ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ : ಮಹಾಭಾರತ ಅನುಸಂಧಾನದ ‘ಭಾರತಯಾತ್ರೆ’ ಕೃತಿಗೆ ಪ್ರಶಸ್ತಿಯ ಗರಿ…

ಲಕ್ಷ್ಮೀಶ ತೋಳ್ಪಾಡಿ ಕನ್ನಡದ ಅಪರೂಪದ ಕಾವ್ಯ ಸಂವೇದನೆಯ ಚಿಂತಕರು. ದಕ್ಷಿಣ ಕನ್ನಡದ ಪುತ್ತೂರಿನಿಂದ 12 ಕಿ.ಮಿ. ದೂರದ ಶಾಂತಿಗೋಡು ಎಂಬ ಗ್ರಾಮದವರು. ಪ್ರಕೃತಿಯೊಂದಿಗೆ ನಿತ್ಯ ಮೌನಾನುಸಂಧಾನ ನಡೆಸುತ್ತ, ಅಡಿಕೆ , ಭತ್ತದ ಕೃಷಿಯೊಂದಿಗೆ ಸೃಜನಶೀಲ ಚಿಂತನೆಯ ಕೃಷಿಯನ್ನು ನಡೆಸುತ್ತ ಬಂದವರು.

ಮನೆ ಮಾತು ತುಳು.ಲೋಕಾಭಿರಾಮಕ್ಕೆ ಕನ್ನಡ; ಪ್ರಾಚೀನಕ್ಕೆ ಸಂಸ್ಕೃತ, ಅರ್ವಾಚೀನಕ್ಕೆ ಇಂಗ್ಲಿಷ್ ನ ಮೂಲಕ ಒಳಹೊಕ್ಕು, ಅಧ್ಯಯನಿಸಿದ್ದನ್ನೆಲ್ಲ ಧ್ಯಾನಿಸಿ ಆಖ್ಯಾನಗಳನ್ನೆಲ್ಲ ವ್ಯಾಖ್ಯಾನಿಸಿದವರು. ಚಿಂತಿಸುತ್ತಲೆ ಮಾತನಾಡುತ್ತ; ಮಾತನಾಡುತ್ತಲೇ ಚಿಂತಿಸುತ್ತ ತರ್ಕದ ಒಳನೋಟ ಹಾಗೂ ಕಾವ್ಯಸ್ಪರ್ಶದ ಮೂಲಕ ಪಾಂಡಿತ್ಯದ ರಸಾನುಭವವನ್ನು ಸಹೃದಯಿಗಳಿಗೆ ನೀಡುತ್ತ ಬಂದವರು.

ಸ್ವಾತಂತ್ರ್ಯ ಬಂದ ವರ್ಷ (1947)ವೇ ಜನಿಸಿ, ಸ್ವತಂತ್ರ ಮನೋವೃತ್ತಿಯನ್ನು ಚಿಂತನಾಕ್ರಮದಲ್ಲಿ ಅಳವಡಿಸಿಕೊಂಡವರು ತಮ್ಮೂರಿನ ನದಿ ಕುಮಾರಧಾರೆಗೆ ಆಣೆಕಟ್ಟು ನರ್ಮಿಸಿ, ಹಳ್ಳಿಯೇ ಮುಳುಗಿಹೋಗಿಬಿಡುವ ಹೊತ್ತಿಗೆ ಊರ ಉಳಿವಿಗಾಗಿ ಕಿಸಾನ್ ಸಂಘದ
ಮೂಲಕ ಚಳುವಳಿಗೆ ಧುಮುಕಿದವರು. ಹರೆಯದ ಉತ್ಸಾಹದಲ್ಲಿ ಬೆಂಗಳೂರಿನಲ್ಲೂ ಕೆಲ
ಕಾಲ ನೆಲೆಸಿ, ವೈ.ಎನ್.ಕೆ., ಅಡಿಗ, ಲಂಕೇಶ್, ಕಿ.ರಂ.ನಾಗರಾಜರೊಂದಿಗೆ (ನವ್ಯದ
ದೀಕ್ಷೆಯೊಂದಿಗೆ) ಅನುಸಂಧಾನ ನಡೆಸಿದವರು. ಕೆಲ ಕಾಲ ಲಂಕೇಶ್ ಪತ್ರಿಕೆ ಬಳಗದಲ್ಲಿ
ಬರಹಗಾರರಾಗಿದ್ದರು. ಅಪಾರ ಓದು, ಚರ್ಚೆ, ಬರವಣಿಗೆಯೊಂದಿಗೆ ಭಕ್ತಿ, ಆಧ್ಯಾತ್ಮದ
ಗುಂಗಿನಲ್ಲಿ ಸತ್ಯಕಾಮರ ಸಂಪರ್ಕಕ್ಕೆ ಬಂದರು. ಕಾವ್ಯ, ತಾಳಮದ್ದಲೆಯ ಅರ್ಥಗಾರಿಕೆಯನ್ನೂ ಸ್ಪರ್ಶಿಸಿ, ರಾಮಾಯಣ, ಮಹಾಭಾರತ, ವೇದೋಪನಿಷತ್ತುಗಳನ್ನು

ಮೂಲಭಾಷೆಯಲ್ಲಿಯೇ ಓದುತ್ತ ಆಧುನಿಕ-ವೈದಿಕ-ವೈಚಾರಿಕ ನಿಲುವುಗಳನ್ನು ಮುಖಾಮುಖಿಯಾಗಿಸಿದವರು.

ಬುದ್ಧ ಗಾಂಧಿಯ ಮಾರ್ಗದಿಂದ ಪ್ರೇರಿತರಾಗಿ ರೈತಪರ, ಸ್ವದೇಶಿ ಚಳುವಳಿಯಲ್ಲಿ ತೊಡಗಿಕೊಳ್ಳುತ್ತಲೇ ಗಾಂಧಿ ಕಲ್ಪನೆಯ ಗ್ರಾಮಸ್ವರಾಜ್ಯದ ಕನಸನ್ನು ಕಂಡು, ಕಟ್ಟಲು ಬದ್ಧರಾದರು. ‘ಪುತ್ತೂರಿನ ಅಜ್ಜ’ನೊಂದಿಗೆ ಆಧ್ಯಾತ್ಮದ ಅನುಸಂಧಾನ ನಡೆಸುತ್ತ ‘ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ’ ಎಂಬ ಎಂಬ ಅಪರೂಪದ ಕೃತಿಯನ್ನು ಕನ್ನಡಕ್ಕೆ ನೀಡಿರುವರು. ಆಧ್ಯಾತ್ಮವನ್ನು ಸರಳ ಜೀವನ ಪ್ರೀತಿಯ ಹಾಗೂ ಕಾವ್ಯದ ಧ್ವನಿಪೂರ್ಣತೆಯ
ಆಯಾಮವಾಗಿಸುತ್ತಲೇ ಮಾತು, ಓದು, ಬರೆಹಗಳನ್ನು ಅನನ್ಯವಾಗಿಸಿಕೊಂಡವರು.

ನಾಡಿನ ಪ್ರಸಿದ್ದ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ. ವೇದ, ಉಪನಿಷತ್ತು, ರಾಮಾಯಣ, ಮಹಾಭಾರತದ ಅರ್ಥ ಸಾಧ್ಯತೆಗಳನ್ನು ಆಧುನಿಕ ನೋಟ ಕ್ರಮದಿಂದ ವಿಸ್ತರಿಸಿದವರು. ‘ಮಹಾಯುದ್ಧಕ್ಕೆ ಮುನ್ನ’, ‘ಸಂಪಿಗೆ ಭಾಗವತ’, ‘ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ, ‘ಭವತಲ್ಲಣ’, ‘ಆನಂದಲಹರೀ’, ‘ಭಕ್ತಿಯ ನೆಪದಲ್ಲಿ’ ಮುಂತಾದ ಕೃತಿಗಳನ್ನು ಪ್ರಕಟಿಸಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾದವರು.

ಪ್ರಸ್ತುತ 2018ರಲ್ಲಿ ಪ್ರಕಟವಾದ ಇವರ ‘ಭಾರತಯಾತ್ರೆ’ ಪ್ರಜಾವಾಣಿಯ ರವಿವಾರದ ‘ಮುಕ್ತಛಂದ’ ಪುರವಣಿಯಲ್ಲಿ 15 ದಿನಗಳಿಗೊಮ್ಮೆ ಪ್ರಕಟವಾದವುಳು. ಈ ತನಕ ಅನೇಕ ವಿದ್ವಾಂಸರು ಮಹಾಭಾರತವನ್ನು ನೋಡಿ ವ್ಯಾಖ್ಯಾನಿಸಿದ ಕ್ರಮಕ್ಕೂ, ತೋಳ್ಪಾಡಿಯವರು ವ್ಯಾಖ್ಯಾನಿಸಿದ ಕ್ರಮಕ್ಕೂ ವ್ಯತ್ಯಾಸವಿದೆ. ಕಾವ್ಯ-ಚರಿತ್ರೆ ಪುರಾಣಗಳನ್ನು ಪರಸ್ಪರ ಒಂದಾಗಿಸುವ ಹೊಸಬೆಳಕಿನಲ್ಲಿ ಅವರ ಚಿಂತನೆ, ಮಾತು ಹಾಗೂ ಉಪನ್ಯಾಸಗಳು
ಸಹೃದಯಿಯಲ್ಲಿ ವಿಶಿಷ್ಟ ಅನುಭೂತಿಯನ್ನು ಉಂಟುಮಾಡಿವೆ, ಮಾಡುತ್ತಿವೆ.

‘ಭಾರತಯಾತ್ರೆ’ಯಲ್ಲಿ ಮಹಾಭಾರತದ ‘ಯಕ್ಷಪ್ರಶ್ನೆ’ ಯಂಥ ಸನ್ನಿವೇಶದಿಂದ ಹಿಡಿದು ಶಾಂತಿಪರ್ವದವರೆಗಿನ ಸ್ವಾರಸ್ಯಕರ ಸನ್ನಿವೇಷಗಳ ವ್ಯಾಖ್ಯಾನವನ್ನು ಮಾಡಿದ್ದಾರೆ. ವ್ಯಾಸಕವಿಯ ಆಶಯದ ನಾನಾ ಸಾಧ್ಯತೆಗಳನ್ನು ತಮ್ಮ ಚಿಂತನೆಯ, ವ್ಯಾಖ್ಯಾನದ ವಿಶಿಷ್ಟ ಕ್ರಮದಿಂದ ಹಾಗೂ ಪಂಪ, ರನ್ನ, ಕುಮಾರವ್ಯಾಸರ ಭಾರತದೊಂದಿಗಿನ ತೌಲನಿಕ ಒಳನೋಟಗಳಿಂದ ಕೇವಲ ವಿಶ್ಲೇಷಿಸಿದ್ದು ಈ ಕೃತಿಯ ವೈಶಿಷ್ಟ್ಯವಾಗಿದೆ. ಕೇವಲ ಕಥೆಗಾಗಿ
ಕಥೆ ಎಂಬ ನೆಲೆಯಿಂದ ನೋಡದೇ ಆಯಾ ಪಾತ್ರಗಳ ಗುಣಸ್ವಭಾವಗಳನ್ನು ವ್ಯಾಸ ಕವಿಯ ಭಾಷಿಕ ಪ್ರಯೋಗಗಳ ಸೂಕ್ಷ್ಮ ಆಶಯಗಳ ನೆಲೆಯಿಂದ ; ಸ್ವತಃ ತಾವು ಚಿಂತನೆ ನಡೆಸುತ್ತ, ಓದುಗನನ್ನೂ ಚಿಂತನೆಗೆ ಹಚ್ಚುವ ಗುಣದಿಂದಾಗಿ ಈ ಕೃತಿ ಇತರ ಕೃತಿಗಳಿಗಿಂತ ಭಿನ್ನವಾಗಿ ನಮಗೆ ಮುಖ್ಯವೆನಿಸುತ್ತದೆ. ಶಾಂತಿಪರ್ವದಲ್ಲಿ ಧರ್ಮರಾಯನು ಮಹಾಭಾರತದ ಯುದ್ಧಾನಂತರ ಅನುಭವಿಸುವ ದುಃಖವನ್ನು ತೋಳ್ಪಾಡಿ ವಿವರಿಸುತ್ತ …..

‘ಧರ್ಮರಾಯನ ದುಃಖವೆಂದರೆ… ಅದು ಗೆದ್ದವನ ದುಃಖ; ಸೋತವರ ದುಃಖವಲ್ಲ, ಸೋತವರ ದುಃಖವೆಂಬುದು ಎಲ್ಲರಿಗೂ ಗೊತ್ತಿದ್ದುದೇ, ಅರ್ಥವಾಗುವಂಥದ್ದೇ. ಆದರೆ ಗೆದ್ದವನ ದುಃಖ ನಿಜವಾದ ದುಃಖ!…ಗೆಲುವಿನಲ್ಲಿಯೇ ಎಲ್ಲ ದುಃಖಗಳ ನಿವಾರಣೆ ಇದೆ ಎಂದು ತಿಳಿದ ಲೋಕಕ್ಕೆ –ಇದು ಎಂದೂ ಅರ್ಥವಾಗದ ದುಃಖ! ಇಂಥ ದುಃಖ
ಧರ್ಮರಾಯನಂಥ ಪಾತ್ರಕ್ಕೆ; ವ್ಯಾಸನಂಥ ಕವಿಗೆ ಮಾತ್ರ ವ್ಯಕ್ತಪಡಿಸಲು ಸಾಧ್ಯವಾದ್ದರಿಂದಲೇ ಈ ಕಾವ್ಯ ಶ್ರೇಷ್ಠ ಕಾವ್ಯ…’ಎಂದು ಹೇಳುತ್ತಾರೆ. ಮಹಾಭಾರತದ ಸ್ಥಾಯೀ ಭಾವ ವೀರವಲ್ಲ; ಶಾಂತಿ ಎಂದು ಹೇಳಲು ತೋಳ್ಪಾಡಿಯವರ ಈ ಮೇಲಿನ ವಿಶ್ಲೇಷಣೆ ಸಾಕು.

ಬಹುಶ್ರುತ ಚಿಂತಕನಿಗೆ, ಕವಿಯ ಆಳದ ನಾಡಿಮಿಡಿತವನ್ನು ಬಲ್ಲ ಚಿಂತಕನಿಗೆ ಮಾತ್ರ ಈ ತೆರನಾದ ಗ್ರಹಿಕೆ ಸಾಧ್ಯ. ವ್ಯಾಸರಿಗೆ ದೈವತ್ವದ ನೆಲೆಯ ಪಾತ್ರವಾದ ಕೃಷ್ಣನಿಗಿಂತ ಭಿನ್ನವಾಗಿ ಮಾನವೀಯ ನೆಲೆಯ, ನೋವುಣ್ಣುವ ಸಾಮರ್ಥ್ಯದ ಪಾತ್ರಗಳೇ ಮುಖ್ಯವಾಗಿವೆ, ಅಚ್ಚುಮೆಚ್ಚಿನದಾಗಿದೆ ಎಂದು ಹೇಳುವ ತೋಳ್ಪಾಡಿಯವರು ಯುದ್ಧದ ಮೊದಲು

ಅರ್ಜುನನ ದುಃಖ (ಭಗವದ್ಗೀತೆಯ ಸಂದರ್ಭ) ಹಾಗೂ ಯುದ್ಧದ ನಂತರದ ಧರ್ಮರಾಜನ ದುಃಖದ ಸಂದರ್ಭವನ್ನು ತಂದ ವ್ಯಾಸರ ಪ್ರತಿಭೆಯನ್ನು ಕೊಂಡಾಡುತ್ತಾರೆ. ಅಂದರೆ ವ್ಯಾಸರು ಚಿತ್ರಿಸಿದ ಮನುಷ್ಯ ಪಾತ್ರಗಳು ತಮ್ಮದೇ ಸುಖ-ದುಃಖಗಳ ಮೇಲೆ ತಮಗೇ ಸ್ವಾಯತ್ತತೆ ಇಲ್ಲವಲ್ಲ…ಎಂಬ ಕೊರಗಿನಲ್ಲಿ ‘ಅರಿವು-ಮರೆವು’ಗಳ ಸಂಘರ್ಷದ ಕಥೆಯಾಗಿ ಇಡೀ ಮಹಾಭಾರತವನ್ನು ನೋಡುವ ಅವರ ‘ಮಹಾಭಾರತ ಯಾತ್ರೆ’ ಕೇವಲ ವ್ಯಾಸ ಕಾವ್ಯದವ್ಯಾಖ್ಯಾನವಾಗದೇ, ಮಾನವ ಚರಿತ್ರೆ- ಪುರಾಣಗಳ; ಮನುಷ್ಯ ಸ್ವಭಾವಗಳ ಚಿಂತನೆಯ
ಯಾತ್ರೆಯನ್ನೂ ಸಹೃದಯಿಗಳಿಗೆ ಮಾಡಿಸುವ ಅಪರೂಪದ ಕೃತಿಯಾಗಿದೆ.

ಈ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇಂಥ ಯೋಗ್ಯ ಚಿಂತಕರ ಅರ್ಹ ಕೃತಿಗೆ ದೊರೆತಿರುವುದು ಪ್ರಕಟಿಸಿದ ‘ಅಭಿನವ’ಕ್ಕೂ, ಸಮಸ್ತ ಕನ್ನಡಿಗರಿಗೂ ಅಭಿಮಾನದ ಸಂಗತಿಯಾಗಿದೆ.

ಲೇಖಕರು : ಪ್ರೊ.ನಾಗರಾಜ ಹೆಗಡೆ ಅಪಗಾಲ

Leave a Reply

Your email address will not be published. Required fields are marked *