ಬಾಡಿತು ಬೆಳೆ. ಬರಡಾಯಿತು ರೈತರ ಬದುಕು. ಇದು ಉತ್ತರ ಕನ್ನಡ ಜಿಲ್ಲೆಯ ರೈತರ ಬದುಕಿನ ಬಂಡಿ ಬುಡಮೇಲಾದ ಇಂದಿನ ಪರಿಸ್ಥಿತಿ. ನದಿ ತೀರದಲ್ಲಿ ಪ್ರವಾಹದಿಂದ , ಉಳಿದೆಡೆ ಮಳೆಯ ಕೊರತೆಯಿಂದ ಉತ್ತಿ – ಬಿತ್ತಿದ್ದ ಬೆಳೆ ಬಾಡಿದೆ.
ಮಳೆ ಕೊರತೆಯಿಂದ ಬಾಧಿತಗೊಂಡಿರುವ ಮುಂಡಗೋಡ, ಹಳಿಯಾಳ,ಯಲ್ಲಾಪುರ, ಜೋಯಿಡಾ ತಾಲ್ಲೂಕುಗಳಲ್ಲೀಗ ನೀರವ ಮೌನ. ಈ ತಾಲ್ಲೂಕುಗಳಲ್ಲಿ ಹುಲುಸಾಗಿ ಬೆಳೆದು ನಳನಳಿಸುತ್ತಿದ್ದ ಬೆಲೆಬಾಳುವ ಭತ್ತ, ಕಬ್ಬು, ಹತ್ತಿ, ಬಾಳೆ, ಅಡಿಕೆ ಮತ್ತಿತರ ಬೆಳೆ ಒಣಗಿ ನಿಂತಿದೆ. ಮಳೆ ಕೊರತೆಯಿಂದ ರೈತರಲ್ಲಿ ಚಿಗುರೊಡೆಯುತ್ತಿದ್ದ ಭಾವನೆಗಳನ್ನು ಬತ್ತಿಸಿದೆ. ಹೀಗಾಗಿ ಎಲ್ಲರೂ ತಲೆಯ ಮೇಲೆ ಕೈ ಹೊತ್ತು ಕುಳಿತ್ತಿದ್ದಾರೆ.
ತಮ್ಮ ಕೈಯಾರೆ ಬೆಳೆಸಿದ ಬೆಳೆ ಹಾಳಾಗಿ ಹೋಗುತ್ತಿರುವುದನ್ನು ಕಂಡು ಕಣ್ಣೀರಿಡುತ್ತಿದ್ದಾರೆ. ಬರ ಪರಿಹಾರವಾಗಿ ರಾಜಕಾರಣಿಗಳ ಆಶ್ವಾಸನೆಯಂತೂ ಬಲು ಜೋರಾಗಿದೆ. ಆದರೂ ಪರಿಹಾರವೆಂಬುದು ಮರೀಚಿಕೆಯಾಗಿಯೇ ಇದೆ. ರಾಜಕಾರಣಿಗಳ ಭೇಟಿ, ಭರವಸೆಯ ಮಾತುಗಳು ರೈತರಲ್ಲಿ ಜಿಗುಪ್ಸೆ ಮೂಡಿಸಿದೆ. ಇದ್ದ ಬೆಳೆಯೆಲ್ಲ ನೀರಿಲ್ಲದೇ ಒಣಗಿ ಹೋಯಿತು. ಹೊಲ ಸ್ವಚ್ಛ ಮಾಡಲು ಕೆಲಸವಿದ್ದರೂ ಕೈಯಲ್ಲಿ ಹಣವಿಲ್ಲದೆ ಪರದಾಡುವಂತಾಗಿದೆ. ರೈತರು ಸಾಲ ಮಾಡಿ ಹಗಲಿರುಳು ದುಡಿದು ಬೆಳೆಸಿದ್ದ ಭತ್ತದ ಬೆಳೆ ಎಲ್ಲವು ಒಣಗಿ ಹೋಗುತ್ತಲಿದೆ. ಕಬ್ಬು ನಿಲ್ಲುವ ತ್ರಾಣ ಕಳೆದು ನೆಲಕ್ಕುರುಳಿದೆ. ಆದರೆ ರೈತರ ಬದುಕನ್ನು ಹಿಂಡುವ ಕಸ ಮಾತ್ರ ಹುಲುಸಾಗಿ ಬೆಳೆದು ನಿಂತಿದೆ.

ಮುಂಡಗೋಡ, ಹಳಿಯಾಳ,ಜೋಯಿಡಾ ತಾಲ್ಲೂಕಿನ ಕೆಲ ಗ್ರಾಮಗಳ ರೈತರ ಗೋಳು ಹೇಳತೀರದು. ಕೆಲವರಂತೂ ತಮ್ಮ ಗ್ರಾಮದ ಮನೆಗಳಲ್ಲಿ ವಾಸಿಸದೆ ಹೆಚ್ಚಿನ ಸಮಯ ತಮ್ಮ ಹೊಲ, ತೋಟದಲ್ಲಿ ಗುಡಿಸಲು ಹಾಕಿಕೊಂಡು ವಾಸಿಸುವುದೇ ಹೆಚ್ಚು. ಅವರ ಸ್ಥಿತಿಯಂತೂ ತೀರ ಚಿಂತಾಜನಕ. ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಹಾವು, ಚೇಳು, ವನ್ಯಜೀವಿಗಳ ಹಾವಳಿ. ಆದರೂ ಬದುಕಲಿಕ್ಕಾಗಿ ಬದುಕಿನ ಭಯ ಬಿಟ್ಟು ಅಲ್ಲಿ ವಾಸವಿರಬೇಕಾದ ಅನಿವಾರ್ಯತೆ ಅವರಿಗೆ.

ರಾಜ್ಯದಲ್ಲಿ ಮುಂಗಾರು ಕೊರತೆಯಿಂದ ಒಟ್ಟೂ 216 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ. ಬರಪೀಡಿತ ತಾಲ್ಲೂಕುಗಳಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿ ನೀಡುವ ವರದಿಯನ್ವಯ ಸಾಧಾರಣ ಬರಪೀಡಿತ ತಾಲ್ಲೂಕು,ತೀವ್ರ ಬರಪೀಡಿತ ತಾಲ್ಲೂಕುಗಳೆಂದು ನಿರ್ಧರಿಸಲಾಗಿದೆ. ಒಟ್ಟಾರೆ ಕೇಂದ್ರ ಸರ್ಕಾರದ ಬರ ನಿರ್ವಹಣೆ ಮಾರ್ಗಸೂಚಿ 2020 ರನ್ವಯ 189 ತೀವ್ರ ಬರಪೀಡಿತ ತಾಲ್ಲೂಕು, 27 ಸಾಧಾರಣ ಬರಪೀಡಿತ ತಾಲ್ಲೂಕು ಒಳಗೊಂಡಂತೆ 216 ತಾಲ್ಲೂಕುಗಳನ್ನು ಬರಪೀಡಿತವೆಂದು ಗುರುತಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ 9 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ.

ಇದರಲ್ಲಿ ಹಳಿಯಾಳ,ದಾಂಡೇಲಿ,ಮುಂಡಗೋಡ, ಯಲ್ಲಾಪುರ, ಶಿರಸಿ ತೀವ್ರ ಬರಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿದೆ. ಜೋಯಿಡಾ,ಕಾರವಾರ,ಅಂಕೋಲಾ,ಕುಮಟಾ ಭಟ್ಕಳ ತಾಲ್ಲೂಕುಗಳನ್ನು ಸಾಧಾರಣ ಬರಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅಕಾಲಿಕ ಮಳೆಯಿಂದ 1861 ಹೆಕ್ಟರ್ ಭತ್ತದ ಬೆಳೆ ನಷ್ಟವಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ ಹಳಿಯಾಳದಲ್ಲಿ 151ಹೆಕ್ಟರ್ ಭತ್ತದ ಬೆಳೆ, 4 ಹೆಕ್ಟರ್ ಕಬ್ಬು ,ಜೋಯಿಡಾದಲ್ಲಿ121 ಹೆಕ್ಟರ್ ಭತ್ತದ ಬೆಳೆ, ಯಲ್ಲಾಪುರದಲ್ಲಿ 93.11ಹೆಕ್ಟೇರ್ ಭತ್ತದ ಬೆಳೆ 240 ಹೆಕ್ಟರನಷ್ಟು ಕಾಳುಮೆಣಸು,ಅಡಿಕೆ, ಹೊನ್ನಾವರ ದಲ್ಲಿ 653.66 ಹೆಕ್ಟರ ಭತ್ತದ ಬೆಳೆ ನಷ್ಟವಾಗಿದೆ. ಜಿಲ್ಲೆಯ 9 ತಾಲ್ಲೂಕುಗಳು ಬರಪೀಡಿತ ಪ್ರದೇಶವೆಂದು ಸರ್ಕಾರ ಗುರುತಿಸಿದ್ದರೂ ಇಲ್ಲಿ ಪರಿಹಾರವಾಗಲಿ, ಬರ ಕಾಮಗಾರಿಯಾಗಲಿ ಆರಂಭವಾಗಿಲ್ಲ. ನೆರೆ ಹಾಗೂ ಬರ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವಲ್ಲಿ ಕೇಂದ್ರ ಸರ್ಕಾರ ತಾರತಮ್ಯ ತೋರುತ್ತಿದೆ ಎಂದು ರಾಜ್ಯ ಸರ್ಕಾರ ಆರೋಪಿಸುತ್ತಿದೆ. ಪರಿಸ್ಥಿತಿಯ ಸ್ಪಷ್ಟ ಚಿತ್ರಣ ನೀಡಿದಲ್ಲಿ ನೆರೆ ಹಾಗೂ ಬರದಿಂದ ಕಂಗೆಟ್ಟ ರಾಜ್ಯಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳುತ್ತಿದೆ. ಕೇಂದ್ರ ಹಾಗು ರಾಜ್ಯ ಸರಕಾರದ ತಿಕ್ಕಾಟದಲ್ಲಿ ರೈತರು ಹೈರಾಣುಗುತ್ತಿದ್ದಾರೆ. ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ಕೇಂದ್ರ ಸರ್ಕಾರ ಖಂಡಿತ ಸ್ಪಂದಿಸಲೇ ಬೇಕು. ಸರಿಯಾದ ಅಧ್ಯಯನ ವರದಿಯನ್ನು ಪ್ರಾಮಾಣಿಕವಾಗಿ ಸಲ್ಲಿಸಬೇಕಾದ್ದು ರಾಜ್ಯ ಸರ್ಕಾರದ ಕೆಲಸ. ಇದರಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ಉಭಯ ಸರ್ಕಾರಗಳು ಮಣ್ಣಿನ ಮಕ್ಕಳಿಗೆ ಯೋಗ್ಯ ಪರಿಹಾರ ಒದಗಿಸಬೇಕೆಂಬುದು ನೊಂದ ರೈತರ ಆಶಯವಾಗಿದೆ.

ಲೇಖಕರು :
ಎನ್. ಜಯಚಂದ್ರನ್,
ದಾಂಡೇಲಿ