Big Boss : ಮನುಷ್ಯನಿಗಿರುವ ಸಂಘರ್ಷದ ಶಕ್ತಿಯನ್ನು ದಮನಿಸುತ್ತದೆಯೇ?

ಅತಿಶಯೋಕ್ತಿಯ ಅಥವಾ ನಿಂದನೆಯ ಮಾತು ಅಂತ ಖಂಡಿತವಾಗಿಯೂ ಭಾವಿಸಬೇಡಿ, ನಿಜ ಮನಸಿನೊಳಗೆ ಅನಿಸಿದ್ದನ್ನು ಈ ಸೀಸನ್ನಿನ ಒಟ್ಟೂ ನಡೆಯನ್ನುಬರೆಯುತ್ತಿದ್ದೇನೆ. ಈ ಬಿಗ್ ಬಾಸ್ (Big Boss) ಆಟ ಅಥವಾ ಫ್ಯಾಮಿಲಿ ರಿಯಾಲಿಟಿ ಷೋ ಅಥವಾ ಪರಿಕಲ್ಪನೆಯಿಂದ ಆಗುವಂಥ ಮನರಂಜನೆಯಾದರೂ ಏನು,

ಸಾಧನೆಯಾದರೂ ಏನು ಎಂಬುದು ಇಷ್ಟು ಸೀಸನ್ನುಗಳು ಕಳೆದರೂ ಪೂರ್ತಿಯಾಗಿ ನನಗೆ ಗೊತ್ತಾಗಲಿಲ್ಲ! ಪ್ರಾಯಃ ಗೊತ್ತೂ ಆಗುವುದಿಲ್ಲವೇನೋ! ಹಾಗಂತ ಮನರಂಜನೆ ಆಗಲೇ ಇಲ್ಲವೆ ಅಂತ ಕೇಳಿದರೆ ಖಂಡಿತವಾಗಿಯೂ ಆರಂಭದ ಎರಡು ಮೂರು ಸೀಸನ್ನುಗಳಲ್ಲಿ ಬೇಜಾನ್ ಆಗಿವೆ. ತದನಂತರದ ಸೀಸನ್ನುಗಳು ತಾನು ವೀಕ್ಷಕರಿಗೆ ಕೊಡಬೇಕಾದ ಮನರಂಜನೆಯ ತಾಕತ್ತಿನ ಕುತೂಹಲವನ್ನು ಉಳಿಸಿಕೊಳ್ಳಲು ಶಕ್ತಿಯನ್ನು ಕಳೆದುಕೊಳ್ಳುತ್ತ ಬಂತು.
ಅಷ್ಟಕ್ಕೂ ಈ ಮನರಂಜನೆ ಎಂಬುದು ಇದೆಯಲ್ಲ, ಅದು ವ್ಯಕ್ತಿಗತವಾದುದು. ಎಲ್ಲವೂ ಎಲ್ಲರಿಗೂ ಮನರಂಜನೆಯೇ ಆಗಿ ಒಪ್ಪಿತವಾಗಬೇಕಿಲ್ಲ. ಹುಚ್ಚನೊಬ್ಬ ಬೆತ್ತಲೆಯಾಗಿ ಸಾರ್ವಜನಿಕ ಸ್ಥಳದಲ್ಲಿ ಓಡಾಡುವುದು ಮನರಂಜನೆಯೆನಿಸಿದರೆ ಅದರಂಥ ಮನೋವಿಕಲ್ಪ ಬೇರೆಯಿಲ್ಲ!ಆದರೂ ಅದು ಹಲವರಿಗೆ ಮನರಂಜನೆಯೇ ಆಗಿ ಕಾಣುತ್ತದೆ. ಕೆಲವರಿಗೆ ಏನೂ ಅನಿಸದೆ ಇರಬಹುದು. ಗತಿ ತಪ್ಪಿದರೆ ಯಾರ ಬದುಕು ಬೆತ್ತಲೆಯಲ್ಲ ಹೇಳಿ? ನಿತ್ಯ ಬದುಕಿನ ಹದ ಏರುಪೇರಾದರೆ ಎಲ್ಲವೂ ಬೆತ್ತಲೆಯೇ! ಬೆತ್ತಲು ಅಂದರೆ ಬಯಲು ಅಂತಲೂ ಅರ್ಥವಿದೆ. ಎಲ್ಲ ಬಟ್ಟ ಬಯಲಾಯಿತು ಅಂತಾರಲ್ಲ, ಅಂದರೆ ಬೆತ್ತಲಾಯಿತು ಅಂತೆಲೇ ಅರ್ಥ ತಾನೆ? ಪಾರಮಾರ್ಥಿಕವಾಗಿ ಹುಟ್ಟು ಮತ್ತು ಸಾವು ಕೊನೆಗೊಳ್ಳುವುದು ಹಾಗೆಯೇ ಅಲ್ಲವೆ? ಇದನ್ನು ಉದಾಹರಣೆಯಾಗಿ ಹೇಳಿದೆಯಷ್ಟೆ. ಅಪಾರ್ಥ ಬೇಡ.

ಬಿಗ್ ಬಾಸ್ ಮನೆಯಲ್ಲಿನ ಎಷ್ಟೋ ಸಂದರ್ಭ-ಸನ್ನಿವೇಶಗಳು ವಿಚಿತ್ರವೆನಿಸುತ್ತದೆ. ಹಾಸ್ಯಾಸ್ಪದವೆನಿಸುತ್ತದೆ. ಇದರಿಂದ ಕಲಿಯುವುದಾದರೂ ಏನಿದೆ ಅಂತ ಅನಿಸುತ್ತದೆ. ಬದುಕಿನ ಯಾವ ಮೌಲ್ಯಗಳನ್ನು ಈ ಆಟ ಕಲಿಸುತ್ತದೆ? ಬದುಕನ್ನು ಅರ್ಥ ಮಾಡಿಕೊಳ್ಳಲು ಈ ಆಟ ಪೂರಕವಾಗಿದೆಯೇ? ಹೊರ ಪ್ರಪಂಚದ ಬದುಕು ಕಲಿಸುವುದನ್ನು ಬಿಗ್ ಬಾಸ್ ಕಲಿಸುತ್ತದೆಯೇ? ಅಷ್ಟಕ್ಕೂ ೯೮ ದಿನಗಳ‌ ಕಾಲ ಒಂದೇ ಮನೆಯಲ್ಲಿ ಒಂದಿಷ್ಟು ಸ್ಪರ್ಧಿಗಳನ್ನು ಕೂಡಿಹಾಕಿ ಅವರ ಸ್ವಾತಂತ್ರ್ಯವನ್ನು ಅಡವಿರಿಸಿಕೊಂಡು ಆಡಿಸುವ ಆಟವೇ ಮೂಲತಃ ದಬ್ಬಾಳಿಕೆಯೆನಿಸುತ್ತದೆ! ದಬ್ಬಾಳಿಕೆಯೆಂಬುದು ಬೇರೆಯವರಿಗಾದರೆ ಯಾವತ್ತೂ ಮನರಂಜನೆಯೇ ಆಗಿರುತ್ತದೆ! ಇರುವವರಲ್ಲಿ ಯಾರು ಅತ್ಯುತ್ತಮ ಗುಲಾಮನೋ ಅವನೇ ಕೊನೆಯಲ್ಲಿ ವಿಜೇತನಾಗುತ್ತೇನೆ! ಆಫ್ ಕೋರ್ಸ್ ಇದು
ಮನರಂಜನೆಯೇ ಇರಬಹುದು. ಆದರೆ, ಸಮಾಜವನ್ನು ಉತ್ತಮೀಕರಿಸುವಂಥ ಯಾವ ಸಂದೇಶವಿದೆ? ಗೊತ್ತಾಗುವುದಿಲ್ಲ! ಆಟದಲ್ಲಿಯ ಟಾಸ್ಕ್ ಗಳು ಬದುಕಿನ ಯಾವ ಹಂತದಲ್ಲೂ ಅನುಕರಣೆಯಾಗುವ ಪ್ರಮೇಯ ಬರಲಾರದು ಎಂಬುದು ನನ್ನ ಅಭಿಪ್ರಾಯ. ಅಷ್ಟು ಮಾತ್ರವಲ್ಲ, ಪಬ್ಲಿಕ್ ಸೀಕ್ರೆಟ್ ಏನೆಂದರೆ, ನೋಡುಗರೇ ಇದಕ್ಕೆ ಪ್ರೊಡ್ಯೂಸರ್ ಆಗಿ ಬದಲಾಗುವ ಹುನ್ನಾರ ಇಲ್ಲಿದೆ! ೨೪ ತಾಸೂ ಇದನ್ನು ನೋಡುವುದರಿಂದ ಆಗುವ
ಪ್ರಯೋಜನವೇನು? ಕರೆಂಟ್ ಬಿಲ್ ಹೆಚ್ಚಾದೀತು ಅಷ್ಟೆ!

ಹಾಗಂತ ಇದು ಮನರಂಜನೆಯೇ? ಇದರಿಂದ ಅದೆಂಥಾ ಮನರಂಜನೆ ಸಿಕ್ಕೀತು? ಸಿನೆಮಾ ಮತ್ತು ಕ್ರಿಕೆಟ್ಟಿನಿಂದ ಹೊಟ್ಟೆ ತುಂಬುತ್ತದೆಯೇ
ಎನ್ನುವವರಿದ್ದಾರೆ. ಮತದಾನ ಪ್ರಕ್ರಿಯೆಯನ್ನೂ ಹೀಗೆಯೇ ಪ್ರಶ್ನಿಸುವವರಿದ್ದಾರೆ. ಒಬ್ಬೊಬ್ಬರ ಆಲೋಚನೆಯ ಪರಿ, ಚಿಂತನೆಯ ಬಗೆ ವಿಭಿನ್ನ. ಲೋಕೋ ಭಿನ್ನ ರುಚಿ, ಇರಲಿ ಬಿಡಿ. ಅದು ಅವರವರ ವಿವೇಚನೆಗೆ ಸಂಬಂಧಿಸಿದ್ದು. ಆದರೆ ಬಿಗ್ಬಾಸ್ ಹಾಗಲ್ಲ. ಪ್ರತಿಭೆಯನ್ನು ದಮನಿಸುವ ವಿವೇಕಹೀನ ಕ್ರಿಯೆಯೂ ಇಷ್ಟವಾಗುವುದು ದೊಡ್ಡ ದುರಂತ! ಅದು ಬಿಗ್ ಬಾಸ್ ಆಟದಲ್ಲಿ ನಡೆಯುತ್ತದೆ. ಬಿಗ್ ಬಾಸ್ ಆಟವು ಸಮಾಜದ ಚಿಂತನೆಯ ದಿಕ್ಕನ್ನು ಹೇಗೆ ದಾರಿತಪ್ಪಿಸುತ್ತದೆಂಬುದನ್ನು ವಿವರಿಸಿದ ಅಡಿಯೋವೊಂದು ೨-೩ ವರ್ಷದ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

ನಾಗರಿಕ ಪ್ರಪಂಚದಲ್ಲಿ ದಬ್ಬಾಳಿಕೆಯನ್ನು ಯಾರೂ ಸಹಿಸಲಾರರು. ಆದರೆ ದಬ್ಬಾಳಿಕೆ ಬೇರೆಯವರ ಮೇಲಾದರೆ ಇಷ್ಟವಾಗುತ್ತದೆ. ಬಿಗ್ಬಾಸಿನ ಒಟ್ಟೂ ವಿನ್ಯಾಸವನ್ನು ನೋಡಿ: ಸೂತ್ರಧಾರನ ಸೂಚನೆಯಂತೆ ಸ್ಪರ್ಧಿಗಳು ನಡೆದುಕೊಳ್ಳಬೇಕು. ಅಂದರೆ ಸ್ಪರ್ಧಿಗಳು ತಮ್ಮ ಅರಿವಿನಿಂದ ವರ್ತಿಸುವುದಲ್ಲ. ಸಮಯ-ಸಂದರ್ಭ-ಸನ್ನಿವೇಶಕ್ಕೆ ಬದಲಾಗುವುದು. ಸ್ವಭಾವ ಹೇಗಿದ್ದರೂ ಅರಿವು ವಾಸ್ತವವನ್ನು ಅರಿಕೆ ಮಾಡಿಕೊಂಡಿದ್ದರೂ ಸ್ಪರ್ಧಿಗಳು ಬದಲಾಗಬೇಕು. ಪಾತ್ರಕ್ಕೆ ತಕ್ಕುದಾದ ವೇಷವನ್ನು ಧರಿಸಬೇಕು. ಎಲ್ಲವೂ ಹೊತ್ತುಹೊತ್ತಿಗೆ ಕೃತಕವಾಗುವ, ಆಗಬೇಕೆನ್ನುವ ಕ್ರಿಯೆಯೆಂಬುದು ಸುಸ್ಪಷ್ಟ. ಅಂದರೆ, ತನ್ನದಲ್ಲದ, ತನ್ನಲ್ಲಿಲ್ಲದ ಸ್ವಭಾವವನ್ನು ತನ್ನೊಳಗೆ ಆರೋಪಿಸಿಕೊಳ್ಳುವುದು. ಆವಾಹಿಸಿಕೊಳ್ಳುವುದು. ಇದರಿಂದಾಗುವ ಸಾಧನೆಯೇನು? ಅರ್ಥವೇನು? ಈ ಆರೋಪಿಸಿಕೊಳ್ಳುವುದು, ಆವಾಹಿಸಿಕೊಳ್ಳುವುದು ಇದೆಯಲ್ಲ, ಅದು ಹೆಚ್ಚಿನ ಸಂದರ್ಭಗಳಲ್ಲಿ ಪಾತ್ರಧಾರಿಯ ಮೂಲಸ್ವಭಾವಕ್ಕೆ ಕಷ್ಟವಾದರೂ ಬದಲಾಯಿಸಿಕೊಳ್ಳಬೇಕು; ಅದೂ ತನ್ನರಿವಿನಲ್ಲಿಯೇ! ಅಂದರೆ ಎದುರಾಗುವ ಸಂಘರ್ಷಕ್ಕೆ ತನ್ನನ್ನು ಒಗ್ಗಿಸಿಕೊಂಡು ಗೆಲ್ಲುವುದೂ ಅಲ್ಲ; ಸೋಲುವುದೂ ಅಲ್ಲ! ಇರುವುದು ಹೀಗೆಯೇ ಎಂದು ಇರುವುದೂ ಅಲ್ಲ! ಸಂದರ್ಭಕ್ಕೆ ಮಾಗುವುದು, ಬಾಗುವುದು, ಉರುಳುವುದು. ಆದರೆ, ಅದೂ ಸ್ವ ಅರಿವಿನಲ್ಲಲ್ಲ, ಆರೋಪಿಸಿ, ಆವಾಹಿಸಿಕೊಂಡ ಅರಿವಿನಲ್ಲಿ! ಹೇಗೆಂದರೆ, ಅರಿವಿದ್ದರೂ ಸ್ವಭಾವ ಬದಲಾಗುವುದಿಲ್ಲ ಅಂತಾರಲ್ಲ, ಹಾಗೆ!

ವ್ಯಕ್ತಿತ್ವವು ಸಹಜವಾದ ನೆಲೆಯಲ್ಲೇ ಪರಿವರ್ತನೆಯಾಗಬೇಕು, ಬದಲಾವಣೆಗಳು ಸ್ವ ಅರಿವಿನಲ್ಲೇ ಆಗಬೇಕು. ಬಾಹ್ಯ ಒತ್ತಡದಿಂದಾಗುವ ಬದಲಾವಣೆಗಳು ಶಾಶ್ವತವಲ್ಲ, ನಂಬಲರ್ಹವೂ ಅಲ್ಲ. ಅದರಲ್ಲೂ ಹಣದಾಸೆಯಿಂದ, ಒತ್ತಡ, ಒತ್ತಾಯದಿಂದ ಬದಲಾವಣೆಯನ್ನು ಅಪೇಕ್ಷಿಸುವುದು ಅಸಹನೀಯವಾದ ದಬ್ಬಾಳಿಕೆಯಾಗುತ್ತದೆ. ಈ ದಬ್ಬಾಳಿಕೆ ಅಷ್ಟು ಸುಲಭವಾಗಿ ಅರ್ಥವಾಗುವಂಥದ್ದಲ್ಲ. ಯಾಕೆಂದರೆ ಸ್ಪರ್ಧಿಗಳು ಬಿಗ್ ಹಣದ ಹುಚ್ಚಿನಲ್ಲಿ ಮತ್ತಷ್ಟು ಹುಚ್ಚರಾಗುತ್ತಾರೇ ವಿನಾ ಹಿಡಿದ ಹುಚ್ಚಿಂದ ಬಿಡಿಸಿಕೊಳ್ಳಲಾರರು! ಅಂದರೆ ಏನೇ ಮಾಡಿದರೂ ಸರಿಯೆಂಬ ಅಸ್ವಾಭಾವಿಕ ಪ್ರವೃತ್ತಿಯನ್ನು ಹುಟ್ಟಿಸಿಬಿಡುವ ತಾಕತ್ತು ಬಿಗ್ ಬಾಸ್ ಆಟಕ್ಕಿದೆ; ಎಷ್ಟೆಂದರೆ, ನಮ್ಮೊಳಗಿನ ಪ್ರಜ್ಞೆಯನ್ನು ಮರೆಸುವಷ್ಟು! ಚಿಂತನಶೀಲ ಶಕ್ತಿಯನ್ನು ಸಾಯಿಸಿಬಿಡುವಷ್ಟು!

ಸೀಸನ್ ವೊಂದರಲ್ಲಿ ವಿಧಾನಸಭಾ ಚುನಾವಣೆ ಬಂದಿತ್ತು. ಸ್ಪರ್ಧಿಗಳಿಗೆ ಓಟು ಹಾಕಲು ಬಿಗ್ ಬಾಸ್ ವ್ಯವಸ್ಥೆ ಮಾಡಬೇಕಿತ್ತು. ಮತದಾನದ ಹಕ್ಕು ಸಂವಿಧಾನ ನೀಡಿದ ವ್ಯಕ್ತಿಸ್ವಾತಂತ್ರ್ಯ. ಅಂಥ ಹಕ್ಕಿನ ಚಲಾವಣೆಗೂ  ಬಿಡಲಿಲ್ಲವೆಂಬುದೇ ದೊಡ್ದ ದೌರ್ಜನ್ಯ, ದಬ್ಬಾಳಿಕೆ ಎಂಬಂಥ ಮಾತುಗಳು ಆಗ ಕೇಳಿಬಂದಿದ್ದವು! ಸಮೂಹದ ಭಾವನೆಗಳಿಗೆ ವಿರುದ್ಧವಾಗಿ ಸ್ಪರ್ಧಿಗಳನ್ನು ನಡೆಸಿಕೊಂಡಿದ್ದನ್ನೂ, ಕಾವಿಧಾರಿಯೊಬ್ಬನನ್ನು ಬೇಕಾದಂತೆ ಆಡಿಸಿದ್ದನ್ನೂ ಬಿಗ್ಬಾಸಿನಲ್ಲಿ ನೋಡಿದ್ದೇವೆ. ಆದರೆ ಯಾವ ಸಂದರ್ಭದಲ್ಲೂ ಯಾರೂ ಬಿಗ್ಬಾಸಿನ ಸಂಪೂರ್ಣ ನಿಯಮಗಳನ್ನು ಉಲ್ಲಂಘಿಸದೇ ಆಡಿದರು; ತಮ್ಮ ವ್ಯಕ್ತಿ ಸ್ವಾತಂತ್ರ್ಯವನ್ನು ಅಡವಿಟ್ಟು! ಹಣದಾಸೆಯು ಹೇಗೆಲ್ಲ ಅಭಿವ್ಯಕ್ತಿಸುತ್ತದೆ ಎಂಬುದು ಈ ಆಟದಿಂದ ಅರ್ಥವಾಗುತ್ತದೆ. ಸ್ಪರ್ಧಿಗಳು ಟಾಸ್ಕಿನ ಸಣ್ಣಪುಟ್ಟ ಅಡ್ಡಿಗಳಿಗೂ, ಸಮಸ್ಯೆಗಳಿಗೂ ಉತ್ತರವನ್ನಾಗಲೀ, ಪರಿಹಾರವನ್ನಾಗಲೀ ಕಂಡುಕೊಳ್ಳಲು ಹೆಣಗಾಡುವ ಇವರ ಸಾಮಾನ್ಯ ಜ್ಞಾನವನ್ನು ಅಥೈಸಿಕೊಳ್ಳಲು ವೀಕ್ಷಕರಿಗೆ ಸಾಧ್ಯವಾಗದೇ ಇರುವುದಂತೂ ಹಾಸ್ಯಾಸ್ಪದವೇ ಸರಿ! ಸಣ್ಣಸಣ್ಣ ಘಟನೆಗಳಿಗೂ ಅತೀಯೆಂಬಂತೆ ಆಡುವುದನ್ನೂ ವೀಕ್ಷಕರು ನೋಡಿದರು. ಮುಖ್ಯವಾಗಿ ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸುವಾಗ ಮನೋದಾರ್ಢ್ಯತೆಯ ಕೊರತೆ ಹಾಗೂ ಒಬ್ಬರಿಗೊಬ್ಬರು ಒಬ್ಬರ ಮೇಲೊಬ್ಬರು ಮಾತಿನ ಅಥವಾ ಭಾವನಾತ್ಮಕವಾದ ಸವಾರಿ ನಡೆಸಿದಾಗ ಅದನ್ನು ಎದುರಿಸುವ ಮನೋಸ್ಥೈರ್ಯದ ಶೂನ್ಯತೆ ಪ್ರತಿಹಂತದಲ್ಲೂ ಕಾಣುತ್ತದೆ. ಅಭಿವ್ಯಕ್ತಿಯಲ್ಲಿ ಒರಟುತನ, ಉಢಾಪೆ, ಅಸಡ್ಡೆ, ಉದಾಸೀನ, ಮೊಂಡುತನ, ಒಣ ಅಹಮ್ಮು, ವೈಚಾರಿಕ ಶೂನ್ಯತೆ, ದುಷ್ಟ ಧಾರ್ಷ್ಟ್ಯತೆ, ಎರೋಗೆನ್ಸ್ ಗಳನ್ನು ನೋಡಿಯಾಯಿತು. ಒಟ್ಟಾರೆಯಾಗಿ, ಹೇಳುವುದಾದರೆ, ಇದು ಮನುಷ್ಯನಿಗಿರುವ ಸಂಘರ್ಷದ ಶಕ್ತಿಯನ್ನು ದಮನಿಸುವ ಆಟವಾಗಿ ನನಗೆ ಕಾಣುತ್ತದೆ! ಹಾಗಾದರೆ, ಬಿಗ್ಬಾಸಿನಲ್ಲಿ ಸಕಾರಾತ್ಮಕವಾದುದು ಏನೂ ಇಲ್ಲವೆ? ಇದ್ದೇ ಇದೆ. ವ್ಯಕ್ತಿ ಭಿನ್ನಾಭಿಪ್ರಾಯಗಳನ್ನು ಸ್ವೀಕರಿಸುವ ಸಹನೆಯಂಥ ದೊಡ್ಡ ಶಕ್ತಿಯನ್ನು ಇದು ಕಲಿಸುತ್ತದೆ ನಿಜವಾಗಿ ಕಲಿಯುವ ಮನಸಿದ್ದರೆ! ಇದ್ದುದರಲ್ಲೇ, ಇರುವವರಲ್ಲೇ ಹೊಂದಿಕೊಳ್ಳುವ ಗುಣವನ್ನು ಕಲಿಸುತ್ತದೆ. ಆದರೆ, ಇಲ್ಲೇ ಒಂದು ಪ್ರಶ್ನೆಯೂ ಇದೆ. ಕೇವಲ ಹತ್ತೋ ಹದಿನೈದು ಜನರಿದ್ದ ಕೋಣೆಯಷ್ಟೇ ಅಲ್ಲವಲ್ಲ ಹೊರಪ್ರಪಂಚ? ಜಗತ್ತೇ ಒಂದು ಬಿಗ್ ಬಾಸ್ ಮನೆ ಅಂತ ಭಾವಿಸಿ, ದೇವರು ಕೊಡುವ ಕಷ್ಟಗಳನ್ನು ಟಾಸ್ಕ್ ಗಳೆಂದೂ, ಅವುಗಳನ್ನು ಗೆದ್ದಮೇಲೆ ಸಿಗುವ ಸುಖವನ್ನೇ ದಿನಸಿಗಳೆಂದೂ ತಿಳಿದರಾಯಿತು ಅಷ್ಟೆ.

ನಾನು, ಆಫ್ ಕೋರ್ಸ್ ಯಾರೂ ಮೆಚ್ಚುವ, ಮೆಚ್ಚಲೇಬೇಕಾದ ಎರಡು ಸಂಗತಿಗಳಲ್ಲಿ, 1.. ಕನ್ನಡವನ್ನು ಮಾತಾಡಬೇಕು, ಕನ್ನಡದಲ್ಲಿ
ಮಾತಾಡಬೇಕು ಎಂಬ ನಿಯಮವನ್ನು ಉಳಿಸಿಕೊಳ್ಳುವ ಮೂಲಕ ಕನ್ನಡದ ಉಳಿವಿನ ಚಿಂತನೆಯನ್ನು ಬಿಗ್ ಬಾಸ್ ಮಾಡುತ್ತ ಬಂದಿರುವುದು. 2. ನಟ
ಸುದೀಪ್ (Actor Sudeep) ಅವರ ಕಿಚ್ಚನ ಪಂಚಾಯಿತಿ. ಅದು ವೃತ್ತಿಪರ ಕೌನ್ಸಿಲಿಂಗ್ ಗಿಂತಲೂ ಅದ್ಭುತವಾಗಿರುತ್ತದೆ. ಸ್ಪರ್ಧಿಗಳನ್ನು ಶ್ಲಾಘಿಸುವ, ಎಚ್ಚರಿಸುವ, ದಾರಿ ತಪ್ಪದಂತೆ ಕ್ರಮಿಸುವ ಪಾಠಗಳನ್ನು ಅತ್ಯುತ್ತಮವಾದ ರೀತಿಯಲ್ಲಿ ಅವರು ನಿರ್ವಚಿಸುತ್ತಾರೆ. ಬಿಗ್ ಬಾಸಿನ ಆಸಕ್ತಿಯ ನಿಜ ಅಸ್ಮಿತೆಯಿರುವುದು ಚಿತ್ರನಟ ಸುದೀಪ ಅವರು ಸಾದರಪಡಿಸುವ ಪ್ರತಿ ಶನಿವಾರ ಮತ್ತು ಭಾನುವಾರದ ಪಂಚಾಯಿತಿಯಲ್ಲಿ! ಸಮಯ ಹೊಂದಿಸಿಕೊಂಡು ನಾನು ಅದನ್ನು ನೋಡುತ್ತೇನೆ. ಅವರ ಕಂಠದ ಏರಿಳಿತವೇ ಬಹು ಆಕರ್ಷಣೀಯ. ಅವರ ನಿರೂಪಣೆಯಲ್ಲಿ ಆಯಸ್ಕಾಂತೀಯ ಶಕ್ತಿಯಿದೆ. ಕಾರ್ಯಕಾರಣ ಸಂಬಂಧವನ್ನು ಅವರು ವಿಶದಪಡಿಸುವ ರೀತಿ ಮನಕ್ಕೆ ನಾಟುತ್ತದೆ. ಅವರ ವೈಚಾರಿಕ ಮತ್ತು ಬೌದ್ಧಿಕ ಚಿಂತನೆಯ ಸ್ತರವನ್ನು ಯಾರೂ ಒಪ್ಪಬೇಕು. ಇವರೊಬ್ಬರು ಇಲ್ಲದಿದ್ದರೆ ಬಿಗ್ ಬಾಸ್ ಬೋರು ಎಂಬಷ್ಟರಮಟ್ಟಿಗೆ ಬಿಗ್ ಬಾಸಿನ ಅಸ್ಮಿತೆ ನಟ ಸುದೀಪ ಆಗಿಬಿಟ್ಟಿದ್ದಾರೆ.

ಕೊನೆಯದಾಗಿ ನಾನು ಹೇಳುವುದು ಇಷ್ಟು: ಬಿಗ್ ಬಾಸ್ ಈ ಪರಿಕಲ್ಪನೆಯು ತನ್ನ ಒಟ್ಟೂ ರಚನೆಯಲ್ಲಿ ಇನ್ನಷ್ಟು ಸೃಜನಾತ್ಮಕವಾಗಬೇಕಿದೆ. ರಚನಾತ್ಮಕವಾದ ಟಾಸ್ಕ್ ಗಳನ್ನು ನೀಡುವ ಮೂಲಕ ಸ್ಪರ್ಧಿಗಳ ನಿಜ ತಾಕತ್ತನ್ನು ಹೊರಗೆಳೆಯುವ ಆಕೃತಿಗಳು ನಿರ್ಮಾಣವಾಗಬೇಕಿದೆ. ಅದು ಸೃಜನಶೀಲತೆಯನ್ನು ಹುಟ್ಟುಹಾಕುವಂತಿರಬೇಕು. ಕಿರುಚುವುದು, ಬೈಯ್ಯುವುದು, ಎಗರಾಡುವುದು, ಹಂಗಿಸುವುದು, ಅಣಕಿಸುವುದು, ಹೀಯಾಳಿಸುವುದು- ಇಂಥವುಗಳ ಮೂಲಕ ಹಳೆಯ ವೈಷಮ್ಯವನ್ನು ತೀರಿಸಿಕೊಳ್ಳಲು ತೆರೆದ ವೇದಿಕೆಯಾಗಿ ಬಿಗ್ ಬಾಸ್ ಆಸ್ಪದವನ್ನೂ, ಅವಕಾಶವನ್ನೂ ಕೊಡಬಾರದು. ಸಮೂಹವೊಂದು ಸ್ವೀಕರಿಸದ ಅನಾಗರಿಕ ವರ್ತನೆಯನ್ನು ಗ್ರಹಿಸಿ ತಕ್ಷಣವೇ ಹೊರಹಾಕುವ ಶಕ್ತಿಯನ್ನು ಬಿಗ್ ಬಾಸ್ ಗಳಿಸಿಕೊಳ್ಳಬೇಕಿದೆ. ಯಾವ ಸಂದರ್ಭದಲ್ಲೂ ಸಮಾಜಕ್ಕೆ ತಪ್ಪಾದ ಸಂದೇಶ ರವಾನೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಬಿಗ್ ಬಾಸಿಗಿದೆ. ನನ್ನ ಮೆಚ್ಚಿನ ಸ್ಪರ್ಧಿಗೆ ಓಟನ್ನು
ನೀಡುವ ಮೂಲಕ ನಾನು ಈ ಆಟವನ್ನು ಬೌದ್ಧಿಕ ಕಸರತ್ತನ್ನಾಗಿ ನೋಡುತ್ತೇನೆ ಬಿಡುವಾದಾಗಲೆಲ್ಲ!

3 thoughts on “Big Boss : ಮನುಷ್ಯನಿಗಿರುವ ಸಂಘರ್ಷದ ಶಕ್ತಿಯನ್ನು ದಮನಿಸುತ್ತದೆಯೇ?

  1. New platform to know about current affairs in our state and and locality. I recommend this news page to friend and family so that we can share the knowledge and build a sweet and loyal HANATE Family. Now doubt, it’s an active page. But I have an personal opinion and it would be suggestion, I felt that their is bit lag in this page. As i scroll up the page is laging and it is scrolling down by its self. I don’t know if this issue is in my phone or in server but please cross check this … Otherwise it is doing amazing job……

    -Preetam Rathod

Leave a Reply

Your email address will not be published. Required fields are marked *