ಮೊನ್ನೆ ಜೆಡಿಎಸ್ ಅಗ್ಯಮಾನ್ಯ ನಾಯಕ ಎಚ್.ಡಿ. ದೇವೇಗೌಡರ ಸಂಸಾರ ಬಿಜೆಪಿಯ ಅಗ್ರಮಾನ್ಯ ನಾಯಕ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಲೋಕಸಭಾ ಚುನಾವಣಾ ಮೈತ್ರಿಗೆ ಗಟ್ಟಿ ಬೆಸುಗೆ ಹಾಕಿ ಬಂದಿದ್ದಾರೆ. ಜೆಡಿಎಸ್ ಸ್ವಲ್ಪ ಮಿಸುಕಾಡಿದರೂ ಬೆಸುಗೆ ಬಿಟ್ಟು ಹೋಗುತ್ತದೆ ಎಂಬ ವಾಸ್ತವ ದೇವೇಗೌಡರಿಗೆ ಗೊತ್ತಿರದ ಸಂಗತಿಯೇನಲ್ಲ.
ದೇವೇಗೌಡರು ಲಾಗಾಯ್ತಿನಿಂದ ಕಾಪಾಡಿಕೊಂಡಿದ್ದ ಜಾತ್ಯಾತೀತ ಮನೋಭಾವನೆಗೆ
ಮಕ್ಕಳು, ಮೊಮ್ಮಕ್ಕಳ ಮೇಲಿನ ಮೋಹದಲ್ಲಿ ಎಳ್ಳು ನೀರು ಬಿಟ್ಟಿಯಾಗಿದೆ. ದೇವೇಗೌಡರು ಮತ್ತು ಅವರ ಮಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷ ಉಳಿಸಿಕೊಳ್ಳಲು ಬಿಜೆಪಿ ಜೊತೆಗಿನ ಮೈತ್ರಿ ಅನಿವಾರ್ಯ ಎಂದು ಮೆಲುದನಿಯಲ್ಲಿ ಹೇಳಿಕೊಂಡರೂ ಅಸಲಿಗೆ ಅವರ ಕುಟುಂಬ ರಾಜಕಾರಣವವನ್ನು
ಉಳಿಸಿಕೊಳ್ಳಲು ಮಾತ್ರ ಈ ಮೈತ್ರಿ ಎಂಬುದನ್ನು ಅರ್ಥಮಾಡಿಕೊಳ್ಳದಷ್ಟು ಜನ ಮೂರ್ಖರಲ್ಲ.

ಈ ಮೊದಲು ಕುಮಾರ ಸ್ವಾಮಿ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರನ್ನು
ಬಿಟ್ಟು ತಮ್ಮ ಮಗ ಎರಡು ಬಾರಿ ಸೋತ ನಿಖಿಲ್ ಅವರೊಂದಿಗೆ ರಾಷ್ಟ್ರೀಯ ಬಿಜೆಪಿ ತಂತ್ರಗಾರ ಅಮಿತ್ ಷಾ ಅವರನ್ನು ಭೇಟಿ ಮಾಡಿ ಅವರ ತಲೆಗೆ ಮೈಸೂರು ಪೇಟ ಇಟ್ಟು ಬಂದಿದ್ದರು. ಆಗ ಹಿರಿಯ ನಾಯಕರಾದ ಜಿ.ಟಿ.ದೇವೇಗೌಡ ಅವರನ್ನೂ, ಅಣ್ಣ ರೇವಣ್ಣ
ಅವರನ್ನೂ, ಅಣ್ಣನ ಮಗ- ಜೆಡಿಎಸ್ ನ ಏಕೈಕ ಸಂಸದ ಪ್ರಜ್ವಲ್ ರೇವಣ್ಣ ಅವರನ್ನೂ ಬಿಟ್ಟು ಅಮಿತ್ ಷಾ ಬೇಟಿ ಮಾಡಿ ಬಂದಿದ್ದು ಪಕ್ಷದಲ್ಲಿಯೂ, ಅವರ ಕುಟುಂಬದಲ್ಲಿಯೂ ಬಿರುಗಾಳಿ ಎಬ್ಬಿಸಿತ್ತು. ಮೊದಲು ಕುಟುಂಬದಲ್ಲಿ ಎದ್ದ ಬಿರುಗಾಳಿ ತಣ್ಣಗಾಗಿಸಲು ಇದೀಗ
ರೇವಣ್ಣ, ಪ್ರಜ್ವಲ್, ಆದಿಯಾಗಿ ಇತರ ಆಪ್ತ ಮುಖಂಡರೊಂದಿಗೆ ದೇವೇಗೌಡ, ಕುಮಾರಸ್ವಾಮಿ ಪ್ರಧಾನಿಯವರನ್ನುಭೇಟಿ ಮಾಡಿ ಬಂದಿದ್ದಾರೆ. ಭೇಟಿಯಲ್ಲಿ ಕೊಬ್ಬರಿ ಖರೀದಿಗೆ ಹೊಸ ನೀತಿ ಸೇರಿದಂತೆ ಕಾಡುಗೊಲ್ಲ, ಅಡವಿಗೊಲ್ಲ, ಹಟ್ಟಿಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಅರ್ಜಿ(ಮರ್ಜಿ)ಪತ್ರವನ್ನು ನೆಪಕ್ಕೆ ಒಪ್ಪಿಸಿ ತಮ್ಮ ರಾಜಕಾರಣದ ಚರ್ಚೆಯನ್ನು ಖಾಸಗಿಯಾಗಿ ಮಾತನಾಡಿಕೊಂಡು ಬಂದಿದ್ದಾರೆ. ಪ್ರಧಾನಿಯವರೂ ಕೂಡ ತುಂಬ ಆತ್ಮೀಯವಾಗಿ ಮಾಜಿ ಪ್ರಧಾನಿಯವರನ್ನು ಬರಮಾಡಿಕೊಂಡು ಚರ್ಚಿಸಿ ತಮ್ಮ ಜಾಣ ಘನತೆಯನ್ನು ಮೆರೆದರು.

ವಿಷಯ ಅದಲ್ಲ, ಹಿಂದೊಮ್ಮೆ ಮಗ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಮೈತ್ರಿಮಾಡಿಕೊಂಡು ಮುಖ್ಯಮಂತ್ರಿಯೇ ಆದಾಗ ದೇವೇಗೌಡರು ‘ಕುಸಿದು’ ಹೋಗಿದ್ದರು. ‘ಕೋಮುವಾದಿ ಪಕ್ಷದ ಜೊತೆ ಬೆಂಬಲ ಪಡೆದು ಅಧಿಕಾರ ಹಿಡಿದಿರುವುದು ನನಗೆ ಸುತಾರಾಂ ಒಪ್ಪಿಗೆಯಿಲ್ಲ. ನನಗೂ ಇದಕ್ಕೂ ಸಂಬಂಧವೇ ಇಲ್ಲ’ ಎಂದೆಲ್ಲ ಮಮ್ಮಲ ಮರುಗಿದ್ದರು. ಆದರೆ ಇಂದು ಅದೇ ದೇವೇಗೌಡ ಜಾತ್ಯತೀತ ಶಬ್ಧಕ್ಕೇ ಅಪಚಾರ ಮಾಡಿ ಬಿಜೆಪಿಗೆ ಸೇರಿದರು
ಎಂದು ಜೆಡಿಎಸ್ ರಾಜ್ಯಾಕ್ಷರಾಗಿದ್ದ ಸಿ.ಎಂ.ಇಬ್ರಾಹಿಂ ಮತ್ತು ಸಮಾನ ಮನಸ್ಕರು ಬೊಬ್ಬೆ ಹೊಡೆಯುತ್ತೇ ಇದ್ದಾರೆ. ಇವರು ಅವರನ್ನು ಜೆಡಿಎಸ್ ಪಕ್ಷದಿಂದ ಕಿತ್ತು ಹಾಕುವುದು, ಅವರು ಇವರನ್ನು ಜೆಡಿಎಸ್ ಪಕ್ಷದಿಂದ ಕಿತ್ತುಹಾಕುವ ನಾಟಕ ನಡೆಯುತ್ತಲೇ ಇದೆ. ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ನಾಣು ಅವರು ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರನ್ನೇ ಅಧಿಕಾರದಿಂದ ಕೆಳಗಿಳಿಸಿದ್ದೇವೆ ಎಂದು ಬೊಬ್ಬೆ ಹೊಡೆದರು. ಪರಿಣಾಮ ಮಾತ್ರ ಶೂನ್ಯ.
ಅಸಲಿಗೆ ರಾಜ್ಯದ ಜಾತ್ಯತೀತ ಬಾವನೆಯನ್ನು ಪ್ರತಿನಿಧಿಸುತ್ತೇವೆ ಎಂದು ಬಂದ ಜೆಡಿಎಸ್ ಪಕ್ಷದ ಸಿದ್ಧಾಂತಕ್ಕೇ ಈ ಮುಖಂಡರು ಅಧಿಕಾರದ ಲಾಲಸೆಯಿಂದ ಕೊಳ್ಳಿ ಇಟ್ಟರು.
ಪ್ರಸ್ತುತ ಜೆಡಿಎಸ್ ನ 18 ಶಾಸಕರು ದೇವೇಗೌಡರ ಜೋಳಿಗೆಯಲ್ಲಿದ್ದಾರೆ ಎಂದು ಹೇಳುತ್ತಿದ್ದರಾದರೂ ಅವರವರ ಆತ್ಮಸಾಕ್ಷಿ ಏನೇನು ಕೆಲಸ ಮಾಡುತ್ತಿದೆಯೋ ಗೊತ್ತಿಲ್ಲ.
‘ಅಕ್ಕಮ್ಮಜ್ಜಿಗೆ ಗಂಡ ಇಲ್ಲ, ವನವಾಸ ಭಟ್ಟನಿಗೆ ಹೆಂಡತಿ ಇಲ್ಲ’ ಎಂಬುದು ಗ್ರಾಮೀಣ ಭಾಗದ ಹಳೆಯ ಗಾದೆ. ಇದೇ ಪರಿಸ್ಥಿತಿ ಉಭಯ ಪಕ್ಷಗಳದ್ದು. ಬಿಜೆಪಿಗೆ ಕರ್ನಾಟಕದಲ್ಲಿ ಹೇಗಾದರೂ ಮಾಡಿ ಲೋಕಸಬಾ ಚುನಾವಣೆಯಲ್ಲಿ ಅತಿ ಹೆಚ್ಚು ಸಿಟು ಗೆದ್ದುಕೊಳ್ಳಬೇಕೆಂಬ ತುಡಿತ. ಅದರಲ್ಲೂ ಕಳೆದ ವಿಧಾನ ಸಭಾ ಚುನಾವಣೆಯಲ್ಲಿಇನ್ನಿಲ್ಲದಂತೆ ನೆಲ ಕಚ್ಚಿದ ಬಿಜೆಪಿಗೆ ಕೊಂಚ ಉಸಿರಾಡಲು ಮುಂಬರುವ ಚುನಾವಣೆ ಒಂದುಪ್ರಾಯೋಗಿಕ ಪಟ್ಟು. ಈ ಅವಕಾಶವನ್ನು ಹೇಗಾದರೂ ಬಿಜೆಪಿಗೆ ಲಾಭ ಆಗುವಂತೆ ಬಳಸಿಕೊಳ್ಳಬೇಕೆಂದು ತಂತ್ರ ಹೆಣೆಯುತ್ತಿರುವಾಗಲೇ ಗಂಜಿಯಲ್ಲಿ ಬಿದ್ದ ನೊಣದಂತೆ ಇದ್ದ ಜೆಡಿಎಸ್ ಪಕ್ಷ ತೆವಳುತ್ತ ತೆವಳುತ್ತ ಬಿಜೆಪಿ ಪಡಸಾಲೆ ಸೇರಿಕೊಂಡು ಮೈತ್ರಿ ತಂತ್ರ ಹೆಣೆದಿದೆ.
ಅದು ಸದ್ಯದ ಮಟ್ಟಿಗೆ ಯಶಸ್ವಿಯಾಗಿದೆ ಕೂಡ. ಆದರೆ ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದು ಕಾದು ನೋಡಬೇಕು. ಕುಮಾರಸ್ವಾಮಿಯವರಿಗೆ ಹೇಗಾದರೂ ಮಾಡಿ ತಮ್ಮ ಮಗ ನಿಖಿಲ್ ಅವರನ್ನು ರಾಜಕೀಯ ಅಧಿಕಾರಕ್ಕೇರಿಸಲು ಒಂದು ಗಟ್ಟುಮುಟ್ಟಾದ ಏಣಿ ಸಿದ್ದಪಡಿಸಲು ಸಣ್ಣ ಅವಕಾಶವನ್ನೂ ಕಳೆದುಕೊಳ್ಳಲು ಸಿದ್ಧರಿಲ್ಲ. ‘ಮಂಡ್ಯದಲ್ಲಿ ನಿಖಿಲ್ ಮುಂಬರುವ ಲೋಕಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸಲ್ಲ’
ಎಂದು ಕುಮಾರಸ್ವಾಮಿ ಹೇಳುತ್ತ ತಿರುಗುತ್ತಿದ್ದರಾದರೂ ಕೊನೆಗೆ ಅವರೇ ತಮ್ಮ ಬಾಯಿಯಿಂದಲೇ ನಿಖಿಲ್ ಮಂಡ್ಯ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಂದು ಬ್ರೇಕಿಂಗ್ ಸುದ್ದಿಯನ್ನು ರಾಜ್ಯದ ಜನತೆಗೆ ನೀಡುತ್ತಾರೆ !
ಹಳೆ ಮೈಸೂರು ಭಾಗದಲ್ಲಿ ಏನೇ ತಿಪ್ಪರಲಾಗ ಹಾಕಿದರೂ ಜೆಡಿಎಸ್ ಪ್ರಭಾವನ್ನು ಅರ್ಥಾತ್ ದೇವೇಗೌಡರ ಛಾಪನ್ನು ಅಳಿಸಿಹಾಕುವಂತಿಲ್ಲ. ದೇವೇಗೌಡರ ಇಷ್ಟು ವರ್ಷದ ರಾಜಕರಣದ ಅಸಲಿ ಇಡಗಂಟು ಅಂದರೆ ಅದು ಹಳೆ ಮೈಸೂರು ಬಾಗ. ಬಿಜೆಪಿ ಈಇಡಗಂಟನ್ನು ತನ್ನ ಗೆಲುವಿನೊಟ್ಟಿಗೆ ಸೇರಿಸಿಕೊಳ್ಳಲು ಲೆಕ್ಕಚಾರ ಹಾಕುತ್ತಿರುವುದು ಆ ಪಕ್ಷದ ಸಹಜ ಪ್ರಯತ್ನ. ಆದರೆ ಅಸಲಿಗೆ ಹಳೆ ಮೈಸೂರು ಭಾಗ ಮೊದಲಿನಂತೆ ಈಗಲೂ, ಈ
ಕ್ಷಣದಲ್ಲೂ ದೇವೇಗೌಡರಿಗೇ ಅಂಟಿಕೊಂಡಿದೆ ಎಂದು ಅವರ ಕುಟುಂಬದವರು ಅಥವಾ ಬಿಜೆಪಿ ಪಕ್ಷದವರು ವಿಪರೀತ ಭ್ರಮಿಸಿದರೆ ಎಡವುತ್ತಾರೆ. ಇದೀಗ ಹಳೆಮೈಸೂರು ಭಾಗದತ್ತ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ತುಂಬ ನಾಜೂಕಾಗಿ ಶಾಲು ಹಾರಿಸಿದ್ದಾರೆ. ಸಿದ್ದರಾಮಯ್ಯ ಹಳೆಮೈಸೂರು ತನ್ನ ನೆಲ ಎಂದು ಅರಚಿದರೆ, ಡಿಕೆಶಿ ಅದು ತನ್ನ ಕಳ್ಳುಬಳ್ಳಿಯ ನೆಲ ಎಂದು ಡೈಲಾಗ್ ಬಿಡುತ್ತ ಕಳೆದ ವಿಧಾನ ಸಭಾ ಚುನಾವಣೆಯಲ್ಲೇ ತಮ್ಮತಮ್ಮ ‘ವಾಮನ ಪಾದ’ ಇಟ್ಟುಬಿಟ್ಟಿದ್ದಾರೆ.
ಈ ಹಿನ್ನೆಲ್ಲೆಯಲ್ಲಿ ಹಳೆ ಮೈಸೂರು ತಮ್ಮ ಇಡಗಂಟು ಎಂದು ನಂಬಿಕೊಂಡು ಕುಳಿತರೆ ಜೆಡಿಎಸ್-ಬಿಜೆಪಿ ಪಕ್ಷಗಳಿಗೆ ಗೆಲುವು ಕಷ್ಟ ಆಗಬಹುದು. ಹೀಗಾಗಿ ಮುಂದಿನ ಲೋಕಸಬಾ ಚುನಾವಣೆ ಬರುವುದರೊಳಗೆ ಸದರಿ ಪಕ್ಷದ ಮುಖಂಡರು ಏನೆಲ್ಲ ಸೋಗು ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕು.

ಲೇಖಕರು
ಅರವಿಂದ ಕರ್ಕಿಕೋಡಿ
ಪ್ರಧಾನ ಸಂಪಾದಕರು
ಹಣತೆವಾಹಿನಿ