ಧ್ಯೇಯವಾದ ಮತ್ತು ಸರಿಹೊತ್ತಿನ ರಾಜಕಾರಣ!

Bharat

ಸರಿಹೊತ್ತಿನ ರಾಜಕಾರಣದಲ್ಲಿ I.N.D.I.A ಒಕ್ಕೂಟವೂ ಸೇರಿದಂತೆ ಇತರೆಲ್ಲ ರಾಜಕೀಯ ಪಕ್ಷಗಳಿಗೂ, ಬಿಜೆಪಿ ನೇತೃತ್ವದ NDA ಒಕ್ಕೂಟಕ್ಕೂ ತುಲನಾತ್ಮಕವಾಗಿ ಅವಲೋಕಿಸಿದರೆ ಪೂರ್ಣಪ್ರಮಾಣದಲ್ಲಿ ಧ್ಯೇಯವಾದ ಕಾಣುವುದೇ ಇಲ್ಲ. ಹಾಗೆ ನೋಡಿದರೆ, ರಾಷ್ಟ್ರೀಯತೆ, ಮನುಷ್ಯತ್ವ, ತ್ಯಾಗ, ಏಕತೆ, ಅರ್ಪಣೆ, ದೂರದರ್ಶಿತ್ವ, ವಿಚಾರಗಳ ಪರಿಶೀಲನೆ, ಮಂಡನೆ, ಒಪ್ಪಿತ ಪ್ರಜೆಗಳ ನೈತಿಕ ನೆಲೆಗಳು- ಕಾಣಬರುತ್ತಿಲ್ಲ. ಆದರೆ, ಬಿಜೆಪಿಯ ಸೈದ್ಧಾಂತಿಕ ನಿಲುವುಗಳು ಈ ಧ್ಯೇಯಗಳು ಇರುವುದು ಹೌದಾದರೂ ಒಕ್ಕೂಟದ ಅಸ್ತಿತ್ವ ಎದುರಾದಾಗ ಸರಿಹೊತ್ತಿನ ರಾಜಕಾರಣದಲ್ಲಿ ಬಿಜೆಪಿಯೂ ಕೂಡ ಧ್ಯೇಯಗಳನ್ನು ಅಧಿಕಾರ ರಾಜಕೀಯದ ಮೂಸೆಯಲ್ಲಿ ಕಳೆದುಕೊಳ್ಳಬೇಕಾದ ಅಥವಾ ನಿರ್ಲಕ್ಷಿಸಬೇಕಾದ ಒತ್ತಡದಲ್ಲಿದೆ. Of course ಅದನ್ನು ಬಿಜೆಪಿ ಈಗಾಗಲೇ‌ ಸಾಂದರ್ಭಿಕವಾಗಿ ಮಾಡಿಕೊಂಡಿದೆ. ಆದರೆ, ಸುದೀರ್ಘವಾದ ಚರಿತ್ರೆಯುಳ್ಳ ಕಾಂಗ್ರೆಸ್ ತನ್ನ ಸಿದ್ಧಾಂತಗಳನ್ನು ಅಧಿಕಾರ ಪ್ರಾಪ್ತಿಯ ರಾಜಕೀಯದ ಹೋರಾಟದಲ್ಲಿ ಕಳೆದುಕೊಂಡಿದೆ. ಅದರ ರಾಜಕೀಯ ನೌಕೆ ಮುಳುಗುತ್ತಿದೆ. ಬರಬರುತ್ತ ಭವಿಷ್ಯ‌ ಮಸುಕಾಗುತ್ತಿದೆ.

ಪೂರ್ಣ ಸ್ವರಾಜ್ಯ ಪ್ರಾಪ್ತಿಯೊಂದೇ ಗುರಿ ಎಂದು ಸಾರಿದ್ದ ಗಾಂಧಿಯವರು, ಮುಸ್ಲಿಮರಿಗೆ ಖಿಲಾಫತ್ ಚಳವಳಿಯ ಮೂಲಕ ಖಲೀಫರ ಸ್ಥಾನದ ಪುನಃ ಪ್ರಾಪ್ತಿಯು, ನಮ್ಮ ಪೂರ್ಣ ಸ್ವರಾಜ್ಯ ಪ್ರಾಪ್ತಿಗಿಂತ ಹೆಚ್ಚು ಮುಖ್ಯ. ಹೆಚ್ಚು ತುರ್ತಾದದ್ದು ಎಂದು ಘೋಷಿಸಿದ ದಿನ‌ ಕಾಂಗ್ರೆಸ್ಸು ಸತ್ತಿತ್ತು. ರಾಷ್ಟ್ರೀಯ ಚಳವಳಿಯ ಉಸಿರೇ ಹಾರಿಹೋಗಿತ್ತು. ಯಾರನ್ನು ಕೇಳಿ, ಯಾರನ್ನು ಪ್ರತಿನಿಧಿಸಿ ಗಾಂಧಿ ಈ ಅಡ್ಡ ಗುರಿ‌ ಹಿಡಿಸಿದರು? ಆಗಲೇ ನೆಹರೂ ಬರೆದಿದ್ದರು: ಗಾಂಧಿಯವರಲ್ಲಿ ಒಂದು ಆತ್ಮವಿಲ್ಲ. ಐದಾರು ಇದ್ದಂತೆ ಕಾಣುತ್ತದೆ. ಯಾವಾಗ ಯಾವುದು ತಲೆಯೆತ್ತಿ ಏನು ಅನರ್ಥ ಮಾಡುವುದೆಂದು ಯಾರು ಹೇಳಬಲ್ಲವರಿದ್ದರು? ಜನಪ್ರಿಯತೆಯ ಉತ್ತುಂಗದಲ್ಲಿದ್ದ ಗಾಂಧಿ ಹೀಗೆ ಸರ್ವಾಧಿಕಾರಿಯಂತೆ ವರ್ತಿಸಿದ ದಿನವೇ ಕಾಂಗ್ರೆಸ್ ಅಧಃಪತನದ ಹಾದಿ ಹಿಡಿದಿತ್ತು. ಗೋಡ್ಸೆ ಕೊಂದದ್ದು ಗಾಂಧಿಯಲ್ಲ; ಅದಾಗಲೇ ಗಾಂಧಿ ಸತ್ತಿದ್ದ! ಎಂಬ ಮಾತುಗಳೂ ಕೇಳಿಬಂದಿತ್ತು.

ಸ್ವಾತಂತ್ರ್ಯೋತ್ತರ ಭಾರತದ ರಾಜಕಾರಣದಲ್ಲಿ ಬಹುವರ್ಷಗಳ ಕಾಲ ಈ ದೇಶವನ್ನು ಆಳಿದ ಕಾಂಗ್ರೆಸ್ಸನ್ನು ಸೋಲಿಸಿ ದೇಶವ್ಯಾಪಿ ಬಿಜೆಪಿ ತನ್ನ ಬಾಹುಬಲವನ್ನು ವ್ಯಾಪಿಸಿಕೊಂಡದ್ದು ಈಗ್ಗೆ ಹತ್ತು ವರ್ಷಗಳ ಹಿಂದೆ. ಅಲ್ಲಿಯವರೆಗೂ ಬಿಜೆಪಿಯ ಪ್ರಭಾವಳಿ ಮಧ್ಯಪ್ರದೇಶವನ್ನು ಹೊರತುಪಡಿಸಿ ದೇಶವ್ಯಾಪಿ ಅಷ್ಟೊಂದು ಇರಲಿಲ್ಲ. Of course ಇರಲಿಲ್ಲ. ಒಂದು ಕಾಲದಲ್ಲಿ ದೇಶವನ್ನು ಆವರಿಸಿಕೊಂಡ ಕಾಂಗ್ರೆಸ್ಸಿನ ಸ್ಥಾನವನ್ನು ಈಗ ಬಿಜೆಪಿ ಆವರಿಸಿಕೊಂಡಿದೆ. ಮೊನ್ನೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಮೂರು ರಾಜ್ಯದಲ್ಲಿ ವಿಜಯವನ್ನು ಸಾಧಿಸಿದ್ದು ಮುಂದಿನ ಮಹಾಚುನಾವಣೆಗೆ ತಾಲೀಮು ಅಂತಲೇ ರಾಜಕೀಯ ವಲಯದಲ್ಲಿ ಭಾವಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಬಿಜೆಪಿ ಮಹಾಚುನಾವಣೆಯ ಗೆಲುವಿನ ಕನಸಿನ ಸಂಭ್ರಮದಲ್ಲಿದೆ. ಕಾಂಗ್ರೆಸ್ ಮಹಾಚುನಾವಣೆಯ ಗೆಲುವಿನ ಮತ್ತು‌ ಈಗ ಆದ ಸೋಲಿನ ಪರಾಮರ್ಶೆಯನ್ನು, ಈವರೆಗೆ ತುಳಿದ ಹಾದಿಯ ಅವಲೋಕನವನ್ನು ಮಾಡುತ್ತಿದೆ. ಈ ಚಿಂತನೆಯ ಹಾದಿಯಲ್ಲೇ ಕಾಂಗ್ರೆಸ್ ಹಳಿ ತಪ್ಪುತ್ತಿರುವುದು ಎಂಬುದು ಅದಕ್ಕಿನ್ನೂ ಸಂಪೂರ್ಣವಾಗಿ ಅರ್ಥವಾದಂತಿಲ್ಲ. ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶಗಳಿಗೂ, ಲೋಕಸಭೆಯ ಚುನಾವಣೆಯ ಫಲಿತಾಂಶಗಳಿಗೂ ಸಂಬಂಧ ಇಲ್ಲ ಅಂತ ಸಂಪೂರ್ಣವಾಗಿ ನಿರ್ಧರಿಸುವುದು ಮೂರ್ಖತನವಾದೀತು! ಸಂಬಂಧ ಇದೆಯೆಂದು ಸಂಪೂರ್ಣವಾಗಿ ಸ್ವೀಕರಿಸಿ ಗೆಲುವಿನ ವ್ಯೂಹ ಮತ್ತು ತಂತ್ರಗಳನ್ನು ರಚಿಸುವುದು ಕೂಡ ಪೆದ್ದುತನವಾದೀತು! ಯಾಕೆಂದರೆ, ಈಗ ಉತ್ತರದ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಇದ್ದ ಭರವಸೆಗಿಂತ ಕಾಂಗ್ರೆಸ್ಸಿನ ವಿಜಯಕ್ಕೆ ಅತ್ಯುತ್ಸಾಹದ ಭರವಸೆಯಿತ್ತು ಎಂಬುದು ರಾಜಕೀಯದ ವಿಶ್ಲೇಷಣೆಯಾಗಿತ್ತು. ಅದಕ್ಕೆ ಕಾರಣ ಆಡಳಿತರೂಢ ಪಕ್ಷದ ವಿರೋಧಿ ಅಲೆ ಯಾವತ್ತೂ ಇದ್ದೇ ಇರುತ್ತದೆ ಎಂಬ ಚುನಾವಣಾ ರಾಜಕೀಯ ತಂತ್ರಗಾರಿಕೆಯ ಒಂದಂಶವಾಗಿ!

ಆದರೆ, ಅದನ್ನು ಮೀರಿ ಕಾಂಗ್ರೆಸ್ ಹೀನಾಯವಾಗಿ ಸೋತಿತು. ಕರ್ನಾಟಕದಲ್ಲಿ ಘೋಷಿಸಿದ ಗ್ಯಾರಂಟಿಗಳನ್ನೇ ಇನ್ನಷ್ಟು ಉದಾರತೆಯಲ್ಲಿ ಘೋಷಿಸಿದ ಕಾಂಗ್ರೆಸ್ಸಿಗೆ ಗ್ಯಾಂರಂಟಿಗಳೆಂಬ ಲಂಚದಾಮಿಷದಿಂದ ಗೆಲ್ಲುವುದು ಸಾಧ್ಯವಿಲ್ಲ ಎಂಬುದು ರಿಯಲೈಸ್ ಮಾಡಿಕೊಳ್ಳಲೇಬೇಕಾದ ಸಂದಿಗ್ಧತೆ ಬಂದಿದೆ. ಇದು ಕಾಂಗ್ರೆಸ್ಸಿನ ನೈತಿಕ ರಾಜಕೀಯದ ದಿವಾಳಿಯಾಗಿ ಕಾಣುತ್ತಿದೆ. ಒಂದು ಕಾಲದಲ್ಲಿ, ಅಪಾರ ಜನಪ್ರಿಯತೆಯಲ್ಲಿ ಪ್ರಚಂಡ ಬಹುಮತಗಳ ಬಲದ ನೆಹ್ರೂ ಭಾರತೀಯ ಓಟುದಾರರನ್ನು ಸುಧಾರಿಸಬಹುದಿತ್ತು. ಬೆದರಿಕೆ, ಬ್ಲಾಕ್ ಮೇಲ್ ರಾಜಕೀಯ ಮಾಡುತ್ತ, ರಾಜೀನಾಮೆಯ ಗೊಂದಲವನ್ನು ಪಾರ್ಲಿಮೆಂಟಲ್ಲಿ ಒಡ್ಡಿದ್ದ ನೆಹ್ರೂಗೆ, ಪ್ರಜಾಪ್ರಭುತ್ವದ ಯಶಸ್ಸು ಚುನಾವಣೆಗೆ ನಿಲ್ಲುವವರ, ಆರಿಸಿ ಬಂದವರ- ಆಂತರಿಕ ಗುಣ- ಮೆರಿಟ್ ಆಧಾರದಲ್ಲಿ ನಿಂತರೆ ಮಾತ್ರ ಸಾಧ್ಯ ಎಂಬುದನ್ನು ನೆಹ್ರೂ ತಿಳಿಯಲೇ ಇಲ್ಲ. ಟಿಕೆಟ್ ನೀಡಲ್ಲ, ನೀನು ಅಯೋಗ್ಯ, ಮಂತ್ರಿಯಾಗುವ ಅರ್ಹತೆ ಸಂಪಾದಿಸಿಕೊಂಡು ಬಾ, ಜಾತಿಯೊಂದೇ ಮುಖ್ಯವಲ್ಲ, ಗುಣವೂ ಅರ್ಹತೆಯೂ ಮುಖ್ಯ, ಸಾಮಾಜಿಕ ನ್ಯಾಯದೊಂದಿಗೆ ರಾಷ್ಟ್ರಹಿತವೂ ಗಮನೀಯ- ಎಂದೆಲ್ಲ ನೆಹರೂ ಗುಡುಗಿದ್ದರೆ ಕಾಂಗ್ರೆಸ್ ತನ್ನ ಬಾಹುಬಲವನ್ನು ಇಷ್ಟು ಹೀನಾಯವಾಗಿ ಈಗ ಕಳೆದುಕೊಳ್ಳುತ್ತಿರಲಿಲ್ಲ. ಆದರೆ ನೆಹರೂ‌ ದೇಶನಾಶಕ ಶಕ್ತಿಗಳನ್ನು ಪೋಷಿಸಿದರು. ನೆಹ್ರೂ ಮಾಡಿದ್ದರ ಫಲ ಇಂದಿರಾ ಉಂಡರು. ಆದರೆ ನೆಹ್ರೂ‌ ಮಾಡಿದ ತಪ್ಪನ್ನು ಇಂದಿರಾ ಆರಂಭದಲ್ಲಿ ಮಾಡಲಿಲ್ಲ. ಆದರೆ ಕಣ್ಣು‌ಮುಚ್ಚಿಸುವ ಕಾಯಕದಲ್ಲಿ ಅನಾಹುತಗಳು ಸೃಷ್ಟಿಯಾಯ್ತು. ದೇಶವು ಕಾಣಬಾರದ ಭೀಕರ ಹತ್ಯೆಗಳನ್ನು ನೋಡಿತು. ಈಗಲೂ ಅದು ರೋಮಾಂಚನವೇ ಆಗಿ ಉಳಿದಿದೆ! ಕಾಂಗ್ರೆಸ್ಸಿನ‌ ಸಾರಥ್ಯ ವಿದೇಶೀ ಮೂಲದ ನೆಹರೂ ಮನೆತನದ ಸೊಸೆಯಾಗಿ ಬಂದ ಸೋನಿಯಾ ಅವರಿಗೆ ಒದಗಿ ಬಂತು. ನರಸಿಂಹರಾಯರ ಕಾಲದವರೆಗೆ ಕಾಂಗ್ರೆಸ್ ಈಗ ಕಂಡ ಅಧಃಪತನವನ್ನು ಕಂಡಿರಲಿಲ್ಲ. ಮನಮೋಹನ ಸಿಂಗರ ಕಾಲದಲ್ಲಿ ಮುಟ್ಟಬಾರದ, ತೀರಲಾಗದ ಹಾದಿಯ ಅಂಚನ್ನು ಕಾಂಗ್ರೆಸ್ ತಲುಪಿತು. ಮತ್ತೆ ಮೇಲೇಳುವ ಹೊತ್ತಿಗೆ ಬಿಜೆಪಿ ಮೋದಿಯ ಸಾರಥ್ಯದಲ್ಲಿ ದೇಶವ್ಯಾಪಿ ಹೊಸತನಕ್ಕೆ ಕಾದಿತ್ತು.

ರಾಷ್ಟ್ರಭಕ್ತಿ, ಸಮಾಜ ಭದ್ರತೆ, ಸಾರ್ವಭೌಮತೆ, ಏಕತೆ, ಸಮರಸತೆ, ಬಾಹ್ಯಾಂತರ ಶತ್ರುನಿಗ್ರಹದ ಮೂಲಕ ಶಾಂತಿ, ಪ್ರಗತಿ, ವ್ಯವಸ್ಥೆಗಳ ರಕ್ಷಣೆಗೆಂದು ಹುಟ್ಟಿಬಂದು, ಅನೇಕ‌ ಕಾಲ ಈ ಗುರಿಗೇ ಅಂಟಿಕೊಂಡು ಶ್ರಮಿಸಿದ ಕಾಂಗ್ರೆಸ್ ಎಂಬ ಈ ಮಹಾನ್ ಸಂಸ್ಥೆಯ ಮೂಲ ಸ್ವರೂಪ, ಉದ್ದೇಶ್ಯ, ಘನತೆ, ಅದರ ಬಲಿದಾನ, ತ್ಯಾಗ, ಕಟ್ಟುವ ಶಕ್ತಿ, ದುಷ್ಟದಮನದ ಶಕ್ತಿ, ಅಂತಃಶೋಧಗಳು ರಾಜಾಜಿ, ಪಟೇಲ್, ಪ್ರಸಾದ್ ಅವರೊಂದಿಗೇ ಸತ್ತುಹೋಯಿತೇ? ದೇಶವನ್ನು ಎಲ್ಲ ವಿಭಾಗಗಳಲ್ಲೂ ಇನ್ನೂ ಬಲಿಷ್ಠವಾಗಿ ಕಟ್ಟಿದ್ದರೆ ಕಾಂಗ್ರೆಸ್ ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತಿರಲಿಲ್ಲವೇನೋ!

ದಕ್ಷ ಆಡಳಿತ, ದುಷ್ಟ ನಿಗ್ರಹ, ಭ್ರಷ್ಟಾಚಾರ ರಹಿತ ಸೇವಾ ವ್ಯವಸ್ಥೆ, ವಿದ್ಯಾಸಂಸ್ಥೆಗಳ ಅರ್ಥವತ್ತಾದ ನಿರ್ವಹಣೆ, ಸೇನಾಸುಸ್ಥಿತಿ, ನೆರೆಯ ಶತ್ರುಗಳ ಸ್ಪಷ್ಟ ಅರಿವು, ಸಮರಸಿದ್ಧತೆ, ಸ್ಥಿರ ಆರ್ಥಿಕತೆ, ಗುಣಮಟ್ಟದ ಗೌರವ, ಮೆರಿಟ್ ಪುರಸ್ಕಾರ- ಇವು ಯಾವತ್ಕಾಲಕ್ಕೂ ಸಲ್ಲುವಂತ ಧ್ಯೇಯಗಳು. ಇವುಗಳನ್ನು ಸಾಧಿಸುವಲ್ಲಿ ಶೈಥಿಲ್ಯವನ್ನು ಸರಿಹೊತ್ತಿನ ರಾಜಕಾರಣದವರೆಗೂ ನೆಹರೂ ಆದಿಯಾಗಿ ಮನಮೋಹನ್ ಸಿಂಗರವರೆಗೂ ಅಷ್ಟಷ್ಟೇ ಕಾಣುತ್ತಾ ಬಂತು. ಓಟ್ ಬ್ಯಾಂಕ್ ಬೇಟೆ, ಜಾತಿಲೆಕ್ಕ, ಜಾತಿಯಾಧಾರಿತ ಮಂತ್ರಿಮಂಡಲ ರಚನೆ, ಪ್ರಾಂತೀಯತೆಯ ಸೋಗಿನಲ್ಲಿ ಅಯೋಗ್ಯರ ಆಯ್ಕೆ, ಕೋಮು‌ ಓಲೈಕೆ, ಅಗ್ಗದ ಚುನಾವಣಾ ಪೂರ್ವ ಘೋಷಣೆಗಳು, ಚುನಾವಣೆಗೆ ಅಕ್ರಮ ಹಣಗಳಿಕೆ, ಅದಕ್ಕಾಗಿ ಸೇನಾ ರಚನೆ, ಈ ಅವಾಂತರದಲ್ಲಿ ಕೊಲೆಗಳು, ವೈಷಮ್ಯ, ಜಾತಿ‌ನಿಂದನೆ -ದ್ವೇಷ, ಹಳ್ಳಿಗಳಲ್ಲಿ ಉರಿ, ಹಿಂಸೆ- ಇವು ನಮ್ಮನ್ನು ಒಡೆಯುತ್ತವೆ. ದಕ್ಷತೆಯನ್ನು ನಾಶಮಾಡುತ್ತದೆ. ದುಷ್ಟರ ಕೈಯಲ್ಲಿ ಅಧಿಕಾರ ಕೊಡಿಸುತ್ತದೆ. ಆಗ ದುಷ್ಟರಿಗೆ ರಕ್ಷಣೆ, ಶಿಷ್ಟರಿಗೆ ಸಂಕಷ್ಟ ಒದಗುತ್ತದೆ. ಶಿಷ್ಟರು ವಿಧಿಯಿಲ್ಲದೆ ಅದೇ ದುಷ್ಟರಿಗೆ ಕಾಣಿಕೆ ಕೊಟ್ಟು ಬದುಕುತ್ತ, ವಿದ್ಯಾಸಂಸ್ಥೆಗಳೂ ಹಣಗಳಿಕೆಗೆ ಬಿದ್ದು, ಮಠಮಾನ್ಯಗಳೂ ದುಷ್ಟರನ್ನೇ ಓಲೈಸುತ್ತ, ಹರಸುತ್ತ, ಆಶ್ರಯಿಸುತ್ತ, ರಾಜಕಾರಣಿಗಳು ಕಾವಿ ಧರಿಸುತ್ತ, ದೇವಾಲಯಗಳಾಗಲೀ, ಗುರುಗಳಾಗಲೀ, ವಿದ್ಯಾಸಂಸ್ಥೆಗಳಾಗಲೀ ಧರ್ಮದ ಮಾತೆತ್ತದೆ, ಒಡೆಯುವ ಕಾಯಕವನ್ನೇ ಮಾಡುತ್ತ ಇರುವುದಕ್ಕೆ ಪರಿಹಾರ ಬೇಕೆಂದರೆ, ಕಾಂಗ್ರೆಸ್ ಸಂಪೂರ್ಣವಾಗಿ ಸತ್ತು, ಮರುಹುಟ್ಟಿ ಬಂದ ವಿಶ್ವಾಮಿತ್ರನಂತೆ ಆಗುವುದರಲ್ಲಿದೆ!

ಕಾಂಗ್ರೆಸ್ಸು ಈಗ ಹೀಗೆ ಮಾಡಬೇಕು: ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ರಾಷ್ಟ್ರೀಯತೆಯನ್ನು, ರಾಷ್ಟ್ರ ನಂಬಿದ ಧರ್ಮ ಪರಂಪರೆಯನ್ನು ರಕ್ಷಿಸಿ ಎತ್ತಿಕಟ್ಟಿ, ಅದರ ನೆರಳಲ್ಲಿ ಬದುಕಬೇಕಿದೆ. ಢೋಂಗೀ ಸೆಕ್ಯಲರಿಸಮ್ಮನ್ನು‌ ಮೇಲೇಳದಂತೆ ಹುಗಿಯಬೇಕಿದೆ. ಸೆಮೆಟಿಕ್ ರಿಲಿಜನ್ನುಗಳ ತುಷ್ಟೀಕರಣ ನಿಲ್ಲಿಸಬೇಕಿದೆ. ಮುಂದಿನ ಮಹಾ ಚುನಾವಣೆಗೆ ಕಾಂಗ್ರೆಸ್ ಹೇಗೆ ಸಿದ್ಧಗೊಂಡರೂ ತನ್ನ ಮೂಲಸ್ವರೂಪದಲ್ಲೇ ಹೀಗೆ ಸಮಗ್ರವಾಗಿ ಪರಿವರ್ತನೆಗೊಂಡರೆ ಬದುಕೀತು! ಇದನ್ನು ಹೊರತುಪಡಿಸಿ ಕಾಂಗ್ರೆಸ್ ಮೃದು ಹಿಂದುತ್ವದ, ಗ್ಯಾರಂಟಿಗಳ ಘೋಷಣೆಯೊಂದಿಗೆ ಗೆಲ್ಲಬಹುದೆಂದುಕೊಂಡು ತುಳಿಯುತ್ತಿರುವ ಹಾದಿಯಲ್ಲೇ ಸಾಗಿದರೆ ಕೇಂದ್ರದಲ್ಲಿ ಅಧಿಕಾರ ಸೂತ್ರ ಹಿಡಿಯುವುದು ಕಷ್ಟವಾದೀತು! ಅಷ್ಟೇ ಅಲ್ಲ ಅಸ್ತಿತ್ವವನ್ನು ಮತ್ತೂ ಕಳೆದುಕೊಳ್ಲುವುದು ಗ್ಯಾರಂಟಿ!

ಅಸ್ತಿತ್ವ ಮತ್ತು ಅಸ್ಮಿತೆಯನ್ನು ಉಳಿಸಿಕೊಳ್ಳುವ ದರ್ದು ಬಿಜೆಪಿಗಿಂತ ಕಾಂಗ್ರೆಸ್ಸಿಗೆ ಅತೀಯಾಗಿ ತುರ್ತಿದೆ. ಮೋದಿ ದ್ವೇಷವನ್ನು ತ್ಯಜಿಸಿ ಸಮಷ್ಟಿಯ ಹಿತಚಿಂತನೆಯೊಂದಿಗೆ ರಾಷ್ಟ್ರನಿಷ್ಠ ಧ್ಯೇಯವಾದವನ್ನು ಸರಿಹೊತ್ತಿನಲ್ಲಿ ಆಂತರ್ಯದಲ್ಲಿ ಅಳವಡಿಸಿಕೊಂಡು ತನ್ನನ್ನು ತಾನು ಪ್ರಚುರಪಡಿಸಿಕೊಂಡರೆ ಅಂದುಕೊಂಡಿದ್ದನ್ನು ಸಾಧಿಸಬಹುದು. ಇದೇ ಹೊತ್ತಲ್ಲಿ ಬಿಜೆಪಿಯು ಗೆಲುವು ಕೊಡುವ ಎನರ್ಜಿಯಿಂದ ಕಾಂಗ್ರೆಸ್ಸು ತುಳಿದ ಹಾದಿಯನ್ನೇ ಹಿಡಿದರೆ ಕಾಂಗ್ರೆಸ್ ಗತಿ ಭವಿಷ್ಯದಲ್ಲಿ ಒದಗಿ ಬಂದೀತು!

ಲೇಖಕರು
ದೇವಿದಾಸ್ ಟಿ.

Leave a Reply

Your email address will not be published. Required fields are marked *