ಸುಮಾರು 140 ಕಿ.ಮೀ. ಉದ್ದದ ಕರಾವಳಿ ತೀರವನ್ನು, ಒಟ್ಟಾರೆ 10.25 ಲಕ್ಷ ಹೆಕ್ಟೇರ್ ಭೂಭಾಗದಲ್ಲಿ 8.28 ಹೆಕ್ಟೇರ್ ಅರಣ್ಯವನ್ನು, 1.2ಲಕ್ಷ ಹೆಕ್ಟೇರ್ ಭೂಭಾಗ ಕೃಷಿ ಮತ್ತು ತೋಟಗಾರಿಕೆಯಿಂದ ಕೂಡಿದ ರಾಜ್ಯದ ದೊಡ್ಡ ಜಿಲ್ಲೆಗಳಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯು ಸಮೃದ್ಧವಾದ ಪ್ರಾಕೃತಿಕ ಸಂಪತ್ತು, ವಿಭಿನ್ನ ಭೌಗೋಳಿಕತೆ, ದಟ್ಟಾರಣ್ಯ, ಸಾರ್ವಕಾಲಿಕ ನದಿಗಳು ಮತ್ತು ಜೀವಸಂಕುಲವನ್ನು ಹೊಂದಿದೆ.
12 ತಾಲೂಕುಗಳು, 06 ವಿಧಾನಸಭಾ ಕ್ಷೇತ್ರಗಳು, 04 ಕಂದಾಯ ಉಪವಿಭಾಗಗಳು, 03 ನಗರಸಭೆ, 04 ಪುರಸಭೆ, 05 ಪಟ್ಟಣ ಪಂಚಾಯತಿಗಳು, 19 ನಾಡಕಛೇರಿ ಕೇಂದ್ರಗಳು, 239 ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರಗಳು, 35 ಹೋಬಳಿ, 208 ಗ್ರಾಮ ಪಂಚಾಯತಿಗಳು ಮತ್ತು 1289 ಗ್ರಾಮಗಳನ್ನು ಒಳಗೊಂಡಿದ್ದು, ಕನ್ನಡ ಮತ್ತು ಕೊಂಕಣಿ ಪ್ರಧಾನಆಡು ಭಾಷೆಗಳಾಗಿವೆ. ಶೇ.10 ಭೂಭಾಗವು ಮಾತ್ರ ಸಾಗುವಳಿ ಪ್ರದೇಶವಾಗಿದ್ದು, ಉಳಿದ ಭಾಗ ಅರಣ್ಯದಿಂದ ಕೂಡಿದೆ. ಇಲ್ಲಿನ ನೈಸರ್ಗಿಕ ಸಂಪತ್ತಿನ ಜೊತೆ ಮಾನವ ನಿರ್ಮಿತ ಅದ್ಭುತ ಕಾರ್ಯಗಳೆಂದರೆ, ಜಲವಿದ್ಯುತ್ ಶಕ್ತಿ ಯೋಜನೆ ಮತ್ತು ಅಣುವಿದ್ಯುತ್ ಯೋಜನೆ. ಸೂಪಾ, ಕದ್ರಾ, ಕೊಡಸಳ್ಳಿ, ಗೇರುಸೊಪ್ಪ ಅಣೆಕಟ್ಟುಗಳು ವಿದ್ಯುತ್ ಉತ್ಪಾದನಾ ಘಟಕಗಳು. ಅಣುವಿದ್ಯುತ್ ಯೋಜನೆಯಲ್ಲಿ ಕೈಗಾ ಸ್ಥಾವರವು ಹೆಸರುವಾಸಿ. ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಿದು. ಕಾಳಿ, ಅಘನಾಶಿನಿ, ಶರಾವತಿ, ವರದಾದಂಥ ಪ್ರಮುಖ ನದಿಗಳು, ಬನವಾಸಿ, ಶಿರಸಿ, ಮಂಜಗುಣಿ, ಶ್ರೀಧರಾಶ್ರಮ, ಉಳವಿ, ಇಡಗುಂಜಿ, ಗೋಕರ್ಣ, ಮುರ್ಡೇಶ್ವರ, ಜೈನ ಬಸದಿ, ಸ್ವರ್ಣವಲ್ಲೀ ಮಠ, ಸೋಂದಾ ಕೋಟೆ, ಮಿರ್ಜಾನ ಕೋಟೆ- ಪ್ರಸಿದ್ಧ ಪುಣ್ಯಕ್ಷೇತ್ರಗಳು, ಐತಿಹಾಸಿಕ ಸ್ಮಾರಕಗಳು ಇಲ್ಲಿವೆ. ಭಟ್ಕಳದ ಮಸೀದಿ ಕುಸುರಿ ಕೆತ್ತನೆಯಿಂದ ಹೆಸರುವಾಸಿ. ಜಿಲ್ಲೆಯ ಜನಪ್ರಿಯ ಶಾಸ್ತ್ರೀಯ ಕಲೆಯೆಂದರೆ ಯಕ್ಷಗಾನ. ಸುಗ್ಗಿಕುಣಿತ, ಹೋಳಿನೃತ್ಯ, ಹುಲಿವೇಷ, ಸಿದ್ದಿನೃತ್ಯಗಳು ಪ್ರಸಿದ್ಧ ಜಾನಪದ ಮತ್ತು ಸಾಂಪ್ರದಾಯಿಕ ಕಲೆಗಳು. ಕರಾವಳಿಯ ತೀರವನ್ನು ಹೊಂದಿದ್ದರೂ ಕಡಲಿನ ಉತ್ಪನ್ನದ ಬಗ್ಗೆ ಅಷ್ಟೊಂದು ಪ್ರಸಿದ್ಧಿ ಪಡೆದಿಲ್ಲ. ಮೀನುಗಾರಿಕೆಯ ಚಟುವಟಿಕೆಗಳನ್ನು ಬೃಹತ್ ಪ್ರಮಾಣದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಸಹಾಯದಿಂದ ನಡೆಸಲಾಗುತ್ತಿದೆ.

ಗ್ರಾಮೀಣ ಪ್ರದೇಶದಲ್ಲಿ ಕೃಷಿಯೇ ಮೂಲಾಧಾರ. ಸಾಂಪ್ರದಾಯಿಕ ಉದ್ಯೋಗಗಳೆಂದರೆ ಕೃಷಿ, ಮೀನುಗಾರಿಕೆ, ಪಶು ಸಂಗೋಪನೆ, ರೇಷ್ಮೆ, ತೋಟಗಾರಿಕೆ, ಜೇನುಸಾಕಣೆ, ಚರ್ಮೋದ್ಯಮಗಳು. ಜಿಲ್ಲೆಯ ಬುಡಕಟ್ಟುಗಳೆಂದರೆ- ಸಿದ್ದಿ, ಕುಣಬಿ, ಹಾಲಕ್ಕಿ ಒಕ್ಕಲಿಗ, ಗೊಂಡ, ಮತ್ತು ಗೌಳಿ. ಸುಮಾರು 400 ವರ್ಷಗಳ ಹಿಂದೆ ಸಿದ್ದಿ ಜನರು ಆಫ್ರಿಕಾದಿಂದ ಪೋರ್ಚುಗೀಸರ ಗುಲಾಮರಾಗಿ ಬಂದವರೆಂದು ಹೇಳಲಾಗಿದೆ. ಸುಮಾರು 10,000 ಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ಸಿದ್ದಿ ಜನಾಂಗವು ಹೆಚ್ಚಾಗಿ ಹಳಿಯಾಳ, ಯಲ್ಲಾಪುರ ಮತ್ತು ಅಂಕೋಲಾಗಳಲ್ಲಿದ್ದಾರೆ. ಕಾಲಗತಿಯಲ್ಲಿ ಅವರು ಭಾರತೀಯ ಸಂಸ್ಕ್ರತಿಯನ್ನು ಅಳವಡಿಸಿಕೊಂಡಿದ್ದು ಪ್ರಮುಖವಾಗಿ ಹಿಂದೂ ಧರ್ಮವನ್ನೂ, ಕೆಲವರು ಮುಸ್ಲಿಂ, ಕ್ರೈಸ್ತ ಮತವನ್ನೂ ಅನುಸರಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಇವರು ಹವ್ಯಕ ಬ್ರಾಹ್ಮಣರ ತೋಟಗಳಲ್ಲಿ ಕೃಷಿ ಕೆಲಸ ಮಾಡುತ್ತಾರೆ.
ಪಶ್ಚಿಮಘಟ್ಟದ ತಪ್ಪಲಿನಲ್ಲಿ ವಾಸಿಸುವ ಹಾಲಕ್ಕಿ ಒಕ್ಕಲಿಗರು ಉ.ಕ.ದ ಮೂಲ ನಿವಾಸಿಗಳು. ಇವರ ಸಾಂಪ್ರದಾಯಿಕ ಜೀವನಶೈಲಿಯೇ ವಿಭಿನ್ನ ಮತ್ತು ವಿಶಿಷ್ಟ. ತಮ್ಮದೇ ಆದ ಸಾಮಾಜಿಕ ಆಡಳಿತ ಪದ್ಧತಿಯನ್ನು ಅನುಸರಿಸುತ್ತಿದ್ದು, ಸಮಾಜದ ಮುಖ್ಯಸ್ಥನನ್ನು ‘ಗೌಡ’ ಎಂದೂ, ಅವರು ಇಂದಿಗೂ ಪರಂಪರೆಯ ಜೀವನಪದ್ಧತಿಯನ್ನು ಅನುಸರಿಸುತ್ತಿದ್ದು ಮುಖ್ಯವಾಹಿನಿಯಲ್ಲಿ ಭಾಗಿತ್ವವನ್ನು ಹೊಂದುತ್ತಿದ್ದಾರೆ. ಗೌಳಿಗಳು ಮಹಾರಾಷ್ಟ್ರದಿಂದ ವಲಸೆ ಬಂದವರು. ಆಕಳು ಮತ್ತು ಕುರಿಸಾಕಣೆಯಲ್ಲಿ ಇವರು ತೊಡಗಿಕೊಂಡವರು. ಗೌಳಿಗಳು ಕಾಡಂಚಿನಲ್ಲಿ ವಾಸಿಸುತ್ತಿದ್ದು ಕೃಷಿ ಕೆಲಸವನ್ನು ಅವಲಂಬಿಸಿದ್ದಾರೆ. ಉ.ಕ.ಜಿಲ್ಲೆಯ ಅತೀ ಹಿಂದುಳಿದ ಬುಡಕಟ್ಟು ಜನಾಂಗವೇ ಕುಣಬಿಗಳು. ಕಾಡಿನ ಮಧ್ಯೆ ಸಣ್ಣಸಣ್ಣ ಗುಂಪುಗಳಾಗಿ ಬಿದಿರಿನ ಗುಡಿಸಲಲ್ಲಿ ವಾಸ. ಉತ್ತಮ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಮರಣ ಪ್ರಮಾಣವು ಹೆಚ್ಚು. ಗೊಂಡರು ಭಟ್ಕಳ ತಾಲೂಕಿನ ಕಾಡಿನ ಮಧ್ಯೆ ವಾಸಿಸುವವರು. ಜೀವನಕ್ಕಾಗಿ ಅರಣ್ಯ ಉತ್ಪನ್ನಗಳನ್ನು ಅವಲಂಬಿಸಿದ ಇವರ ಸಾಂಪ್ರದಾಯಿಕ ಬುಡಕಟ್ಟು ನೃತ್ಯಕಲೆಯು ಶ್ರೀಮಂತವಾಗಿದೆ. ಇದು ಸಂಪನ್ನಭರಿತವಾದ ಉತ್ತರ ಕನ್ನಡ ಜಿಲ್ಲೆಯ ಸ್ಥೂಲನೋಟ.

ಅಭಿವೃದ್ಧಿಯ ಕನವರಿಕೆ: ಅಭಿವೃದ್ಧಿಯ ಮಂತ್ರವನ್ನು ಅಧಿಕಾರದಲ್ಲಿರುವವರು ಯಾವಾಗಲೂ ಪಠಿಸಬೇಕೆಂಬ ಮೌಲ್ಯವನ್ನು ಅಲ್ಲಗಳೆಯಲಾಗದು. ಅಲ್ಲಗಳೆಯಬಾರದು. ಅನ್ಯಾಯ, ದ್ರೋಹ, ವಂಚನೆ, ತರತಮ, ಅಸ್ಪೃಶ್ಯತೆ, ಜಾತೀಯತೆ, ಅರಾಷ್ಟ್ರೀಯತೆ- ಇವುಗಳು ಮಾತ್ರವಲ್ಲ, ಆರೋಗ್ಯ, ಬಡತನ, ಹಸಿವು, ಶಿಕ್ಷಣ, ನಿರುದ್ಯೋಗ, ಸಮಾಜೋದ್ಧಾರವೂ ಗಹನೀಯ ಸಂಗತಿಗಳೇ. ಉ.ಕ. ಜಿಲ್ಲೆಯನ್ನು ಒಬ್ಬ ಸಂಸದ ಹಾಗೂ ಏಳು ಎಂಎಲ್ಲೆಗಳು ಇನ್ನಷ್ಟು ಎತ್ತರದ ಅಭಿವೃದ್ಧಿಯ ನೆಲೆಗೆ ಕೊಂಡೊಯ್ಯಬಹುದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಒಟ್ಟೂ ಅಭಿವೃದ್ಧಿಯನ್ನು ಕನವರಿಸಿ ಬಹಿರಂಗವಾಗಿ ಯಾರೇ ಮಾತಾಡಿದರೂ ತಪ್ಪಲ್ಲ. ಪ್ರತಿಯೊಬ್ಬರ ಅಭೀಪ್ಸೆಯೂ ಇದೇ ಆಗಿರುತ್ತದೆ! ಈ ಮಾತು ಕೇವಲ ಉ.ಕ. ಜಿಲ್ಲೆಗಷ್ಟೇ ಸೀಮಿತವಲ್ಲ. ಯಾಕೆಂದರೆ ಪಕ್ಕದ ಉಡುಪಿ, ದ.ಕ., ಶಿವಮೊಗ್ಗಕ್ಕೆ ಹೋಲಿಸಿದರೆ ಉ.ಕ. ಜಿಲ್ಲೆಯಲ್ಲಿ ಒಂದೇ ಒಂದು ಗುಣಮಟ್ಟದ ಮೆಡಿಕಲ್, ಇಂಜನಿಯರಿಂಗ್, ಎಂಬಿಎ, ಲಾ ಕಾಲೇಜುಗಳಿಲ್ಲ. (ಶಿರಸಿಯಲ್ಲಿ ಇಂಜನಿಯರಿಂಗ್, ಲಾ ಕಾಲೇಜು, ಕಾರವಾರದಲ್ಲಿ ಮೆಡಿಕಲ್ ಕಾಲೇಜು ಮಂಜೂರಾಗಿ ಕಟ್ಟಡ ನಿರ್ಮಾಣ ಕಾರ್ಯ ಆಗುತ್ತಿದೆಯೆಂಬ ಸುದ್ದಿಯಿದೆ. ಪ್ರಾಯಃ ಮುಗಿಯುವ ಹಂತಕ್ಕೂ ಬಂದಿರಬಹುದು) ಉನ್ನತ ವಿದ್ಯಾಭ್ಯಾಸಕ್ಕೆ ಬೇರೆ ಜಿಲ್ಲೆಗೆ ಹೋಗಬೇಕಾದಂಥ ಸ್ಥಿತಿಯಲ್ಲಿ ಉ.ಕ.ಜಿಲ್ಲೆಯ ವಿದ್ಯಾರ್ಥಿಗಳಿದ್ದಾರೆ. of course ಉಳ್ಳವರು ಹೋಗುತ್ತಾರೆ. ಹೋಗುತ್ತಿದ್ದಾರೆ. ಆದರೆ ಆರ್ಥಿಕವಾಗಿ ಹಿಂದುಳಿದವರು ಏನು ಮಾಡಬೇಕು? ಶಿಕ್ಷಣವೊಂದೇ ಅಲ್ಲ, ಇಡೀ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನೇ ಎತ್ತರಕ್ಕೊಯ್ಯುವ ಮಾರ್ಗ ಮತ್ತು ಅವಕಾಶ ವಿಪುಲವಾಗೇ ಇದೆ. ಮಾಡಬಹುದಾದ ಅಭಿವೃದ್ಧಿ ಕಾರ್ಯಗಳು ಸಾಕಷ್ಟಿವೆ.

ಅನಂತಕುಮಾರ ಹೆಗಡೆಯವರು ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ಶ್ರೀ ಆರ್.ವಿ.ದೇಶಪಾಂಡೆಯವರು ಕೆಲವು ವರ್ಷಗಳ ಕಾಲ ರಾಜ್ಯ ಸರ್ಕಾರದಲ್ಲಿ ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವರಾಗಿದ್ದರು. ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಶಿಕ್ಷಣಮಂತ್ರಿಗಳಾಗಿದ್ದರು. ಸ್ಪೀಕರ್ ಆಗಿದ್ದರು. ಹಿಂದೆ ನಾಯಕರೂ, ಆಳ್ವಾರರೂ ಸಂಸದರಾಗಿದ್ದರು. ಎಂಎಲ್ಲೆಗಳೂ ಆಗಲೂ, ಈಗಲೂ ಇದ್ದಾರೆ. ಅವರವರ ಕಾಲದಲ್ಲಿ ಏನೇನು ಅಭಿವೃದ್ಧಿಯಾಗಿದೆಯೆಂಬುದು ಜಿಲ್ಲೆಯ ಜನರ ಅರಿವಿನಲ್ಲಿದೆ.

ಈ ಎಲ್ಲ ಜನಪ್ರತಿನಿಧಿಗಳು ಜಿಲ್ಲೆಯಲ್ಲಿ ತಾವು ಮಾಡಿದ, ಮಾಡಬೇಕಾಗಿದ್ದ, ಮಾಡಬಹುದಾಗಿದ್ದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕೆಂಬ ನೆಲೆಯಲ್ಲಿ ಹಿಂದೊಮ್ಮೆ ಚಕ್ರವರ್ತಿ ಸೂಲಿಬೆಲೆಯವರು ಮಾತಾಡುತ್ತ ಗುಣಮಟ್ಟದ ಆಸ್ಪತ್ರೆಗೆ ಆಗ್ರಹಿಸಿದ್ದರು. ನೆಗೆಟಿವಿಟಿ ಬಿಟ್ಟು ಈ ರೀತಿಯ ಮಾತುಗಳನ್ನು ಜನಪ್ರತಿನಿಧಿಗಳು ತೆರೆದ ಮನಸ್ಸಿನಿಂದ ಸ್ವೀಕರಿಸಬೇಕು. ಜನ ಪ್ರತಿನಿಧಿಗಳಿಗೆ ತಮ್ಮ ಕ್ಷೇತ್ರದ ಸಮೂಹದ ಚಿಂತನೆಯೇ ಮುಖ್ಯವಾಗಬೇಕು. ಉ.ಕ.ಜಿಲ್ಲೆಯ ಎಂಪಿ, ಎಮ್ಮೆಲ್ಲೆಗಳು ಪಕ್ಷಾತೀತವಾಗಿ ಜನಪ್ರೀತಿ ಮತ್ತು ಜನಪ್ರಿಯತೆಯನ್ನು ಗಳಿಸಿದ್ದರಿಂದ ಚಕ್ರವರ್ತಿ ಸೂಲಿಬೆಲೆಯವರ ಮಾತುಗಳು ಜಿಲ್ಲೆಯ ಜನರ ಮಾತುಗಳೂ ಆಗಿವೆ. ಸಮಷ್ಟಿಯ ಹಿತಚಿಂತನೆಯ ಮಾತುಗಳಲ್ಲಿ ಕೊಂಕು ಹುಡುಕುತ್ತಾ ಹೋಗುವುದು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಹಿತವಲ್ಲ. ಆರೋಗ್ಯಯುತವಲ್ಲ. ಪ್ರತಿಯೊಂದರಲ್ಲೂ ದೋಷವನ್ನು ಹುಡುಕಿದರೆ ಅಭಿವೃದ್ಧಿ ಕನಸಾಗೇ ಉಳಿಯುತ್ತದೆ!

ಚುನಾವಣಾಪೂರ್ವೋತ್ತರ ಹೊಸತಿಲುವಿನಲ್ಲಿ ಧರ್ಮ, ಜಾತಿ, ಮತ, ಪಂಥ ಮುಖ್ಯವಾಗದೆ ಸಮಷ್ಟಿಯ ಅಭಿವೃದ್ಧಿಯ ಚಿಂತನೆ ಪ್ರಮುಖವಾಗ್ಬೇಕು. ಇತರ ಜಿಲ್ಲೆಗಳ ಅಭಿವೃದ್ಧಿಯ ಮಾದರಿಯೊಂದಿಗೆ ತುಲನಾತ್ಮಕವಾಗಿ ಅವಲೋಕಿಸಿದರೆ ಉ.ಕ. ಜಿಲ್ಲೆಯ ಅಭಿವೃದ್ಧಿ ಕಡಿಮೆಯೇ! ತಾನು ಪ್ರತಿನಿಧಿಸುವ ಕ್ಷೇತ್ರವನ್ನು ಉತ್ತಮ ಸ್ಥಿತಿಯಲ್ಲಿಡುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಕರ್ತವ್ಯ. ಅದು ಕನಸಾಗಿರಬೇಕು. ಈ ಮಾತು ನಿರ್ದಿಷ್ಟ ವ್ಯಕ್ತಿಗೆ ಸಂಬಂಧಿಸಿದ್ದಲ್ಲ. ಎಲ್ಲ ಜನಪ್ರತಿನಿಧಿಗಳಿಗೂ ಅನ್ವಯಿಸುವಂಥದ್ದು. ಅಭಿವೃದ್ಧಿಯಲ್ಲಿ ಹಿಂದುಳಿದ ತಾಲೂಕು, ಜಿಲ್ಲೆಯ ಅಭಿವೃದ್ಧಿಯ ಕುರಿತಾಗಿ ಅಧಿಕಾರದಲ್ಲಿರುವವರನ್ನು ಎಚ್ಚರಿಸಲು ಅವಕಾಶವಿರುವುದೇ ಪ್ರಜಾಪ್ರಭುತ್ತ್ವದ ನಿಜತಾಕತ್ತು. ಇದರಲ್ಲಿ ತಪ್ಪಲ್ಲ. ಕರಾವಳಿ ಮತ್ತು ಮಲೆನಾಡನ್ನು ಹೊಂದಿರುವ ಉ.ಕ.ಜಿಲ್ಲೆಯನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ದು ಪ್ರವಾಸೋದ್ಯಮ ತಾಣಗಳನ್ನಾಗಿ ಮಾಡಿ, ರಸ್ತೆ, ಕುಡಿಯುವ ನೀರು, ಸ್ಥಳೀಯ ಆರ್ಥಿಕತೆಯನ್ನು ಪ್ರಗತಿಯತ್ತ ಉದ್ಧರಿಸಲು ಹೇಗೆ ಸಾಧ್ಯ ಎಂಬುದರ ಬಗ್ಗೆ ಜಿಲ್ಲೆಯ ಜನರೆಲ್ಲರೂ ಸೇರಿ ಪರಾಮರ್ಶಿಸಬೇಕಾದ ಅಗತ್ಯದ ಬಗ್ಗೆಯೂ ಚಕ್ರವರ್ತಿ ಸೂಲಿಬೆಲೆಯವರು ಹಿಂದೆಯೂ ಮಾತಾಡಿದ್ದರು. ಈಗಲೂ ಮಾತಾಡುತ್ತಿದ್ದಾರೆ. ಹಾಗಂತ ಇವರೊಬ್ಬರೇ ಅಲ್ಲ, ಹಲವು ಪ್ರಮುಖ ಹಿರಿ-ಕಿರಿಯರಲ್ಲಿ, ಜನಸಾಮಾನ್ಯರಲ್ಲಿ ಈ ಕುರಿತಾಗಿ ಕನಸುಗಳಿವೆ. ಇಂಥ ಕನಸುಗಳನ್ನು ರಾಜಕೀಯದ ಮೂಸೆಯಲ್ಲಿ ನೋಡುವುದೇ ದೊಡ್ದ ರಾಜಕೀಯ!

ಲೇಖಕರು
ದೇವಿದಾಸ್ ಟಿ.