ಅವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಹಿಂದುತ್ವದ ಪ್ರಯೋಗ ಶಾಲೆಗಳೆಂದೇ ಗುರುತಿಸಲು ಶುರುಮಾಡಿ ಸುಮಾರು ಎರಡು ದಶಕಗಳೆ ಸಂದುಹೋಗಿದೆ.
ಸಂಘ ಪರಿವಾರದ ಪುರೋಹಿತಶಾಹಿ ರಿಂಗ್ ಮಾಸ್ಟರ್ಗಳ ಹಿಂದುತ್ವದ ಧರ್ಮ ಯುದ್ಧಕ್ಕೆ ಇಲ್ಲಿ ಬಿಲ್ಲವರು (ಈಡಿಗರು), ಮೊಗವೀರರಂಥ “ಕ್ಷತ್ರಿಯ” ಗುಣ-ಧರ್ಮದ ಶೂದ್ರರೇ ಕಾಲಾಳುಗಳು. ಮೇಲ್ವರ್ಗದ ಬ್ರಾಹ್ಮಣರು, ಕೊಂಕಣಿಗಳು ಅಡಗುದಾಣದಲ್ಲಿ ಕುಳಿತು ಪ್ರಚೋದಿಸುತ್ತಾರಷ್ಟೇ; ಸಾವು-ನೋವಿನ ಧರ್ಮ ರಕ್ಷಣೆಯ ರಿಸ್ಕ್ ಏನಿದ್ದರೂ ಅದು ಶೂದ್ರ ಸಮೂಹದ್ದು. ದುರಂತವೆಂದರೆ, ಕುಲಕ್ಕೆ ಮೃತ್ಯು ಕೊಡಲಿ ಕಾವು ಅಂತಾರಲ್ಲ ಹಾಗೆ, ಹಣ-ಅಧಿಕಾರದ ರುಚಿ ಸಂಘೀ ಸರದಾರರಿಂದ ಹತ್ತಿಸಲ್ಪಟ್ಟಿರುವ ಶೂದ್ರ ಮುಂದಾಳುಗಳೇ ಸನಾತನ ಸಂಸ್ಥಾನ ಸ್ಥಾಪನೆಯ ಕಾದಾಟದ ಕ್ಯಾಪ್ಟನ್ಗಳಾಗಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ನಳೀನ್ಕುಮಾರ್ ಕಟೀಲ್, ಮಾಜಿ ಮಂತ್ರಿಗಳಾದ ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ಕುಮಾರ್ರಂಥ ಹಿಂದುತ್ವದ ಅಸಲಿತನ ಅರ್ಥವಾಗದ ನೇತಾಗಳನ್ನು ಯುದ್ಧಾಂಗಣದ ಮುಂಚೂಣಿಯಲ್ಲಿ ನಿಲ್ಲಿಸಲಾಗಿದೆ.
ಕಾರ್ಕಳದ ಶಾಸಕ ಸುನಿಲ್ಕುಮಾರ್ (MLA Sunilkumar) “ಸಮಸ್ಯೆ” ವಿಭಿನ್ನವಾಗಿದೆ. ಸುನಿಲ್ ತಾನು ಬಿಲ್ಲವ ಕುಲ ಕಂಠೀರವ ಎನ್ನುತ್ತಾರೆ; ತಾನು ಹಿಂದು ಸಂಸೃತಿಯ ಕಟ್ಟರ್ ಪರಿಪಾಲಕನೆಂದು ಆರ್ಭಟಿಸುತ್ತಾರೆ. ಆದರೆ ಸುನಿಲ್ ತಂದೆ ಅಪ್ಪಟ ಬ್ರಾಹ್ಮಣ. ತಾಯಿ ಬಿಲ್ಲವ ಜಾತಿಯವರು. ಹಿಂದು ಸಂಪ್ರದಾಯದಂತೆ ಅಂತರ್ಜಾತಿ ವಿವಾಹವಾದ ದಂಪತಿಗಳ ಸಂತಾನವನ್ನು ತಂದೆಯ ಜಾತಿಯಿಂದಲೇ ಖಡ್ಡಾಯವಾಗಿ ಗುರುತಿಸಲಾಗುತ್ತಿದೆ. ಹೀಗಿರುವಾಗ ಸುನಿಲ್ ಬಿಲ್ಲವ ಹೇಗಾಗುತ್ತಾರೆ? ಇದೊಂದು ಅನುಕೂಲ ಸಿಂಧು ಹಿಂದುತ್ವದ ಹಿಕಮತ್ತಷ್ಟೇ. ಕಾರ್ಕಳದ ಶಾಸಕನಾಗುವ ಮೊದಲು ಚಿಕ್ಕಮಗಳೂರು “ಕರ್ಮ ಭೂಮಿ” ಮಾಡಿಕೊಂಡಿದ್ದ ಸುನಿಲ್ ಅಲ್ಲಿಯ ದತ್ತ ಪೀಠ-ಬಾಬಾಬುಡನ್ಗಿರಿ ವಿವಾದದಲ್ಲಿ ಬ್ರಾಹ್ಮಣನೆಂದೇ ಗುರುತಿಸಲ್ಪಟ್ಟಿದ್ದರು. ತನ್ನ ತಾಯಿಯ ತವರೂರಾದ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಬಿಲ್ಲವರು ಬಹುಸಂಖ್ಯಾತರಾಗಿರುವುದರಿಂದ ಸುನಿಲ್ ಬಿಲ್ಲವ ತಾನೆಂದು ರಾಜಕೀಯ “ಆಟ” ಶುರು ಹಚ್ಚಿಕೊಂಡಿದ್ದಾರೆ; ದುರಂತವೆಂದರೆ, ಈ ನಕಲಿ ಬಿಲ್ಲವನನ್ನು ಸ್ಥಳಿಯ ಅಸಲಿ ಬಿಲ್ಲವರು ಹಿಂದುತ್ವದ ಹಿನ್ನಲೆಯಲ್ಲಿ ಮತ್ತೆ-ಮತ್ತೆ ಶಾಸಕನಾಗಿ ಮಾಡುತ್ತಿದ್ದಾರೆ. ಆದರೆ ಈಗೀಗ ಸುನಿಲ್ರ ಹಿಂದುತ್ವದ ಬಣ್ಣ ಬಯಲಾಗಲಾರಂಭಿಸಿದೆ; ಸುಮಾರು ೧೪.೫ ಕೋಟಿ ರೂ.ಗಳ ನೀಲ ನಕ್ಷೆಯ ಕಾರ್ಳದ “ಪರಶುರಾಮ ಥೀಮ್ ಪಾರ್ಕ್” (Parashuram Theme Park) ಯೋಜನೆಯ ಅವಾಂತರ, ಅವ್ಯವಹಾರ ಸುನಿಲ್ರ ಧರ್ಮಕಾರಣದ ದಶಾವತಾರಗಳನ್ನು ಜಗಜ್ಜಾಹೀರು ಮಾಡಿಬಿಟ್ಟಿದೆ ಎಂದು ಹಿಂದುತ್ವದ ಕಾರ್ಯಕರ್ತರೇ ಆರೋಪಿಸಿ ಬೀದಿಗಿಳಿದು ಧರಣಿ-ಸತ್ಯಾಗ್ರಹ-ಪ್ರತಿಭಟನೆ ನಡೆಸುತ್ತಿದ್ದಾರೆ.
ವಿಭಜಕ ರಾಜಕಾರಣದ ದೂ(ದು)ರಾಲೋಚನೆಯದು ಎನ್ನಲಾಗುತ್ತಿರುವ ಪರಶುರಾಮ ಥೀಮ್ ಪಾರ್ಕ್ ಯೋಜನೆ ಕಟ್ಟರ್ ಹಿಂದುತ್ವದ ವ್ಯಾವಹಾರಿಕ “ಸಿದ್ಧಾಂತ”ದ ಮೂಲಕ ರಾಜಕೀಯ ರಂಗದಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಕಾರ್ಕಳದ ಶಾಸಕ ವಿ.ಸುನಿಲ್ಕುಮಾರ್ರ ಕನಸಿನ ಕೂಸು. ಪುರಾಣ ಪುರುಷ ಪರಶುರಾಮ ತುಳುನಾಡಿನ ಸೃಷ್ಟಿಕರ್ತನೆಂಬ ಸ್ಥಳಿಯರ ಧಾರ್ಮಿಕ ನೆಲೆಯ ಭಾವನಾತ್ಮಕ ನಂಬುಗೆಯನ್ನು ಬಂಡವಾಳ ಮಾಡಿಕೊಂಡು ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ ದುಬಾರಿ ಪ್ರಾಜೆಕ್ಟ್ ಸುನಿಲ್ಕುಮಾರ್ ಹೆಣೆದು ಹಲವು ಲಾಭ ಗಳಿಸಿದ್ದಾರೆಂಬ ಆರೋಪ ಕರಾವಳಿಯಲ್ಲಿ ಸಾಮಾನ್ಯವಾಗಿದೆ. ಆ ವೇಳೆ ಸುನಿಲ್ಕುಮಾರ್ಬಿಜೆಪಿಯ ಬಸವರಾಜ್ ಬೊಮ್ಮಾಯಿ ಸರಕಾರದಲ್ಲಿ ಇಂಧನ ಮತ್ತು ಕನ್ನಡ-ಸಂಸ್ಕೃತಿ ಸಚಿವನಾಗಿದ್ದರು; ವ್ಯಾಪಕ ಭ್ರಷ್ಟಾಚಾರ, ಪ್ರಜಾ ಪೀಡಣೆಯೇ ಮುಂತಾದ ಜೀವವಿರೋಧಿ ಆಡಳಿತದಿಂದ ಜನಸಾಮಾನ್ಯರಷ್ಟೇ ಅಲ್ಲ, ಹುಟ್ಟಾ ಹಿಂದುತ್ವವಾದಿ ಕಾರ್ಯರ್ಕರದೇ ತಿರಸ್ಕಾರ-ತಾತ್ಸಾರಕ್ಕೆ ತುತ್ತಾಗಿದ್ದ ಸುನಿಲ್ಕುಮಾರ್ 2023ರ ಅಸೆಂಬ್ಲಿ ಚುನಾವಣೆಯಲ್ಲಿ ಸೋಲುವ ಆತಂಕದಲ್ಲಿದ್ದ ಸಂದರ್ಭ. ಏನಾದರೂ ಮಾಡಿ ಮತ್ತೆ ಎಮ್ಮೆಲ್ಲೆ ಆಗಲೇಬೇಕೆಂಬ ಯೋಚನೆಯಲ್ಲಿ ಸುನಿಲ್ಕುಮಾರ್ ದುಂದು ಅಬ್ಬರದ ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವಗಳ ಮೂಲಕ ಜನರಿಗೆ ಮಂಕು ಬೂದಿ ಎರಚಲು ಸ್ಕೆಚ್ ಹಾಕಿದ್ದರು. ಆಗ ಸುನಿಲ್ಕುಮಾರ್ಗೆ ಹೊಳೆದಿದ್ದೇ ಈ ಪರಶುರಾಮ ಥೀಮ್ ಪಾರ್ಕ್ ಮತ್ತು ಕಾರ್ಕಳ ಉತ್ಸವಗಳಂಥ ಮೂರ್ನಾಲ್ಕು ದಿನಗಳ “ಜಾತ್ರೆ” ಗದ್ದಲ ಎಂಬ ಮಾತು ಕಾರ್ಳಳದಲ್ಲಿ ಕೇಳಿಬರುತ್ತಿದೆ.
ಪರಶುರಾಮ ಥೀಮ್ ಪಾರ್ಕ್ನಿಂದ ಕಾರ್ಕಳ ತಾಲೂಕಿನ ಆರ್ಥಿಕ, ಧಾರ್ಮಿಕ ಮತ್ತು ಸಾಮಾಜಿಕ ದಿಕ್ಕು-ದೆಸೆಯೇ ಬದಲಾಗಲಿದೆ ಎಂಬ ದೊಡ್ಡ ಪ್ರಚಾರ ನಡೆಸಿದ್ದ ಸುನಿಲ್ಕುಮಾರ್ ಚುನಾಚವಣೆಗಿದನ್ನೇ ಬಂಡವಾಳ ಮಾಡಿಕೊಂಡಿದ್ದರು. ಧರ್ಮಾಧಾರಿತ ಪ್ರವಾಸೋದ್ಯಮದ ಭರ್ಜರಿ ಯೋಜನೆಯಿದು. ಕಾರ್ಕಳದ ಬೈಲೂರು ಬಳಿಯ 400 ಅಡಿ ಎತ್ತರದ ಉಮ್ಮಿಕಲ್ ಬೆಟ್ಟದ ಬೃಹತ್ ಬಂಡೆಯ ಮೇಲೆ 33 ಅಡಿಯ ಕಂಚಿನ ಮಿಂಚು ನಿರೋಧಕ ಪರಶುರಾಮನ ವಿಗ್ರಹ ಸ್ಥಾಪನೆ; ಸುತ್ತಲಿನ 1.58 ಎಕರೆ ಪ್ರದೇಶದಲ್ಲಿ ಉದ್ಯಾನ ವನ, ಬಯಲು ರಂಗ ಮಂದಿರ, ಭಜನಾ ಮಂದಿರ, ಆಧುನಿಕ ಆಡಿಯೋ ವಿಶುವಲ್ ಮ್ಯೂಸಿಯಂ ಮತ್ತು ಪರಶುರಾಮನ ಜೀವನ ವೃತ್ತಾಂತದ ಗ್ಯಾಲರಿ ನಿರ್ಮಾಣದ ಪ್ಲಾನ್ ಹಾಕಲಾಗಿತ್ತು. ಈ ಕಾಮಗಾರಿಯನ್ನು ಸರಕಾರಿ ಸ್ವಾಮ್ಯದ “ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು.೧೫ ಟನ್ ಭಾರದ ಪರಶುರಾಮನ ಶುದ್ಧ ಕಂಚಿನ ಮೂರ್ತಿ ನಿಮಾರ್ಣಕ್ಕೆ 2.4 ಕೋಟಿರೂ.ಗಳ ಗುತ್ತಿಗೆ ಬೆಂಗಳೂರಿನ ಕ್ರಿಸ್ ಆರ್ಟ್ ವರ್ಲ್ಡ್ನ ಶಿಲ್ಪಿ ಕೃಷ್ಣ ನಾಯ್ಕರಿಗೆ ವಹಿಸಲಾಗಿತ್ತು.
ಅಸೆಂಬ್ಲಿ ಚುನಾವಣೆಗೆ ಐದಾರು ತಿಂಗಳಷ್ಟೇ ಬಾಕಿಯಿತ್ತು; ಸ್ಥಳಿಯ ಶಾಸಕರೂ ಆದ ಮಂತ್ರಿ ಸುನಿಲ್ಕುಮಾರ್ ಥೀಮ್ ಪಾರ್ಕ್ ಕೆಲಸ-ಕಾಮಗಾರಿ ಬೇಗ ಆರಂಭಿಸಲು ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಅರುಣ್ಕುಮಾರ್ಗೆ ಒತ್ತಡ ಹಾಕುತ್ತಿದ್ದರು; ತರಾತುರಿಯಲ್ಲಿ ಕಂಚಿನದೆಂದು ಹೇಳಲಾದ ಪರಶುರಾಮನ ಮೂರ್ತಿಯನ್ನು ತಯಾರಿಸಲು ಆರ್ಡರ್ ಕೊಟ್ಟ ನಾಲ್ವತ್ತೇ ದಿನದಲ್ಲಿ ತಂದು ನಿಲ್ಲಿಸಲಾಯಿತು. ಶೇಕಡಾ 50ರಷ್ಟೂ ಕೆಲಸವಾಗದ ಥೀಮ್ ಪಾರ್ಕ್ ಅಂದಿನ ಮುಖ್ಯಮಂತ್ರಿ ಬೊಮ್ಮಾಯಿ ಸಾಹೇಬರೇ ಲೋಕಾರ್ಪಣೆ ಮಾಡಿಹೋದರು. ಮಂತ್ರಿ ಸುನಿಲ್ಕುಮಾರ್ರನ್ನು ಗುಣಗಾನ ಮಾಡುವ ಮೂರು ದಿನದ ಧಾರ್ಮಿಕ-ಸಾಂಸ್ಕೃತಿಕ ಅದ್ಧೂರಿಯ ಜನಜಾತ್ರೆಯೇ ನಡೆಯಿತು; ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಓಡಾಡಿದ ಮಂತ್ರಿ ಸುನಿಲ್ಕುಮಾರ್ ಸಾವಿರಾರು ಜನರಿಂದ ಶಂಖ ಊದಿಸಿ ಧರ್ಮಕಾರಣದ ಚುನಾವಣಾ ಪ್ರಚಾರ ರಥಕ್ಕೆ ಪರೋಕ್ಷವಾಗಿ ಚಾಲನೆ ಕೊಟ್ಟಿದ್ದರೆಂದು ಕಾರ್ಕಳದ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ.
2023ರ ಅಸೆಂಬ್ಲಿ ಇಲೆಕ್ಷನ್ಗೆ ಕೆಲವೇ ತಿಂಗಳು ಬಾಕಿಯಿರುವಾಗ ಭರ್ಜರಿಯಾಗಿ ನಡೆಸಲಾದ ಪರಶುರಾಮ ಥೀಮ್ ಪಾರ್ಕ್ ಮತ್ತು ಪರಶುರಾಮ ವಿಗ್ರಹ ಅನಾವರಣ ಕಾರ್ಯಕ್ರಮವಿದೆಯಲ್ಲ, ಅದು ಅಂದು ಸಚಿವರಾಗಿದ್ದ ಶಾಸಕ ಸುನಿಲ್ಕುಮಾರ್ರ ಚುನಾವಣಾ ಪ್ರಚಾರದ ಉದ್ಘಾಟನೆ ಆಗಿತ್ತೆಂಬ ಮಾತು ಕಾರ್ಕಳದಲ್ಲಿ ಇವತ್ತಿಗೂ ಚಾಲ್ತಿಯಲ್ಲಿದೆ! ವ್ಯಾಪಕ ಪ್ರಚಾರಮಾಡಿ ಮೂರು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಜನ ಜಾತ್ರೆ ಹಮ್ಮಿಕೊಳ್ಳಲಾಗಿತ್ತು. ಹೆಸರಾಂತ ಸಿನೆಮಾ ನಟರು, ಹಾಡುಗಾರರು, ಯಕ್ಷಗಾನ ಕಲಾವಿದರೇ ಮುಂತಾದ ವಿವಿಧ ರಂಗದ ಸೆಲಿಬ್ರಿಟಿಗಳನ್ನು ಕರೆಸಿ ಮನರಂಜನೆ ಕಾರ್ಯಕ್ರಮ ನಡೆಸಲಾಗಿತ್ತು. ಯಾವ ಮಟ್ಟದಲ್ಲಿ ಸುನಿಲ್ಕುಮಾರ್ ಪ್ರಚಾರ ನಡೆಯಿತೆಂದರೆ,ಬಯಲು ರಂಗಮಂದಿರದಲ್ಲಿ ಹಾಕಲಾಗಿದ್ದ ಎಲ್ಇಡಿ ಪರದೆಗಳ ಮೇಲೆ ಒಮ್ಮೆ ಪರಶುರಾಮ ಬಂದರೆ, ಮತ್ತೊಮ್ಮೆ ಸುನಿಲ್ ವಿಜೃಂಭಿಸುತ್ತಿದ್ದರು. ಲಕ್ಷಾಂತರ ಜನರು ಸೇರಿದ್ದ ಮನರಂಜನಾ ಕಾರ್ಯಕ್ರಮದಲ್ಲಿ ವಂದಿಮಾಗಧರು ಸುನಿಲ್ರನ್ನು ಯಾವ ಮಟ್ಟಕ್ಕೆ ಅಟ್ಟಕ್ಕೇರಿಸಿದರೆಂದರೆ ಕರಾವಳಿಯ ಸೃಷ್ಟಿಕರ್ತ ಪರಶುರಾಮನನ್ನೇ “ಮರು ಸೃಷ್ಟಿ” ಮಾಡಿದ ಅಭೂತಪೂರ್ವ ನಾಯಕನೆಂದು ಕೊಂಡಾಡಿದರು; ಮುಂದಿನ ಮುಖ್ಯಮಂತ್ರಿ ಎಂದರು; ಸುನಿಲ್ರನ್ನು ಹೆಂಡತಿ ಮಕ್ಕಳ ಸಮೇತ ವೇದಿಕೆಗೆ ಕರೆಸಿ ಹಾರಹಾಕಿ, ತುರಾಯಿ ಕಟ್ಟಿ, ಬೆಳ್ಳಿ ಕೊಡಲಿ ಕೊಟ್ಟು ಕುಣಿದಾಡಿದರು.
ಸುನಿಲ್ಕುಮಾರ್ರನ್ನು ವೈಭವೀಕರಿಸುವ ಈ ಅಸಮರ್ಪಕ-ಪೂರ್ಣ ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೆ ಸರಕಾರಿ ಬೊಕ್ಕಸದಿಂದ ಬರೋಬ್ಬರಿ 2,18,33,270 ರೂ.ಖರ್ಚು ಮಾಡಲಾಗಿದೆ! “ಜಾತ್ರೆ”ಯ ಉಸ್ತುವಾರಿ ನೋಡಿಕೊಂಡಿದ್ದು ಅಂದಿನ ಮಂತ್ರಿ ಸುನಿಲ್ ಸುಪರ್ದಿಯಲ್ಲಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ರಾಜಕೀಯ ಲಾಭ ಪಡೆಯುವ ಉದ್ದೇಶದ ಈ ಫಂಕ್ಷನ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 1 ಕೋಟಿ 93 ಲಕ್ಷ ಪಡೆದಿದ್ದರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ 25 ಲಕ್ಷ ಖರ್ಚು ಹಾಕಲಾಗಿತ್ತು. ಅದೇ ಪ್ರಕಾರ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಮಲೆನಾಡು ಅಭಿವೃದ್ಧಿ ಪ್ರಾಧಿಕಾರಗಳಿಂದಲೂ ದುಡ್ಡು ಪಡೆಯಲಾಗಿತ್ತು. ಒಟ್ಟಿನಲ್ಲಿ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆಯಂತಾಗಿತ್ತು ಎಂದು ಕಾರ್ಕಳದ ಜನರು ಹೇಳುತ್ತಾರೆ .
ಪರಶುರಾಮ ಥೀಮ್ ಪಾರ್ಕ್ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾದ (27-1-2023) ಕೆಲವೇ ದಿನದಲ್ಲಿ ಅನುಮಾನ, ಅಸಮಧಾನ ಸಾರ್ವಜನಿಕ ವಲಯದಲ್ಲಿ ಶುರುವಾಯಿತು. ಇದೊಂದು ನಕಲಿ ಪ್ರತಿಮೆ; ಮಿಂಚು ನಿರೋಧಕ ಕಂಚಿನದ್ದೆಂದು ಸುನಿಲ್ಕುಮಾರ್ ಕಾರ್ಕಳದ ಜನರನ್ನು ಯಾಮಾರಿಸಿದ್ದಾರೆ; ಜನರ ಧಾರ್ಮಿಕ ಭಾವುಕತೆಯನ್ನು ಇಲೆಕ್ಷನ್ ಗೆಲ್ಲಲು ಬಳಸಿಕೊಂಡು ಮೋಸ ಮಾಡಿದ್ದಾರೆ; ಜನರ ಧಾರ್ಮಿಕ ಭಾವನೆ ಘಾಸಿಗೊಳಿಸಿದ್ದಾರೆ ಎಂಬ ಪುಕಾರುಗಳು ಭುಗಿಲೇಳ ತೊಡಗಿತು. ನೋಡು ನೋಡುತ್ತಿದ್ದಂತೆಯೇ ಪರಶುರಾಮ ಪ್ರತಿಮೆಯ ಕಾಲಿನಲ್ಲಿ ಬಿರುಕು ಕಾಣಿಸಿಕೊಂಡಿತು; ಪರಶುರಾಮನ ಕೊಡಲಿಯ ತುಂಡೊಂದು ಹಾರಿಹೋಯಿತು! ಮೂರ್ತಿಯ ಬಣ್ಣ ಮಾಸಲಾರಂಭಿಸಿತು. ಈ ದರ್ಬಲ ಮೂರ್ತಿ ಉರುಳುವ ಭೀತಿ ಜನರಲ್ಲಿ ಮೂಡಿತು. ಮೂರ್ತಿಯೇನಾದರೂ ಕುಸಿದರೆ ಗುಡ್ಡದ ಬುಡದಲ್ಲಿರುವ 15-20 ಮನೆಗಳ ಜೀವರಾಶಿಗೆ ಗಂಡಾತರ ಎಂಬ ಆತಂಕ ಶುರುವಾಯಿತು. ಆಗ ಗಡಿಬಿಡಿಗೆ ಬಿದ್ದ ನಿರ್ಮಿತಿ ಕೇಂದ್ರ ಅಧಿಕಾರಿಗಳು ಮತ್ತು ತಾಲೂಕಾಡಳಿತ ಪ್ರತಿಮೆಯ ಸುತ್ತ ಕಬ್ಬಿಣದ ಸರಳುಗಳ ಸ್ಟಾಂಡ್ ಕಟ್ಟಿದರು; ತಿಂಗಳಿಗೊಮ್ಮೆ ವಿಗ್ರಹಕ್ಕೆ ಕಂಚಿನ ಕಲರ್ ಬಳಿದು ಪರಶುರಾಮ ಮಿರುಗುವಂತೆ ನೋಡಿಕೊಂಡು ಮಂತ್ರಿಗಳ ಬಣ್ಣ ಬಯಲಾಗದಂತೆ ಎಚ್ಚರ ವಹಿಸಿದರು ಎಂದು ಸ್ಥಳಿಯ ಸಂಘ ಪರಿವಾರದ ಬಂಡುಕೋರರು ಇವತ್ತಿಗೂ ಡಂಗುರ ಸಾರುತ್ತಲೇಯಿದ್ದಾರೆ.
ಇದು ಪಕ್ಕಾ ನಕಲಿ ಪ್ರತಿಮೆ; 15 ಟನ್ ಕಂಚು ಬಳಸಿ ತಯಾರಿಸಿದ ವಿಗ್ರಹದಂತೆ ಇದೆನ್ನಿಸುತ್ತಿಲ್ಲ. ಮೂರ್ತಿ ಬೆಂಗಳೂರಿಂದ ತರಿಸಿದ್ದಲ್ಲ; ಸ್ಥಳಿಯ ಕಲಾವಿದರ್ಯಾರೋ ನಿರ್ಮಿಸಿದ್ದಾರೆ; ಇದು ಪ್ಲಾಸ್ಟರ್ ಆಫ್ ಪ್ಯಾರೀಸ್ ಪುತ್ಥಳಿ ಎಂಬ ಸಂಶಯ, ಆರೋಪಗಳ ಚರ್ಚೆಗಳು ಜೋರಾಗ ತೊಡಗಿತು. ಅದೇ ಹೊತ್ತಿಗೆ ಅಸೆಂಬ್ಲಿ ಇಲೆಕ್ಷನ್ ಘೋಷಣೆಯಾಯಿತು. ಚುನಾವಣೆಯ ಆರ್ಭಟದಲ್ಲಿ ಡೆಮೋ ಪರಶುರಾಮ ಪುರಾಣ ಕೊಂಚ ಗೌಣವಾಯಿತು; ಚುನಾವಣಾ ರಣರಂಗದಲ್ಲಿ ಸಚಿವ ಸುನಿಲ್ಗೆ ಸೆಡ್ಡು ಹೊಡೆದು ಮುಖಾಮುಖಿಯಾಗಿ ನಿಂತಿದ್ದ ಉಗ್ರ ಬಲಪಂಥೀಯ ಆಕ್ರಮಣಕಾರ-ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ದಿನಕ್ಕೊಂದು ಭ್ರಷ್ಟಾಚಾರ, ಅಕ್ರಮ, ಅವ್ಯವಹಾರ, ಢೋಂಗಿ ಹಿಂದುತ್ವ ಆರೋಪ-ದಾಖಲೆ ಬಿಡುಗಡೆ ಮಾಡುತ್ತ, ತಾರಕ ಸ್ವರದಲ್ಲಿ ಭಾಷಣ ಬಿಗಿಯುತ್ತಿದ್ದುದೇ ಆಗ ರೋಚಕತೆಯ ಸಮಾಚಾರವಾಗಿತ್ತು. ಕೇಸರಿ ಕಮಾಂಡರ್ ಮುತಾಲಿಕ್ ಧಾಳಿಯಿಂದ ಸುನಿಲ್ ಅದ್ಯಾವ ಪರಿ ತತ್ತರಿಸಿ ಹೋದರೆಂದರೆ, ಗೆಲ್ಲಲು ಲೀಟರ್ ಗಟ್ಟಲೆ ಬೆವರು, ಟನ್ ಗಟ್ಟಲೆ ಕಾಸು ಹರಿಸಬೇಕಾಯಿತೆಂದು ಸ್ಥಳಿಯ ಚುನಾವಣಾ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಸುನಿಲ್ರ ಲಾಭಕೋರ ಹಿಂದುತ್ವದಿಂದ ಬೇಸತ್ತು ಸಿಡಿದೆದ್ದಿತ್ತೆನ್ನಲಾದ ಹಿಂದುತ್ವದ ಒಂದು ಬಣವಂತೂ ಸುನಿಲ್ಗೆ ಮಾಜಿ ಮಾಡಲು ಪಣ ತೊಟ್ಟಿತ್ತು. ಸೋತೇ ಹೋದರೆಂದು ಭಾವಿಸಿದ್ದ ಸುನಿಲ್ ಹಿಂದುತ್ವದ “ಕರ್ಮ” ಭೂಮಿಯಲ್ಲೇ ಕೂದಲೆಳೆ ಅಂತರದಲ್ಲಿ ಬಚಾವಾದರು. ಅವಿಭಜಿತ ದಕ್ಷಿಣ ಕನ್ನಡದಲ್ಲಿ ಕೇಸರಿ ಕ್ಯಾಂಡಿಡೇಟ್ಗಳೆಲ್ಲ ದೊಡ್ಡ ಅಂತರದಲ್ಲೇ ಗೆದ್ದರೆ ಸುನಿಲ್ ಮಾತ್ರ ತಿಣುಕಾಡಿ ಕೇವಲ 4,602 ಮತದಿಂದ ಚುನಾಯಿತರಾದರು.
ಪ್ರತಿಮೆ ಕಂಚಿನದ್ದಲ್ಲ; ಥೀಮ್ ಪಾರ್ಕ್ ಹೆಸರಲ್ಲಿ ದೊಡ್ಡ ಅವ್ಯವಹಾರ-ಅವಾಂತರ ನಡೆದಿದೆ; ಥಿಮ್ ಪಾರ್ಕ್ ನಿರ್ಮಾಣಕ್ಕೆ ಅರಣ್ಯ,ಪರಿಸರವೇ ಮುಂತಾದ ಸರಕಾರಿ ಇಲಾಖೆಗಳದೆ ಅನುಮತಿ ಸಿಕ್ಕಿಲ್ಲ. ಎಲ್ಲ ಕಾನೂನು ಧಿಕ್ಕರಿಸಿ ಗೋಮಾಳದಲ್ಲಿ ಪರಶುರಾಮ ಪ್ರತಿಮೆ ಮತ್ತಿತರ ಕಟ್ಟಡಗಳನ್ನು ಸ್ಥಾಪಿಸಲಾಗಿದೆ ಎಂಬುದಕ್ಕೆ ಬೇಕಷ್ಟು ಪುರಾವೆಗಳು ಆರ್ಟಿಐ ಕಾನೂನಿನಡಿ ಹಿಂದುತ್ವ ಕಾರ್ಯಕರ್ತರು ಪಡೆದಿರುವ ದಾಖಲೆಗಳು ಸಾರಿ ಸಾರಿ ಹೇಳುತ್ತವೆ! ಯರ್ಲಪಾಡಿ ಗ್ರಾಮ ಪಂಚಾಯತ್ 2019ರಲ್ಲಿ ಉಮ್ಮಿಕಲ್ ಕುಂಜದ ಸರ್ವೆ ನಂಬರ್: 329/1ರ 1.58 ಎಕರೆ ಪ್ರದೇಶವನ್ನು ಪರಶುರಾಮ್ ಥೀಮ್ ಪಾರ್ಕ್ಗಾಗಿ ಕಾಯ್ದಿರಿಸುವಂತೆ ಕಾರ್ಕಳ ತಹಶೀಲ್ದಾರ್ರನ್ನು ಕೋರುವ ನಿರ್ಣಯ ಕೈಗೊಳ್ಳತ್ತದೆ. ತಹಶೀಲ್ದಾರ್ ಈ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಗಳ ಗಮನಕ್ಕೆ ತರುತ್ತಾರೆ.
ಜಿಲ್ಲಾಧಿಕಾರಿ ಅರಣ್ಯ ಇಲಾಖೆಯ ಅಭಿಪ್ರಾಯ ಕೇಳುತ್ತಾರೆ.ಅರಣ್ಯ ಇಲಾಖೆಯಿಂದ ಈ ಪ್ರಸ್ತಾವನೆ ರಾಜ್ಯ ಸರಕಾರಕ್ಕೆ ರವಾನೆಯಾಗುತ್ತದೆ. ಸದ್ರಿ ಜಾಗ ಗೋಮಾಳದ ವ್ಯಾಪ್ತಿಯಲ್ಲಿರುವುದರಿಂದ ಅನ್ಯ ಉದ್ದೇಶಕ್ಕೆ ಬಳಸುವಂತಿಲ್ಲವೆಂದು ಅಧಿಕಾರಿಗಳು ಹೇಳುತ್ತಾರೆ. ಆಡಳಿತಾರೂಢ ಬಿಜೆಪಿಯ ಪ್ರಭಾವಿ ಶಾಸಕ ಸುನಿಲ್ಕುಮಾರ್ ಜಾಗಕ್ಕಾಗಿ ಶತಾಯಗತಾಯ ಪ್ರಯತ್ನ ಮಾಡುತ್ತಾರೆ. ಆಗ ಬರೋಬ್ಬರಿ ಆರು ತಿಂಗಳು ಸರ್ವೆ ನಡೆಯುತ್ತದೆ. ಅಂತಿಮವಾಗಿ ದಿ.18-3-2023ರಂದು ಕಂದಾಯ ಇಲಾಖೆಯ ಆಧೀನ ಕಾರ್ಯದರ್ಶಿ ಇದು ಗೋಮಾಳ ಆಗಿರುವುದರಿಂದ ಪ್ರಸ್ತಾವಿತ ಉದ್ದೇಶ (ಥೀಮ್ ಪಾರ್ಕ್)ಕ್ಕೆ ಮಂಜೂರಿ ಮಾಡಲು ಅವಕಾಶವಿರುವುದಿಲ್ಲ-ಎಂದು ಪ್ರಸ್ತಾವನೆಯನ್ನು ತಿರಸ್ಕರಿಸುತ್ತಾರೆ.
ಆ ಹೊತ್ತಿಗೆ ಸುನಿಲ್ಕುಮಾರ್ ಸಚಿವ ಸ್ಥಾನ ಬಲದಿಂದ ಗೋಮಾಳ ಜಾಗದಲ್ಲೇ ಹಠದಿಂದ ಪರಶುರಾಮನ ಪ್ರತಿಮೆ ಮತ್ತು ಥೀಮ್ ಪಾರ್ಕ್ ಅಕ್ರಮವಾಗಿ ನಿರ್ಮಿಸಿ ಅಂದಿನ ಸಿಎಂ ಬೊಮ್ಮಾಯಿ ಕೈಯ್ಯಿಂದ ಲೋಕಾರ್ಪಣೆ ಮಾಡಿಸಿ ಒಂದೂ ಮುಕ್ಕಾಲು ತೀಂಗಳು ಕಳೆದಿರುತ್ತದೆ.ಅಷ್ಟೇ ಅಲ್ಲ ಭೂಮಿ ಮಂಜೂರಾತಿ ಮತ್ತಿತರ ಒಪ್ಪಿಗೆಯಿಲ್ಲದೆ ಮೂರ್ತಿ ತಯಾರಿಕೆ,ಕಟ್ಟಡಗಳ ಸ್ಥಾಪನೆ ಮತ್ತು “ವಿವಿಧವಿನೋದಾವಳಿ” ಕಾರ್ಯಕ್ರಮಕ್ಕೆ ಸರಕಾರದ ಬೇರೆ-ಬೇರೆ ಇಲಾಖೆಯಿಂದ 6,71,92,943 ರೂ. ಪಡೆಯಾಲಾಗಿದೆ. ಯಾವುದೇ ಪ್ರಸ್ತಾವನೆ ಇಲ್ಲದೆ ಇಷ್ಟು ದೊಡ್ಡ ಮೊತ್ತದ ಹಣ ಸರಕಾರದಿಂದ ಹೇಗೆ ಬಿಡುಗಡೆಯಾಯಿತು? ಅನುಮೋದನೆಯೇ ಇಲ್ಲದ ಕಾಮಗಾರಿಗೆ ಸರಕಾರ ಕಾರ್ಯಾದೇಶ ನೀಡಲು ಸಾಧ್ಯವೇ? ಎಲ್ಲ ಮಂತ್ರಿ ಮಹಿಮೆ ಎಂಬ “ಜೋಕ್” ಕಾರ್ಕಳದಲ್ಲಿ ಕೇಳಿಬರುತ್ತಿದೆ
ಕಾರ್ಕಳದ ಅರ್ಧ ಕಂಚು-ಅರ್ಧ ಗ್ಲಾಸ್ ಫೈಬರ್ನ ಪರಶುರಾಮ ಪುತ್ಥಳಿ ಪುರಾಣ ಬಗೆದಷ್ಟೂ ಬಿಚ್ಚಿಕೊಳ್ಳುತ್ತದೆ.ಈ ಮೂರ್ತಿ ತಯಾರಿಕೆ ಮತ್ತು ಸ್ಥಾಪನೆಯ ಜವಾಬ್ದಾರಿ ಉಡುಪಿಯ ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ಕುಮಾರ್ಗೆ ಮೂರ್ತಿಯ ತಯಾರಿಕೆ ಅಥವಾ ಸಾಗಾಣಿಕಾ ವಿವರ ಕೇಳಿದರೆ-ಮೂರ್ತಿ ರಚನೆ ಕಾಮಗಾರಿ ಇನ್ನೂ ಪೂರ್ತಿಗೊಂಡಿಲ್ಲ; ಹಾಗಾಗಿ ಮಾಹಿತಿ ಲಭ್ಯವಿಲ್ಲ- ಎಂಬ ಉತ್ತರ ಬರುತ್ತದೆ! ತಮಾಷೆಯೆಂದರೆ, ಶಾಸಕ ಸುನಿಲ್ಕುಮಾರ್ ಅಧ್ವರ್ಯದಲ್ಲಿ ಬೈಲೂರು ಬಳಿಯ ಉಮ್ಮಿಕಲ್ ಗುಡ್ಡದ ಮೇಲೆ “ಹಿಂದುತ್ವ”ದ ವಿಧಿವಿಧಾನದಲ್ಲಿ ಪರಶುರಾಮನ ಪ್ರತಿಮೆ ಪ್ರತಿಷ್ಠಾಪಿಸಿ ಆಗಿನ ಮುಖ್ಯಮಂತ್ರಿಗಳಿಂದಲೇ ಅಪಾರ ಜನರೆದುರು ಲೋಕಾರ್ಪಣೆ ಮಾಡಿಸಲಾಗಿದೆ.
ಆರ್ಟಿಐನಲ್ಲಿ ಅಧಿಕಾರಿಳು ಕೊಟ್ಟಿರುವ ಈ ಉತ್ತರ ಜನಮಾನಸದಲ್ಲಿ ಮೂಡಿರುವ ಅನೇಕ ಅನುಮಾನ ಖಾತ್ರಿ ಪಡಿಸುವಂತಿದೆ; ಜನರನ್ನು ಯಾಮಾರಿಸಲೆಂದೇ ನಕಲಿ ಮೂರ್ತಿ ನಿಲ್ಲಿಸಿ ಅಸಲಿ ಎಂದು ಬಿಂಬಿಸಲಾಗಿತ್ತು ಎಂಬುದು ಖಾತ್ರಿ ಮಾಡುವಂತಿದೆ. ಬೆಂಗಳೂರಿನ ಕ್ರಿಸ್ ಆರ್ಟ್ ವರ್ಲ್ಡ್ ಎಂಬ ಮೂರ್ತಿ ತಯಾರಿಕಾ ಕಂಪನಿಗೆ ಪರಶುರಾಮನ ಪ್ರತಿಮೆಗಾಗಿ 2.4 ಕೋಟಿ ರೂ.ಗಳ ಗುತ್ತಿಗೆ ಕೊಡಲಾಗಿತ್ತು. ಈ ಕಂಪನಿಯ ಕೊಟೇಶನ್ ನಿರ್ಮಿತಿ ಕೇಂದ್ರಕ್ಕೆ 6-12-2022ರಂದು ಬರುತ್ತದೆ. ಕೇವಲ ಎಂಟೊಂಭತ್ತು ದಿನ(15-12-2022)ದಲ್ಲಿ ವರ್ಕ್ ಆರ್ಡರ್ ಕೊಡಲಾಗುತ್ತದೆ. ಈ ಅಕ್ರಮ ಕಾರ್ಯಾಚರಣೆಯಲ್ಲಿ ಕಾನೂನನ್ನು ಯಾವ ಥರ ಮನಸೋ ಇಚ್ಛೆ ಕಡೆಗಣಿಸಲಾಗಿದೆಯೆಂದರೆ, ಕೊಟೇಶನ್ ಮತ್ತು ಕಾರ್ಯಾದೇಶಕ್ಕೂ ಮೊದಲೆ ತಲಾ 50 ಲಕ್ಷದಂತೆ ಎರಡು ಬಿಲ್ನಲ್ಲಿ 1 ಕೋಟಿ ರೂ.ಕ್ರಿಸ್ ಆರ್ಟ್ ವರ್ಲ್ಡ್ನವರಿಗೆ ಸಂದಾಯವಾಗಿದೆ. ಪರಶುರಾಮನ ತಯಾರಿಕೆ “ಪ್ರಕ್ರಿಯೆ”ಯಲ್ಲಿ ಅಕ್ರಮಗಳ ಜತೆ “ಅದ್ಭುತ”ಗಳೂ ಘಟಿಸಿವೆಯೆಂದು ಕಾರ್ಕಳದ ಜನ ಆಡಿಕೊಳ್ಳುತ್ತಿದ್ದಾರೆ. ಅದೆಂದರೆ,ಕ್ರಿಸ್ ಆರ್ಟ್ನ “ಶಿಲ್ಪಿ”ಗಳು ಕೇವಲ 44 ದಿನದಲ್ಲಿ 33 ಅಡಿಯ 15 ಟನ್ ತೂಕದ ಕಂಚಿನ ಬೃಹತ್ ಪುತ್ಥಳಿಯನ್ನು ತಯಾರಿಸಿ ಬೆಂಗಳೂರಿಂದ ಕಾರ್ಕಳಕ್ಕೆ ಸಾಗಿಸಿದ್ದಾರೆ! ಇದು ಯಾವ ಟೆಕ್ನಾಲಜಿಯಲ್ಲೂ ಸಾಧ್ಯವಿಲ್ಲದ “ಪವಾಡ” ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ವಿಚಿತ್ರವೆಂದರೆ,ಕೋಟ್ಯಾಂತರ ರೂ.ಗಳ ಈ ಬೃಹದಾಕಾರದ ವಿಗ್ರಹದ ಸಾಗಾಣಿಕಾ ವಿವರ ನಿರ್ಮಿತಿ ಕೇಂದ್ರ ಅಧಿಕಾರಿಗಳಲ್ಲಿಲ್ಲ! 50 ಸಾವಿರ ರೂಗಳಿಗಿಂತ ಹೆಚ್ಚಿನ ಸರಕು ಸಾಗಾಣಿಕೆಗೆ ಇ-ವೇ ಬಿಲ್ ಖಡ್ಡಾಯ. ಸಾಗಾಣಿಕಾ ವಿವರ ಕೇಳಿದರೆ, ನಿರ್ಮಿತಿ ಕೇಂದ್ರದವರು ಮೂರ್ತಿಯೇ ತಯಾರಾಗಿಲ್ಲ; ವಿವರ ಹೇಗೆ ಕೊಡುವುದು ಎನ್ನುತ್ತಾರೆ. ಹಾಗಿದ್ದರೆ ಉಮ್ಮಿಕಲ್ ಬೆಟ್ಟದಲ್ಲಿ ನಿಲ್ಲಿಸಲಾಗಿದ್ದ, ಈಗ ತೆರವು ಮಾಡಲಾಗಿರುವ ಪ್ರತಿಮೆ ಯಾವುದು?! ಈ ಪ್ರಶ್ನೆಗೆ ಉತ್ತರ ಗೊತ್ತಿರುವುದು ಶಾಸಕ ಸುನಿಲ್ಕುಮಾರ್ಗೆ ಮಾತ್ರವೆಂದು ಕಾರ್ಕಳದ ಮಂದಿ ಹೇಳುತ್ತಾರೆ.
ನಕಲಿ ಪರಶುರಾಮ ಮೂರ್ತಿ ಮತ್ತು ಭ್ರಷ್ಠಾಚಾರದ ಆರೋಪಗಳಿಂದ ಕಂಗಾಲಾಗಿದ್ದ ಸಚಿವ ಸುನಿಲ್ ಚುನಾಚಣೆ ಮುಗಿಯುವವರೆಗೆ ಹೇಗೆಹೇಗೋ ಪರಿಸ್ಥಿತಿ ನಿಭಾಯಿಸಿದರು. ಚುನಾವಣೆಯಲ್ಲಿ ಗೆದ್ದಿದ್ದೇ ತಡ ಗದ್ದಲ ಶುರುಹಚ್ಚಿಕೊಂಡರು! ಚುನಾವಣಾ ರಣ ಕಣದಲ್ಲಿ ತನ್ನನ್ನು ಅಡಿಗಡಿಗೆ ಕಾಡಿದ ಮುತಾಲಿಕ್ ಮತ್ತವರನ್ನು ಬೆಂಬೆಲಿಸಿದ ಸ್ಥಳಿಯ ಹಿಂದುತ್ವ ತಂಡದ ಮೇಲೆ ಸುನಿಲ್ ವಿಜಯೋತ್ಸವ ಭಾಷಣದಲ್ಲಿ ಮುರಕೊಂಡು ಬಿದ್ದರು. ಮುತಾಲಿಕ್ ಹಿಂದುತ್ವದ ಮುಖವಾಡದ ಡೀಲ್ ಮಾಸ್ಟರ್ ಎಂದು ಮೂದಲಿಸಿದರು; ಉತ್ತರ ಕರ್ನಾಟಕದ ಹಿಂದುಗಳನ್ನೇ ಹಣಕ್ಕಾಗಿ ಟೈಗರ್ ಗ್ಯಾಂಗ್ನಿಂದ ಹಲವು ಬಾರಿ ಕೊಲೆ ಮಾಡಿಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿದರು.
ಇದರಿಂದ ಕೆರಳಿದ ಮುತಾಲಿಕ್ ಹಿಂಬಾಲಕರು ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಕಾಮಗಾರಿ, ಉದ್ಘಾಟನಾ ಕಾರ್ಯಕ್ರಮದ ಹೆಸರಲ್ಲಿ ಕೋಟ್ಯಾಂತರ ರೂ.ಅವ್ಯವಹಾರವಾಗಿದೆ; ಕಂಚಿನದೆಂದು ಗ್ಲಾಸ್ ಫೈಬರ್ನ ಪರಶುರಾಮ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ವಿಷ್ಣುವಿನ 6ನೇ ಅವತಾರವೆಂದು ನಂಬುವ ಪರಶುರಾಮನಿಗೆ ಪ್ರಚಾರ ಮಾಡಿ ಹಿಂದುಗಳ ಭಾವನೆಯ್ನು ಘಾಸಿಗೊಳಿಸಲಾಗಿದೆ; ಪುತ್ಥಳಿಯ ನೈಜತೆ-ಪರಿಶುದ್ಧತೆ ಬಗ್ಗೆ ಸಮಗ್ರ ತನಿಖೆ ಆಗಬೇಕೆಂದು ಹೋರಾಟ ಆರಂಭಿಸಿದರು; ಬಂಡುಕೋರ ಕೇಸರಿ ತಂಡದ ಪ್ರಮುಖ ಕಾರ್ಯಕರ್ತೆ ದಿವ್ಯಾ ನಾಯಕ್ ಮಾಹಿತಿ ಹಕ್ಕು ಕಾಯದೆಯಡಿ ಪರಶುರಾಮ್ ಥೀಮ್ ಪಾರ್ಕ್ಗೆ ಸಂಬಂಧಿಸಿದ ದಾಖಲೆ ಪಡದುಕೊಂಡರು. ಈ ಒಂದೊಂದು ದಾಖಲೆ ಪರಶುರಾಮ ಪ್ರತಿಮೆ ತಯಾರಿಕೆಯ ಖೋಟಾ ಕೊಟೇಶನ್ನಿಂದ ಹಿಡಿದು ಪಾರ್ಕ್ ನಿರ್ಮಾಣದ ಕಾಮಗಾರಿವರೆಗೆ, ಅಲ್ಲಿಂದ ಉದ್ಘಾಟನಾ ಸಮಾರಂಭದ ಮೋಜು-ಮಜಾ ವರೆಗಿನ ಪ್ರತಿ ಹಂತದಲ್ಲಿ ಕೋಟಿಗಳೆ ಲೆಕ್ಕದ ಅವ್ಯಹಾರ, ಕಾನೂನು ಉಲ್ಲಂಘನೆ ಮತ್ತು ಹಿಂದುತ್ವದ ಮುಖವಾಡದಡಿ ಮೋಸ-ವಂಚನೆ ಯೋಜನಾ ಬದ್ಧವಾಗಿ ನಡೆದಿವುದನ್ನು ಎಳೆಎಳೆಯಾಗಿ ಸ್ಪಷ್ಟಪಡಿಸುವಂತಿತ್ತು. ಹಿಂದುತ್ವದ ಭೀನ್ನಮತೀಯರು ಈ ಧಾಖಲೆ, ಪುರಾವೆಗಳನ್ನು ಬಹಿರಂಗಪಡಿಸಿ ಹಿಂದುತ್ವದ ರಾಜಕಾರಣಿ ಸುನಿಲ್ ವಿರದ್ಧ ಯುದ್ಧ ಸಾರಿಬಿಟ್ಟರು!
ಪ್ರತಿಭಟನೆಯ ಧ್ವನಿಗೆ ಶಾಸಕ ಸುನಿಲ್, ಡಿಸಿ, ಎಸಿ, ತಹಶೀಲ್ದಾರ್ ಮತ್ತು ನಿರ್ಮಿತಿ ಕೇಂದ್ರದ ನಿರ್ದೇಶಕ ಅರುಣ್ಕುಮಾರ್ ಬೆಚ್ಚಿಬಿದ್ದರು!! ಜಿಲ್ಲಾಡಳಿತ ಥೀಮ್ ಪಾರ್ಕ್ಗೆ ಸಾರ್ವಜನಿಕರು ಪ್ರವೇಶಿಸದಂತೆ 2023ರ ಜೂನ್ 25ರಂದು ಆದೇಶ ಹೊರಡಿಸಿತು; ಪರಶುರಾಮ ಪ್ರತಿಮೆ ಮತ್ತು ಪಾರ್ಕ್ನ ನ್ಯೂನತೆ ಜನರ ಕಣ್ಣಿಂದ ತಪ್ಪಿಸುವ ತಂತ್ರಗಾರಿಕೆ ಇದಾಗಿತ್ತೆನ್ನಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದರೂ ಜಿಲ್ಲಾಡಳಿತ ಮಾತ್ರ ಬಿಜೆಪಿ ಶಾಸಕ ಸುನಿಲ್ ಮರ್ಜಿ-ಮುಲಾಜಲ್ಲಿದೆ ಎಂದು ಪ್ರತಿಭಟನಾಕಾರರು ಆರೋಪಿಸುತ್ತಾರೆ. ಒಂದೆಡೆ ನಕಲಿ ಪ್ರತಿಮೆ ಮತ್ತು ಶಾಸಕ ಸುನಿಲ್ಕುಮಾರ್ರ ಢೋಂಗಿ ಹಿಂದುತ್ವ ಮತ್ತು ಅವ್ಯವಹಾರ ಬಯಲಾಗಿಸುವ ಪ್ರತಿಭನೆ ಜೋರಾದರೆ, ಮತ್ತೊಂದೆಡೆ ಜಿಲ್ಲಾಡಳಿತ ರಿಪೇರಿ ನೆಪದಲ್ಲಿ ಪರಶುರಾಮನ ಮೂರ್ತಿಗೆ ಕಪ್ಪು ಟಾರ್ಪಲ್ನಿಂದ ಸುತ್ತಿ ದೂರದಿಂದಲೂ ಕರ್ಮಕಾಂಡ ಕಾಣದಂತೆ ನೋಡಿಕೊಂಡಿದೆ ಎಂದು ಜನರು ಹೇಳುತ್ತಾರೆ.
ಶಾಸಕ ಸುನಿಲ್ರ ರಾಜಕೀಯ ಉತ್ಕರ್ಷೆಗೆ ಕೋಟಿ-ಕೋಟಿ ಸರಕಾರಿ ಹಣ ಪೋಲುಮಾಡಿ ಹಿಂದುತ್ವದ ಹೆಸರಲ್ಲಿ ಜನರಿಗೆ ಮಂಕು ಬೂದಿ ಎರಚಿದರೂ ತನಿಖೆ ನಡೆಸಲು ಕಾಂಗ್ರೆಸ್ ಸರಕಾರ ಉದಾಸೀನ ತೋರಿಸಿದ್ದು ಪ್ರತಿಭಟನೆಯ ಕಾವನ್ನು ಹೆಚ್ಚಿಸಿತು. ತನಿಖೆಗೆ ಆಗ್ರಹಿಸಿ ಕೇಸರಿ ಸಂಕುಲ ಪರಶುರಾಮನ ಪ್ರತಿಮೆ ಎದುರಲ್ಲೇ ಉಪವಾಸ ಸತ್ಯಾಗ್ರಹಕ್ಕೆ ಆರಂಭಿಸಿತು. ಶಾಸಕ ಸುನಿಲ್ ಹೋರಾಟಗಾರರ ಬಳಿ ತಹಶೀಲ್ದಾರ್ ಮತ್ತು ಸಬ್ ಇನ್ಸ್ಪೆಕ್ಟರ್ಗಳನ್ನು ಕಳಿಸಿ ಧರಣಿ ನಿಲ್ಲಿಸುವ ಪ್ರಯತ್ನ ಮಾಡಿಸಿದರು; ಆದರೆ ಪರಶುರಾಮನ ವಿಗ್ರಹದ ನೈಜತೆಯ ತನಿಖೆ ಆಗುವತನಕ ಕದಲುವುದಿಲ್ಲವೆಂದು ಹೋರಾಟಗಾರರು ಖಡಾಖಂಡಿತ ಹೇಳಿದರು.
ಆನಂತರ ಜಿಲ್ಲಾಡಳಿತ ಪ್ರತಿಭಟನಾಕಾರರ ಸಮಾಧಾನಿಸಲು ಮುಂದಾಯಿತು. ಉಪ ವಿಭಾಗಾಧಿಕಾರಿಣಿ ಜಿಲ್ಲಾಧಿಕಾರಿ ಪರವಾಗಿ ಧರಣಿ ನಿರತರಲ್ಲಿಗೆ ಬಂದು ಒಂದು ವಾರದಲ್ಲಿ ತನಿಖೆ ಮಾಡಿಸುವ ಭರವಸೆ ನೀಡಿದರು. ಎಸಿ ಮಾತು ನಂಬಿ ಉಪವಾಸ ಸತ್ಯಾಗ್ರಹ ನಿಲ್ಲಿಸಿದ್ದ ಹೋರಾಟಗಾರರು ಬೇಸ್ತುಬಿದ್ದಿದ್ದರು! ತನಿಖೆ ನಡೆಸುವ ಬದಲು ತಪ್ಪಿತಸ್ಥರ ಕಾಪಾಡಲು ಪ್ರತಿಮೆಯ ಸೊಂಟದ ಮೇಲಿನ ಭಾಗವನ್ನು ಅಧಿಕಾರಿಗಳು ರಾತ್ರಿ ಬೆಳಗಾಗುವುದರಲ್ಲಿ ನಾಪತ್ತೆ ಮಾಡಿಬಿಟ್ಟರು!! ಥೀಮ್ ಪಾರ್ಕ್ನಲ್ಲೀಗ ಗ್ಲಾಸ್ ಫೈಬರ್ ತುಂಡುಗಳು ಬಿದ್ದುಕೊಂಡಿವೆ. ಅಲ್ಲಿಗೆ ಶಾಸಕ ಸುನಿಲ್ ತರಾತುರಿಯಲ್ಲಿ ಪ್ರತಿಷ್ಠಾಪಿಸಿದ ಪರಶುರಾಮ ವಿಗ್ರಹದ ಸೊಂಟದ ಕೆಳಗಿನ ಭಾಗ ಮಾತ್ರ ಕಂಚು;ಮೇಲಿನದು ಪಿಒಪಿ(ಗ್ಲಾಸ್ ಫೈಬರ್) ಎಂಬುದು ನಿಸ್ಸಂಶಯವಾಗಿ ಸಾಬೀತಾದಂತಾಗಿದೆ.
ಅಧಿಕಾರಗಳೀಗ ಸುಳ್ಳು ಸಬೂಬು ಹೆಣೆಯುತ್ತಿದ್ದಾರೆ. ಉದ್ಘಾಟನೆ ಸಂದರ್ಭದಲ್ಲಿ ಪ್ರತಿಮೆ ಪೂರ್ಣವಾಗಿ ಸಿದ್ಧವಾಗಿರಲಿಲ್ಲ. ಅಂದಿನ ಆಡಳಿತಗಾರರಿಂದ ಒತ್ತಡದಿಂದ ಅಪೂರ್ಣ ಮೂರ್ತಿ ನಿಲ್ಲಿಸಲಾಗಿತ್ತು; ಪರಶುರಾಮನ ಬಲಗೈನಲ್ಲಿರುವ ಕೊಡಲಿ ತುಂಬ ಭಾರವಾಗಿದೆ. ಅದನ್ನು ತಡೆದುಕೊಳ್ಳುವ ಸಾಮರ್ಥ್ಯ ಬಲಗೈಗೆ ಇಲ್ಲ; ಕೊಡಲಿಯನ್ನು ಜುಟ್ಟಿಗೆ ಸೇರಿಸಿ ಪ್ರತಿಮೆಯನ್ನು ಸುಭದ್ರಗೊಳಿಸಬೇಕಿದೆ. ಪ್ರತಿಮೆಯನ್ನು ಪುನರ್ ವಿನ್ಯಾಸ ಗೊಳಿಸಬೇಕಾಗಿದೆ; ಮಿಂಚು ನಿರೋಧಕ ಅಳವಡಿಬೇಕಾಗಿದೆ. ಹಾಗಾಗಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅಂದರೆ ಅಧಿಕಾರಿಗಳು ಮಾಜಿ ಮಂತ್ರಿ ಸುನಿಲ್ ಹೇಳಿದಂತೆ ಕೇಳಿ ಅಕ್ರಮಮಾಡಿ ಹಳ್ಳಕ್ಕೆ ಬಿದ್ದಿದ್ದಾರೆ; ಈಗ ತಮ್ಮ ಲೋಪ-ದೋಷ,ಅಪರಾಧ ಮರೆಮಾಚಲು ಸುಳ್ಳು ಹೇಳುತ್ತಿದ್ದಾರೆಂದು ಬಂಡಕೋರ ಕೇಸರಿ ಪಡೆಯವರು ಮತ್ತು ಸ್ಥಳಿಯ ಕಾಂಗ್ರೆಸ್ ವಕ್ತಾರ-ಪುರಸಭೆ ಸದಸ್ಯ ಶುಭದ ರಾವ್ ಹೇಳುತ್ತಾರೆ. ಪ್ರತಿಮೆ ಸುತ್ತ ಕಬ್ಬಿಣದ ಸ್ಟಾಂಡ್ ಕಟ್ಟಿದ್ದೇಕೆ? ಆನಂತರ ಟಾರ್ಪಲ್ನಿಂದ ಮೂರ್ತಿ ಮುಚ್ಚಿದ್ದೇಕೆ? ಪುತ್ಥಳಿಯ ಮೇಲ್ಭಾಗ ಕದ್ದುಮುಚ್ಚಿ ಕೆಳಗಿಳಿಸಿ ಕಂಟೇನರ್ನಲ್ಲಿ ಅಜ್ಞಾತ ಸ್ಥಳಕ್ಕೆ ಸಾಗಿಸಿದ್ದೇಕೆ?; ಸೊಂಟದ ಕೆಳಗಿನ ಭಾಗ ಹಾಗೇ ಉಳಿಸಿದ್ದೇಕೆ? 10 ಟನ್ ತೂಕದ ಪ್ರತಿಮೆಯ ಮೇಲ್ಭಾಗ ಅಷ್ಟು ಸಲಭವಾಗಿ ಇಳಿಸಲು ಸಾದ್ಯವೇ? ಎಂದು ಸುನಿಲ್ ವಿರುದ್ಧ ಸೆಟೆದು ನಿಂತಿರುವ ಹೋರಾಟಗಾರರು ವಾದಿಸುತ್ತಾರೆ.
ನಕಲಿ ಪರಶುರಾಮ ಪ್ರತಿಮೆ ರಚನೆಯ ಗುತ್ತಿಗೆ, ಪ್ರತಿಷ್ಠಾಪನೆ ಹಾಗು ಥೀಮ್ ಪಾರ್ಕ್ ಕಾಮಗಾರಿಯ ಸಕಲ ಗೋಲ್ಮಾಲ್ನ “ಕಾರ್ಯಾಂಗ” ಸೂತ್ರಧಾರ ಉಡುಪಿಯ ನಿರ್ಮಿತಿ ಕೇಂದ್ರದ ಯೋಜನಾ ನಿರದೇಶಕ ಅರುಣ್ಕುಮಾರ್ ಎಂಬ ಆರೋಪ ಕಾರ್ಕಳದಲ್ಲಿ ಟಾಕ್ ಆಫ್ ದಿ ಟೌನ್ . ಜಿಲ್ಲಾ ಉಸ್ತುವಾರಿ ಮಂತ್ರಿಣಿ ಲಕ್ಷ್ಮೀ ಹೆಬ್ಬಾಳ್ಕರ್ ಥೀಮ್ ಪಾರ್ಕ್ಗೆ ಪರಶುರಾಮ ಪುತ್ಥಳಿ ಪರಿಶೀಲನೆಗೆ ಹೋದಾಗ ಈ ಅರುಣ್ಕುಮಾರ್ ಅಪರಾಧಿ ಪ್ರಜ್ಞೆಯಲ್ಲಿ ನಿಂತದ್ದರು; ಮಂತ್ರಿಣಿ ಕೇಳಿದ ಪ್ರಶ್ನಗಳಿಗೆ ಉತ್ತರಿಸಲಾಗದೆ ತಡವರಿಸಿದರು ಎಂದು ಹೋರಾಟಗಾರರು ಹೇಳುತ್ತಾರೆ. ಪರಶುರಾಮ ಅರ್ಧ ಕಂಚು-ಇನ್ನರ್ಧ ಫೈಬರ್ ಎಂದು ಹೇಳಿದ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣ ತಾರ್ಕಿಕ ಅಂತ್ಯ ತಲುಪಿಸುವ ಪ್ರಯತ್ನ ಮಾಡಲಿಲ್ಲ; ಬೆಳಗಾವಿಯಲ್ಲಿ ಸಂಘ ಪರಿವಾರಿಯೊಬ್ಬನನ್ನು ಸರಕಾರಿ ಸಲಹೆಗಾರನಾಗಿ ನೇಮಿಸಿಕೊಂಡಿರುವ ಸಚಿವೆ ಲಕ್ಷ್ಮೀಗೆ ಉಡುಪಿ ಜಿಲ್ಲೆಯ ಸಂಚುಕೋರ ಹಿಂದುತ್ವ ನಿಯಂತ್ರಿಸುವ ಬದ್ಧತೆಯಿಲ್ಲ ಎಂಬ ಮಾತು ಕೇಳಿಬರುತ್ತಿದೆ.
ವರದಿಗಾರರು
ಶೂದ್ರ ಶಂಬೂಕ