ನುಡಿದರೆ ಮುತ್ತಿನ ಹಾರದಂತಿರಬೇಕು

ಮಾತು ಏಕೆ ಮುಖ್ಯ?

ನಾವು ಪ್ರತಿ ದಿನ ಇತರರಿಂದ ಸಾಕಷ್ಟು ಮಾತುಗಳನ್ನು ಕೇಳುತ್ತಲೇ ಇರುತ್ತೇವೆ. ಆ ಮಾತುಗಳಲ್ಲಿ ಯಾವುದನ್ನು ಕೇಳಿ ಅದನ್ನು ಅಲ್ಲಿಯೇ ಬಿಡಬೇಕು, ಯಾವುದನ್ನು ಕೇಳಿ ಅದನ್ನು ತಲೆಗೆ ತೆಗೆದುಕೊಳ್ಳಬೇಕು,

ಯಾವ ಮಾತನ್ನು ಮನಸ್ಸಿಗೆ ತೆಗೆದುಕೊಳ್ಳಬೇಕು ಎಂಬುದನ್ನು ಅರಿತರೇ ನಮ್ಮ ಯಶಸ್ಸಿನ ದಾರಿ ಅರ್ಧ ತಲುಪಿದಂತೆ.ಬಹು ಮುಖ್ಯವಾಗಿ ಹಿಂದಿನ ಸಂಚಿಕೆಯಲ್ಲಿ ಮೃದು ಕೌಶಲ್ಯಗಳ ಕುರಿತಾಗಿ ತಿಳಿದುಕೊಂಡೆವು. ಈ ವಾರದಿಂದ ಮಾತಿನ ಕುರಿತಾಗಿ ತಿಳಿದುಕೊಳ್ಳೋಣ…

ನುಡಿದಡೆ ಮುತ್ತಿನ ಹಾರದಂತಿರಬೇಕು
ನುಡಿದಡೆ ಮಾಣಿಕ್ಯದದೀಪ್ತಿ ಯಂತಿರಬೇಕು
ನುಡಿದಡೆ ಸ್ಪಟಿಕದ ಸಲಾಕೆ ಯಂತಿರಬೇಕು
ನುಡಿದಡೆ ಲಿಂಗ ಮೆಚ್ಚಿ ಅಹುದಹುದೆನಬೇಕು
ನುಡಿಯೊಳಗಾಗಿ ನಡೆಯದಿದ್ದಡೆ
ಕೂಡಲ ಸಂಗಮದೇವನೆಂತೊಲಿವನಯ್ಯಾ…..
ಮಾತುಗಾರಿಕೆ ಅಂದರೆ…

“ಮನಸ್ಸೆಂಬ ಉಗ್ರಾಣದಿಂದ ಸರಿಯಾದ ಶಬ್ದಗಳನ್ನು ಆರಿಸಿ ಜೋಡಿಸಿ ವಿವೇಕ- ವಿವೇಚನೆಯೆಂಬ ತಕ್ಕಡಿಯಲ್ಲಿ ತೂಗಿ, ತಕ್ಕ ತೂಕ ಮತ್ತು ಪಾಕ ಗಳೊಂದಿಗೆ ಸಮರ್ಪಕವಾಗಿ ಸಂಧರ್ಭೋಚಿತವಾಗಿ ಹೊರಚೆಲ್ಲುವುದೆ ಮಾತುಗಾರಿಕೆ”

ಮಾತು ಮುತ್ತು ಎನ್ನುವ ಮಾತೂ ಇದೆ, ಆದರೆ ನಾವಾಡುವ ಮಾತನ್ನು ಮುತ್ತನ್ನು ಜೋಪಾನವಾಗಿಟ್ಟುಕೊಳ್ಳುವಂತೆ ಇಟ್ಟುಕೊಳ್ಳಬೇಕಾಗುತ್ತದೆ.ನಾವು ಎಷ್ಟೇ ಹುಷಾರಾಗಿದ್ದರೂ ಒಮ್ಮೊಮ್ಮೆ ಆಚಾತುರ್ಯವಾಗಿ ಆಡಿದ ಮಾತು ಮತ್ತು ಮುತ್ತು ಕೈಜಾರಿ ಬಿದ್ದರೂ ಒಡೆದು ಹೋಗುತ್ತದೆ. ಒಡೆದ

ಮುತ್ತು ಚೂರಾಗಿ ತನ್ನ ಮೌಲ್ಯವನ್ನು ಕಳಕೊಳ್ಳುತ್ತದೆ. ಅದೇ ರೀತಿ ಹುಷಾರಾಗಿ ಮಾತನ್ನು ಜತನವಾಗಿಟ್ಟುಕೊಂಡು ಅವಶ್ಯಕವಾದದ್ದನ್ನಷ್ಟೇ ಮಾತನಾಡುವುದು ಸೂಕ್ತವಾಗುತ್ತದೆ. ಮನುಷ್ಯನ ದೇಹದಲ್ಲಿಯೂ ಕೇಳಲು ಎರಡು ಕಿವಿಗಳಿದ್ದರೆ ಮಾತನಾಡಲು ಒಂದು ಬಾಯಿ ಇದೆ. ಇದರ ಸರಳಾರ್ಥ ಸಂವಹನದ ಮೊದಲ ಹಂತವಾದ ಕೇಳುವಿಕೆಯ ಎರಡನೆಯ ಹಂತವಾದ ಹೇಳುವಿಕೆಗಿಂತ ಅಂದರೆ ಆಡುವಿಕೆಗಿಂತ ಕಡಿಮೆಯಿರಬೇಕೆಂಬ ಪ್ರಕೃತಿ ಪೂರಕ ಜ್ಞಾನವನ್ನು ನಾವು ಉಪಯೋಗಿಸಿಕೊಂಡು ಹೆಚ್ಚಿನ ಯಶಸ್ಸನ್ನು ಸಾಧಿಸಬಹುದಾಗಿರುತ್ತದೆ.

ಉತ್ತಮ ಆರೋಗ್ಯಕರ ಶರೀರಕ್ಕೆ ಆಹಾರದಂತೆ, ಒಳ್ಳೆಯ ಮಾತುಗಳಿಗಾಗಿ ಮನಸ್ಸಿನ ಪೌಷ್ಟಿಕಾಂಶವನ್ನು ಉತ್ತಮಪಡಿಸಿಕೊಳ್ಳಬೇಕು. ಈ ಪೌಷ್ಟಿಕಾಂಶಗಳೇ ನಮ್ಮ ಆಲೋಚನೆಗಳು, ಈ ಆಲೋಚನೆಗಳನ್ನು ಸೂಕ್ತವಾಗಿ ಹಾಗೂ ಸರಳವಾಗಿ ಗೊಂದಲಗಳಿಲ್ಲದಂತೆ ನಿಯಂತ್ರಿಸಿಕೊಂಡರೆ ಮಾತು ಹೊರಹೊಮ್ಮುತ್ತದೆ. ಅರ್ಥಗರ್ಭಿತವಾಗಿ…. ಅದೇ ರೀತಿ ಮಾತನ್ನು ಕೆಲವೊಮ್ಮೆ ಹೇಳುವ ಬಯಕೆಯಾದಾಗ ಕೇಳಲು ಆಸಕ್ತಿ ತೋರುವವರು ಕಡಿಮೆ ಇರುತ್ತಾರೆ. ಉತ್ತಮ ಸಂವಹನದ, ಮೂಲ ಆಸಕ್ತಿಯನ್ನು ಹುಟ್ಟಿಸುವುದು. ಉದಾಹರಣೆಗೆ ಸ್ನೇಹಿತರ ನಡುವೆ, ಯಾವುದಕ್ಕೋ ಕಾಯುತ್ತಿದ್ದಾಗ ಬಹಳಷ್ಟು ಸಮಯವಿದೆ ಎಂದುಕೊಳ್ಳಿ. ಆಗ ಬಹುಪಾಲು ಎಲ್ಲರೂ ಅವರವರ ಆಲೋಚನೆಗಳಲ್ಲಿರುತ್ತಾರೆ ಅಥವಾ ಇಬ್ಬರೋ, ಮೂವರೋ ಪರಸ್ಪರ ಮಾತನಾಡಿಕೊಳ್ಳುತ್ತಿರುತ್ತಾರೆ. ಆಗ ಹೀಗೆ ಪ್ರಾರಂಭಿಸಿರಿ, ಈಗ ನಾನು ನಿಮಗೆ ಒಂದು ಗುಟ್ಟು ಹೇಳಲೇ, ಅಥವಾ ಸ್ವಾರಸ್ಯಕರ ಸಂಗತಿಯನ್ನು ಹಂಚಿಕೊಳ್ಳಲೇ ಎಂದು.. ಇದೇ ಉತ್ತಮ ಆರಂಭ….

ಮಾತು ಬೆಳ್ಳಿ ಮೌನ ಬಂಗಾರ’ ಎಂಬ ಗಾದೆಯ ಮಾತು ಪ್ರಚಲಿತದಲ್ಲಿದ್ದು ಇದು ಹೆಚ್ಚು ಅರ್ಥಪೂರ್ಣವೂ ಹೌದು, ಏಕೆಂದರೆ ಜಗತ್ತಿನಲ್ಲಿ ಪ್ರತಿಯೊಬ್ಬರೂ ತಾವು ಏನನ್ನಾದರೂ ಮಾತನಾಡಬೇಕು, ನಾವೂ ಉತ್ತಮ ವಾಗ್ಮಿಗಳಾಗಬೇಕೆಂದು (ಮಾತುಗಾರರು) ಆಸೆ ಪಡುತ್ತಾರೆ. ಅದಕ್ಕೆ ಅವಶ್ಯವಿರುವಷ್ಟು ಜ್ಞಾನ ಹಾಗೂ ವಿಚಾರಧಾರೆಗಳನ್ನು ಹೊಂದಿದ್ದರೂ ಬಹುತೇಕರಿಗೆ ತಮ್ಮಲ್ಲಿರುವ ವಿಚಾರಗಳನ್ನು ಇತರರ ಮುಂದೆ ಪ್ರಸ್ತುತಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇನ್ನು ಒಂದಷ್ಟು ಮಂದಿಗೆ ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಹಾಗೂ ಹೇಳಿಕೊಳ್ಳಲು ಏನೂಇರುವುದಿಲ್ಲ, ಆದರೂ ಏನನ್ನೋ ಮಾತನಾಡುತ್ತಿರುತ್ತಾರೆ. ಈ ಎರಡು ಸ್ಥಿತಿಗಳೂ ನಮ್ಮೆಲ್ಲರ ನಡುವೆಯೇ ಇದೆ. ಇಂತಹ ಒಂದು ಸ್ಥಿತಿಯು ಸಂವಹನದ ಪ್ರಮುಖಭಾಗವೇ ಆಗಿದೆಯೆಂದು ಸಂವಹನ ತಜ್ಞರು ಹೇಳುತ್ತಾರೆ. ಸಾಮಾನ್ಯ ಮಾತನ್ನು ತಜ್ಞರು ಈ ರೀತಿಯಾಗಿ ವ್ಯಾಖ್ಯಾನಿಸಿದ್ದು, ಸಂವಹನವೆಂದರೆ ವ್ಯಕ್ತಿ ವ್ಯಕ್ತಿಗಳ ನಡುವಿನ ವಿಭಿನ್ನ ಯೋಚನೆಗಳು, ಅನಿಸಿಕೆಗಳು, ವಿಚಾರಧಾರೆಗಳು, ಭಾವನೆಗಳ ವಿನಿಮಯದಲ್ಲಿ ಮಾತನಾಡುವ ರೀತಿ, ಕಣ್ಣಿನ ನೋಟ, ಮುಖಚರ್ಯ, ಆಂಗಿಕ ಭಾಷೆ, ಕೇಳುವ ರೀತಿ ಇವುಗಳನ್ನೊಳಗೊಂಡ ಶಾಸ್ತ್ರವೆಂದು ಹೇಳುತ್ತಾರೆ. ಒಟ್ಟಿನಲ್ಲಿ ಸಂವಹನವೆಂದರೆ ‘ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗೆ ತನ್ನಲ್ಲಿರುವ ವಿಚಾರಗಳು ಹಾಗೂ ಭಾವನೆಗಳನ್ನು ಹಂಚುವ ಅಥವಾ ವರ್ಗಾಯಿಸುವ ಪ್ರಕ್ರಿಯೆಯಾಗಿದೆ”.

ಎರಡು ವ್ಯಕ್ತಿಗಳ ನಡುವಿನ ಸಂವಹನವೊಂದು ಯಶಸ್ವಿಯಾಗಬೇಕಾದರೆ ಅಲ್ಲಿ ಎರಡು ವ್ಯಕ್ತಿಗಳ ನಡುವೆ ಭಾವನೆಗಳ ಸಮರ್ಪಕ ಹಂಚಿಕೆಯಾಗಬೇಕು,

ಇಬ್ಬರ ಮಧ್ಯೆಯೂ ಉತ್ತಮ ಬಾಂಧವ್ಯವಿರಬೇಕು (ಸದಾಭಿಪ್ರಾಯವಿರಬೇಕು). ಮಾತಿನಲ್ಲಿ ಪರಸ್ಪರ ಸಹಕಾರದ ಮನೋಭಾವವಿರಬೇಕು. ಇಬ್ಬರ ನಡುವೆಯೂ ಉತ್ತಮ ಅಭಿಪ್ರಾಯವಿರಬೇಕಾಗಿದ್ದು, ಮಾತನಾಡಲು ಸಾಕಷ್ಟು ವಿಚಾರಗಳಿರಬೇಕು. ಒಂದು ಸಂವಹನ ಪ್ರಕ್ರಿಯೆಯು (ವ್ಯಕ್ತಿ ವ್ಯಕ್ತಿಗಳ ನಡುವಿನ ಮಾತುಕತೆ) ಸಂಪೂರ್ಣಗೊಳ್ಳಬೇಕೆಂದರೆ ಅಲ್ಲಿ ವಿಚಾರ ಮಂಡನೆ ಮಾಡುವ ಹೇಳುಗನಿರಬೇಕು, ವಿಚಾರವನ್ನು ಸ್ವೀಕರಿಸುವ ಕೇಳುಗನಿರಬೇಕು, ಜೊತೆಗೆ ಇಬ್ಬರ ಮಧ್ಯೆ ವಿನಿಮಯವಾಗಲು ವಿಚಾರವಿರಬೇಕು ಹಾಗೆಯೇ ವಿಚಾರ ವಿನಿಮಯ ಸಂಪೂರ್ಣಗೊಳ್ಳಲು ಸೂಕ್ತ ಮಾಧ್ಯಮವಿರಬೇಕು. (ದೂರವಾಣಿ, ನೇರ ಮಾತುಕತೆಗೆ ಗಾಳಿ, ತರಗತಿ ಇತ್ಯಾದಿ)ಮಾತು ಹೀಗಿರಲಿ:

ಬೇಕಾಬಿಟ್ಟಿಯಾಗಿ ಮಾತನಾಡುವ ಬದಲು ಮಾತು ಹಿತಮಿತವಾಗಿ ಎಲ್ಲರಿಗೂ ಇಷ್ಟವಾಗುವಂತಿರುವುದರೊಂದಿಗೆ ಮಾತಿನಲ್ಲಿ ಸಂದರ್ಭಕ್ಕನುಗುಣವಾದ ಔಚಿತ್ಯವಿದ್ದು, ಮಾತಿನಲ್ಲಿ ಖಚಿತತೆಯೊಂದಿಗೆ ನೈಜತೆಯಿರಬೇಕು. ಮಾತು ಸಹಾನುಭೂತಿಯಿಂದ ಕೂಡಿ ಸತ್ವಯುತವೂ ವಿನಯತೆಯನ್ನೂ ಹೊಂದಿ ಯಾವತ್ತೂ ಆದೇಶದಿಂದ ಕೂಡಿರದೇ ಮಾತು ಸಲಹೆಯಾಗಿರಬೇಕು ಮತ್ತು ಅವುಗಳನ್ನು ಇತರರು ಅನುಪಾಲನೆ ಮಾಡುವಂತಿರಬೇಕು. ಮಾತು ಎಂದಿಗೂ ಅಸಹ್ಯವಾಗಿ ಥಳುಕಿನಿಂದಲೂ ಕೂಡಿರಬಾರದು.

ಮರಾಣಗಳಲ್ಲಿ ನಾವಾಡುವ ವಿಭಿನ್ನ ರೀತಿಯ ಮಾತುಗಳೇ ನಮ್ಮ ಜೀವನದ ಪಾಪ ಪುಣ್ಯಗಳಿಗೆ ಮೂಲ ಕಾರಣವೆಂದು ಹೇಳಲಾಗಿದೆ. ಅಂದರೆ ನಮ್ಮ ಮಾತಿನಿಂದ ನಮ್ಮ ಬದುಕು ಮತ್ತು ನಮ್ಮ ಮೇಲಿನ ಅಭಿಪ್ರಾಯಗಳು ನಿರ್ಧಾರವಾಗುತ್ತವೆ. ಉತ್ತಮ ಸಂವಹನಕಾರ ಸದಾ ತಾನಾಡುವ ಪ್ರತಿಯೊಂದು ಮಾತಿನ ಧಾಟಿಯನ್ನೂ, ಮಾತಿನ ಶೈಲಿಗಳನ್ನೂ, ಬಳಸುವ ಶಬ್ದಗಳನ್ನೂ ಪ್ರತೀ ಕ್ಷಣವೂ ಖುದ್ದು ತಾನೇ ಗಮನಿಸುತ್ತಾ ತಿದ್ದಿಕೊಳ್ಳುತ್ತಿರುತ್ತಾನೆ. ‘ಸತ್ಯವನ್ನೇ ಹೇಳು ಆದರೆ ಪ್ರಿಯವಾದ ಸತ್ಯವನ್ನೇ ಹೇಳು, ಅಪ್ರಿಯವಾದ ಸತ್ಯವನ್ನು ಮತ್ತು ಪ್ರಿಯವಾದ ಸುಳ್ಳನ್ನು ಎಂದಿಗೂ ಹೇಳದಿರು’ ಎಂದು ಸುಭಾಷಿತದಲ್ಲಿ ಹೇಳಲಾಗಿದೆ. ಇದರರ್ಥ ಮಾತು ಸತ್ಯದಿಂದ ಕೂಡಿರಬೇಕು, ಸತ್ಯವೆಂದ ಮಾತ್ರಕ್ಕೆ ಮುಖಕ್ಕೆ ಹೊಡೆದಂತೆ ಸತ್ಯವನ್ನಾಡಬೇಡ, ಸುಳ್ಳು ಕೆಲವೊಮ್ಮೆ ಇತರರಿಗೆ ಇಷ್ಟವಾದರೂ ಆ ಮಾತಿನಲ್ಲಿ ಎಳ್ಳಷ್ಟೂ ಸುಳ್ಳು ಸಲ್ಲದು ಎಂಬುದೇ ಆಗಿದೆ. ‘ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ನಾಣ್ಣುಡಿಯಂತೆ ವಿವಿಧ ಸಂದರ್ಭಗಳನ್ನು ಅರಿತುಕೊಂಡು ಮಾತನಾಡುವಾತ ಯಾರೊಂದಿಗೂ ಜಗಳವಾಡುವ ಸಂದರ್ಭವೊದಗಿಬರದೇ ಎಲ್ಲರನ್ನು ಸಮಾನವಾಗಿ ಸಂಭಾಳಿಸಿಕೊಂಡು ಹೋಗುತ್ತಾ ಬದುಕನ್ನು ಗೆಲ್ಲುತ್ತಾನೆ ಎಂದು.

ಹಲವಾರು ರೀತಿಯಲ್ಲಿ ಸಂವಹನವನ್ನು ಮಾಡಬಹುದಾಗಿದ್ದು, ಇವುಗಳಲ್ಲಿ ಏಕಮುಖ ಸಂವಹನ, ದ್ವಿಮುಖ ಸಂವಹನ, ಆಂಗಿಕ ಸಂವಹನಗಳ ಪ್ರಮುಖವಾದುದ್ದು, ಏಕಮುಖ ಸಂವಹನದಲ್ಲಿ ವ್ಯಕ್ತಿಯು ಒಬ್ಬನೇ ತನ್ನ ಮಾಹಿತಿ ಅಥವಾ ವಿಚಾರಗಳನ್ನು ಮಂಡಿಸುತ್ತಿದ್ದರೆ, ಶೋತೃಗಳು ಆತನ ಮಾತನ್ನು ಕೇಳುತ್ತಿರುತ್ತಾರೆ ಮತ್ತು ಇಲ್ಲಿ ಚರ್ಚೆಗೆ ಅವಕಾಶಗಳಿರುವುದಿಲ್ಲ. ಉದಾ: ಭಾಷಣ, ರೇಡಿಯೋ ಮತ್ತು ಟಿವಿ ವಾರ್ತೆ, ಧ್ವನಿವರ್ಧಕದಲ್ಲಿ ನೀಡುತ್ತಿರುವ ಸಂದೇಶ, ಚಲನಚಿತ್ರ ಇತ್ಯಾದಿ. ದ್ವಿಮುಖ ಸಂವಹನದಲ್ಲಿ ಮಾಹಿತಿಯನ್ನು ನೀಡುವಾತ ಮತ್ತು ಕೇಳುಗ ಇಬ್ಬರೂ ತಮ್ಮ ಅಭಿಪ್ರಾಯ ಮತ್ತು ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ ಮತ್ತು ವಿಮರ್ಷಿಸುತ್ತಾರೆ. ಉದಾ: ಚರ್ಚಾ ಕೂಟಗಳು, ತರಗತಿಗಳು ಮತ್ತು ಸಭೆಗಳು ಇತ್ಯಾದಿ. ಆಂಗಿಕ ಸಂವಹನದಲ್ಲಿ ಮಾತಿನ ಧ್ವನಿ ಕೇಳಿಸದಿರುವ ಸಂದರ್ಭದಲ್ಲಿ ಇಬ್ಬರು ಅಥವಾ ಹೆಚ್ಚಿನ ವ್ಯಕ್ತಿಗಳು ಬಾಯಿ ಮಾತಿನ ಮೂಲಕ ಮಾತನಾಡುವ ಬದಲು ಕೇವಲ ಅಂಗಾಂಗಗಳ ಚಲನೆ, ಅಭಿನಯದ ಮೂಲಕ ಮತ್ತು ಮುಖ ಭಾವ ಪ್ರದರ್ಶನದ ಮೂಲಕ ತಮ್ಮ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ.

ಮುಂದಿನ ವಾರ ‘ಮಾತೇಕೆ ತೀರಾ ಅವಶ್ಯಕ’ ಎಂಬುದರ ಕುರಿತಾಗಿ ಮಾಹಿತಿಯನ್ನು ಪಡೆದುಕೊಳ್ಳೋಣ.

ಲೇಖಕರು :
ಆರ್.ಕೆ. ಬಾಲಚಂದ್ರ
ಬೆಂಗಳೂರು

Leave a Reply

Your email address will not be published. Required fields are marked *