ದಾಂಡೇಲಿ ಬೀದಿ ಬೀದಿಯಲ್ಲಿ ನರಭಕ್ಷಕ ಮೊಸಳೆಗಳ ರಾಜ ನಡಿಗೆ !

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ(ಸೂಪಾ) ತಾಲ್ಲೂಕಿನ ಡಿಗ್ಗಿ ಎಂಬ ಕುಗ್ರಾಮದ ದಟ್ಟನೆಯ ಹರಿದ್ವರ್ಣ ಕಾಡಿನ ನಡುವೆ ಹುಟ್ಪಿ ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬೀ ಸಮುದ್ರ ಸೇರುವ ಕಾಳಿ ನದಿಯ ತುಂಬ ಮೊಸಳೆಯದ್ದೇ (Crocodile)  ಕಾರುಬಾರು.

ಇಂದಿಗೂ ದಾಂಡೇಲಿ (Dandeli) ಜನರ ಜೀವನಾಡಿಯಾಗಿರುವ ಕಾಳಿನದಿಯಲ್ಲಿ ಸ್ವಚ್ಛಂಧವಾಗಿ ಈಜಿ ಸ್ನಾನ ಮಾಡುವಂತಿಲ್ಲ. ಬಟ್ಟೆ, ಪಾತ್ರೆ ತೊಳೆಯುವಂತಿಲ್ಲ. ದನ, ಕರು,ಎಮ್ಮೆಗಳ ಮೈ ಉಜ್ಜಿ ಸ್ನಾನ ಮಾಡಿಸುವಂತಿಲ್ಲ. ಇದು ದಾಂಡೇಲಿಗರಿಗಷ್ಟೇ ಅಲ್ಲ, ಕಾಳಿನದಿಯ ದಂಡೆಯಲ್ಲಿರುವ ದಾಂಡೇಲಿ ಸುತ್ತ ಮುತ್ತಲಿನ ಗ್ರಾಮದ ಜನರ ಪರಿಸ್ಥಿತಿ. ಶ್ರೀ ಕ್ಷೇತ್ರ ಉಳವಿ ಚೆನ್ನಬಸವಣ್ಣ ಜಾತ್ರೆಗೆಂದು ಉತ್ತರ ಕರ್ನಾಟಕದಿಂದ ಬರುವ ಸಾವಿರಾರು ಭಕ್ತರ ದಂಡು ತಮ್ಮ ಎತ್ತುಗಳಿಗೆ ನೀರುಣಿಸಿ, ತಾವೂ ಮಿಂದು ವಿಶ್ರಾಂತಿ ಪಡೆಯುತ್ತಿದ್ದ ಕಾಳಿನದಿಯ  ದಂಡೆ ಈಗ ಮೊಸಳೆಗಳ ವಾಸ ಸ್ಥಾನವಾಗಿದೆ.

ಮೊಸಳೆಯಂತು (Crocodile) ಊರೊಳಗಿನ ಗಲ್ಲಿಗಲ್ಲಿಗಳಲ್ಲಿ ತಿರುಗಾಡಿ ಭೀತಿಯನ್ನುಂಟು ಮಾಡಿದೆ. ಈಗಾಗಲೇ ಎರಡೇ ವರ್ಷದಲ್ಲಿ ನಾಲ್ವರನ್ನು ಕೊಂದಿದೆ. ಕೆಲವರನ್ನು ಕಚ್ಚಿ ಗಾಯಗೊಳಿಸಿದೆ. ನೀರಿಗಿಳಿದ ದನ, ಕರು, ಎಮ್ಮೆ, ಜಿಂಕೆಯಂತಹ ವನ್ಯ ಜೀವಿಯನ್ನು ಎಳೆದೊಯ್ದ ಘಟನೆಗಳು ಜರುಗಿದೆ. ಈ ಎಲ್ಲ ಅವಘಡಗಳು ಕಳೆದೈದು ವರ್ಷಗಳಿಂದ ಸಂಭವಿಸಿದೆ. ಹಿಂದೆ ಕೂಡ ಮೊಸಳೆಯಿತ್ತು. ಆದರೆ ಅವು ಹೆಚ್ಚಾಗಿ ಕಾಗದ ಕಾರ್ಖಾನೆಯ ಹೊಲಸು ತ್ಯಾಜ್ಯಗಳು ಕಾಳಿನದಿಗೆ ಸೇರುವ  ಜಾಗೆಗೆ ಸೀಮಿತವಾಗಿದ್ದು ತ್ಯಾಜ್ಯ, ಮೀನು,ಪಕ್ಷಿಗಳನ್ನು ಬೇಟೆಯಾಡಿ ತಿನ್ನುತ್ತಿತ್ತು.ಜಂಗಲ್ ಲಾಡ್ಜನಿಂದ ನದಿಯಲ್ಲಿ ಪ್ರವಾಸಿಗರಿಗಾಗಿ ಕಾರೇಕಲ್ ರೈಡ್(ಹರಿಗೋಲು)ಮಾಡಿಸಲಾಗುತ್ತಿತ್ತು. ಪ್ರವಾಸಿಗರ ನೆಚ್ಚಿನ ಆಕರ್ಷಣೆಯಾಗಿದ್ದ ಮೊಸಳೆಯ ಪಕ್ಕದಲ್ಲೇ  ಹಾದುಹೋಗುವಾಗಲೂ ನಿರುಪದ್ರವಿಗಳಂತಿದ್ದ ಈ ಜೀವಿ ಇದ್ದಕ್ಕಿದ್ದಂತೆ ಸಂಘರ್ಷಕ್ಕಿಳಿಯಲು ಕಾರಣ ಹುಡುಕಬೇಕಿದೆ.

ಈ ಹಿಂದೆ ಹಾಳಮಡ್ಡಿ ಸಮೀಪದ ಕಾಳಿನದಿಯ ದಂಡೆಯಲ್ಲಿರುವ ಹೊಲದ ಮಾಲೀಕನೊಬ್ಬ ಹಣ ಗಳಿಸುವ ದುರಾಸೆಯಿಂದ ಪ್ರವಾಸಿಗರಿಗೆ ಮೊಸಳೆ ತೋರಿಸುವ ಹಿನ್ನೆಲೆಯಲ್ಲಿ ಮಾಂಸದ ಮಾರುಕಟ್ಟೆಯಿಂದ  ಮಾಂಸದ ತ್ಯಾಜ್ಯಗಳನ್ನು ತಂದು ನದಿಯ ನೀರಿಗೆಸೆಯುತ್ತಿದ್ದ.ಈ ಬಗ್ಗೆ ಕಾನೂನಿನ ಕ್ರಮಗಳು ಜರುಗಿದೆ.ಬುದ್ಧಿ ಹೇಳಲು ಹೋದ ಅರಣ್ಯ ಅಧಿಕಾರಿಯೊಬ್ಬರ ಕೊಲೆಯಾಗಿದೆ.ಇವೆಲ್ಲದರ  ನಡುವೆ ಸರ್ಕಾರದಿಂದ  ಈ ಜಾಗದ ಸಮೀಪದಲ್ಲೇ 3 ಕೋಟಿ ರೂಪಾಯಿ  ವೆಚ್ಚದ ಮೊಸಳೆ ಪಾರ್ಕ್ ನಿರ್ಮಾಣಗೊಂಡಿದೆ.ಆದರೆ ಮೊಸಳೆಗಳು ಪಾರ್ಕ್ ಗೆ ಸೀಮಿತವಾಗದೇ ಕಾಳಿನದಿಯ ತುಂಬ ಹರಡಿದೆ.

       ಮನುಷ್ಯರು ಕೃಷಿ,ಕೈಗಾರಿಕೆ,ವಾಣಿಜ್ಯ,ಪ್ರವಾಸೋದ್ಯಮದ ಚಟುವಟಿಕೆಯನ್ನು ಮಾಡಿ ಅವುಗಳ ಆವಾಸ ಸ್ಥಾನವನ್ನು ನಾಶ ಮಾಡಿದಾಗ ಸಂಘರ್ಷದ ಘಟನೆಗಳು ಹೆಚ್ಚಾಗತೊಡಗಿದೆ. ಮೊಸಳೆಯನ್ನು ಹಿಡಿಯುವಂತಿಲ್ಲ.ಕೊಲ್ಲುವಂತಿಲ್ಲ.ಇಲ್ಲಿರುವದು ಅಳಿವಿನಂಚಿನಲ್ಲಿರುವ ಮಾರ್ಷ ಮಗ್ಗರ್ (Marsh Mugger) .ಇದನ್ನು 1982 ರಿಂದ ಐಯುಸಿಎನ್ ರೆಡ್ ಲಿಸ್ಟ್ (International Union for Conservation of Nature Red List) ನಲ್ಲಿ ದುರ್ಬಲ ಎಂದು ಪಟ್ಟಿ ಮಾಡಲಾಗಿದೆ. ಜೀವ ವೈವಿಧ್ಯತೆಯ ರಕ್ಷಣೆಯಲ್ಲಿ ಎಲ್ಲಾ ಜೀವಿಗಳ ಇರುವಿಕೆ ಮುಖ್ಯವಾಗಿದೆ. ಅವುಗಳ ಆವಾಸ ಸ್ಥಾನ ನದಿ,ಕೆರೆಗಳ ಸಂರಕ್ಷಣೆಯಾಗಬೇಕು. ಮಾರ್ಷ ಮಗ್ಗರ್ ತಳಿಯು ಅಳಿವಿನಂಚಿನಲ್ಲಿರುವ ಸಂತತಿಯಾಗಿದ್ದು ನಮ್ಮ ದೇಶದಲ್ಲಿ ಇವುಗಳನ್ನು ಸಂರಕ್ಷಿಸಲು1972 ರಿಂದ  ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ತರಲಾಗಿದೆ. ಇದು ಮೊಸಳೆಯನ್ನು ಹಿಡಿಯುವದಾಗಲಿ,ಕೊಲ್ಲುವದಾಗಲಿ, ಅನುಮತಿಯಿಲ್ಲದೆ ಸಾಗಿಸುವದಾಗಲಿ ಮಾಡುವಂತಿಲ್ಲ.  ಮಾರ್ಷ ಮಗ್ಗರ್ ತಳಿಯು ಮಧ್ಯಮ  ಗಾತ್ರದ ವಿಶಾಲ ಮೂಗಿನ ಮೊಸಳೆಯಾಗಿದ್ದು ಸುಮಾರು 15 ಅಡಿಯಷ್ಟು ಬೆಳೆಯಬಲ್ಲದು. ಇವು ಸಿಹಿ ನೀರಿನ ಮೊಸಳೆಯಾಗಿದ್ದು ನದಿ,ಜವುಗು ಪ್ರದೇಶ, ಕೆರೆ,ಸರೋವರಗಳಲ್ಲಿ ವಾಸಿಸುತ್ತದೆ. ಬಿಸಿ ವಾತಾವರಣದಲ್ಲಿ ಜಲಮೂಲಗಳನ್ನು ಹುಡುಕಿಕೊಂಡು ನೆಲದ ಮೇಲೆ ನಡೆಯುತ್ತದೆ. ಇವು ನದಿಯ ದಂಡೆಗಳಲ್ಲಿ ಬಿಲಗಳನ್ನು ಅಗೆದು ಅದರಲ್ಲಿ ಮೊಟ್ಟೆ ಇಟ್ಟು ಮರಿಗಳನ್ನು ಒಂದು ವರ್ಷ ಕಾಲ ಪೋಷಿಸುತ್ತದೆ.

ಈ ಅಪರೂಪದ ಮಾರ್ಷ್ ಮಗ್ಗರ್ ಜಾತಿಯ ಮೊಸಳೆಗಳನ್ನು ಸಂರಕ್ಷಿಸುವುದು ಸರಕಾರ ಮಾತ್ರವಲ್ಲ, ಜನರ ಕರ್ತವ್ಯ ಕೂಡ. ಆದರೆ ಅವುಗಳೇ ಜನರನ್ನು ಭಕ್ಷಿಸಲು ಆರಂಭಿಸಿದರೆ? ಅರಣ್ಯ ಇಲಾಖೆ ಈ ಸಂತತಿಯನ್ನು ಸಂರಕ್ಷಿಸಲು ತುಂಬ ರೀತಿಯಿಂದ ಪ್ರಯತ್ನಿಸುತ್ತಿದೆ.

ಅರಣ್ಯ ಇಲಾಖೆಯ ಕ್ರಮಗಳು : ದಾಂಡೇಲಿಯ ಕಾಳಿನದಿಯ ಪ್ರಮುಖ ಸ್ನಾನ ಘಟ್ಟದ (ಈಶ್ವರಗುಡಿ ಹತ್ತಿರ, ಹಳೇ ದಾಂಡೇಲಿ,ಕೋಗಿಲಬನ ) ಮತ್ತಿತರ ಪ್ರದೇಶದಲ್ಲಿ ಸಾರ್ವಜನಿಕರು ನೀರಿಗಿಳಿಯದಂತೆ ಅರಣ್ಯ ಇಲಾಖೆಯಿಂದ ಕಬ್ಬಿಣದ ಸರಳುಗಳ ಬೇಲಿಯನ್ನು ನಿರ್ಮಿಸಿದ್ದು,ಜನ ವಸತಿ ಇರುವ ನದಿ ದಂಡೆಗುಂಟ ತಂತಿಯ ಜಾಳಿಗೆ ಬೇಲಿಯನ್ನು ಕೆಲವೆಡೆ ನಿರ್ಮಿಸಿದ್ದು,ಹಂತ ಹಂತವಾಗಿ ವಿಸ್ತರಿಸುವ ಕೆಲಸ ನಡೆದಿದೆ. ನದಿ ದಂಡೆಯ ಅರಣ್ಯ ತಪಾಸಣೆಯ ಚೌಕಿಗಳಿಂದ ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗುತ್ತಿದೆ.ಕಾಳಿನದಿಯ ಸೇತುವೆಯ ಮೇಲೆ ನೀರಿಗಿಳಿಯುವದನ್ನು ತಡೆಯಲು ಸಿ.ಸಿ.ಕ್ಯಾಮೆರಾ ಅಳವಡಿಸಿ ವೀಕ್ಷಿಸಲಾಗುತ್ತಿದೆ.

ಇಷ್ಟೆಲ್ಲ ಕ್ರಮದ ನಡುವೆಯು ಅರಣ್ಯ ಇಲಾಖೆ ಬೇರೆ ಊರುಗಳಿಂದ ಹಿಡಿದ ಮೊಸಳೆಯನ್ನು  ಕಾಳಿನದಿಗೆ ತಂದು ಬಿಟ್ಟಿರುವ ಕುರಿತು ಕೂಗೆದ್ದಿದೆ.ಇದನ್ನು ಪುಷ್ಠಿಕರಿಸುವಂತೆ

ಇತ್ತೀಚೆಗೆ ಕಲಘಟಗಿಯ ಗ್ರಾಮವೊಂದರ ಕೆರೆಯಲ್ಲಿ ದಾಂಡೇಲಿಯ ಇಲಾಖೆಯವರೇ ಮೊಸಳೆಯನ್ನು ಹಿಡಿದು ಕಾಳಿನದಿಗೆ ಬಿಟ್ಟಿರುವ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿದೆ ಎನ್ನಲಾಗಿದೆ. ಅರಣ್ಯ ಇಲಾಖೆ ಸ್ಥಳೀಯ ಕಾಳಿ ನದಿ ಪಾತ್ರದಲ್ಲಿ ವಾಸಿಸುವ ಮೊಸಳೆಗಳನ್ನು ಸಂರಕ್ಷಿಸುವ ಕೆಲಸ ಮಾಡುವುದನ್ನು ಬಿಟ್ಟು ಬೇರೆ ಕಡೆಯಿಂದ ತಂದು ಇಲ್ಲಿಯ ನದಿಯಲ್ಲಿ ಬಿಟ್ಟು ಸಂರಕ್ಷಣೆ ನೆಪದಲ್ಲಿ ಜನರಿಗೆ ಪ್ರಾಣಕಂಟಕವಾಗುವುದು ಸರಿಯಾದ ಕ್ರಮವಲ್ಲ. ಇದೀಗ ಮೊಸಳೆಗೆ ಸರಿಯಾದ ಆಹಾರವೂ ಇಲ್ಲದೇ ಊರು ಕೇರಿಯ ಬೀದಿ ಬೀದಿಗಳ ರಸ್ತೆಗಳಲ್ಲಿ ತಿರುಗಾಡುವ ಪರಿಸ್ಥಿತಿಗೆ ತಂದದ್ದು ಅವೈಜ್ಞಾನಿಕ. ಇತ್ತೀಚಿಗೆ ನಾಲ್ಕು ಜನರು ಮೊಸಳೆಗೆ ಆಹಾರವಾಗಿದ್ದಾರೆ. ಇದರ ಸಂಖ್ಯೆ ಮತ್ತಷ್ಟು ಏರದಂತೆ ಅರಣ್ಯ ಇಲಾಖೆ ಅತಿ ಜರೂರಾಗಿ ಚಿಂತನೆ ನಡೆಸಿಬೇಕು. ಕೇವಲ ಧ್ವನಿವರ್ಧಕದಲ್ಲಿ ಎಚ್ಚರಿಕೆ ಘೋಷಿಸುವುದರಿಂದ, ನದಿ ಪಕ್ಕ ಕಬ್ಬಿಣ ತಂತಿ ಜಾಳಿಗೆಯ ಬೇಲಿ ಹಾಕುವುದರಿಂದ ಏನೂ ಆಗದು. ಜನ ಸಹನೆ ಮೀರುವ ಮೊದಲು ಇಲಾಖೆ ಕಾರ್ಯಪ್ರವೃತ್ತವಾದರೆ ಒಳಿತು.

ಲೇಖಕರು :
ಎನ್. ಜಯಚಂದ್ರನ್,
ದಾಂಡೇಲಿ

Leave a Reply

Your email address will not be published. Required fields are marked *