ಉತ್ತರಕನ್ನಡದ ಸಾಹಿತಿಗಳ ಮುಂದೆ ನಾನು ಕುಬ್ಜನೇನೋ ಎನಿಸಿತ್ತು: ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಡಾ. ಸಿದ್ದಲಿಂಗಪಟ್ಟಣಶೆಟ್ಟಿ ಮನದಾಳದ ನುಡಿ

ಹೊನ್ನಾವರ ( ಚಿಟ್ಟಾಣಿ ರಾಮಚಂದ್ರ ಹೆಗಡೆ ವೇದಿಕೆ): `ಉತ್ತರ ಕನ್ನಡ ಜಿಲ್ಲೆಯ ದಿಗ್ಗಜ ಸಾಹಿತಿಗಳ ಎದುರು ನಾನು ಕುಬ್ಜ ಎಂದು ಅಂದು ನಾನು ಶಿರಸಿ ಕಾಲೇಜಿನಲ್ಲಿ ಮೊದಲ ಬಾರಿಗೆ ಅಧ್ಯಾಪಕನಾಗಿ ಕೆಲಸ ಮಾಡುವಾಗ ನನಗೆ ಅನಿಸಿದ್ದುಂಟು. ಯಾಕೆಂದರೆ ಅಂದು ಆ ಕಾಲೇಜಿನಲ್ಲಿ ನನ್ನ ಅಧ್ಯಾಪಕ ಸಹಪಾಠಿಗಳಾಗಿದ್ದವರು ಎಲ್.ಟಿ. ಶರ್ಮ, ಬಿ.ಎಚ್.ಶ್ರೀಧರ ಅಂಥವರು. ಘಟ್ಟದ ಕೆಳಗೆ ಯಶವಂತ ಚಿತ್ತಾಲ, ಗಂಗಾಧರ ಚಿತ್ತಾಲ, ಗೌರೀಶ ಕಾಯ್ಕಿಣಿ ಅಂಥ ದಿಗ್ಗಜ ಸಾಹಿತಿಗಳು ಸಿಕ್ಕರು.

ಒಟ್ಟಾರೆ ಉತ್ತರ ಕನ್ನಡ ಜಿಲ್ಲೆ ದಿಗ್ಗಜ ಸಾಹಿತಿಗಳ ಸ್ನೇಹದ ಜೊತೆಗೆ ನಾನು ಇಲ್ಲಿಂದ ಧಾರವಾಡದ ಕರ್ನಾಟಕ ಕಾಲೇಜಿಗೆ ಹೋಗುವ ಮೊದಲು ನನಗೆ ಇಲ್ಲಿ ಕೆಲಸ ಮಾಡುವ ಅವಕಾಶ ಕೊಟ್ಟಿದ್ದನ್ನು ಹೇಗೆ ಮರೆಯಲಿ? ಆ ನೆನಪುಗಳು ಉತ್ತರ ಕನ್ನಡದೊಂದಿಗೆ ಕಟ್ಟಿದ ಗಾಢ ಸಂಬಂಧದ ಕಾರಣದಿಂದಲೇ ಹೊನ್ನಾವರದಲ್ಲಿ ನಡೆಯುವ 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಲು ಪ್ರೀತಿಯಿಂದ ಬರಬೇಕಾಯಿತು- ಹೀಗೆಂದು ಉತ್ತರ ಕನ್ನಡ ಜಿಲ್ಲೆಯೊಂದಿಗಿನ ತಮ್ಮ ದೀರ್ಘ ಹಾಗೂ ಗಾಢ ಸಂಬoಧವನ್ನು ತೆರೆದಿಟ್ಟವರು ಬುಧವಾರ ಹೊನ್ನಾವರದಲ್ಲಿ ನಡೆದ 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಹಿಂದಿ ಪ್ರಾಧ್ಯಾಪಕ, ಕನ್ನಡ ಸಾಹಿತಿ, 85 ವರ್ಷ ವಯಸ್ಸಿನ ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಅವರು.

ನನ್ನ ಬಳಿ ಮೊದಲು ಪಿ.ಎಚ್.ಡಿ ಮಾಡಿದ ವಿದ್ಯಾರ್ಥಿ ಇಲ್ಲೇ ಸಮೀಪದ ಕುಮಟಾ ತಾಲೂಕಿನ ಮಾದನಗೇರಿಯವನು. ಡಾ. ದಿನಕರ ದೇಸಾಯಿ ಅವರ ಬಗ್ಗೆ ಸಮಗ್ರ ಸಂಶೋಧನೆ ನಡೆಸಿ ಪಿ.ಎಚ್.ಡಿ ಪಡೆದ ಡಾ. ಶ್ರೀಪಾದ ಶೆಟ್ಟಿ ಅವರ ಪ್ರಬಂಧದ ಪ್ರತಿ ಈಗ ಎಲ್ಲೂ ಸಿಗುತ್ತಿಲ್ಲ. ಅದನ್ನು ಕರ್ನಾಟಕ ವಿ.ವಿ ಮತ್ತೆ ಪ್ರಕಟಿಸುವ ಕೆಲಸ ಮಾಡುತ್ತಿದೆ. ಅಂಥ ಉಪಯುಕ್ತ ಪ್ರಬಂಧಗಳನ್ನು ಉಚಿತವಾಗಿ ಪ್ರಕಟಿಸಿ ವಿತರಿಸುವ ಕೆಲಸ ಮಾಡಿದರೆ ದಿನಕರ ದೇಸಾಯಿ ಅಂಥ ಧೀಮಂತರ ಬಗ್ಗೆ ಎಳೆಯ ಪೀಳಿಗೆಗೆ ಮಾಹಿತಿ ಲಭಿಸುತ್ತದೆ. ಡಾ. ದಿನಕರ ದೇಸಾಯಿ ಒಮ್ಮೆ, ಸರಿಯಾಗಿ 4 ಗಂಟೆಗೆ ಧಾರವಾಡಕ್ಕೆ ಬರುತ್ತೇನೆ, ನಿಮ್ಮನ್ನೆಲ್ಲ ಭೇಟಿ ಮಾಡಬೇಕು, ನನಗೆ ಐದು ನಿಮಿಷ ಮಾತ್ರ ಸಮಯವಿದೆ ಎಂದು ತಿಳಿಸಿದ್ದರು. ನಾವು ಸ್ನೇಹಿತರೆಲ್ಲ ನಾಲ್ಕು ಗಂಟೆ ಐದು ನಿಮಿಷಕ್ಕೆ ಹೋದೆವು. ಆಗ ದಿನಕರ ದೇಸಾಯಿ, ನನಗೆ ಐದು ನಿಮಿಷ ಮಾತ್ರ ಸಮಯವಿತ್ತು, ನೀವು ತಡವಾಗಿ ಬಂದಿರಿ, ನಿಮ್ಮನ್ನು ನೋಡಿಯಾಯಿತು, ಆದರೆ ಮಾತಾಡಲು ನನಗೆ ಇಂದು ಸಯವಿಲ್ಲ, ನಾನು ಹೊರಡುತ್ತೇನೆ ಎಂದು ಹೊರಟೇಬಿಟ್ಟರು. ಅವರಿಂದ ನಾನು ಅಂದು ಸಮಯದ ಮಹತ್ವ ಕಲಿತೆ ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಶ್ರೀಪಾದ ಶೆಟ್ಟಿ ಎಲ್ಲರೊಂದಿಗೆ ಪ್ರೀತಿಯಿಂದ ಬೆರೆಯುವ ಗುಣ ಹೊಂದಿರುವುದರ ಜೊತೆಗೆ

ಉತ್ತರ ಕನ್ನಡ ಜಿಲ್ಲೆಯ ಸ್ಥಿತಿ-ಗತಿಯನ್ನು ತಮ್ಮ ಸಾಹಿತ್ಯದಲ್ಲಿ ಸಮಗ್ರವಾಗಿ ಬಿಂಬಿಸಿದ್ದಾರೆ. ಡಾ ಎನ್. ಆರ್. ನಾಯಕ ಅವರ ವಿದ್ಯಾರ್ಥಿಯಾಗಿದ್ದ ಡಾ. ಶ್ರೀಪಾದ, ಮುಂದೆ ವಿಶ್ವವಿದ್ಯಾಲಯಕ್ಕೆ ಹೋದಾಗ ಅಲ್ಲಿ ವಾಚನಾಲಯ, ಗೆಳೆಯರು, ಚರ್ಚೆ ಹೀಗೆ ಸದಾ ಬಿಡುವಿಲ್ಲದೆ ಪಾದರಸದಂಥ ವ್ಯಕ್ತಿತ್ವ ಹೊಂದಿದ್ದರು. ಸುಮಾರು 25 ವರ್ಷಗಳ ಹಿಂದೆ ಸಾಹಿತಿ ಡಾ. ಕೃಷ್ಣಾನಂದ ಕಾಮತ್ ನಂತರ ಶ್ರೀಪಾದ ಶೆಟ್ಟಿ ಅವರನ್ನು ಉತ್ತರ ಕನ್ನಡ ಜಿಲ್ಲಾ ಕನ್ನಡಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನದಲ್ಲಿ ನೋಡುತ್ತಿರುವುದು ಹೆಮ್ಮೆಯ ಸಂಗತಿ ಎoದರು. ಎಳೆಯ ಬರಹಗಾರರೇ ನೀವು ಕೇವಲ ಕತೆ, ಕವಿತೆ, ನಾಟಕ, ಮಕ್ಕಳ ಕವಿತೆ, ಚುಟುಕು ಬರೆದರೆ ಸಾಲದು. ಹಲವು ವರ್ಷಗಳಿಂದ ನಿಮ್ಮ ಮನಸ್ಸಿನಲ್ಲಿ ಅಚ್ಚೊತ್ತಿರುವ ಸಂಗತಿಗಳನ್ನು ಆಪ್ತವಾಗಿ ದಾಖಲಿಸಿ ಅದನ್ನೇ ಪ್ರಕಟಿಸಿ’ ಎಂದು ಕಿವಿಮಾತು ಹೇಳಿದರು.

Leave a Reply

Your email address will not be published. Required fields are marked *