ಪಂಚರಾಜ್ಯ ಚುನಾವಣೆ ಲಾಟರಿ : ಬಿಜೆಪಿಗೆ ಬಂಪರ್, ಕಾಂಗ್ರೆಸ್ ಗೆ ಸಮಾಧಾನಕರ ಬಹುಮಾನ

Rajakiya

ಪಂಚ ರಾಜ್ಯ ಚುನಾವಣೆಯ ಪೈಕಿ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದ ಮೇಲೆ ದೇಶ ಕುತೂಹಲದ ದೃಷ್ಟಿ ಬೀರಿತ್ತು. ಫಲಿತಾಂಶದಲ್ಲಿ ಬಿಜೆಪಿಗೆ ಬಂಪರ್ ಬಹುಮಾನ, ಕಾಂಗ್ರೆಸ್ ಗೆ ಸಮಾಧಾನಕರ ಬಹುಮಾನ ಬಂದಿದೆ. ಅಭಿಪ್ರಾಯವನ್ನು ನಾವು ತೀರಾ ಸಹಜವೆಂಬಂತೆ ಅಭಿವ್ಯಕ್ತಿಸಿದರೂ ಅದರ ಹಿಂದೆ ಇರುವ ಆತಂಕ ಬಹುದೊಡ್ಡ ಕಂದಕ. ಚುನಾವಣೆ ಅಂದರೆ ಲಾಟರಿ ಇದ್ದ ಹಾಗೆ ಅನ್ನುವಷ್ಟರ ಮಟ್ಟಿಗೆ ವ್ಯವಸ್ಥೆ ಹದಗೆಟ್ಟಿದೆ.

ಭಾರತದಂಥ ಭಾರತಕ್ಕೆ ಪ್ರಜಾಪ್ರಭುತ್ವವೇ ಆತ್ಮ. ಪ್ರಜಾಪ್ರಭುತ್ವ ಯಶಸ್ವಿಯಾಗುವುದು ಚುನಾವಣೆ ಪರಿಣಾಮಕಾರಿಯಾಗಿ ನಡೆದಾಗ ಮಾತ್ರ. ಆದರೆ ಇಂದು ಏನಾಗುತ್ತಿದೆ? ಏನೆಲ್ಲ ಆಗುತ್ತಿದೆ? ಚುನಾವಣಾ ಆಯೋಗ ನಿರೀಕ್ಷಿತ ಮಟ್ಟದ ಬಿಗಿಯನ್ನು ಚುನಾವಣೆ ಪ್ರಕ್ರಿಯೆಗಳಲ್ಲಿ ತರುತ್ತಿಲ್ಲ. ಈ ಕಾರಣಕ್ಕಾಗಿಯೇ ಇಲ್ಲಿ ಚುನಾವಣೆ ಫಲಿತಾಂಶಕ್ಕೆ ಬಂಪರ್ ಮತ್ತು ಸಮಧಾನಕರ ಬಹುಮಾನ ಎಂಬ ಪೇಲವ ಪರಿಕಲ್ಪನೆಯನ್ನು ಆರೋಪಿಸಿದ್ದು.

ದೇಶದಲ್ಲಿ ರಾಜಕಾರಣ ಎತ್ತ ಸಾಗುತ್ತಿದೆ? ನಾವಿಂದು ಅಭಿವೃದ್ಧಿ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದೇವೆಯೇ? ಚುನಾವಣೆ ಪ್ರಣಾಳಿಕೆಗಳು ಕಲ್ಯಾಣ ರಾಜ್ಯದ ಅಸ್ತಿತ್ವದ ಬಗ್ಗೆ ಮಾತನಾಡುತ್ತಿವೆಯಾ? ಜನರಿಗೆ ಹೇಗಾದರೂ ಮಾಡಿ ಮಂಪರು ತರಿಸಿ ಅವರಿಂದ ಮತ ಹಾಕಿಸಿಕೊಳ್ಳಲು ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತು ಮಾಡುತ್ತಿವೆ. ಆಶ್ಚರ್ಯ ಅಂದರೆ ಕಾಂಗ್ರೆಸ್ ಮತ್ತು ಬಿಜೆಪಿಯಂಥ ದೊಡ್ಡ ದೊಡ್ಡ ಪಕ್ಷಗಳೂ ಸಾಗುತ್ತಿರುವ ಹಾದಿಯ ಮೇಲೆ ಕಣ್ಣು ಹಾಯಿಸಿದರೆ ಗಾಬರಿಯಾಗುತ್ತದೆ.

ಬಿಜೆಪಿ ಧರ್ಮದ ಅಪೀಮನ್ನು ಜೋಳಿಗೆಯಲ್ಲಿ ಇಟ್ಟುಕೊಂಡೇ ಚುನಾವಣೆಗೆ ಹೊರಟರೆ, ಕಾಂಗ್ರೆಸ್ ಈಗೀಗ ‘ಗ್ಯಾರಂಟಿ’ ಎಂಬ ಬೊಂಬಾಯಿ ಮಿಠಾಯಿಯನ್ನು ಕೈಯಲ್ಲಿ ಇಟ್ಟುಕೊಂಡೇ ಮತದಾರನ ಮನೆಗೆ ಹೋಗುತ್ತಿದೆ. ಅಂದರೆ ಬಿಜೆಪಿ ಮನುಷ್ಯನ ಭಾವನೆಗಳ ಜೊತೆ ಆಟವಾಡಿದರೆ, ಕಾಂಗ್ರೆಸ್ ಮನುಷ್ಯನ ಅಸಹಾಯಕತೆಯ ಜೊತೆ ಆಟವಾಡುತ್ತಿದೆ. ಮತದಾರನ ದುರ್ಬಲತೆಗಳು ಇವರ ಚುನಾವಣೆಯ ಸರಕಾಗುತ್ತಿವೆ. ‘ಹಿಂದುತ್ವ’ ಎಂಬ ಹೊಸ ಪರಿಭಾಷೆಯನ್ನು ಸೃಷ್ಟಿಸಿಕೊಂಡು ಹಿಂದೂಗಳನ್ನೂ, ಜೊತೆ ಜೊತೆಗೇ ಅಲ್ಪ ಸಂಖ್ಯಾತರನ್ನೂ ದಿಕ್ಕು ತಪ್ಪಿಸಲಾಗುತ್ತಿದೆ. ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ದಿಕ್ಕು ತಪ್ಪಿಸುತ್ತಿರುವ ರೀತಿ ಠಳಾಯಿಸಿದರೂ ತೆರೆ ಮರೆಯಲ್ಲಿ ಅಲ್ಪಸಂಖ್ಯಾತರಿಗೆ ಗೊತ್ತಿಲ್ಲದ್ದಂತೆ ಅವರನ್ನು ದಿಕ್ಕು ತಪ್ಪಿಸುತ್ತಿರುವುದು ಬಿಜೆಪಿಯೇ. ಬಿಜೆಪಿಯ ಈ ರೀತಿಯ ಹಿಂದುತ್ವ ಪರ ಚೀರಾಟ ಪರೋಕ್ಷವಾಗಿ ಅಲ್ಪಸಂಖ್ಯಾತರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಇದರಿಂದ ಬಿಜೆಪಿಯಲ್ಲಿನ ಅರ್ಹತೆಯುಳ್ಳ ಅಭ್ಯರ್ಥಿಗಳಿಗೂ ಅಲ್ಪಸಂಖ್ಯಾತ ಮತಗಳೂ ಭಾಗಶಃ ಹೋಗುವುದೇ ಇಲ್ಲ. ಇದರ ಆವಾಂತರ ಎಷ್ಟರ ಮಟ್ಟಿಗೆ ಇದೆ ಅಂದರೆ ಪ್ರಖರ ಹಿಂದೂ ಮನಸ್ಸಿನವನೂ ಯೋಗ್ಯತೆಯುಳ್ಳ ಅಲ್ಪಸಂಖ್ಯಾತ ಅಭ್ಯರ್ಥಿಗೆ ಮತ ಹಾಕುವ ಧೈರ್ಯ ಮಾಡಲಾರ. ಅಷ್ಟರ ಮಟ್ಟಿಗೆ ರಾಜಕೀಯ ಶಕ್ತಿಗಳು ಮತದಾರರ ನಡುವೆ ನಂಜು ಬಿತ್ತಲು ಯಶಸ್ವಿಯಾಗಿವೆ. ಬಿಜೆಪಿ ಜನರಿಗೆ ಧರ್ಮದ ಅಪೀಮನ್ನು ಕುಡಿಸಿ ಅವರು ಸದಾ ಹಿಂದುತ್ವದ ಗುಂಗಿನಲ್ಲೇ ಇರುವಂತೆ ಮಾಡಲು ಇನ್ನಿಲ್ಲದಂತೆ ಹೆಣಗುತ್ತಿರುತ್ತದೆ.

ಅದರ ನಡುವೆಯೇ ಕರ್ನಾಟಕ ಕಾಂಗ್ರೆಸ್ ‘ಗ್ಯಾರಂಟಿ ಕಾರ್ಡ್’ ಎಂಬ ಹೊಸ ವರಸೆ ಸುರು ಹಚ್ಚಿಕೊಂಡು ಚುನಾವಣೆಯಲ್ಲಿ ಧೂಳು ಎಬ್ಬಿಸಿತು. ಹೆಂಗಸರಿಗೆ 2000 ರೂಪಾಯಿ, ಪುಕ್ಕಟೆ ಬಸ್ಸು, 10 ಕೆಜಿ ಅಕ್ಕಿ, ನಿರುದ್ಯೋಗಿ ಯುವಕ/ಯುವತಿಯರಿಗೆ ಮಾಸಿಕ ಧನ, 200 ಯುನಿಟ್ ವರೆಗೆ ಪುಕ್ಕಟೆ ವಿದ್ಯುತ್…ಹೀಗೆಲ್ಲ ಪುಂಖಾನುಪುಂಖವಾಗಿ ಕಾಂಗ್ರೆಸ್ ಏರಿದ ಧ್ವನಿಯಲ್ಲಿ ಘೋಷಿಸಿತು. ಕಲ್ಯಾಣ ರಾಜ್ಯದಲ್ಲಿ ದುರ್ಬಲ ಜನತೆಯನ್ನು ಮೇಲೆತ್ತುವ ಕಾರ್ಯ ಮೊದಲಾಗಲೇಬೇಕು. ಆದರೆ ಉಳ್ಳವರೂ ಈ ಯೋಜನೆಯ ಫಲಾನುಭವಿಗಳಾಗುತ್ತಿರುವುದು ಸಹ್ಯವಲ್ಲ. ಈ ಗ್ಯಾರಂಟಿಗಳು ಬೊಂಬಾಯಿ ಮಿಠಾಯಿಯಂತೆ ಬಾಯಿಗೆ ರುಚಿರುಚಿ. ಆದರೆ ಕ್ಷಣಾರ್ಧದಲ್ಲಿ ಕರಗಿ ನಾಲಿಗೆ ಸಪ್ಪೆಸಪ್ಪೆ. ಜನರಿಗೆ ಗ್ಯಾರಂಟಿಯ ಆಮಿಷವೊಡ್ಡಿ ಮತ ಬಾಚುವ ಪರಿ ತುಂಬ ಕಿರಿಕಿರಿ. ತೆಲಂಗಾಣದಲ್ಲೂ ಕಾಂಗ್ರೆಸ್ ಮುಖಂಡರು ಕರ್ನಾಟಕದ ಬೊಂಬಾಯಿ ಮಿಠಾಯಿಯನ್ನೇ ತೋರಿಸಿ ಮತದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದರು.

ಕಳೆದ ವಾರ ಬಂದ ಐದು ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಮುಖ್ಯವಾಗಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ ರಾಜ್ಯಗಳಲ್ಲಿ ಬಿಜೆಪಿ ಎದೆ ಉಬ್ಬಿಸಿದರೆ, ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಕೈ ಎತ್ತಿದೆ. ಬಿಜೆಪಿ ಕೂಡ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನ ಬೊಂಬಾಯಿ ಮಿಠಾಯಿಯನ್ನು ಜನರ ಬಾಯಿಗೆ ಹಿಡಿಯಿತು. ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ( Central Home Minister Amit sha) ಕರ್ನಾಟಕ ಕಾಂಗ್ರೆಸ್ ನ ಗ್ಯಾರಂಟಿಯನ್ನು ವ್ಯಂಗ್ಯ ನಗುವಿನೊಂದಿಗೆ ಲೇವಡಿ ಮಾಡಿದ್ದರು. ಆದರೆ ಮಧ್ಯಪ್ರದೇಶದಲ್ಲಿ ಅದೇ ಗ್ಯಾರಂಟಿಯನ್ನು ಚುನಾವಣಾ ಪ್ರಚಾರದಲ್ಲಿ ಸರಕನ್ನಾಗಿ ಮಾಡಿಕೊಂಡು ಜನರಿಗೆ ಆಮಿಷ ತೋರಿಸಿದರು. ಅಂದರೆ ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳು ಅಭಿವೃದ್ಧಿ ನೆಲೆಯಲ್ಲಿ ಚಿಂತನೆ ಮಾಡಲು ಅಥವಾ ವಿಷಯಾಧಾರಿತ ಚರ್ಚೆಗೆ ಚುನಾವಣೆಯನ್ನು ಬಳಸಿಕೊಳ್ಳಲೇ ಇಲ್ಲ. ದೇಶದ ನೇತಾರರೆನಿಸಿಕೊಂಡವರೇ ಚುನಾವಣೆಯನ್ನು ತಮಗೆ ಬೇಕಾದಂತೆ ಸ್ವಾರ್ಥಕ್ಕೆ ಬಳಸಿಕೊಂಡರೆ ಜನರಿಗೆ ಏನು ತಾನೆ ಸಂದೇಶ ಕೊಡಬಲ್ಲರು?

Leave a Reply

Your email address will not be published. Required fields are marked *