ನನ್ನವ್ವ ನಿತ್ಯ ಉಡುತ್ತಾಳೆ
ಕೈಮಗ್ಗದ್ದೇ
ಸೀರೆ
ಉಟ್ಟು ನಿಂತಾಗ ಕಾಣುತ್ತಾಳೆ
ಬಲು ಗಂಭೀರೆ
ಈಗಿನಂತೆ ನೈಟಿಯ
ಅಮ್ಮನಾಗಿರಲಿಲ್ಲ ಅವಳು
ಸೊಂಟವ ಸುತ್ತಿಕೊಂಡಿತ್ತು ಕಟ್ಟಿದ್ದ
ಗಟ್ಟಿ ಸೆರಗು
ಗೊತ್ತೇನು ನಿಮಗೆ?
ಅದೊಂದು ದೈತ್ಯ ಶಕ್ತಿಯ
ಸೆರಗು! ಅದೆಂಥ ಮೆರಗು !!
ಹೆಣ್ತನದ ಮಾನ ಮುಚ್ಚಲದೇ
ಅಂಗವಸ್ತ್ರ
ಸುಡುವ ಒಲೆಯ ಬಿಸಿಪಾತ್ರೆಗೂ
ಅದಾಗಿತ್ತು ಹಿಡಿವಸ್ತ್ರ
ದುಡಿದು ಬೆವರಿಳಿದಾಗ
ಒರೆಸಲೂ ಅದೇ ಕರವಸ್ತ್ರ

ಒಮ್ಮೊಮ್ಮೆ…
ಅಳುವ ಕಣ್ಣೀರನ್ನೂ
ಇಂಗಿಸುತ್ತಿತ್ತು ಈ ಸೆರಗೆಂಬ ವಸ್ತ್ರ
ಹಾಗೊಮ್ಮೊಮ್ಮೆ …
ದುಃಖ ಉಮ್ಮಳಿಸಿ ಬಂದಾಗ
ಜೋರಾಗಿ ಅಳಬೇಕೆನಿಸಿದಾಗ
ತುರುಕುತ್ತಿದ್ದಳವಳು
ಬಾಯ್ಮುಚ್ಚಲು
ಇದೇ ಸೆರಗನ್ನು ಆ…ಅಳುವ
ನಿಶ್ಯಬ್ಧವಾಗಿಸಲು!!
ಪಾತ್ರೆ ತೊಳೆದ ಕೈಯ ಮಸಿ.
ಊಟದ ಒದ್ದೆಗೈ ಒರೆಸಲೂ
ಅದಾಗುತ್ತಿತ್ತು ಮಸಿವಸ್ತ್ರ
ಅಮ್ಮನೊಡಲೆ ಮಕ್ಕಳಿಗೆ ಹಾಸಿಗೆಯಾದರೆ
ಈ ಸೆರಗೇ ಬೀಸಣಿಗೆಯಾಗುತ್ತಿತ್ತು
ನೆಂಟರಿಸ್ಟರು ಬಂದಾಗ ‘ಮಗಳೆಲ್ಲಿ ?’
ಎಂದಾಗ ಛಕ್ಕನೇ ಇಣುಕಿ ನಾಚಿ
ಅಡಗೋ…ಅಡಗುದಾಣವೂ
ಅಮ್ಮನ ಸೆರಗೇ
ಅಮ್ಮನ ಜೊತೆ ಪೇಟೆ ಸುತ್ತುವಾಗಲೂ
ಆ ಸೆರಗಿನ ಚುಂಗೇ ರಕ್ಷಕ-
ಮಾರ್ಗದರ್ಶಕ
ಜೋರು ಮಳೆ ಸುರಿದಾಗ..
ಚಳಿಗೆ ನಾ ನಡುಗಿದಾಗ
ಸೆರಗಾಗಿತ್ತು ಬೆಚ್ಚನೆಯ ಹಾಗೂ ತಂಪಿನ ತಾಣ
ಕೊಡ ತುಂಬಿ ಭಾರ ಹೊರುವಾಗ
ಅಮ್ಮನಿಗದೇ ಚೆರಿಗೆ
ಮರ ಹತ್ತಿ ಅಪ್ಪ ಹಣ್ಣು ಕಿತ್ತಾಗ
ಈ ಸೆರಗೇ ಬೇಕು
ದೇವರ ಪೂಜೆಗೆ ಹೂ ಕಿತ್ತಾಗಲೂ
ಅದೇ ಬುಟ್ಟಿ..
ಕೋಲದ ದಿನ ಮನೆ ದೈವಗಳು ಕಡ್ತೆಲೆಗೆ
ತಾಗಿಸಿ ನೀಡುತ್ತಿದ್ದ ಅಭಯ
ಪ್ರಸಾದಕ್ಕೂ ಅಮ್ಮ ಒಡ್ಡುತ್ತಿದುದು
ಇದೇ ಸೆರಗನ್ನು
ತನ್ನ ಕುಟುಂಬವ ಕಾಯೆಂದು
ಬೇಡಲು ಒಡ್ಡುತ್ತಿದ್ದುದೂ ಇದೇ ಸೆರಗು
ಮತ್ತೆ ಅಮ್ಮನ ಪುಡಿಗಾಸು
ಜೋಪಾನವಾಗಿಲು ಅದರ
ತುದಿಯೇ ತಿಜೋರಿ !
ಒಮ್ಮೊಮ್ಮೆ ಧೂಳು ಝಾಡಿಸೋ
ಜಾಡಮಾಲಿ
ತಾಯ್ತನದ ಸೆರಗು
ಕರುಳ ಕುಡಿಗಳ ಬಳಿ ಬರದು ಕೊರಗು

-ನಳಿನಾಕ್ಷಿ ಉದಯರಾಜ್, ಬೆಂಗಳೂರು