ಕಲ್ಯಾಣದ ಮುಂದಿನ ದಾರಿ

ಕಲ್ಯಾಣ ತಲುಪುವ ತನಕ ಧಾತು
ಹಿಡಿದಿಟ್ಟದ್ದೇ ಕ್ರಾಂತಿ, ಒತ್ತರಿಸಿ ಬರುವ
ವಿಷಯ ಸಾರಕೆ ತಡೆಯೊಡ್ಡಿ ಗೆದ್ದೆನೆಂದೆ;
ಅದೂ ಭಾರವಾಗಿ ಬಾಗಿದಾಗ
ಲೌಕಿಕವೇ ಅಲೌಕಿಕವಾಗಿ ಬೆನ್ನನೇರಿತು

ಮತ್ತಿನ್ನೆಲ್ಲಿ ವಾಚಿಸಲಿ ಹರಿಹರನ ರಗಳೆ
ವ್ಯವಧಾನವುಂಟೆ ಭೀಮಕವಿಯ ಪುರಾಣ
ದ ಕಥಾಕಾಲಕ್ಷೇಪಕೆ
ಕಿತ್ತೊಗೆದ ಮೂರೆಳೆಗೆ ಹತ್ತೆಂಟು ಸೂತ್ರ ಸೇರಿ
ನೂರು ಹಗ್ಗಗಳಾಗಿ ಸುತ್ತಿಕೊಂಡು
ಜಡತ್ವವವನಾ-
ವಿರ್ಭವಿಸಿ ಕಲ್ಯಾಣ ಕಂಡಿದ್ದೇ ಕೊನೆ.

ಶತಮಾನಗಳ ನಂತರ ನೆನಪೂ
ಕಾಡುವದನು ಮರೆತವೆ?

ಜಗವೇ ಮುಷ್ಟಿಯಂತಾದಾಗ ಎಲ್ಲಿ ಹುಡುಕಲಿ
ಬಿಜ್ಜಳನ ಸಾಮ್ರಾಜ್ಯದ ಗಡಿಯನು
ತೈಲಪನ ನಿಟ್ಟಿಸಿರಿನ ಸುರುಳಿಯನು
ಖಜಾನೆಯ ಸುತ್ತ ಮಾಲೀಕತ್ವದ
ಗೋಡೆಗಳೆದ್ದು

ಕೈಯತ್ತಿ ನೀಡುವುದರ ಶೋಕಿ
ಬಣ್ಣಬಣ್ಣದ ಚಿತ್ರಗಳಾಗಿ ಎಲ್ಲೆಲ್ಲೂ
ತ್ರೀ-ಕರಣ ಸುದ್ದಿ
ಮುರಿದು ಬೀಳದ ಕಾಯ-ಕ ನಿಷ್ಠೆ
ತುಂಬಿ ತುಳುಕುವ ಪ್ರಸಾಧನದ ಭಂಡಾರ
ಸೈತಾನನ ಕಮ್ಮಟದಲಿ ಭಾರಿ ಉತ್ಪಾದನೆ
ತದ್ವಿರುದ್ಧ ದಿಕ್ಕಿನಲಿ ತಿರುಗುವ ಚಕ್ರಗಳಿಗೆ
ಕೀಲೆಣ್ಣೆ ಬಿಡಲು ಪುರುಸೊತ್ತಿಲ್ಲ.

ಐದು ವರ್ಷಕ್ಕೊಮ್ಮೆ ವಚನಗಳ ದಂಡು
ಪ್ರಣಾಲಿಗಳ ಸಂಪುಟದಲಿ ಪ್ರಸಂಗಾವಧಾನ

ಪ್ರವಾದಿಯ ಕನಸ ಕಣ್ಣಲಿ ಅವತಾರಿಯ ರುದ್ರನರ್ತನ
ಅವನು ಕಟ್ಟುವ ಸ್ಥಾವರಗಳ
ಬಾಗಿಲಿಗೆ ಬಾಂಬುಗಳ ತೋರಣ
ಬುನಾದಿಯಲ್ಲೆಲ್ಲೊ ಅನಾದಿಕಾಲದ
ಜಂಗಮನ ನಿಶ್ಚಲ ಮಿಸುಕಾಟ
ಲಿಂಗದ ಅನಂಗ ಸಂಗ,
ಸಲೆತ ಮೈಯ ಸೂಳೆ ಸಂಕವ್ವೆ
ಹದಿನೆಂಟು ಕಂಬದ ಸುತ್ತ ಹಂತಿ ತುಳಿದ
ಅಂತ್ಯಜನ ಮಹಾತ್ವಾಕಾಂಕ್ಷೆಯ ಅಂತ್ಯ

ಅಕ್ಕ ನಿನ್ನ ಸೋದರಿಯರಿಗೆ
ಮುವತ್ಮೂರರಂಕಿಯಂತೆ-
ಒಬ್ಬರ ಹಿಂದೊಬ್ಬರು ಮತ್ತೊಬ್ಬರು
ಕೇಶರಾಶಿಯಲಿ ಮರೆಯಾಗುವ ತವಕ
ನೀನುಟ್ಟು ಬಿಟ್ಟ ವಿರತಿಯ ತುಂಡೇ
ಉಮ್ಮಳಿಸುವ ದುಃಖವನೊರೆಸಲು ಕರವಸ್ತ್ರ
ಇಂದಿಗೂ ಅದವರ ಅಸ್ತ್ರ-ಬ್ರಹ್ಮಾಸ್ತ್ರ

ಕಲ್ಯಾಣದಗಸಿಯ ಕದ ಕಟ್ಟಿ
ಕವಾಟಿನೊಳು ಕತ್ತಲಾವರಿಸಿ ಹೆಜ್ಜೆಗೆದೆಗೊಟ್ಟು
ನಿಲ್ಲಬೇಕಾದ ದಾರಿ ಹೊಡಮರಳಿ ಬೆನ್ನಹುರಿ
ಹುರಪಳಿಸಿ ನಾಮವನೆಳೆದಿದೆ,
ನಿಜದ ದಾರಿಗೆ ಮಸಿ ಬಳಿದು. *

————— ಚೆನ್ನಪ್ಪ ಅಂಗಡಿ ಬಮ್ಮನಹಳ್ಳಿ , ಹುಬ್ಬಳ್ಳಿ

2010 ರಲ್ಲಿ ‘ಹಣತೆ’ ದೀಪಾವಳಿ ವಿಶೇಷಾಂಕಕ್ಕಾಗಿ ಏರ್ಪಡಿಸಿದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಚೆನ್ನಪ್ಪ ಅಂಗಡಿ ಬೊಮ್ಮನಹಳ್ಳಿ ಅವರ ‘ಕಲ್ಯಾಣದ ಮುಂದಿನ ದಾರಿ’ ಕವನವನ್ನು ಇದೀಗ ಮತ್ತೊಮ್ಮೆ ‘ಹಣತೆ ವಾಹಿನಿ’ ವೆಬ್ ನ್ಯೂಸ್ ಪತ್ರಿಕೆಯಲ್ಲಿ ಅಭಿಮಾನಪೂರ್ವಕವಾಗಿ ಪ್ರಕಟಿಸುತ್ತಿದ್ದೇವೆ. ಅಂದು ಸ್ಪರ್ಧೆಯ ತೀರ್ಪುಗಾರರಾದ ಎಚ್.ಎಸ್.ರಾಘವೇಂದ್ರ ರಾರ್ ಮತ್ತು ಜಿ.ಪಿ.ಬಸವರಾಜು ಅವರು ಈ ಕವನ ಬಗ್ಗೆ ಹೀಗೆ ಹೇಳುತ್ತಾರೆ : ‘ಮೊದಲನೆಯ ಬಹುಮಾನಕ್ಕೆ ಆಯ್ಕೆ ಆಗಿರುವ ‘ಕಲ್ಯಾಣದ ಮುಂದಿನ ದಾರಿ’ಯು ಕುಸುರಿಗೆಲಸದ ಹಾಗೂ ಕೆಲೆಗಾರಿಕೆಗಳಲ್ಲಿ ಕಳೆದುಕೊಳ್ಳುವುದನ್ನು ವಸ್ತುವಿನ ಸಂಕೀರ್ಣತೆಯಲ್ಲಿ ಪಡೆದುಕೊಳ್ಳುತ್ತದೆ. ಇತಿಹಾಸ, ವರ್ತಮಾನ, ಧರ್ಮ, ಲಿಂಗಪಕ್ಷಪಾತ, ಮನುಷ್ಯ ಸ್ವಬಾವ, ನಿರೂಪಕನ ವ್ಯಕ್ತಿತ್ವ, ಕವಿಯ ಮನಸ್ಸು ಇವೆಲ್ಲವನ್ನೂಒಂದು ಕತೆಯ ತೆಕ್ಕೆಯೊಳಗೆ ಹಿಡಿದಿರುವ ಮೂಲಕವೇ ಅದು ತನ್ನ ಶಕ್ತಿಯನ್ನು ಪಡೆದುಕೊಂಡಿದೆ. ನಮ್ಮ ಕಾಲದ ದುಷ್ಟ ದುರಂತಗಳ ಕುರಿತು ಹೇಳುತ್ತಲೇ ವಚನ ಚಳುವಳಿಯನ್ನು ಕೂಡ, ನಿಜದ ನೆಲೆಯಲ್ಲಿ ಬೆಲೆ ಕಟ್ಟುವ ಕೆಲಸದಲ್ಲಿ ಕವಿತೆ ತೊಡಗಿದೆ. ಕಥನ, ರೂಪಕ ನಿರ್ಮಾಣ ಮತ್ತು ಸಂಕೀರ್ಣತೆಗಳು ಈ ಕವಿತೆಯ ಗಟ್ಟಿಯಾದ ನೆಲೆಗಳು…’ ತೀರ್ಪುಗಾರರ ಈ ಅನಿಸಿಕೆಯನ್ನು ನಿಮ್ಮ ಮುಂದೆ ಇಡುತ್ತ, ಚೆನ್ನಪ್ಪ ಅಂಗಡಿಯವರ ‘ಕಲ್ಯಾಣದ ಮುಂದಿನ ದಾರಿ’ ಕವನೊದಳಗೆ ನಿಮ್ಮನ್ನು ಕರೆದೊಯ್ಯಲು ‘ಪ್ರಯತ್ನಿಸುತ್ತಿದ್ದೇವೆ. ಸಂ

Leave a Reply

Your email address will not be published. Required fields are marked *