ಕರ್ನಾಟಕ ‘ಬರ’ಬಾದ್ : ಸರ್ಕಾರ ಜನರ ದಾಹ ನೀಗಿಸಲಿ

ಈ ವರ್ಷದ ಮಳೆಗಾಲ ನಿರಾಸೆ ಮೂಡಿಸಿದ್ದು ವಾಡಿಕೆಯಂತೆ ಮಳೆಯಾಗದೇ ಬೆಳೆಪೈರು
ಕಮರಿದೆ. ಮನುಷ್ಯರಷ್ಟೇ ಅಲ್ಲ, ಪ್ರಾಣಿಪಕ್ಷಿಗಳೂ ದಾಹ ತಣಿಸಲು ನೀರು ಹುಡುಕುತ್ತಿವೆ.
ಮಹಿಳೆಯರಂತೂ ಕೊಡ ಹಿಡಿದು ಕುಡಿಯುವ ನೀರಿಗಾಗಿ ಎಷ್ಟೆಷ್ಟೋ ದೂರ ಹೆಜ್ಜೆ
ಸವೆಯುತ್ತಿದ್ದಾರೆ. ಪ್ರಕೃತಿ ಮುನಿಸಿಕೊಂಡ ಪರಿಗೆ ಯಾರನ್ನು ಹಳಿಯುವುದು ?
ಬೇಕಾಬಿಟ್ಟಿ ನೀರನ್ನು ಉಪಯೋಗಿಸುತ್ತ, ಕಂಡ ಕಂಡಲ್ಲಿ ಕೊಳವೆ ಬಾವಿ ಕೊರೆಸುತ್ತ,
ಕೆರೆಗಳನ್ನು ಮುಚ್ಚಿ ಇಮಾರತುಗಳನ್ನು ಕಟ್ಟಿಕೊಳ್ಳುತ್ತ ನಾಳೆಯತ್ತ ಕ್ಷಣ ಮಾತ್ರವೂ ದೃಷ್ಟಿ
ಹಾಯಿಸದೇ ಕೇವಲ ಇಂದಿನ ಅಗತ್ಯಗಳನ್ನು ವಿಪರೀತ ಮೋಹದಿಂದ ತೀರಿಸಿಕೊಳ್ಳುತ್ತಿದ್ದೇವೆ.
ಕಳೆದ ಮಳೆಗಾಲ ಕರ್ನಾಟಕಕ್ಕೆ ಆಘಾತಕಾರಿ ಬರಗಾಲವನ್ನು ತಂದೊಡ್ಡಿದೆ. ಹಾಗಾಗಿ ಈ
ಬಾರಿ ಮಳೆಗಾಲ ಬರಲಿಲ್ಲ. ಬದಲಾಗಿ, ಬರಗಾಲ ಬಂದಿದೆ ಎಂದು ಕೃಷಿಕರು ವಿಷಾದದಿಂದ
ಹೇಳುತ್ತಿದ್ದಾರೆ. ನಾವೇ ಮಾಡಿಕೊಂಡ ಸ್ವಯಂಕೃತಾಪರಾಧಕ್ಕೆ ಮಳೆಗಾಲವನ್ನು ದೂರಿ
ಏನು ಪ್ರಯೋಜನ?

ಜೂನ್ ತಿಂಗಳ ಮೊದಲ ಎರಡು ವಾರ ವಾಡಿಕೆಗಿಂತ ಹೆಚ್ಚೇ ಮಳೆ ಸುರಿದಾಗ ‘ಈ ಸಲ
ಮುಂಗಾರು ಮಳೆ ಚೆನ್ನಾಗಿ ಆಗಲಿದೆ’ ಎಂದು ಅಂದುಕೊಂಡಿದ್ದು ನಿಜ. ಮುಂಗಾರಿನ ಭರ್ಜರಿ
ಆರಂಭದಿಂದಾಗಿ ರೈತರೂ ಖುಷಿ ಪಟ್ಟಿದ್ದರು. ಆದರೆ ಅನಂತರದ ತಿಂಗಳುಗಳಲ್ಲಿ ಮಳೆ
ಪ್ರಮಾಣ ತೀವ್ರವಾಗಿ ಕುಸಿಯಿತು. ಮುಂಗಾರು ಕೈ ಕೊಟ್ಟಿದ್ದು ಖಚಿತವಾದ ಬಳಿಕ, ಕೆಲವೆಡೆ
ಹಿಂಗಾರು ಮಳೆಯಾದರೂ ಸಕಾಲಕ್ಕೆ ಸುರಿದೀತು ಎಂಬ ನಿರೀಕ್ಷೆ ಇತ್ತು. ಆದರೆ ನವೆಂಬರ್
ನಲ್ಲಿ ಎರಡು ವಾರ ಉರುಳಿದರೂ ಹಿಂಗಾರು ಮಳೆಯ ಸುಳಿವಿಲ್ಲ. ಕರಾವಳಿಯ ಭತ್ತದ ಸಸಿ
ಗೋಣು ಬಗ್ಗಿಸಿಕೊಂಡು ನೆಲ ಕಚ್ಚಿತು. ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ
ಹೆಸರು, ಜೋಳ, ಸೇಂಗಾ, ಮೆಣಸಿನ ಗಿಡ, ಗೋವಿನ ಜೋಳ, ಹತ್ತಿ, ತೊಗರಿ ಬೆಳೆಗಳು ಮೊಳಕೆ

ಹಂತದಲ್ಲಿಯೇ ಒಣಗಿವೆ. ರಾಜ್ಯ ಬರಗಾಲದ ದವಡೆಗೆ ಸಿಕ್ಕಿಬಿದ್ದಿದ್ದು ಎಲ್ಲೆಡೆ ಆತಂಕದ
ಕಾರ್ಮೋಡ ಕವಿದಿದೆ.
ರಾಜ್ಯ ಸರಕಾರ ಇದೀಗ 216 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು
ಘೋಷಿಸಿದೆ. 236 ತಾಲೂಕುಗಳಲ್ಲಿ 216 ತಾಲೂಕುಗಳೂ ಬರಪೀಡಿತವೆಂದರೆ ಇಡೀ
ಕರ್ನಾಟಕರವೇ ‘ಬರ’ಬಾದ್ ಎಂದೇ ಅರ್ಥೈಸಬಹುದಾಗಿದೆ. ಬರಗಾಲದೊಟ್ಟಿಗೇ ಇನ್ನೂ
ಆತಂಕದ ಸಂಗತಿ ಏನೆಂದರೆ ಕನ್ನಡ ನಾಡಿನಲ್ಲಿ ಅಂತರ್ಜಲ ಮಟ್ಟವೂ ಗಾಬರಿ
ಹುಟ್ಟಿಸುವಷ್ಟರ ಮಟ್ಟಿಗೆ ಕೆಳಕ್ಕೆ ಹೋಗಿದೆ.

ಇಂತಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಬೇಕಾದ ಕರ್ತವ್ಯ ಜನಪ್ರತಿನಿಧಿಗಳದ್ದು
ಮತ್ತು ಸರ್ಕಾರಿ ಅಧಿಕಾರಿಗಳದ್ದು. ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳ
ಉಸ್ತುವಾರಿ ಹೊತ್ತಿರುವ ಕಾರ್ಯದರ್ಶಿಗಳ ಜೊತೆಗೂಡಿ ಬರಪರಿಹಾರ ಮಾರ್ಗೋಪಾಯ
ಯೋಜನೆಯನ್ನು ರೂಪಿಸಬೇಕಿದೆ. ಈ ಯೋಜನೆಯನ್ವಯ ಬಹುತೇಕ ಜಿಲ್ಲೆಗಳಲ್ಲಿ ಶಾಸಕರ
ಅಧ್ಯಕ್ಷತೆಯ ಕಾರ್ಯಪಡೆ ಸಮಿತಿಗಳು ಸಭೆ ನಡೆಸಿ ಪರಿಸ್ಥಿತಿಯನ್ನು ನಿಭಾಯಿಸಲು
ಸಮರೋಪಾದಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಆದರೆ ಇದ್ಯಾವುದೂ ಆಗಿಲ್ಲ
ಎನ್ನುವುದು ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯವನ್ನಷ್ಟೇ ತೋರುತ್ತಿದೆ. ಬರಪರಿಹಾರದ
ಕಾಮಗಾರಿಗಳಿಗೆ ಹಣದ ಕೊರತೆಯಿಲ್ಲ ಎಂದು ಸಚಿವರು/ಅಧಿಕಾರಿಗಳು ಹೇಳುತ್ತಿದ್ದಾರೆ.
ಹಾಗಿದ್ದರೆ ಬರಪರಿಹಾರ ಕಾಮಗಾರಿಗಳೇಕೆ ಇನ್ನೂ ಶುರುವಾಗಿಲ್ಲ? ನಾಲ್ಕಾರು
ತಿಂಗಳಲ್ಲಿಯೇ ಬರಲಿರುವ ಲೋಕಸಬಾ ಚುನಾವಣಾ ಸಿದ್ಧತೆಯಲ್ಲಿ ಎಲ್ಲರೂ
ಬರಗಾಲವನ್ನು ಮರೆತಿದ್ದಾರೆಯೇ? ಬರಪೀಡಿತ ತಾಲೂಕುಗಳ ಯಾದಿಯನ್ನು ಕೇಂದ್ರಕ್ಕೆ
ಕಳುಹಿಸಿದ್ದೇವೆ. ಅಲ್ಲಿಂದ ಉತ್ತರವಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿಯವರು
ಹೇಳುತ್ತಲೇ ಇದ್ದಾರೆಯೇ ಹೊರತು ರಾಜ್ಯ ಸರ್ಕಾರ ಬರಗಾಲ ನಿರ್ವಹಿಸುವಲ್ಲಿ ಏನು
ಮಾಡುತ್ತಿದೆ ಎಂದು ಚಕಾರ ಎತ್ತುತ್ತಿಲ್ಲ. ತೆಲಂಗಾಣ ಚುನಾವಣೆಯಲ್ಲಿ ಮುಖ್ಯಮಂತ್ರಿ,
ಉಪಮುಖ್ಯಮಂತ್ರಿ, ಕೆಲ ಸಚಿವರು ಅಲ್ಲಿಯೇ ಕೆಲ ದಿನ ಡೇರೆ ಹೂಡಿದ್ದರು. ಅನಂತರ
ಅಧಿವೇಶನದ ಗದ್ದಲದಲ್ಲಿ ಮುಳುಗಿದರು, ಈ ವಾರ ಮತ್ತೆ ಕಾಂಗ್ರೆಸ್ ಹೈಕಮಾಂಡ್
ದೆಹಲಿಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯನ್ನು ಮೂರು ದಿನಗಳ ಮಟ್ಟಿಗೆ ಲೋಕಸಭೆ

ಚುನಾವಣೆ ಮತ್ತು ನಿಗಮ ಮಂಡಳಿ ರಚನೆಗೆ ಸಂಬಂಧಿಸಿದಂತೆ ಚರ್ಚಿಸಲು ಕರೆದಿದ್ದಾರೆ ಎಂದು
ಹೇಳಲಾಗುತ್ತಿದೆ. ಹಾಗದರೆ ರಾಜ್ಯದ ಬರಗಾಲದ ಬಗ್ಗೆ ಚರ್ಚಿಸುವವರು ಯಾರು? ಜನರ
ಗೋಳು ಕೇಳುವವರು ಯಾರು ? ಕೇವಲ ಚುನಾವಣೆ, ನಿಗಮ ಮಂಡಳಿ ನೇಮಕ ದ ಚರ್ಚೆಗೆ
ಮೂರು ದಿನ ಜನರ ದುಡ್ಡಿನಲ್ಲಿ ದೆಹಲಿಯಲ್ಲಿ ಠಿಕಾಣಿ ಹೂಡಬೇಕೆ?

ಅಧಿಕಾರದಲ್ಲಿರಬೇಕೆಂಬ ಗುಂಗಿನಲ್ಲಿ ರಾಜ್ಯದ ಬರಗಾಲ ಮರೆತರೆ ಅದು ಬಹುದೊಡ್ಡ
ಅಕ್ಷಮ್ಯ. ಮುಖ್ಯಮಂತ್ರಿಯವರು ಹಳೆ ಮೈಸೂರಿನ ಕೆಲ ಭಾಗಗಳಿಗೆ ಪ್ರವಾಸ ಕೈಗೊಂಡು
ಅಭಿವೃದ್ಧಿ ಕೆಲಸಗಳ ಪರಿಶೀಲನೆ ನಡೆಸಿದ್ದಾರೆ ಎನ್ನುವುದು ನಿಜ. ಆದರೆ ಕರಾವಳಿ, ಉತ್ತರ
ಕರ್ನಾಟಕದ ಜಿಲ್ಲೆಗಳತ್ತಲೂ ಅವರ ಗಮನ ಇರಬೇಕಲ್ಲವೇ? ಉಪ ಮುಖ್ಯಮಂತ್ರಿಗಳೂ ಈ
ಹೊಣೆ ಹಂಚಿಕೊಳ್ಳಬಹುದಲ್ಲವೇ? ಜಿಲ್ಲಾ ಉಸ್ತುವಾರಿ ಸಚಿವರಿಗೆ ತಕ್ಷಣ ಆಯಾ
ಜಿಲ್ಲೆಗಳಿಗೆ ತೆರಳಿ ಬರಪರಿಹಾರ ಯೋಜನೆ ರೂಪಿಸುವಂತೆ ಮುಖ್ಯಮಂತ್ರಿಯವರು ಒತ್ತಡ
ಹೇರಬೇಕಿದೆ. ಒಣಗುತ್ತಿರುವ ಕೆರೆ ಕುಂಟೆಗಳ ಅಂತರ್ಜಲ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವುದು,
ಜಾನುವಾರುಗಳಿಗೆ ಎಲ್ಲ ಜಿಲ್ಲೆಗಳಲ್ಲೂ ಮೇವು ಸಂಗ್ರಹ ಸಾಕಷ್ಟು ಇರುವಂತೆ
ನೋಡಿಕೊಳ್ಳುವುದು ಮತ್ತು ಮುಖ್ಯವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳ ಕೃಷಿ ಕಾರ್ಮಿಕರು,
ರೈತರು ಹೊರ ರಾಜ್ಯಗಳಿಗೆ ಗುಳೇ ಹೋಗುವುದನ್ನು ತಡೆಯಲು ಉದ್ಯೋಗ ಖಾತ್ರಿ
ಯೋಜನೆಯನ್ನು ಜಾರಿಗೊಳಿಸುವುದು ಈಗ ಜರೂರಾಗಿ ಆಗಬೇಕಾಗಿರುವ ಕೆಲಸ. ಕೇವಲ
ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಶಾಸಕರು, ಮಂತ್ರಿಗಳು ಮಾತ್ರವಲ್ಲ, ವಿರೋಧ
ಪಕ್ಷದ ಶಾಸಕರೂ ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು ಎದ್ದು ಕಾಣುತ್ತಿದೆ. ಇಂತಹ
ಸಂದರ್ಭದಲ್ಲಿ ಸರಕಾರವನ್ನು ತಿವಿದು ಎಚ್ಚರಿಸುವ ಕೆಲಸವನ್ನು ಮಾಡುವಲ್ಲಿ ವಿರೋಧ
ಪಕ್ಷವೂ ವಿಫಲವಾಗಿರುವುದು ವಿಷಾದದ ಸಂಗತಿ. ಬೆಳಗಾವಿ ಅಧಿವೇಶದಲ್ಲೂ ವಿರೋಧ
ಪಕ್ಷಗಳು ತಮ್ಮ ಜವಾಬ್ದಾರಿ ಮರೆತು ಸರಕಾರವನ್ನು ಜನರ ಹಿತದೃಷ್ಟಿಯಿಂದ
ಕಟ್ಟಿಹಾಕುವಲ್ಲಿ ಸಂಪೂರ್ಣ ಸೋತಿದೆ.

Leave a Reply

Your email address will not be published. Required fields are marked *