ಈ ‘ಓರಾಟಗಾರ’ನಿಗೆ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ (Super Speciality Hospital) ಮತ್ತು ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ (Multispeciality hospital) ನಡುವಿನ ವ್ಯತ್ಯಾಸವೇ ಗೊತ್ತಿಲ್ಲ. ಇದು ಕೇವಲ ಬಿಜೆಪಿ ಟಿಕೆಟ್‌ ಪಡೆಯುವ ಅನಂತಮೂರ್ತಿಯ ಅನಂತಾನಂತ ಅವತಾರವೇ ಹೊರತು ಜಿಲ್ಲೆಯ ಬಗೆಗಿನ ಕಾಳಜಿಯಲ್ಲ. ಇದ್ದಕ್ಕಿದ್ದಂತ ದಿಢೀರ್‌ ಎಂದು ಅವತರಿಸಿರುವ ಅನಂತಮೂರ್ತಿ ಒಂದು ಕಡೆ ಮೋದಿ ಒಳಿತಿಗೆ ಹೋಮ-ಹವನ ಮಾಡುತ್ತ ಮತ್ತೊಂದೆರಡು ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಯ ಮಂತ್ರ ಜಪಿಸುತ್ತಿರುವುದು ಅನೇಕ ಅನುಮಾನ ಜಿಲ್ಲೆಯ ಜನಸಾಮಾನ್ಯರಲ್ಲಿ ಹುಟ್ಟುಹಾಕಿದೆ. ಈ ಅನಂತಮೂರ್ತಿಯ ಪೂರ್ವಾಪರದ ಬಗ್ಗೆಯೇ ದಿನಕ್ಕೊಂದು ನಮೂನೆಯ ಸುದ್ದಿಗಳು ಹೊರಬರಲಾರಂಭಿಸಿದೆ. ಒಂದು ವರ್ತಮಾನದ ಪ್ರಕಾರ ಈ ಅನಂತಮೂರ್ತಿ ಶಿರಸಿ ಕಡೆಯಿಂದ ಪೌರೋಹಿತ್ಯ ಅರೆಬರೆಯಾಗಿ ಕಲಿತ ಹವ್ಯಕ ಬ್ರಾಹ್ಮಣ ಹುಡುಗರ ತಂಡಗಳನ್ನು ಬೆಂಗಳೂರಿಗೆ ಕರೆದೊಯ್ದು ವೈದಿಕತೆ ಬಿಸ್ನೆಸ್‌ ನಡೆಸಿ ಕೋಟಿಗಳ ಲೆಕ್ಕದಲ್ಲಿ ಕಮಾಯಿಸಿದ್ದಾರಂತೆ. ಮತ್ತೊಂದು ಮಾಹಿತಿ ಪ್ರಕಾರ ಅನಂತಮೂರ್ತಿ ರಿಯಲ್ ಎಸ್ಟೇಟ್‌ ದಂಧೆ ಕುಳವಂತೆ; ಬೆಂಗಳೂರಲ್ಲಿ ಭೂ ವ್ಯವಹಾರ ಮಾಡುತ್ತ ಬಿಜೆಪಿ-ಆರ್ ಎಸ್ ಎಸ್ ನ ಆಯಕಟ್ಟಿ ರಿಂಗ್ ಮಾಸ್ಟರ್‌ಗಳ ಸಖ್ಯ ಕುದುರಿಸಿಕೊಂಡಿದ್ದಾರಂತೆ. ಈ ಬಲದಲ್ಲಿ ಹಾಲಿ ಸಂಸದ ಅನಂತ್‌ ಹೆಗಡೆಗೇ ಕೋಕ್ಕೊಟ್ಟು ಕೇಸರಿ ಟಿಕೆಟ್‌ ತರುವ ಧೈರ್ಯದಲ್ಲಿದ್ದಾರಂತೆ.

ಅನಂತಮೂರ್ತಿಯ ರಾಜಕೀಯ ಆಕಾಂಕ್ಷೆ, ರಿಯಲ್ ಎಸ್ಟೇಟ್‌ ದಂಧೆ ಕತೆಗಳೇನೇ ಇರಲಿ. ಅನಂತಮೂರ್ತಿ ಹೆಗಡೆ ದೇಶ ಆಳುವ ಬಿಜೆಪಿಯ ಪ್ರಭಾವಿಗಳ ನಂಟಿರುವ ಮತ್ತು ಕೊಪ್ಪರಿಗೆ ಕಾಸುಮಾಡಿರುವ ಲಕ್ಷಣಗಳು ಅವರ ಚಲನವಲನದಿಂದ ಯಾರಿಗಾದರೂ ಬರುತ್ತದೆ. ಈ ಹಣ,ಸಂಪರ್ಕ ಬಳಸಿ ಅನಂತಮೂರ್ತಿ ಹೆಗಡೆ ಸ್ವಂತ ಖರ್ಚಿನಲ್ಲಿ ಯಾಕೆ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಕಟ್ಟಬಾರದು? ಎಂಪಿಯಾಗುವ “ಚಟ”ಕ್ಕೆ ಸುರಿಯುವ ಕೋಟ್ಯಾಂತರ ರೂ. ಜಿಲ್ಲೆಯ ಒಳಿತಿಗೇಕೆ ಖರ್ಚು ಮಾಡಬಾರದು? ಮೋದಿ ಆಯುರಾರೋಗ್ಯಕ್ಕೆ ಗೋಕರ್ಣದಲ್ಲಿ ಹೋಮ-ಹವನ ಮಾಡಿದಂತೆ ಜಿಲ್ಲೆಯ ಆಯುರಾರೋಗ್ಯದ ಬಗ್ಗೆ ಭರ್ಜರಿ ಹವಿಸ್ಸಿನ ಯಜ್ಞ ಮಾಡಿದರೆ ಸಾಲದೆ? ಮತ್ತೇಕೆ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಗಾಗಿ ಸುಖಾಸುಮ್ಮನೆ ಮೈ ಕೈ ಹಣ್ಣು ಮಾಡಿಕೊಳ್ಳುವ ಧರಣಿ ಸತ್ಯಾಗ್ರಹ ಯಾಕೆ? ಆ ಮೂಲಕ ಎಂಪಿ-ಎಮ್ಮೆಲ್ಲೆಗಳಿಗೂ ಮೀರಿದ ಜನ ನಾಯಕನಾಗಬಾರದೆ ಈ ಉದ್ಭವ ಮೂರ್ತಿ? ಇಂಥ ಪ್ರಶ್ನೆಗಳೀಗ ಜಾಣರಿಗಷ್ಟೇ ಅಲ್ಲ, ಗಾಂಪರಿಗೂ ಕಾಡುತ್ತಿದೆ.

ವರದಿಗಾರರು
ಶೂದ್ರ ಶಂಬೂಕ

Leave a Reply

Your email address will not be published. Required fields are marked *