ಇನ್ನೊಬ್ಬರ ಮನೆಯ ಕಿಟಕಿ ಇಣುಕಿ ನೋಡಲು ಸೋಷಿಯಲ್ ಮೀಡಿಯಾ…

ನಮ್ಮ ಮದ್ಯೆ ಕೆಲವರಿಗೆ ಇನ್ನೊಬ್ಬರ ಮನೆಯ ವಿಚಾರ ಅಂದರೆ ಕಿವಿ ನೆಟ್ಟಗಾಗುತ್ತದೆ … ಕಣ್ಣುಗಳು ಅರಳುತ್ತವೆ… ಅವರಿಗೆ ಎಲ್ಲರ ಮನೆಯ ಎಲ್ಲ ವಿಚಾರಗಳು ತನಗೆ ತಿಳಿದಿರಲಿ ಎಂಬ ಕಾತರ ಇರುತ್ತದೆ. ಆದರೆ ಮಾತಲ್ಲಿ ಮಾತ್ರ ಹೇಳುತ್ತಿರುತ್ತಾರೆ… ” ನಮಗ್ಯಾಕೆ ಬೇಕು ಇನ್ನೊಬ್ಬರ ಮನೆ ವಿಚಾರ” ಅಂತ.

ಇನ್ನೂ ಕೆಲವರಿಗೆ ಜೀವನದಲ್ಲಿ ತಮಗಿರುವ ಸಂಪತ್ತು… ಉತ್ತಮ ಜೀವನಶೈಲಿ ಇನ್ನೊಬ್ಬರಿಗೆ ತೋರಿಸಬೇಕು ಅನ್ನುವ ಆಸೆ ಇರುತ್ತದೆ… ನಿಜವಾಗಿ ಅವರದು ಊರುತುಂಬಾ ಸಾಲವೇ ತುಂಬಿರಲಿ… ಅಥವಾ ಮಾನಸಿಕ ಹಾಗು ದೈಹಿಕ ಸ್ವಾಸ್ತ್ಯ ಎನ್ನುವುದು, ಮಾದಕ ದ್ರವ್ಯಗಳ ವಶವಾಗಿ ಹೋಗಿದ್ದಿರಲಿ…. ಇಡೀ ಜಗತ್ತೇ ತಮ್ಮತ್ತ ನೋಡಬೇಕು ಎನ್ನುವ ರೀತಿಯಲ್ಲಿ ಬದುಕು ದೂಡುತ್ತಿರುತ್ತಾರೆ… ಇದಕ್ಕಾಗಿ, ಇನ್ನೊಬ್ಬರ ಬಗ್ಗೆ ತಿಳಿದುಕೊಳ್ಳುತ್ತಲೇ ಇರಬೇಕಾಗುತ್ತದೆ. ಒಟ್ಟಿನಲ್ಲಿ ಈ ಎರಡೂ ವರ್ಗಗಳ ಜನರು ” ಇನ್ನೊಬರ ಮನೆ ಕಿಟಕಿ ಇಣುಕುವವರೇ ” ಅಂದರೆ ತಪ್ಪಾಗದು…

ಅದೊಂದು ಕಾಲವಿತ್ತು, ಇಂಥ ಸುದ್ದಿಗಳನ್ನು ತಿಳಿದುಕೊಳ್ಳಲು ಊರಿನ ಅರಳಿ ಮರದ ಕಟ್ಟೆಗಳು, ನೀರಿನ ಬಾವಿ, ಗೂಡಂಗಡಿ ಹೀಗೆ ಕೆಲವು ಆಯ್ದ ಜಾಗಗಳಲ್ಲಿ ಜನರು ಸೇರಬೇಕಿತ್ತು… ಅಥವಾ ನಿಜವಾಗಿಯೂ ಕಿಟಕಿ ಅಥವಾ ಬಾಗಿಲುಗಳ ಸಂದಿಗೆ ಕಣ್ಣು ಅಥವಾ ಕಿವಿಗಳನ್ನು ಇರಿಸಬೇಕಿತ್ತು…ಊರಿನ ಮರದ ಕಟ್ಟೆಗಳು ಗಂಡಸರ ಹರಟೆಯ ಪ್ರಮುಖ ಕೇಂದ್ರ ಗಳಾದರೆ. ಹೆಂಗಸರ ಮದ್ಯೆ ” ಊರಿಗೆ ಬಂದವಳು ನೀರಿಗೆ ಬರದೇ ಇರುತ್ತಾಳಾ ” ಎಂಬ ಆಡುಮಾತು ತುಂಬಾ ಜನಪ್ರಿಯವಿತ್ತು… ನೀರಿಗೆ ಬರುವವಳ ಕೊಡ ಬೆಳ್ಳಿಯದಾ ಅಥವಾ ಮಣ್ಣಿನದಾ ಎನ್ನುವದರ ಮೇಲೆ ಬಹು ವಿಷಯಗಳು ತಿಳಿಯಲ್ಪಡುತ್ತಿತ್ತು : ಬೆಳ್ಳಿಯ ಕೊಡ ಜನರಿಗೆ ತೋರಿಸಬೇಕೆಂದುಕೊಂಡವಳ ಇಚ್ಛೆಯೂ ನೆರವೇರುತ್ತಿತ್ತು. ಇನ್ನು ಅಂಗಡಿಗಳು ಸುದ್ದಿಯ ಕೇಂದ್ರಗಳಾಗಿದ್ದವು…

ಆದರೆ ಇಂದು ಕಾಲ ಬದಲಾಗಿದೆ… ಈ ಇನ್ನೊಬರ ಮನೆ ವಿಷಯ ತಿಳ್ಕೊಳ್ಳಬೇಕಾದವರಿಗೆ ಹೆಚ್ಚಿನ ಶ್ರಮ ಅವಶ್ಯಕತೆ ಇಲ್ಲ… ಅವರವರ ಅಂಗೈಯಲ್ಲಿಯೇ ಈ ಸುದ್ದಿಗಳು ಸಿಕ್ಕಿ ಬಿಡುತ್ತವೆ… ಅದೂ ಮಿಂಚಿನ ವೇಗದಲ್ಲಿ… ಹೌದು ಮೊಬೈಲ್ ಫೋನಗಳು ಮತ್ತು ಅವುಗಳಲ್ಲಿರುವ ಶೋಷಿಯಲ್ ಮೀಡಿಯಾ ಆಪ್ ಗಳು.. ಕೆಲವು ಶೋಷಿಯಲ್ ಮೀಡಿಯಾ ಆಪ್ ಗಳು ಈ ಇನ್ನೊಬ್ಬರ ಮನೆ ವಿಚಾರ ತಿಳಿಸುವ ಅಥವಾ ಜನರಿಗೆ ತಮ್ಮಲ್ಲಿರುವುದನ್ನು ತೋರುವ ಅನುವು ಮಾಡಿಕೊಡುವ ವೈಶಿಷ್ಟತೆಗೆ “status” ಅಂತ ಕರೆದರೆ ಇನ್ನು ಕೆಲವು, updates, reels, shorts ಹೀಗೆ ಹತ್ತು ಹಲವು ಹೆಸರನ್ನಿರಿಸಿವೆ. ಇಲ್ಲಿ ಉಳ್ಳವರು ತಮ್ಮ ಆಸ್ತಿಗಳನ್ನು ತೋರಿಸಿದರೆ, ಇಲ್ಲದವರು ಈ ತೋರಿಕೆಗಳನ್ನು ತಮ್ಮ ಕಣ್ಮನ ಗಳನ್ನು ತುಂಬಿಸಿ ಕೊಳ್ಳುವುದರ ಜೊತೆಗೆ, ಜನ್ಮದಿನ, ಪ್ರೀತಿಯ ನಿವೇದನೆ, ಯಾವುದೊ ಕವಿಯ ಯಾವುದೋ ಕವನ, ಯಾವುದೊ ಸುದ್ದಿ, ಇರುವುದಕ್ಕಿಂತ ಚೆನ್ನಾಗಿ ಕಾಣಿಸುವ ಫೋಟೋ ಹೀಗೆ ಮುಂತಾದವುಗಳನ್ನು ತೂರುತ್ತಿರುತ್ತಾರೆ. ಒಟ್ಟಿನಲ್ಲಿ ಈ ಶೋಷಿಯಲ್ ಮೀಡಿಯಾ ಗಳು ಇಂಥವರಿಂದ ತೀರಾ ನೂಕು ನುಗ್ಗುಲಿನಿಂದಲೇ ತುಂಬಿರುತ್ತದೆ ಎಂದರೆ ತಪ್ಪಾಗದು.

ಹಾಗಾದರೆ ” ಈ ಇನ್ನೊಬರ ಮನೆ ಕಿಟಕಿ ಇಣುಕುವ ಬುದ್ದಿ ” ನಮಗೆ ಬೇಕೇ ? ಬೇಕಾದರೆ ಇದರಿಂದ ನಮಗೆ ಏನು ಲಾಭ ?

ಇತಿಹಾಸವನ್ನು ಅವಲೋಕಿಸಿದರೆ, ಈ ಇನ್ನೊಬರ ಮನೆ ಕಿಟಕಿ ಇಣುಕುವ ಬುದ್ದಿಯುಳ್ಳವರು ಏನಾದರೂ ಸಾಧನೆ ಮಾಡಿದ್ದಾರೆಯೇ ? ಖಂಡಿತ ಇಲ್ಲಾ… ಒಂದು ಸೂಕ್ತ ಗುರಿಯನ್ನು ಬದುಕಲ್ಲಿ ಹೊಂದಿ, ಅದಕ್ಕಾಗಿ ಶ್ರಮಸಿ, ಸೋಲು ಅವಹೇಳನೆಗಳನ್ನು ಎದುರಿಸಿ, ” ಆನೆ ನಡೆದಲ್ಲಿಯೇ ದಾರಿ ” ಎನ್ನುವಂತೆ ಬದುಕಿದವರೇ ಸಾಧಕ ಎನಿಸಿಕೊಂಡಿದ್ದಾರೆ ; ಅದೆಷ್ಟೋ ಬದುಕುಗಳಿಗೆ ದಾರಿದೀಪ ವಾಗಿದ್ದಾರೆ.

ಇಂದಿನ ಆಧುನಿಕ ಜಗತ್ತಿನಲ್ಲಿ ತಾನು ಸಾಧನೆ ಮಾಡಬೇಕಾಗಿರುವ ರಂಗದಲ್ಲಿ ಯಾವ ಜ್ಞಾನದ ಅವಶ್ಯಕತೆ ಇದೆಯೋ ಅದರಬಗ್ಗೆ ಜ್ಞಾನಾರ್ಜನೆ ಮಾಡಿದವರೇ, ಸಾಧಕರೆನಿಸಿಕೊಂಡಿದ್ದಾರೆ. ನಿಜವಾಗಿಯೂ ಸಾಧನೆ ಮಾಡಿದವರು , ಜೀವನದಲ್ಲಿ ಯಶಸ್ಸನ್ನು ಕಂಡವರು ಎಷ್ಟು ಶೋಷಿಯಲ್ ಮೆಡಿಯಗಳನ್ನು ದಿನದಲ್ಲಿ ಎಷ್ಟು ಸಮಯ ಉಪಯೋಗಿಸುತ್ತಾರೆ ಎಂದು ತಿಳಿಯಲು ಪ್ರಯತ್ನಿಸಿದರೆ… ತೀರಾ ಕಡಿಮೆ ಅಥವಾ ಇಲ್ಲವೇ ಇಲ್ಲ ಎಂಬ ಉತ್ತರ ಸಿಗಬಹುದು…

ಶೋಷಿಯಲ್ ಮೀಡಿಯಾಗಳು ಮೇಲ್ನೋಟಕ್ಕೆ ಉಚಿತ ಎನಿಸಿದರೂ ನಾವು ಅಲ್ಲಿ ಕಳೆಯುವ ಸಮಯದಿಂದಾಗಿ, ಬಿಲಿಯನ್ ಗಟ್ಟಲೆ ಲಾಭವನ್ನು ಗಳಿಸುತ್ತವೆ. ಶೋಷಿಯಲ್ ಮೀಡಿಯಾಗಳು ನಮ್ಮ ” ಇನ್ನೊಬ್ಬರ ಮನೆ ಕಿಟಕಿ ಇಣುಕುವ ” ಬುದ್ಧಿಯನ್ನೇ ಬಂಡಿವಾಳವಾಗಿಸಿ ಲಾಭಗಿಟ್ಟಿಸುತ್ತಿವೆ. ನಾವು ಅಲ್ಲಿ ಕಳೆಯುವ ಸಮಯದಿಂದಾಗಿ, ಜಾಹಿರಾತುಗಳು, ವಿವಿಧ ಚಂದಾದಾರಿಕೆ, ಹೀಗೆ ಹತ್ತು ಹಲವು ವಿಧಗಳಿಂದ ಹಣಗಳಿಸುತ್ತಿವೆ. ಆದರೆ ನಮ್ಮ ” ಇನ್ನೊಬ್ಬರ ಮನೆ ಕಿಟಕಿ ಇಣುಕುವ ” ಬುದ್ಧಿಯಿಂದಾಗಿ , ಕ್ಷಣಗಳು ನಿಮಿಷಗಳಾಗಿ, ನಿಮಿಷಗಳು ಘಂಟೆಗಳಾಗಿ ಜೀವಮಾನದ ದಿನವೊಂದು ಜಾರಿದ್ದು ಪರಿವೆಗೇ ಬರುವುದಿಲ್ಲ… ನಾವು ಇನ್ನೊಬ್ಬರ ತೋರಿಕೆಯ ಜೀವನ ಶೈಲಿಯನ್ನು ನೋಡಿ ತನಗಿಲ್ಲವೆಂದು ಮನನೊಂದು , ಮಾನಸಿಕ ವಾಗಿ, ದೈಹಿಕವಾಗಿ ಕುಗ್ಗುತ್ತಿರುವುದು ನಮ್ಮ ಗಮನಕ್ಕೇ ಬರುವುದಿಲ್ಲ…

ಈಗ ನಾವೇ ನಮಗೆ ಪ್ರಶ್ನೆ ಕೇಳಿಕೊಳ್ಳಬೇಕಿದೆ ಈ ” ಇನ್ನೊಬ್ಬರ ಮನೆ ಕಿಟಕಿ ಇಣುಕುವ ” ಬುದ್ದಿ ಬೇಕೇ ? ನಾವೊಬ್ಬ ಸಾಧಕರಾಗಬೇಕೇ ? ಅಥವಾ ನಮಗೆ ನಾವೇ ಶತ್ರುಗಳು ? ಎಂಬುದನ್ನು … ಅಲ್ಲವೇ ?

ಲೇಖಕರು :
ರಾಘವೇಂದ್ರ ಲಕ್ಷ್ಮೇಶ್ವರ್

Founder & Creative Head
Grapito Desings (Design and Marketing agency)

Leave a Reply

Your email address will not be published. Required fields are marked *