ಕೆಲ ದಿನಗಳ ಹಿಂದೆ ಕುಮಟಾದಿಂದ ಹೊನ್ನಾವರಕ್ಕೆ ಕಾರ್ ನಲ್ಲಿ ಹೋಗುವಾಗ ರಾಮತೀರ್ಥ
ಗುಡ್ಡದ ಬಳಿ ರಸ್ತೆ ಪಕ್ಕ ಶಬರಿಮಲೆ ಕಡೆಗೆ ಕಪ್ಪು ಬಟ್ಟೆ ತೊಟ್ಟು, ಹಣೆಯಲ್ಲಿ ವಿಭೂತಿ
ಧರಿಸಿ, ಕುತ್ತಿಗೆಯಲ್ಲಿ ರುದ್ರಾಕ್ಷಿ ಸರ ಹಾಕಿಕೊಂಡು, ಕೈಯಲ್ಲಿ ಭಾರತದ ತ್ರಿವರ್ಣ ಬಾವುಟ
ಹಿಡಿದು ಕಾಲ್ನಡಿಗೆಯಲ್ಲಿ ಹೋಗುತ್ತಿದ್ದ ಸುಮಾರು ಮುವತ್ತು ವರ್ಷ ವಯಸ್ಸಿನ
ಭಕ್ತನೊಬ್ಬ ಕಣ್ಣಿಗೆ ಬಿದ್ದ. ತುಂಬ ವೇಗವಾಗಿ ಡ್ರೈವ್ ಮಾಡುತ್ತಿದ್ದ ನನಗೆ ಈ ವ್ಯಕ್ತಿ ಕಂಡು
ಸ್ವಲ್ಪ ಕುತೂಹಲ ಮೂಡಿತು. ಆತನನ್ನು ಮಾತನಾಡಿಸೋಣ ಅಂತ ಅನಿಸಿ ಸ್ವಲ್ಪ
ದೂರದಲ್ಲಿ ಕಾರ್ ನಿಲ್ಲಿಸಿ ಇಳಿದು ಬಂದೆ. ಆತ ಬರುತ್ತಿದ್ದ ದಿಕ್ಕಿಗೆ ನಡೆದುಕೊಂಡೇ ಹೋದೆ.
ಆತನನ್ನು ಹೇಗೆ ಮಾತಿಗೆ ಎಳೆಯಬೇಕೆಂದು ಗೊತ್ತಾಗಲಿಲ್ಲ. ಅಯ್ಯಪ್ಪ ಭಕ್ತ ನಾನು ಹತ್ತಿರ
ಹೋಗುತ್ತಿದ್ದಂತೆ ನನ್ನನ್ನೇ ನೋಡುತ್ತಿದ್ದ. ಜೇಬಿನಿಂದ ಮೊಬೈಲ್ ತೆಗೆದು ಅವನ ಅನುಮತಿ
ಇಲ್ಲದೇ ನಾನೇ ನಾಕ್ಕೈದು ಫೋಟೊ ಕ್ಲಿಕ್ಕಿಸಿಕೊಂಡೆ. ಆತನ ಮುಖದಲ್ಲಿ ಸ್ವಲ್ಪ ಗಾಬರಿ
ಆದಂತೆ ಅನಿಸಿದ್ದನ್ನು ಗರುತಿಸಿದೆ. ನಾನೇ ಮಾತಿಗೆ ಮುಂದಾಗಿ ‘ಸ್ವಾಮಿ ಶರಣಂ ಅಯ್ಯಪ್ಪ’
ಅಂದೆ. ಆತ ಕೂಡ ‘ಸ್ವಾಮಿ ಶರಣಂ ಅಯ್ಯಪ್ಪ’ ಅಂದ. ಮಾತಿಗೆ ಮುಂದಾಗುತ್ತಿದ್ದಂತೆ ಆತ
ಹಿಂದಿ ಮಾತನಾಡಲು ತೊಡಗಿದ. ಉತ್ತರ ಭಾರತದವ. ರೂಪಂ ಲೋಕಪ್ಪ ಸ್ವಾಮಿ
ಎಂಬುದು ಆತನ ಹೆಸರು. ನಾಲ್ಕಾರು ವರ್ಷಗಳಿಂದ ನಡೆದೇ ಶಬರಿಮಲೆಗೆ ಹೋಗುತ್ತಿದ್ದಾನೆ.
ನಡೆದೇ ಹೋಗಿ ದೇವರನ್ನೂ, ಸಂಕ್ರಾಂತಿ ಜ್ಯೋತಿಯನ್ನು ನೋಡಬೇಕೆಂಬುದು ಅತನ ಹಠ.
ನಡೆದು ನಡೆದು ಕಾಲಿನ ಹಿಮ್ಮಡಿ, ಬೆರಳುಗಳೆಲ್ಲ ಬಿರುಕು ಬಿಟ್ಟಿವೆ. ಕುತ್ತಿಗೆಗೆ ಒಂದು ಸಣ್ಣ
ಪ್ಲೆಕ್ಸ್ ಬೋರ್ಡು ನೇತು ಹಾಕಿಕೊಂಡಿದ್ದಾನೆ. ಆತ ಅಯೋಧ್ಯಾ, ಹರಿದ್ವಾರ, ದೆಹಲಿ,
ಮಥುರಾ, ಗೋವರ್ಧನ ಕಾಶಿಗೆಲ್ಲ ಭೇಟಿ ಕೊಟ್ಟು ಶಬರಿಮಲೆಯತ್ತ ನಡಿಗೆ ಸುರು
ಹಚ್ಚಿಕೊಂಡಿದ್ದಾನೆ.
‘ಕೈಯಲ್ಲಿ ಯಾಕೆ ತ್ರಿವರ್ಣ ಧ್ವಜ?’ ಅಂತ ಕೇಳಿದೆ. ‘ನಾನು ಅಯ್ಯಪ್ಪ ಭಕ್ತ ನಿಜ, ಆದರೆ
ಅಯ್ಯಪ್ಪ ಇರುವುದು ಪವಿತ್ರ ಭಾರತದಲ್ಲಿ. ಭಾರತದಲ್ಲಿ ಅಯ್ಯಪ್ಪ, ಅಲ್ಲಾ, ಏಸು ಎಲ್ಲ
ದೇವರ ಆರಾಧಕರೂ ಇದ್ದಾರೆ. ಅದಕ್ಕಾಗಿ ಈ ದೇಶದ ಬಾವುಟ ನಮ್ಮೆಲ್ಲರಿಗಿಂತಲೂ
ಎತ್ತರದಲ್ಲಿ ಹಾರಾಡುತ್ತಲೇ ಇರಬೇಕು. ಅಷ್ಟೇ ಅಲ್ಲ, ನನ್ನ ಅಭಿಪ್ರಾಯದಲ್ಲಿ ಕೇಸರಿ,
ಹಸಿರು, ಬಿಳಿ ಹೀಗೆ ಎಲ್ಲ ಧರ್ಮದ ಬಾವುಟಗಳಿಗಿಂತಲೂ ಬಾರತದ ಬಾವುಟವೇ ಶ್ರೇಷ್ಠ.
ಯಾಕೆಂದರೆ ಈ ಬಾವುಟದ ಅಡಿಯಲ್ಲಿ ನಾವೆಲ್ಲರೂ ಒಂದೇ. ಆದರೆ ಬೇರೆ ಬೇರೆ ಧರ್ಮದ
ಬೇರೆ ಬೇರೆ ಬಣ್ಣದ ಬಾವುಟಗಳ ಅಡಿಯಲ್ಲಿ ನಾವೆಲ್ಲ ಬೇರೆ ಬೇರೆಯಾಗಿ ಬಿಡುತ್ತೇವೆ.
ಅದಕ್ಕಾಗಿ ನಾನು ಅಯ್ಯಪ್ಪ ದೇವರಷ್ಟೇ ನಮ್ಮ ದೇಶದ ಬಾವುಟವನ್ನೂ ಆರಾಧಿಸುತ್ತೇನೆ
ಮತ್ತು ಎಲ್ಲೂ ಈ ಬಾವುಟವನ್ನು ಕೆಳಗೆ ಬೀಳದಂತೆ ಕಾಳಜಿ ವಹಿಸುತ್ತೇನೆ’ ಎಂದು
ಮುಗ್ಧವಾಗಿ ಹೇಳುತ್ತ ಹೋದ.

‘ಪ್ರತಿ ರಾಜ್ಯಕ್ಕೆ ನಾನು ಪ್ರವೇಶಿಸುತ್ತಿದ್ದಂತೆ ಅಲ್ಲಿಯ ಪ್ಲೆಕ್ಸ್ ಅಂಗಡಿಯಲ್ಲಿ ಸ್ಥಳೀಯ
ಬಾಷೆಯ ಪ್ಲೆಕ್ಸ್ ಬೋರ್ಡ್ ಮಾಡಿಸಿಕೊಂಡು ಮುಂದಕ್ಕೆ ಹೊರಡುತ್ತೇನೆ. ಎಲ್ಲ ಪ್ಲೆಕ್ಸ್
ಅಂಗಡಿಯವರೂ ನನಗೆ ಪ್ರೀತಿಯಿಂದ ಈ ಬೋರ್ಡು ಮಾಡಿಕೊಟ್ಟಿರುತ್ತಾರೆ. ನಾನು
ಬರುವಾಗ ದೇವಸ್ಥಾನದಲ್ಲಿ, ಅಯ್ಯಪ್ಪ ಸ್ವಾಮಿ ಭಕ್ತರ ಡೇರೆಯಲ್ಲಷ್ಟೇ ಊಟ
ಮಾಡಿಲ್ಲ. ಚರ್ಚ್, ಮಸೀದಿಗಳಲ್ಲೂ ಊಟ ಮಾಡಿದ್ದೇನೆ. ಅಂದರೆ ಅಲ್ಲಿಯ ಫಾದರ್,
ಮುಲ್ಲಾಗಳೂ ನನಗೆ ಊಟ ಹಾಕಿಸಿದ್ದಾರೆ. ಮುಲ್ಲಾಗಳು ನನಗೆ ಖರ್ಜೂರದ ಪ್ಯಾಕೆಟ್
ಕೊಡಿಸಿದ್ದಾರೆ ಎಂದು ತನ್ನ ಕಪ್ಪು ಜೋಳಿಗೆಯಲ್ಲಿದ್ದ ಎರಡು ಖರ್ಜೂರದ ಪ್ಯಾಕೆಟ್
ತೋರಿಸಿದ. ಹಾಗಾಗಿ ನಾನು ಇಲ್ಲಿಯ ತನಕ ಹೊಟೇಲಿಗೆ ಹೋಗುವ ಪ್ರಮೆಯವೇ ಬರಲಿಲ್ಲ.
ರಾತ್ರಿ ಕೂಡ ದೇವಸ್ಥಾನ, ಮಸೀದಿ, ಚರ್ಚ್ ಗಳಲ್ಲೇ, ತಪ್ಪಿದರೆ ದಾರಿ ಬದಿಯ ಬಸ್
ಸ್ಟ್ಯಾಂಡ್ ಸ್ವಚ್ಛವಾಗಿದ್ದರೆ ಅಲ್ಲಿ ಮಲಗಿದ್ದೇನೆ. ಸಾವಿರಾರು ಕಿ.ಮಿ ನಡೆದು ಬಂದ
ನನ್ನನ್ನು ಈ ತನಕ ಯಾರೂ ಅನುಮಾನದಿಂದ ನೋಡಿಲ್ಲ. ಯಾಕೆಂದರೆ ನನಗಿಂತ
ಎತ್ತರದಲ್ಲಿರುವ ಈ ಭಾರತದ ಬಾವುಟ! ಇದೇ ಬಾವುಟ ನನ್ನನ್ನು ಇಲ್ಲಿಯ ತನಕ
ಕರೆದುಕೊಂಡು ಬಂದಿದೆ. ಈ ಬಾವುಟವನ್ನು ಶಬರಿಮಲೆಯ ಯಾವುದಾದರೂ ಪವಿತ್ರ
ಜಾಗದಲ್ಲಿ ನೆಟ್ಟು ಬಸ್ ನಲ್ಲಿ ನನ್ನ ಊರು ಸೇರಿಕೊಳ್ಳುತ್ತೇನೆ’ ಎಂದು ರೂಪಂ ಲೋಕಪ್ಪ
ಸ್ವಾಮಿ ಹೇಳಿದ.
ಅವನನ್ನು ಬೀಳ್ಕೊಡುವಾಗ ನನಗೂ ಬೇಸರವೇ ಆಯಿತು. ಹಣ್ಣು ತಿನ್ನು ಅಂತ ಸ್ವಲ್ಪ
ಹಣವನ್ನು ಅವನ ಕಿಸೆಗೆ ಹಾಕಿದೆ. ನೀರು ಬೇಕಾಗಿತ್ತು ಅಂದ. ಅವನೊಟ್ಟಿಗೇ ನಡೆದು ಕೊಂಡು
ಬಂದು ನನ್ನ ಕಾರಿನಲ್ಲಿದ್ದ ನೀರಿನ ಬಾಟಲಿಯನ್ನು ಅವನಿಗೆ ಕೊಟ್ಟು ಹೊರಟು ಬಂದೆ. ಆತ
ಸುಖವಾಗಿ ಶಬರಿಮಲೆ ತಲುಪಿ ಅವನ ಇಷ್ಟದ ಅಯ್ಯಪ್ಪನನ್ನು ದರ್ಶಿಸಲಿ ಎಂದು
ಮನಸ್ಸಿನಲ್ಲೇ ಹಾರೈಸಿದೆ. ಎಷ್ಟೋ ದೂರದ ವರೆಗೆ ಕಾರ್ ನ ಮೀರರ್ ನಲ್ಲಿ ಆತ ಮತ್ತು
ಆತನ ಕೈಯಲ್ಲಿದ್ದ ಕೇಸರಿ, ಬಿಳಿ, ಹಸಿರು ಬಣ್ಣದ ಭಾರತದ ಹೆಮ್ಮೆಯ ಬಾವುಟ ಸಣ್ಣದಾಗಿ
ಕಾಣುತ್ತಲೇ ಇತ್ತು.
ಮನುಕುಲದ ಅಂತರ್ಯದಲ್ಲಿ ಜಿನುಗಿದ ಒಂದು ಬಾಂಧ್ಯದ ಹನಿ ಹರಿಯುವ ನದಿಯಾಗಿಸಿದ ಲೇಖನ…
ನನ್ನದೊಂದು ಸಲಾಮು ಈ ದೇಶ ಭಕ್ತನಿಗೆ
ಜೈ ಾರತ ಮಾತೆ….punya bhumi …
ಸರ್ವ ಧರ್ಮ ಸಮನ್ವಯ ಸಾರುವ ಮತ್ತು ಭಾರತದ ಸಾರ್ವಭೌಮತೆಯ ಮಹತ್ವ ಸಾರುವ ಲೇಖನ ಇಷ್ಟವಾಯಿತು.