ಹೆಗಲ ಮೇಲಿನ ಬಂದೂಕು ಇಳಿಸಿ ಸಂವಿಧಾನ ಪುಸ್ತಕ ಹೊತ್ತ ಹೆಣ್ಣು ಮಗಳೊಬ್ಬಳ ಕತೆ
ದನಸರಿ ಅನುಸೂಯ ಸೀತಕ್ಕ ಎನ್ನುವ ನಾನು….. ಧ್ವನಿ ಕೇಳುತ್ತಿದ್ದಂತೆ ತೆಲಂಗಾಣದ (Telangana) ಲಾಲ್ ಬಹಾದ್ದೂರ್ ಶಾಸ್ತ್ರಿ ಕ್ರೀಡಾಂಗಣ ಕಿವಿಗಡಚಿಕ್ಕುವ ಚಪ್ಪಾಳೆ, ಹರ್ಷೋನ್ಮಾದ, ಕೇಕೆಗಳಿಂದ ತುಂಬಿ ಹೋಗಿತ್ತು. ಆ ಕ್ಷಣ ‘ಎದೆಗೆ ಬಿದ್ದ ಅಕ್ಷರ’ವೊಂದು ಬೆಳಕಾಗಿ ಪ್ರಜ್ವಲಿಸಿತ್ತು.
ಇತ್ತೀಚೆಗೆ ನಡೆದ ಪಂಚರಾಜ್ಯ ವಿಧಾನಸಭಾ ಚುನಾವಣೆಗಳ ಫಲಿತಾಂಶ ನಾಡಿನ ನೆಮ್ಮದಿ ಬಯಸುವವರ ನಾಡಿ ಮಿಡಿತದ ಏರಿಳಿತಕ್ಕೆ ಕಾರಣವಾದರೂ ‘ಕತ್ತಲೊಳಗಣ ನಕ್ಷತ್ರ’ವೊಂದರ ಪ್ರಭೆಯನ್ನು ಲೋಕಕ್ಕೆ ಪರಿಚಯಿಸಿತು. ಆ ನಕ್ಷತ್ರದ ಹೆಸರೇ ‘ದನಸರಿ ಅನುಸೂಯ ಸೀತಕ್ಕ’ (Danasari Anusooya Seetakka) ತೆಲಂಗಾಣದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯ ನೂತನ ಸಚಿವೆ.

ಅವಿಭಜಿತ ಆಂದ್ರಪ್ರದೇಶದಲ್ಲಿ ಗೋದಾವರಿ ನೆರೆ ಸಂತ್ರಸ್ತರು ಸರ್ಕಾರಗಳ ಅವಜ್ಞೆಗೊಳಗಾಗಿ ಬೀದಿಪಾಲಾಗಿದ್ದರು. ನಾಗರಿಕ ಸೌಲಭ್ಯಗಳಿಂದ ವಂಚಿತರಾಗಿ, ಮುಖ್ಯವಾಹಿನಿಗೆ ಅಪರಿಚಿತರಾಗಿ ಉಸಿರು ಹಿಡಿದಿದ್ದ ಈ ನೊಂದ ಜನರ (ಕವಿ ಸಿದ್ದಲಿಂಗಯ್ಯ ಅವರ ಕ್ರಾಂತಿಗೀತೆಯಂತೆ) ನಾಡ ನಡುವಿನಿಂದ ಸಿಡಿದ ನೋವಿನ ಕೂಗಾಗಿ, ಅಧಿಕಾರ ಶಾಹಿಯ ವಿರುದ್ಧದ ಸಿಡಿಲಾಗಿ ನಿಂತ ದನಸರಿ ಅನುಸೂಯ ಹುಟ್ಟಿದ್ದು 09 ಜುಲೈ 1971ರಲ್ಲಿ. ಬಡತನವೇ ಬದುಕಾಗಿದ್ದ ಆದಿವಾಸಿ ಕೋಯ ಬುಡಕಟ್ಟಿಗೆ ಸೇರಿದ ಈ ಹೆಣ್ಣು ಮಗಳ ಬಾಲ್ಯ ಎಲ್ಲ ಆದಿವಾಸಿಗಳಂತೆ ಕಾಡಿನ ನಡುವೆ . ಅಕ್ಷರವಂಚಿತವಾಗಿಯೇ ಕಳೆಯತೊಡಗಿತ್ತು. ತಾರುಣ್ಯದ ಹೊಸ್ತಿಲು ತುಳಿಯಲು ಸಿದ್ಧವಾಗುವ

ಹೊತ್ತಿಗೆ ಅನುಸೂಯ ತನ್ನ ಸುತ್ತಲಿನ ಸಂಕಟಗಳನ್ನು ಅರ್ಥ ಮಾಡಿಕೊಳ್ಳತೊಡಗಿದರು. ‘ಸ್ವಾತಂತ್ರ್ಯ ಭಾರತ’ದ ವ್ಯಂಗ್ಯವೇನೋ ಎಂಬಂತೆ ತುಳಿತಕ್ಕೊಳಗಾಗಿದ್ದ ಬದುಕು ನಡೆಸುತ್ತಿದ್ದ, ಜನಸಮುದಾಯಗಳ ಧ್ವನಿಯಾಗಬೇಕೆಂಬ ಹಂಬಲ ಆಕೆಯ ವ್ಯಕ್ತಿತ್ವವನ್ನು ತುಂಬತೊಡಗಿತ್ತು.
ಹದಿನಾಲ್ಕು ವರ್ಷಗಳ ನವತಾರುಣ್ಯದ ಸಿರಿಗಲ್ಲದ ಹುಡುಗಿ ಅನುಸೂಯ, ಜನಶಕ್ತಿ ಸೀತಕ್ಕ ಎಂದೇ ಬದಲಾಗಿ ಹೋಗಿದ್ದಳು. ಪುರಾಣ ಪ್ರೇರಿತ ಪುರುಷಾಧಿಪತ್ಯ ಪ್ರತಿಪಾದಕ ಪೇಲವ ಪ್ರತಿನಿಧಿಗಳಾದ ಅನುಸೂಯ ಸೀತಾ ಹೆಸರಿನ ಬುಡಕಟ್ಟು ಹೆಣ್ಣುಮಗಳೊಬ್ಬಳು
‘ನಾವು ಬೆವರನು ಸುರಿಸಿ ದುಡಿಯುವ ಜನ
ನಮ್ಮ ಬೆವರಿನ ಪಾಲನು ಕೇಳುವೆವು
ತುಂಡು ಭೂಮಿಯಲ್ಲ, ಒಂದು ದೇಶವಲ್ಲ
ಇಡೀ ಭೂಗೋಳವೇ ಕೇಳುವೆವು’
ಎನ್ನುವ ನೊಂದ ಜನರ ಹಾಡಿನ ಧ್ವನಿಯಾಗಿ ಪರಿವರ್ತಿತಳಾಗಿದ್ದಳು.
‘ಶತಮಾನಗಳ ದೌರ್ಜನ್ಯಕ್ಕೆ ಬಂದೂಕಿನ ಪ್ರತಿಕಾರ, ರಕ್ತಪಾತದ ಮೂಲಕ ಸರ್ವ ಸಮಾನತೆಯ ಪರಿಹಾರ’ವೆಂಬ ಹಳಿತಪ್ಪಿದ ಧ್ಯೇಯವಾಕ್ಯದ ಸಾಕಾರಕ್ಕಾಗಿ ಜನಶಕ್ತಿ ನಕ್ಸಲೈಟರಲ್ಲೊಬ್ಬರಾಗಿ (Naxalite) ಬಂದೂಕದ ಮೂಲಕ ಸಮಾಜ ಕಟ್ಟುವ ಕನಸು ಕಾಣತೊಡಗಿದ್ದರು. ಹತ್ತು ಮಂದಿಯ ತಂಡದ ನೇತೃತ್ವ ವಹಿಸಿ ಪ್ರಜಾಪ್ರಭುತ್ವದ ಆಶಯಗಳ ಅನುಷ್ಠಾನಕ್ಕಾಗಿ, ಸಮ ಸಮಾಜದ ನಿರ್ಮಾಣಕ್ಕಾಗಿ ಹೆಗಲ ಮೇಲೆ ಬಂದೂಕು ಹೊತ್ತು ತೆಲಂಗಾಣ ಸೀಮೆಯ ಕಾಡುಗಳಲ್ಲಿ ಗೊತ್ತು ಗುರಿಯಿಲ್ಲದೇ ಅಲೆಯುತ್ತಿದ್ದಾಗ ಪ್ರಭುತ್ವದ ಪೊಲೀಸರ ಗುಂಡಿನಿಂದ ಜೀವವುಳಿಸಿಕೊಂಡಿದ್ದು ಹಲವು ಬಾರಿ.
ಸತತ ಹತ್ತು ವರ್ಷಗಳ ಹಿಂಸೆಯ ದಾರಿ ಸೀತಕ್ಕನನ್ನು ಭ್ರಮನಿರಸಗೊಳಿಸಿತ್ತು. ಜಗತ್ತಿನೆಲ್ಲ ಬಂದೂಕಗಳ ನಳಿಕೆಯಲ್ಲಿ ಗುಬ್ಬಿಗಳು ಗೂಡು ಕಟ್ಟದ ಹೊರತು ದಮನಿತರ ಬದುಕಿನಲ್ಲಿ ಹೂವುಗಳು ಅರಳುವುದಿಲ್ಲ ಎಂಬ ಸತ್ಯ ಮನವರಿಕೆಯಾಗಿತ್ತು. ಸೀತಕ್ಕ ಮತ್ತೆ ತಡಮಾಡಲಿಲ್ಲ. 1997ರ ಸುಮಾರಿಗೆ ಆಂದ್ರಪ್ರದೇಶದ ಸರ್ಕಾರವು ನಕ್ಸಲರಿಗಾಗಿ ( Naxal) ನೀಡಿದ ಸಾಮಾನ್ಯ ಕ್ಷಮಾದಾನ ಯೋಜನೆಯಡಿ ಸರ್ಕಾರಕ್ಕೆ ಶರಣಾದರು.
“Democracy is achieving social and economical revolution without bloodshed” – Dr.B. R. Ambedkar
ದೌರ್ಜನ್ಯಕ್ಕೊಳಗಾದ ಸಮುದಾಯಗಳ ಶ್ರೇಯೋಭಿವೃದ್ದಿಗೆ ಸಂವಿಧಾನಾತ್ಮಕವಾಗಿ ದುಡಿವ ಸಂಕಲ್ಪ ಕೈಗೊಂಡ ಸೀತಕ್ಕ 2004ರಲ್ಲಿ ಟಿಡಿಪಿ ವತಿಯಿಂದ ಮುಲುಗು ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತರಾದರು. ಸೀತಕ್ಕನಿಗೆ ಸೋಲುಗಳೇನೂ ಹೊಸದಾಗಿರಲಿಲ್ಲ. 2009ರಲ್ಲಿ ಸೀತಕ್ಕ ಗೆದ್ದರು. 2014ರಲ್ಲಿ ಸೋತರು. 2017ರಲ್ಲಿ ರೇವಂತ್ ರೆಡ್ಡಿ ನೇತೃತ್ವದಲ್ಲಿ ಟಿಡಿಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಸೀತಕ್ಕನ ದಣಿವರಿಯದ ಹೋರಾಟ ಗುರುತಿಸಿದ ಸೋನಿಯಾ ಗಾಂಧಿ (Soniya Gandhi) ಸೀತಕ್ಕನನ್ನು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದರು. 2018ರಲ್ಲಿ ಮುಲುಗು ಕ್ಷೇತ್ರದಲ್ಲಿಯೇ ವಿಜಯ ಸಾಧಿಸಿದ ಸೀತಕ್ಕ, 2020-21ರಲ್ಲಿ ಕೊರೋನಾ ಸೃಷ್ಟಿಸಿದ ಆತಂಕದ ದಿನಗಳಲ್ಲಿ ತನ್ನ ಜನರ ಬದುಕಿನ ಭರವಸೆಯಾಗಿ ಕೆಲಸ ಮಾಡಿದರು. ಸರಿ ಸುಮಾರು 400ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಚರಿಸಿ ಅಲ್ಲಿನ ಜನರಿಗೆ ಅಗತ್ಯ ಸಾಮಗ್ರಿಗಳನ್ನು ದೇಣಿಗೆದಾರರ ಬೆಂಬಲದಿಂದ ಪೂರೈಸಿ ದನಸರಿ ಅನುಸೂಯ ಸೀತಕ್ಕ ಎಲ್ಲರ ಮನೆಯ ಬೆಳಕಾಗಿ ಬೆಳಕಾದಳು.
ಹೀಗೆ ನೋವು ನಲಿವುಗಳ ತೀರದ ಹಾದಿಯಲ್ಲಿ ಕನಸುಗಳ ಬೆಂಬತ್ತಿ ಮುನ್ನಡೆದ ಸೀತಕ್ಕ ತನ್ನ ಜನರ ಹಕ್ಕುಗಳಿಗಾಗಿ ಒಂದಷ್ಟು ವರ್ಷ ವಕೀಲೆಯಾಗಿಯೂ, ನಂತರದಲ್ಲಿ ಉನ್ನತ ಶಿಕ್ಷಣ ಪೂರೈಸಿ ಪಿ.ಹೆಚ್.ಡಿ. ಪದವಿ ಪಡೆದದ್ದು ಸಿನಿಮಾ ಕತೆಯಲ್ಲ. 2023ರ ಇತ್ತೀಚಿನ ಚುನಾವಣೆಯಲ್ಲಿ ಪುನರಾಯ್ಕೆಯಾದ ಸೀತಕ್ಕ ಈಗ ಸಂಪುಟ ಸಚಿವೆ. ಮುಂದೆ …?!

ತನ್ನ ಜನರ ದುಮ್ಮಾನಗಳಿಗೆ ಕಿವಿಯಾಗಲು ಸಂತೆಗಳಲ್ಲಿ ಕೂತು ಕಾರ್ಪಣ್ಯಗಳನ್ನು ಕೇಳುತ್ತಿದ್ದ ಸೀತಕ್ಕ ಪ್ರಜಾಪ್ರಭುತ್ವದ ಉನ್ನತ ಸೌಧದಲ್ಲಿ ಸಾಮಾನ್ಯರ ಪ್ರತಿನಿಧಿಯಾಗಿ ಕಂಗೊಳಿಸುತ್ತಿರುವ ಸೀತಕ್ಕ ಎಲ್ಲರ ಆದರ್ಶವಾಗಲಿ. ರಕ್ತಪಾದದ ಹಾದಿಗಿಂತ ಸಂವಿಧಾನದ ಹಾದಿಯೇ ಶ್ರೇಷ್ಠವೆನ್ನುವ ಸೀತಕ್ಕನ ಸತ್ಯ ಬಂದೂಕುಗಳಿಗೆ ಬದುಕಿನ ಪಾಠ ಹೇಳಲಿ. ಈ ನಾಡ ಮಣ್ಣಿನಲ್ಲಿ ಮಣ್ಣಾದ ಜನಗಳ ಕತೆಯ ಸಾರಿ ಸಾರಿ ಹೇಳ ಹೊರಟ ಸೀತಕ್ಕನಂಥವರ ಸಂತತಿ ಸಾವಿರವಾಗಲಿ.