ದಾಂಡೇಲಿ: ಸಂಗೀತ ಕೇಳುವುದರಿಂದ, ರಚಿಸುವುದರಿಂದ ನಮ್ಮ ಮನಸ್ಸಿನಾಳದಲ್ಲಿ
ಹುದುಗಿರುವ ನೋವುಗಳನ್ನು ಹೊರ ಹಾಕಬಹುದು. ಇದೊಂದು ಸ್ವಯಂ ಅಭಿವ್ಯಕ್ತಿಯ
ಪ್ರಬಲ ರೂಪವಾಗಿದೆ ಎಂದು ಬಂಗೂರನಗರ ಪದವಿ ಕಾಲೇಜಿನ ನಿವೃತ್ತ ಉಪ ಪ್ರಾಚಾರ್ಯ
ಡಾ. ಪಿ.ವಿ.ಶಾನಭಾಗ್ ನುಡಿದರು.
ಇಲ್ಲಿಯ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸುಸ್ವರ ಸಂಗೀತ ಸಂಸ್ಥೆ ಹಮ್ಮಿಕೊಂಡ
‘ಸುಸ್ವರ ಸಂಭ್ರಮ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಒತ್ತಡ ನಿವಾರಣೆಗೆ
ಸಂಗೀತವೇ ಮದ್ದಾಗಿಯೂ ಕೆಲಸ ಮಾಡಬಲ್ಲದು ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸಾಹಿತಿ ನಾಗರೇಖಾ ಗಾಂವಕರ, ರಾಗ, ತಾಳ,
ಹಾಡುಗಳಲ್ಲಿಯ ವೈವಿಧ್ಯ, ಬಹುಮುಖತ್ವ ಬದಲು ಏಕಾಗ್ರತೆಯ ವಿಕಾಸದೆಡೆಗೆ ಸಾಗಿದಾಗ
ಮಾತ್ರ ಸಂಗೀತ ಭಿನ್ನವಾಗಿ ತೋರುತ್ತದೆ ಎಂದರು.

ಬಾಂಗೂರನಗರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ಆಶಾಲತಾ ಜೈನ್ ಸುಸ್ವರ ಸಂಗೀತ
ಸಂಸ್ಥೆಯ ಕಾರ್ಯ ನಿರ್ವಹಣೆ ಬಗ್ಗೆ ಮೆಚ್ಚುಗೆ ಮಾತನಾಡಿದರು.
ಬಾಂಗೂರನಗರ ಪದವಿ ಕಾಲೇಜಿನ ಉಪ ಪ್ರಾಚಾರ್ಯ ಶಿವಯೋಗಿ ಹಿರೇಮಠ ಅಧ್ಯಕ್ಷತೆ
ವಹಿಸಿದ್ದರು.
ಕಾರ್ಯಕ್ರಮದ ನಂತರ ಸುಸ್ವರ ಸಂಗೀತ ಸಂಸ್ಥೆಯ ಮುಖ್ಯಸ್ಥರಾದ ಶಶಿಕಲಾ ಗೋಪಿ
ಹಾಗೂ ಅವರ ಶಿಷ್ಯವೃಂದದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ರಾಜೇಂದ್ರ
ಭಾಗ್ವತ್ ಹೆಗ್ಗಾರ್, ಪುನೀತಕುಮಾರ್ ತಬಲಾ ವಾದಕರಾಗಿ ಸಾಥ್ ನೀಡಿದರೆ,
ಸಂವಾದಿನಿಯಾಗಿ ಹುಬ್ಬಳ್ಳಿಯ ವಿದ್ವಾನ್ ಕಿರಣ್ ಆಯಾಜೀತ ಪಾಲ್ಗೊಂಡಿದ್ದರು.
ಅಮೃತಾ ಭಟ್ ಸ್ವಾಗತಿಸಿದರು.ಕವಿತಾ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಸ್ಮಿತಾ
ಗುರುರಾಜ್ ವಂದಿಸಿದರು.
ಶಶಿಕಲಾ ಚಂದ್ರಕಾಂತ್ ಗೋಪಿ
ಉತ್ತರ ಕನ್ನಡ ಜಿಲ್ಲೆಯ ಸಂಗೀತ ಕ್ಷೇತ್ರದಲ್ಲಿ ದ್ರುವ ನಕ್ಷತ್ರದಂತೆ ಮಿನಗುತ್ತಿರುವ ದಾಂಡೇಲಿಯ ಶಶಿಕಲಾ ಚಂದ್ರಕಾಂತ್ ಗೋಪಿ ಅವರು ದಾಂಡೇಲಿಯವರು.

ಅವರು ದಾಂಡೇಲಿಯಲ್ಲಿ ಸುಸ್ವರ ಸಂಗೀತ ಸಂಸ್ಥೆಯನ್ನು ಆರಂಭಿಸಿ ನುರಾರು ಶಿಷ್ಯರಿಗೆ ಸಂಗೀತಾಭ್ಯಾಸ ಹೇಳಿಕೊಡುತ್ತ ಈ ಕ್ಷೇತ್ರದಲ್ಲಿ ಕೃಷಿ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ, ಜಿಲ್ಲೆಯ ಹೊರಗೂ ಹಲವಾರು ಸಂಗೀತ ಕಛೇರಿಯನ್ನು ನಡೆಸಿಕೊಟ್ಟ ಶಶಕಲಾ ಗೋಪಿ ಅವರು ಪ್ರಾರಂಭಿಕ ಶಾಸ್ತ್ರೀಯ ಸಂಗೀತ ಅಭ್ಯಾಸವನ್ನು ಯಲ್ಲಾಪುರದ ಲತಾ ಉಡಗಣಿ
ಅವರ ಬಳಿ ಕಲಿತು ಜ್ಯೂನರ್ ಪರೀಕ್ಷೆ ಮುಗಿಸಿರುತ್ತಾರೆ. ಅನಂತರ ಯಲ್ಲಾಪುರದ ವಿದ್ವಾನ್ ಗಣಪತಿ ಹೆಗಡೆ ಅವರ ಬಳಿ ಅಭ್ಯಾಸ ಮಾಡುತ್ತಿದ್ದು ಸಿನಿಯರ್ ಮತ್ತು ವಿದ್ವತ್ ಪ್ರಥಮ
ಪರೀಕ್ಷೆ ಬರೆದಿದ್ದಾರೆ. ದಾಂಡೇಲಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಸುಸ್ವರ ಸಂಗೀತ ವಿದ್ಯಾ ಸಂಸ್ಥೆಯನ್ನು ಹುಟ್ಟುಹಾಕಿ ಇದರ ಮೂಲಕ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತ ವರ್ಗವನ್ನು ನಡೆಸುತ್ತಿದ್ದಾರೆ. ಪ್ರಸ್ತುತ ಸುಸ್ವರದಲ್ಲಿ 85 ವಿದ್ಯಾರ್ಥಿಗಳು
ಅಭ್ಯಾಸ ಮಾಡುತ್ತಿದ್ದಾರೆ.