ಈ ವಾರ ಒಂದು ಚಿಕ್ಕ ಕಥೆ ಹೇಳಬೇಕು ಎಂದು ಅನಿಸುತ್ತಿದೆ.
ಮುಂಡಗೋಡ ಕುಸೂರಿನಲ್ಲಿ ಶಿಕ್ಷಕಿಯಾಗಿದ್ದ ಕಮಲಕ್ಕ ಎಲ್ಲ ವಿದ್ಯಾರ್ಥಿಗಳಿಗೂ
ಅಚ್ಚುಮೆಚ್ಚು. ಮಕ್ಕಳು, ಊರ ಮಂದಿಯೆಲ್ಲ ಅವರನನ್ನು ಕರೆಯುವುದು
ಕುಸೂರಕ್ಕೋರು ಅಂತಲೇ.
ತಾಯ್ತನವನ್ನು ತನ್ನ ಮಕ್ಕಳಿಗೂ, ಪರರ ಮಕ್ಕಳಿಗೂ ಧಾರೆ ಎರೆದ ಹಸು. ಮನೆಯಲ್ಲಿ
ಗಂಡ, ಮಕ್ಕಳು ಅಂತ ತುಂಬು ಸಂಸಾರ. ತಾನು ಮೇಲ್ವರ್ಗದವಳು ಎಂಬ ಹಮ್ಮು, ನಂಜು
ಅವಳ ಬಳಿಯೂ ಸುಳಿದಿರಲಿಲ್ಲ. ಎಷ್ಟೋ ಬಡ ಮಕ್ಕಳಿಗೆ ತಾನೇ ಪಟ್ಟಿ,ಪುಸ್ತಕ,ಪೆನ್ನು, ಫೀ
ಕೊಟ್ಟು ಓದಿಸುತ್ತಿದ್ದ ತುಂಬೆದೆಯ ತಾಯಿ, ಮಹಾತಾಯಿ. ಯಾವುದೇ ಶಾಲೆಗೆ ವರ್ಗವಾಗಿ
ಹೋದರೂ ಎಲ್ಲ ಕಡೆಯೂ ಮೊದಲೇ ಹೇಳಿದಂತೆ ತನ್ನ ಮಕ್ಕಳು, ಪರರ ಮಕ್ಕಳು ಎಂಬ
ಭೇದ ಮಾಡದೇ ಅಕ್ಷರ ಬೆಳಕನ್ನು ಹಂಚಿದ ‘ಸಾವಿತ್ರಿಬಾಯಿ ಪುಲೆ’
ಗಂಡ ಹೊರಟು ಹೋದರು. ಇವರೂ ನಿವೃತ್ತಿಯಾದರು. ತನ್ನ ಮಕ್ಕಳಲ್ಲಿ ಓರ್ವ
ಅಮೇರಿಕಾದಲ್ಲಿ ಡಾಕ್ಟರ್, ಇನ್ನೋರ್ವ ಮುಂಬೈನಲ್ಲಿ ಡಾಕ್ಟರ್, ಮತ್ತೋರ್ವ
ಗೋವಾದಲ್ಲಿ ಇಂಜಿನಿಯರ್. ಆದರೆ ಇವರು ಮಾತ್ರ ತಾಯಿ, ತಾಯಿ ಮಾತ್ರ..
ಕುಸೂರಕ್ಕೋರಿಗೆ ಅವರಿಗೆ ಸಿಹಿಮೂತ್ರ ಕಾಯಿಲೆ ವಿಪರೀತ ಹಿಂಸಿಸತೊಡಗಿತು. ವೈದ್ಯರು
ಕಾಲುಗಳ ಬೆರಳುಗಳನ್ನು ತುಂಡು ಮಾಡಿದರು. ಒಂದು ಪಾದ ತುಂಡು ಮಾಡಿದರು. ಕೊನೆಗೆ
ಒಂದು ಮೊಣಕಾಲಿನ ಮೇಲ್ಭಾಗವನ್ನೇ ಕತ್ತರಿಸಿಬಿಟ್ಟರು. ನೋಡುವವರು ಯಾರು ?
ಆರೈಕೆ ಮಾಡುವವರು ಯಾರು ? ಗಂಜಿ ಬೇಯಿಸುವವರು ಯಾರು ? ಮಕ್ಕಳೆಲ್ಲ ವಿದೇಶಿ.
ತಾಯಿ ಮಾತ್ರ ಪರದೇಶಿ..
ಒಮ್ಮೆ ಕುಮಟಾದ ಆಸ್ಪತ್ರೆಯಲ್ಲಿಯೊಂದರಲ್ಲಿ ದಾಖಲಾಗಿದ್ದಾರೆ. ಅವರನ್ನು
ನೋಡಿಕೊಳ್ಳತ್ತಿದ್ದವ ಮೂರೂರಿನ ಹಾಲಕ್ಕಿ ಸಮುದಾಯದ ಓರ್ವ ಹುಡುಗ. ಅವನು
ಅವರ ವಿದ್ಯಾರ್ಥಿಯಂತೆ. ಆತ ಕೂಡ ಬಡವನೇ. ಕುಸೂರಕ್ಕೋರ ಅಗತ್ಯ ಕೆಲಸಗಳೆಲ್ಲವನ್ನೂ
ಆತನೇ ಮಾಡುತ್ತಾನೆ. ತುಂಬ ಪ್ರೀತಿಯಿಂದ ನಗುನಗುತ್ತ ಅಮ್ಮನನ್ನು ಪಾಲಿಸುತ್ತಾನೆ.
ಅವರಿಗೆ ತಮಾಷೆ ಮಾಡುತ್ತ ಅಳುವಿನಲ್ಲೂ ನಗು ತರಿಸಲು ಪ್ರಯತ್ನಿಸುತ್ತಾನೆ.
ಕುಸೂರಕ್ಕೋರಿಗೆ ಕೊನೆಗೂ, ಕೊನೆಯವರೆಗೂ ಆಶ್ರಯ ನೀಡಿದ್ದು ಕುಮಟಾದ ಒಂದು
ವೃದ್ಧಾಶ್ರಮ. ನಿಷ್ಕಳಂಕ ಹೃದಯಕ್ಕೆ ನೆರಳು ನೀಡಿದ ಆಶ್ರಮಕ್ಕೆ, ಮತ್ತು ಅವರ
ತುಟಿಯಂಚಿನಲ್ಲಿ ಕ್ಷಣ ಮಾತ್ರಕ್ಕಾದರೂ ನಗು ತರಿಸಲು ಪ್ರಯತ್ನಿಸುತ್ತಿದ್ದ ಆ ಹಾಲಕ್ಕಿ
ಹುಡುಗನಿಗೆ ಶರಣು.
ಈ ಕಥೆ ಹೇಳಿದ್ದು ನಾನಲ್ಲ. ನನ್ನ ಹೆಂಡತಿ ಲೋಹಿತಾ. ನಾನು ಉತ್ತರ ಕನ್ನಡ ಜಿಲ್ಲಾ
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನಿದ್ದಾಗ ಅಂಕೋಲೆಯ ಪಿ.ಎಂ. ಹೈಸ್ಕೂಲಿನ
ವಾರ್ಷಿಕೋತ್ಸವದ ಉದ್ಘಾಟನೆಗೆ ಕರೆದಿದ್ದರು. ಕರೆಯಲು ಬಂದ ಹೈಸ್ಕೂಲಿನ ಶಿಕ್ಷಕರು,
ಸಿಬ್ಬಂದಿಗಳು ನನ್ನ ಹೆಂಡತಿಯನ್ನೂ ವೇದಿಕೆಗೆ ಬರಬೇಕೆಂದು ಒತ್ತಾಯಿಸಿದರು. ಈಕೆ ಬೇಡ
ಬೇಡವೆಂದರೂ ಮುಖ್ಯ ಅತಿಥಿ ಅಂತ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಅಚ್ಚು ಹಾಕಿಸಿದರು.
ಕೊನೆಗೆ ಉಪಾಯವಿಲ್ಲದೇ ಲೋಹಿತಾ ನನ್ನೊಟ್ಟಿಗೆ ಬಂದಳು. ವೇದಿಕೆಯಲ್ಲಿ ಏನು
ಮಾತನಾಡುತ್ತಾಳೋ ಎಂಬ ಸಣ್ಣ ಭಯ ನನಗೂ ಇತ್ತು. ಯಾಕೆಂದರೆ ಅವಳು ಎಂದೂ
ವೇದಿಕೆಗೆ ಹೋದವಳೇ ಅಲ್ಲ. ತನ್ನ ಮಾತಿನ ಸರದಿ ಬಂದಾಗ ಲೋಹಿತಾ ಕುಸೂರಕ್ಕೋರ
ಕಥೆಯನ್ನು ಮಕ್ಕಳೆದುರು ಹೇಳಿ ತಂದೆ-ತಾಯಿಯನ್ನು ಎಂದೂ ತಾತ್ಸಾರ ಮಾಡಬೇಡಿ ಎಂದು
ಕೋರಿದಳು. ಇಡೀ ಸಭೆ ಮೌನವಾಯಿತು. ಆರ್ದ್ರವಾಯಿತು.

ಲೇಖಕರು
ಅರವಿಂದ ಕರ್ಕಿಕೋಡಿ
ಪ್ರಧಾನ ಸಂಪಾದಕರು
ಹಣತೆವಾಹಿನಿ
ಕಮಲ್ಲಕ್ಕಳ ನಿರ್ವಾಜ್ಯ ಅಕ್ಕರೆ ಹೆತ್ತಮಕ್ಕಳಿಗೆ ಅಪ್ಪದಿರುವದು ವಿಪರ್ಯಾಸ… ಲೋಹಿತಾರ ಸತ್ಯ ಕಥೆ ಓದುಗರ ಹೃದಯ ತಟ್ಟುವದು….