ಕಲಬುರ್ಗಿ – ಗೌರಿ ಹತ್ಯೆ ವಿಚಾರಣೆಗೆ ವಿಳಂಬ ನೀತಿ: ಎರಡು ಬೆಳಕಿನ ಜೀವಗಳಿಗೆ ಮಾಡಿದ ಅವಮಾನ

kalaburgi

ನಾಡಿನ ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಮತ್ತು ಪ್ರಗತಿಪರ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ನಡೆದು ಹಲವು ವರ್ಷಗಳಾಗುತ್ತಿದ್ದರೂ ಪ್ರಕರಣದ ವಿಚಾರಣೆಯನ್ನು ಇನ್ನೂ ಸರಿಯಾಗಿ ಕೈಗೆತ್ತಿಗೊಳ್ಳದೇ ವಿಳಂಬ ಧೋರಣೆಯನ್ನು ಅನುಸರಿಸುತ್ತಿರುವುದನ್ನು ನೋಡಿದರೆ ಕರ್ನಾಟಕದ ಹಾಲಿ ಮತ್ತು ಈವರೆಗಿನ ಎಲ್ಲ ಸರಕಾರಗಳ ಮೇಲೆಯೇ ಅನುಮಾನ ಬರುತ್ತಿದೆ.

ಈರ್ವರ ಹತ್ಯೆ ಪ್ರಕರಣ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯ ನ್ಯಾಯಾಲಯ ಸ್ಥಾಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕಲಬುರ್ಗಿಯವರ ಹತ್ಯೆ ಪ್ರಕರಣ ವಿಚಾರಣೆ ನಡೆಸಲು ಅವರ ಪತ್ನಿ ಉಮಾದೇವಿ ಹಾಗೂ ಗೌರಿಯವರ ಹತ್ಯೆ ವಿಚಾರಣೆಯನ್ನು ನಡೆಸಲು ಅವರ ತಂಗಿ ಕವಿತಾ ಲಂಕೇಶ್ ಅವರು ವಿಶೇಷ ನ್ಯಾಯಾಲಯ ಸ್ಥಾಪಿಸಲು ಸರಕಾರಕ್ಕೆ ಮನವಿ ಮಾಡಿ ವರ್ಷಗಳೇ ಉರುಳಿವೆ.

ಎಂ.ಎಂ.ಕಲಬುರ್ಗಿ ಅವರು 8 ವರ್ಷಗಳ ಹಿಂದೆ ಅಂದರೆ 2015 ಅಗಸ್ಟ್ 15 ರಂದು ಹತ್ಯೆಯಾದರೆ, ಗೌರಿ ಲಂಕೇಶ್ ಅವರು 6 ವರ್ಷಗಳ ಹಿಂದೆ ಅಂದರೆ 2017 ಸೆಪ್ಟೆಂಬರ್ 5 ರಂದು ಹತ್ಯೆಯಾಗಿದ್ದರು. ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ 17 ಆರೋಪಿಗಳನ್ನು ಎಸ್.ಐ.ಟಿ. ಬಂಧಿಸಿದರೆ, ಗೌರಿ ಹತ್ಯೆ ಪ್ರಕರಣದಲ್ಲಿ 18 ಆರೋಪಿಗಳ ಪೈಕಿ ಆರೋಪಿ ನಿಹಾಲ್ ದಾದ ಓರ್ವನನ್ನು ಹೊರತುಪಡಿಸಿದರೆ ಉಳಿದ 17 ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ನಿಧಾನಗತಿಯಲ್ಲಿ ಸಾಗುತ್ತಿದ್ದು ಯಾವುದೇ ತಾರ್ಕಿಕ ಅಂತ್ಯ ಕಾಣದೇ ಎರಡೂ ಪ್ರಕರಣಗಳ ಫೈಲುಗಳು ಧೂಳು ತಿನ್ನುತ್ತಿವೆ.

ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಲು ಸೂಚಿರುವುದು ಸಮಾಧಾನಕರ ಸಂಗತಿಯಾದರೂ ಇಷ್ಟು ವರ್ಷಗಳ ಕಾಲ ಕುಂಟುತ್ತ ಸಾಗಿದ ಪ್ರಸ್ತಾಪಿತ ಪ್ರಕರಣದ ಬಗ್ಗೆ ಸರಕಾರಗಳು ಯಾಕೆ ಇಷ್ಟು ನಿರ್ಲಕ್ಷ್ಯ ಧೋರಣೆ ತಾಳಿದವು ಎಂಬುದು ಮಾತ್ರ ತೀರಾ ಅನುಮಾನಾಸ್ಪದ. ಹಾಲಿ ಪ್ರಕರಣವಿದ್ದ ನ್ಯಾಯಾಲಗಳಲ್ಲಿ ಮಿಕ್ಕ ಕಡತಗಳ ಪ್ರಕರಣ ಜಾಸ್ತಿ ಇರುವುದರಿಂದ ವಿಚಾರಣೆ ವಿಳಂಬವಾಗಿದೆ ಅಂತ ಸಬೂಬು ಹೇಳಬಹುದಾದರೂ ಇಲ್ಲಿ ನ್ಯಾಯಾಲಯಗಳಿಗೆ ಮತ್ತು ಸರಕಾರಗಳಿಗೆ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತದೆ.

ನಾಡಿನ ನೆಲದಲ್ಲಿ ತಮ್ಮೊಳಗಿನ ಬೆಳಕಿನ ಅಕ್ಷರಗಳನ್ನು ಬಿತ್ತಿದ ಶ್ರೇಷ್ಠ ಚಂತಕ ಎಂ.ಎಂ. ಕಲಬುರ್ಗಿ (M.M.Kalaburgi) ಮತ್ತು ಸಶಕ್ತ ಪತ್ರಕರ್ತೆ ಗೌರಿ ಲಂಕೇಶ್ (Gouri Lankesh) ಹತ್ಯೆ ಪ್ರಕರಣ ಇಷ್ಟೊಂದು ನಿರಾಳವಾಗಿ ತೆಗೆದುಕೊಂಡು ಸುಖಾಸುಮ್ಮನೆ ಕ್ರಮವಾಗಿ ಎಂಟು ವರ್ಷ ಮತ್ತು ಆರು ವರ್ಷ ತಳ್ಳಿದ ರೀತಿ ಖಂಡಿತ ಕ್ಷಮಾರ್ಹವಲ್ಲ.

ಸತ್ಯ ಮತ್ತು ನಿಷ್ಠುರ ಬರಹದ ಮೂಲಕ ತಮ್ಮ ಅಕ್ಷರ ವ್ಯವಸಾಯವನ್ನು ಎಲ್ಲೂ ರಾಜಿ ಮಾಡಿಕೊಳ್ಳದೇ ನಡೆಸಿಕೊಂಡು ಬಂದ ಈರ್ವರು ಬರಹಗಾರರರನ್ನು ಅಮಾನುಷವಾಗಿ ಗುಂಡಿಕ್ಕಿ ಕೊಂದ ಕ್ರೂರಿಗಳನ್ನು ಇವತ್ತಿನವರೆಗೂ ಸಲಿಸಾಗಿ ಉಸಿರಾಡಲು ಬಿಟ್ಟ ಈ ಜಿಡ್ಡು ಗಟ್ಟಿದ ವ್ಯವಸ್ಥೆಯಲ್ಲಿ ಜಸಾಮಾನ್ಯರು ಹೇಗೆ ತಾನೇ ಪ್ರಾಮಾಣಿಕವಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯ? ಕಲಬುರ್ಗಿ ಮತ್ತು ಗೌರಿ ಈರ್ವರನ್ನು ಹತ್ಯೆಗೈದಾಗ ಈ ಸಾವನ್ನು ಸಂಭ್ರಮಿಸಿದವರು ಹಲವರು. ಅನಂತರ ಹತ್ಯೆ ವಿಚಾರಣೆಗೆ ಆಗುತ್ತಿರುವ ವಿಳಂಬ ನೀತಿ ಗಮನಿಸಿದರೆ ಸಂಭ್ರಮಿಸಿದವರ ಕೈ ಮೇಲಾಯಿತೇ ಎಂದು ಪ್ರಗತಿಪರ ಮನಸ್ಸುಗಳು ವಿಷಾದ ಪಡುತ್ತಿರುವುದು ಕೂಡ ಅಷ್ಟೇ ವಾಸ್ತವ.

ಇದೀಗ ಕಲಬುರ್ಗಿ ಮತ್ತು ಗೌರಿ ಹತ್ಯೆ ಪ್ರಕರಣದ ವಿಚಾರಣೆಗಾಗಿಯೇ ತಡವಾಗಿಯಾದರೂ ಸ್ಥಾಪಿಸಿದ ವಿಶೇಷ ನ್ಯಾಯಲಯದ ಮೂಲಕ ಅತ್ಯಂತ ತ್ವರಿತವಾಗಿ, ಅಷ್ಟೇ ಪಾರದರ್ಶಕವಾಗಿ ವಿಚಾರಣೆ ನಡೆಸಿ ತಪ್ಪಿತಸ್ಥರನ್ನು ಜನತೆಯ ಮುಂದೆ ನಿಲ್ಲಿಸಿ ಶಿಕ್ಷೆಯಾಗುವಂತೆ ಸರಕಾರ ವಿಶೇಷ ಮುತುವರ್ಜಿ ವಹಿಸಬೇಕು.

Arvind karkikodi

ಲೇಖಕರು
ಅರವಿಂದ ಕರ್ಕಿಕೋಡಿ
ಪ್ರಧಾನ ಸಂಪಾದಕರು
ಹಣತೆವಾಹಿನಿ

One thought on “ಕಲಬುರ್ಗಿ – ಗೌರಿ ಹತ್ಯೆ ವಿಚಾರಣೆಗೆ ವಿಳಂಬ ನೀತಿ: ಎರಡು ಬೆಳಕಿನ ಜೀವಗಳಿಗೆ ಮಾಡಿದ ಅವಮಾನ

  1. ಇಂತಹ ಕೊಲೆಗಳು ಉತ್ತರ ಪ್ರದೇಶಕ್ಕೆ ಸೀಮಿತ ಆಗಿತ್ತು ಅದು ಕರ್ನಾಟಕವನ್ನೂ ವ್ಯಾಪಿಸಿದೆ ತನಿಖೆ ಕ್ಲಿಸ್ಟಕರ ಆಗಿತ್ತು ಈಗ ತನಿಖೆ ಮುಗಿದು ಸಂಪೂರ್ಣಗೊಂಡ ಆರೋಪ ಪಟ್ಟಿ ಸಲ್ಲಿಸಿಯಾಗಿದೆ ಇನ್ನೂ ವಿಚಾರಣೆ ಆರಂಭಿಸಿಯೇ ಇಲ್ಲ ! ಎಲ್ಲಾ ಆರೋಪಿಗಳು ಅಪರಾಧ ಸಾಬೀತು ಆಗುವ ಮೊದಲೇ ಸ್ವಾಭಾವಿಕ ಮರಣ ಹೊಂದಿದರೆ !? ಅನ್ಯಾಯ ಆರೋಪಿಗೊ ?‌ಅಥವಾ ಹತ್ಯೆಗೆ ಒಳಗಾದವರಿಗೊ!? ಉತ್ತರ ನೀಡುವರು ಯಾರು !?

Leave a Reply

Your email address will not be published. Required fields are marked *