ಅಂದು 19 ನವೆಂಬರ್ 1973, ಮೈಸೂರಿನ ಪ್ರತಿಷ್ಠಿತ ಮಹಾರಾಜ ಕಾಲೇಜಿನ ಶತಮಾನೋತ್ಸವ ಸಭಾಂಗಣದಲ್ಲಿ ‘ಡಾ. ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಥಾಟ್ಸ್’ (Dr. B.R.Ambedkar School of Thoughts) ಸಂಘಟನೆಯು ಆಯೋಜಿಸಿದ್ದ
‘New Waves’ (ಹೊಸ ಅಲೆಗಳು) ವಿಚಾರ ಸಂಕಿರಣ ಕಾರ್ಯಕ್ರಮದ ಅತಿಥಿಗಳಲ್ಲೊಬ್ಬರಾದ ವಕೀಲ ಸಂಜೀವಯ್ಯನವರು ಎಂದಿನಂತೆ ತಮ್ಮ ಅಸ್ಖಲಿತ-ನಿರರ್ಗಳ ಇಂಗ್ಲಿಷ್ ನಲ್ಲಿ ಸಭಿಕರನ್ನುದ್ದೇಶಿಸಿ ಭಾಷಣ ಆರಂಭಿಸುತ್ತಿದ್ದಂತೆ ಕೆಲವರು ಅರ್ಥವಾಗದೇ ಕನ್ನಡದಲ್ಲಿ ಮಾತನಾಡುವಂತೆ ಒತ್ತಾಯಿಸಿ ‘ಕನ್ನಡ, ಕನ್ನಡ…’ ಎಂದು ಕೂಗತೊಡಗಿದರು. ಸಂಜೀವಯ್ಯನವರ ನಂತರದ ಸರದಿ ಅಂದಿನ ಕಂದಾಯ ಸಚಿವ ಬಿ.ಬಸವಲಿಂಗಪ್ಪ ( B.Basavalingappa) ನವರದು.
ಮಾತಿಗೆ ನಿಂತ ಬಿ.ಬಸವಲಿಂಗಪ್ಪ ‘ಕನ್ನಡ, ಕನ್ನಡ…’ ಎಂದು ಕೂಗಿದವರನ್ನು ಛೇಡಿಸುತ್ತ, ಬಹುಪಾಲು ಸಂಸ್ಕೃತ ನಿಷ್ಠ ಮತ್ತು ಊಳಿಗಮಾನ್ಯ ಶಕ್ತಿಗಳ ಪರವಾದ ಸಾಹಿತ್ಯಕ ವಾರಸುದಾರಿಕೆಯನ್ನು ಟೀಕೆ ಮಾಡುತ್ತ, ವರ್ತಮಾನದ ವಾಸ್ತವಕ್ಕನುಗುಣವಾಗಿ ಈ ನಾಡಿನ ತಳ ಸಮುದಾಯಗಳು ಆಧುನಿಕತೆಗೆ ತೆರೆದುಕೊಳ್ಳಬೇಕೆಂದರೆ ಇಂಗ್ಲಿಷ್ ಭಾಷೆಯನ್ನು ಕಲಿಯಲೇ ಬೇಕಾದ ಅನಿವಾರ್ಯತೆಯನ್ನು ಹೇಳುತ್ತ, ಸಭಿಕರಿಗೆ ಮನವರಿಕೆಯಾಗುವಂತೆ ಆಡುಮಾತಿನಲ್ಲಿ ‘ಕನ್ನಡ ಸಾಹಿತ್ಯದ ಬಹುಪಾಲು ಬೂಸಾ ಸಾಹಿತ್ಯವೇ’ ಎಂದ ಮಾತು ನಾಡು ಹಿಂದೆಂದೂ ಕಂಡರಿಯದ ವಿಪ್ಲವಕ್ಕೆ ಕಾರಣವಾಗಿ, ಜಾತಿ ಕೇಂದ್ರಿತ ಹಿತಾಸಕ್ತಿಗಳ ಸಂಚಿನ ಭಾಗವಾಗಿ ಸಚಿವ ಬಸವಲಿಂಗಪ್ಪ ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ನೀಡಿದ್ದು ಆಧುನಿಕ ಕನ್ನಡ ನಾಡಿನ ಇತಿಹಾಸದ ಬಹಳ ಪ್ರಮುಖ ಅಧ್ಯಾಯಗಳಲ್ಲೊಂದು. (ಬೂಸಾ ಅಂದರೆ ಜಾನುವಾರುಗಳಿಗೆ ಹಾಕುವ ಮೇವು, ಹಿಂಡಿ ಅಥವಾ ಕಸ) ಈಗ, ಮಂತ್ರಿ ಬಸವಲಿಂಗಪ್ಪನವರ ತಲೆ ದಂಡಕ್ಕೆ ಅವರಾಡಿದ ಮಾತುಗಳಷ್ಟೇ ಕಾರಣವೇ? ‘ಬೂಸಾ’
(Boosa-meaning fodder or trash) ಪೂರ್ವದ ಇತಿಹಾಸದ ಪುಟಗಳನ್ನು ತೆರೆಯೋಣ ಬನ್ನಿ.

1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ನಂತರ ದೇಶದೊಳಗೆ ‘ಭಾಷಾವಾರು ರಾಜ್ಯಗಳ ವಿಂಗಡನೆ’ ಚಳುವಳಿ ಆರಂಭವಾದಾಗ, ಕರ್ನಾಟಕದಲ್ಲೂ ‘ಕರ್ನಾಟಕ ಏಕೀಕರಣ ಚಳುವಳಿ’ ಉಚ್ಛ್ರಾಯವಾಗಿತ್ತು. ಈ ಚಳುವಳಿಯ ಅನೇಕ ಮಜಲುಗಳಲ್ಲಿ ಬಸವಲಿಂಗಪ್ಪನವರ ದುಡಿಮೆ ಹಿರಿದಾದುದು ಎಂದು ಏಕೀಕರಣದ ವಿಶ್ಲೇಷಕರು ಗುರುತಿಸುತ್ತಾರೆ. ವಕೀಲರೂ ಆಗಿದ್ದ ಬಸವಲಿಂಗಪ್ಪ, ಕನ್ನಡ ಚಳುವಳಿಗಾರರ ಪರವಾಗಿ ಬಿಡಿಗಾಸನ್ನು ಪಡೆಯದೇ ಕಾನೂನು ಹೋರಾಟ ನಡೆಸಿದ ಹಲವು ಉದಾಹರಣೆಗಳಿಗೆ ವಾಟಾಳ್ ನಾಗರಾಜ್ ಸೇರಿದಂತೆ ಹಲವರ ಸಾಕ್ಷ್ಯವಿದೆ.

1957ರ ಎರಡನೇ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುವ ಬಸವಲಿಂಗಪ್ಪ, 1958ರಲ್ಲಿ ಬಿ.ಡಿ.ಜತ್ತಿಯವರ ಸಚಿವ ಸಂಪುಟದಲ್ಲಿ ಉಪ ಗೃಹ ಮಂತ್ರಿಯಾಗಿ ನಾಡಿನ ತಳ ಸಮುದಾಯಗಳಿಗೆ ಸಮರ್ಥ ನಾಯಕತ್ವ ನೀಡುವಲ್ಲಿ ಯಶಸ್ವಿಯಾಗುತ್ತಾರೆ. ದಲಿತ ಕೇರಿಯ ಹುಡುಗನೊಬ್ಬ ಅಂಬೇಡ್ಕರ್ ವಿಚಾರಧಾರೆಯಿಂದ ಪ್ರೇರಿತನಾಗಿ ಸರ್ವ ಸಮಾನತಾ ಸಿದ್ಧಾಂತದ ಅನುಷ್ಠಾನಕ್ಕಾಗಿ ದುಡಿಯತೊಡಗಿದಾಗ ನೂರಾರು ವರ್ಷಗಳಿಂದ ಊಳಿಗಮನಾನ್ಯ ವ್ಯವಸ್ಥೆಯ ಲಾಭಕೋರ ಸಮುದಾಯಗಳ ಕಣ್ಣು ಕೆಂಪಾಗತೊಡಗಿದವು. ಇದೇ ಸಮಯದಲ್ಲಿ ಪಕ್ಕದ ತಮಿಳುನಾಡಿನಲ್ಲಿ ದ್ರಾವಿಡ ಅಸ್ಮಿತೆಯ ಪ್ರತಿಪಾದನೆಗಾಗಿ ಪೆರಿಯಾರ ರಾಮಸ್ವಾಮಿ (Periyar Ramaswami) ಯವರ ಮುಂದಾಳತ್ವದಲ್ಲಿ ‘ತಮಿಳು ಸ್ವಾಭಿಮಾನ ಚಳುವಳಿ’ ಪ್ರಖರವಾಗಿತ್ತು.
ವರ್ಣ ವ್ಯವಸ್ಥೆಯ ಮೇಲ್ಪಂಕ್ತಿಯಲ್ಲಿ ವಿರಾಜಮಾನವಾಗಿ ಕುಳಿತು ಸಾಮಾಜಿಕ ಮತ್ತು ಸಾಂಸ್ಕೃತಿಕ ರಾಜಕಾರಣದ ಮೂಲಕ ಜನ ಸಾಮಾನ್ಯರ ಬದುಕಿನ ಜುಟ್ಟು ಹಿಡಿದು ಆಟವಾಡಿಸುತ್ತಿದ್ದ ಪುರೋಹಿತಷಾಹಿಗೆ ತಂದೆ ಪೆರಿಯಾರರು ತಮಿಳುನಾಡಿನಲ್ಲಿ ಸಿಂಹಸ್ವಪ್ನವಾಗಿದ್ದರು. ಪೆರಿಯಾರ್ ಚಳುವಳಿಯ ಕಾವು ಕರ್ನಾಟಕಕ್ಕೂ ಅಲೆಗಳಾಗಿ ತಟ್ಟುತ್ತಿತ್ತು.
ಕರ್ನಾಟಕದ ರಾಜಕಾರಣದಲ್ಲಿ ಭರವಸೆಯ ರಾಜಕಾರಣಿಯಾಗಿ ಅರಳುತ್ತಿದ್ದ ಬಸವಲಿಂಗಪ್ಪನವರು ತಮಿಳುನಾಡಿನ ಪೆರಿಯಾರ್ ಅವರಂತೆಯೇ ಇಲ್ಲಿ ಘರ್ಜಿಸತೊಡಗಿದ್ದರು. ರಾಮಾಯಣ-ಮಹಾಭಾರತ ಮೊದಲ್ಗೊಂಡು ಕಲ್ಪಿತ ಪುರಾಣಗಳ ಆಧಾರವನ್ನು ಸಮರ್ಥವಾಗಿ ಪ್ರಶ್ನಿಸುತ್ತಿದ್ದ ಪೆರಿಯಾರರು ದೇವತಾರಾಧನೆಯ ಕಡು ವಿರೋಧಿಯಾಗಿದ್ದರು. ಕಾಲ್ಪನಿಕ ದೇವರ ಕಲ್ಲಿನ ಮೂರ್ತಿಗಳ ವಿರುದ್ಧ ಸಮರವನ್ನೇ ಸಾರಿದ್ದರು. ಅಂತೆಯೇ ಇಲ್ಲಿ, ತಮ್ಮಂತಹ ಮನುಷ್ಯರನ್ನೇ ಮನುಷ್ಯರೆಂದು ಪರಿಗಣಿಸದೆ, ಹುಟ್ಟಿನ ಆಧಾರದಲ್ಲಿ ಜಾತಿ ವಿಂಗಡಿಸಿ, ದೇವರ ಹೆಸರಿನಲ್ಲಿ ಯಜಮಾನಿಕೆ ನಡೆಸುತ್ತಿದ್ದ ಸಮುದಾಯಗಳಿಗೆ ಸೆಡ್ಡು ಹೊಡೆಯಲು ಬಸವಲಿಂಗಪ್ಪ ‘ದೇವರ ಪಟಗಳನ್ನು ಚರಂಡಿಗೆ ಎಸೆಯಿರಿ’ ಎಂದಾಗ ಜಾತಿವಾದಿಗಳ ಮನಸಿಗಾದ ಘಾಸಿ ಬಹಿರಂಗವಾಗಿ ಕಾಣಿಸದೆ ಸುಡುವ ಕೆಂಡ ಬೂದಿಯ ಮರೆಯಲ್ಲಿದ್ದಂತೆ ಮೌನ ತಾಳಿತು; ಸಮಯಕ್ಕಾಗಿ ಕಾಯತೊಡಗಿತು

ರಾಜಕಾರಣದ ಮುಖ್ಯವಾಹಿನಿಯಲ್ಲಿದ್ದಾಗ್ಯೂ ತನ್ನ ವೈಚಾರಿಕ ಚಿಂತನೆಗಳು ಮಸುಕಾಗದಂತೆ ಕಾಪಿಟ್ಟ ಬಸವಲಿಂಗಪ್ಪ ವಿಧಾನಸಭೆಯ ಒಳ-ಹೊರಗೆ ವ್ಯವಸ್ಥೆಯ ತರತಮಗಳ ವಿರುದ್ಧ ಗಟ್ಟಿ ಧ್ವನಿಯಾಗಿದ್ದರು.
1972ರಲ್ಲಿ ದೇವರಾಜ ಅರಸರ ಸಂಪುಟದಲ್ಲಿ ಪೌರಾಡಳಿತ ಮತ್ತು ವಸತಿ ಸಚಿವರಾಗಿದ್ದ ಬಸವಲಿಂಗಪ್ಪ ಶತಮಾನಗಳಿಂದ ಬಯಲನ್ನೇ ಆಲಯವಾಗಿಸಿ ಬಲಿಪಶುಗಳಂತೆ ಜೀವನ ಸವೆಸುತ್ತಿದ್ದ ತಳ ಸಮುದಾಯಗಳೀಗೆ ಮೂಲಭೂತ ಅವಶ್ಯಕತೆಗಳಲ್ಲಿ ಪ್ರಮುಖವಾದ ವಸತಿಯನ್ನು ಸರ್ಕಾರದಿಂದ ನಿರ್ಮಿಸಿಕೊಡುವ ಮೂಲಕ ಕೇರಿಗಳನ್ನು ಊರುಗಳನ್ನಾಗಿ ಬದಲಿಸತೊಡಗಿ, ಈ ದೇಶದ ಜಾತಿ ಸಮಾಜದ ಶ್ರೇಣೀಕರಣದ ಧ್ವಂಸವೋ ಎಂಬಂತೆ ಇಡೀ ರಾಷ್ಟ್ರದಲ್ಲೇ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ಅಮಾನವೀಯ ಮಲ ಹೊರುವ ಪದ್ಧತಿಯನ್ನು
ಕಾಯ್ದೆಯ ಮೂಲಕ ನಿಷೇಧಿಸಿ ಮಾನವ ಘನತೆಗಂಟಿದ್ದ ಕಳಂಕವನ್ನು ತೊಳೆಯಲು ಕಟಿಬದ್ಧರಾಗಿ ನಿಂತರು. ತನ್ಮೂಲಕ ತನ್ನ ಸಮುದಾಯದ ಸ್ವಾಭಿಮಾನದ ಬದುಕಿಗೆ ಮುನ್ನುಡಿ ಬರೆದ ಬಾಬಾಸಾಹೇಬರ ‘ವಿಮೋಚನಾ ರಥ’ದ ಸಮರ್ಥ ಸಾರಥಿಯಾಗಿ ಬದಲಾಗಿದ್ದರು.

ಹೀಗೆ ತಮ್ಮ ಖಾಸಗಿ ಹಾಗೂ ಸಾರ್ವಜನಿಕ ಬದುಕಿನುದ್ದಕ್ಕೂ ಪಟ್ಟಭದ್ರ ಹಿತಾಸಕ್ತಿಗಳ ಹುಟ್ಟಡಗಿಸುವ ದಿಸೆಯಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದ ನಾಡಿನ ತಳ ಸಮುದಾಯಗಳನ್ನು ‘ಬುದ್ಧ-ಭೀಮ’ರ ಸಿದ್ಧಾಂತಗಳಡಿಯಲ್ಲಿ ಸಂಘಟಿಸಿ ಸ್ವಾಭಿಮಾನಿಗಳಾಗಲು ಪ್ರೇರೇಪಿಸುತ್ತಿದ್ದ ಬಸವಲಿಂಗಪ್ಪನವರ ವಿರುದ್ಧ ನಾಡಿನ ಬಲಿಷ್ಠ ಜಾತಿ ಸಮುದಾಯಗಳು ನಿರಂತರ ಕತ್ತಿ ಮಸಿಯುತ್ತಾ ಅವಕಾಶಕ್ಕಾಗಿ ಕಾಯತೊಡಗಿದರು.
ಕೊನೆಗೂ ಅದೊಂದು ಅವಕಾಶ ಈ ಶ್ರೇಣೀಕೃತ ವ್ಯವಸ್ಥೆಗೆ ದಕ್ಕಿಯೇ ಬಿಟ್ಟಿತು.
ಅದುವೇ ‘ಬೂಸಾ’ ಪ್ರಕರಣ !
(ಮುಂದಿನ ವಾರದ ಸಂಚಿಕೆಯಲ್ಲಿ ಮುಂದುವರೆಯುವುದು.)

ಲೇಖಕರು :
ಪ್ರೊ. ಸಂದೇಶ ಎಚ್ ರತ್ನಪುರಿ
ಮೈಸೂರು