ಧ್ವನಿಯಿಲ್ಲದವರಿಗೆ ಅಕ್ಷರ-ಅನ್ನದ ದಾರಿ ತೋರಿಸಿ ಆತ್ಮವಿಶ್ವಾಸದ ಬದುಕು ನೀಡಬೇಕು : ಸಮ್ಮೇಳನಾಧ್ಯಕ್ಷ ಡಾ. ಶ್ರೀಪಾದ ಶೆಟ್ಟಿ

ಹೊನ್ನಾವರ ( ಚಿಟ್ಟಾಣಿ ರಾಮಚಂದ್ರ ಹೆಗಡೆ ವೇದಿಕೆ) ಜಿಲ್ಲೆಯಲ್ಲಿ ಮನೆ-ಜಮೀನು-ವಿದ್ಯೆ ಇಲ್ಲದವರು ಆ ಮೂಲಕ ಜಾಣ್ಮೆ ಇಲ್ಲವದವರು, ಕೌಶಲ್ಯದ ಕೆಲಸ ಮಾಡಲು ಆಗದವರು ಬಹುಪಾಲು ಜನರಿದ್ದಾರೆ. ಅವರಿಗೆ ಅಕ್ಷರ ಮತ್ತು ಅನ್ನ ನೀಡಿ ಆತ್ಮವಿಶ್ವಾಸದಿಂದ ಬದುಕು ಸಜ್ಜುಗೊಳಿಸುವ ಹೊಣೆ ಸಮಾಜದ ಮೇಲಿದೆ. ಸ್ವ-ಸಹಾಯ ಸಂಘ, ಎನ್.ಜಿ.ಓ.ಗಳು,

ಪ್ರತಿಷ್ಠಾನಗಳು, ಟ್ರಸ್ಟ್ ಗಳು ದೀನೋದ್ಧಾರದ ಕೆಲಸವನ್ನು ಶ್ರದ್ಧೆ-ನಿಷ್ಠೆ ಮತ್ತು ಬದ್ಧತೆಯಿಂದ ಅಗತ್ಯವಿದೆ ಎಂದು ಉತ್ತರ ಕನ್ನಡ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಶ್ರೀಪಾದ ಶೆಟ್ಟಿ ಅಭಿಪ್ರಾಯಪಟ್ಟರು.

ಹೊನ್ನಾವರದಲ್ಲಿ ಇಂದಿನಿಂದ ಎರಡು ದಿನಗಳವರೆಗೆ (ಡಿ-27-28) ನಡೆಯುತ್ತಿರುವ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ದಿನಕರ ದೇಸಾಯಿ ತಾವು ಹುಟ್ಟುಹಾಕಿದ ‘ಕೆನರಾ ವೆಲ್ಫೇರ್ ಟ್ರಸ್ಟ್’ ನ ಮೂಲಕ ಜನಪರ ಮತ್ತು ರೈತಪರ ಚಿಂತನೆಯ ನೆಲೆಯಲ್ಲಿ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದರು. ಈಗ ಸರಕಾರ
ತರುತ್ತಿರುವ ದೀನ ದುರ್ಬಲರ ಏಳಿಗೆಗಾಗಿ ಶ್ರಮಿಸುತ್ತಿದ್ದು ಇದನ್ನು ಅನುಷ್ಠಾನಕ್ಕೆ ತರುವಲ್ಲಿ ಅಧಿಕಾರಿಗಳಿಗೆ ಇಚ್ಛಾಶಕ್ತಿಯ ಅಗತ್ಯವಿದೆ. ಅವರಲ್ಲಿ ಕೆಲವರು ತಮ್ಮ ಸಂಬಳ ಹಾಗೂ ಸ್ವಂತ ಜೀರ್ಣೋದ್ಧಾರದ ಚಿಂತೆಯಲ್ಲಿರುವುದು ವಿಷಾದದ ಸಂಗತಿ ಎಂದು ಹೇಳಿದರು.

ಉತ್ತರ ಕನ್ನಡ ಜಿಲ್ಲೆಯನ್ನು ‘ಕಾಡಿನ ಜಿಲ್ಲೆ’ ಎಂದು ಕರೆಯುತ್ತಾರೆ. ಆದರೆ ಕಾಡು ದಿನದಿಂದ ದಿನಕ್ಕೆ ಇಂಚಿಂಚು ಕರಗಿ ಹೋಗುತ್ತಿದೆ. ಮೇಲ್ವರ್ಗದವರು, ಬಹುಸಂಖ್ಯಾತ ಸಮುದಾಯದವರು ಕಾಡನ್ನು ಕಡಿದು ಗದ್ದೆ, ತೋಟಗಳನ್ನಾಗಿ ಮಾಡಿಕೊಂಡು ನಿರುಮ್ಮಳವಾಗಿದ್ದಾರೆ. ಕೆಲವು ಬುದ್ಧವಂತರು ಸರಕಾರಿ ಜಮೀನಿನಲ್ಲಿ ತಮ್ಮ ಮಾಲ್ಕಿ ಜಮೀನಿನ ರೆಕಾರ್ಡ್ ಉತಾರು ಹಾಜರು ಪಡಿಸಿ ಮನೆ ಕಟ್ಟಿಕೊಂಡಿದ್ದಾರೆ. ಈ ಬಗ್ಗೆ ತನಿಖೆ, ಚೌಕಾಶಿ ಮಾಡಲು ಯಾರಿಗೆ ಪುರುಸೊತ್ತು ಇದೆ ಎಂದು ಪ್ರಶ್ನಿಸಿದ ಸಮ್ಮೇಳನಾಧ್ಯಕ್ಷರು, ಕಾಡಿನಲ್ಲಿ ಮರಗಳನ್ನು ಕಡಿಯುವುದರಿಂದ ಭೂಸವಕಳಿ ಉಂಟಾಗಿ ಉತ್ತರ ಕನ್ನಡದ ನದಿಗಳಲ್ಲಿ ಹೂಳು ತುಂಬಿಕೊಂಡಿದೆ ಎಂದು ಡಾ. ಶ್ರೀಪಾದ ಶೆಟ್ಟಿ ಆತಂಕ ವ್ಯಕ್ತಪಡಿಸಿದರು.

ಸಾಹಿತ್ಯದಲ್ಲಿ ಈಗ ಪ್ರಚಲಿತದಲ್ಲಿರುವ ಬಲಪಂಥೀಯರು ಮತ್ತು ಎಡಪಂಥೀಯರು ಬಹುತೇಕ ಆಯಾ ಕಾಲದಲ್ಲಿ ಆಡಳಿತರೂಢವಾದ ತಮ್ಮ ಪಂಥಕ್ಕೆ ಒಗ್ಗುವ ಆಳುವ ಸರಕಾರದ ಫಲಾನುಭವಿಗಳಾಗುತ್ತಿರುವುದು ಸದ್ಯದ ವಾಸ್ತವ. ಈ ಎರಡೂ ಪಂಥಕ್ಕೆ ಸೇರದವರು ತಮ್ಮ ಪಾಡಿಗೆ ಓದು ಬರಹದಲ್ಲಿ ತೊಡಗಿರುವವರನ್ನು ಯಾರೂಕಣ್ಣೆತ್ತಿಯೂ ನೋಡುತ್ತಿಲ್ಲ. ಸಾಹಿತ್ಯವು ನಿರ್ಮಲವಾದ

ಅಂತಃಕರಣ, ಆತ್ಮವಿಶ್ವಾಸ, ಪ್ರಾಮಾಣೀಕತೆ, ಸತ್ಯ ನಿಷ್ಠೆಪರೋಪಕಾರದ ಗುಣಗಳಿಂದ ನಿಜದ ನೆಲೆಯಲ್ಲಿ ಸಹಜವಾಗಿಮೂಡಿ ಬರಬೇಕಾಗಿದೆ ಎಂದು ಶೆಟ್ಟಿ ಹೇಳಿದರು.

ಕನ್ನಡ ಮತ್ತು ಕನ್ನಡಿಗರ ಅಭಿವೃದ್ಧಿಗೆ ಈಗಾಗಲೇ ನಮ್ಮ ಕಣ್ಮುಂದೆ ಇರುವ ಸರೋಜಿನಿ ಮಹಿಷಿ ವರದಿ, ಬರಗೂರು ರಾಮಚಂದ್ರಪ್ಪ ವರದಿ, ನಂಜುಡಪ್ಪ ವರದಿ ಇವುಗಳೆಲ್ಲವನ್ನು ಸರಕಾರ ಹಂತ ಹಂತವಾಗಿ ಜಾರಿಗೆ ತರಬೇಕು. ಈ ವರದಿಗಳ ಜಾರಿಯಿಂದ ಕನ್ನಡದ ಹಿತರಕ್ಷಣೆಯೊಂದಿಗೆ ಕರ್ನಾಟಕ ವಿಕಾಸವು ಆಗುತ್ತದೆ ಎಂದು ಡಾ. ಶ್ರೀಪಾದ ಶೆಟ್ಟಿ ಆಶಯಆಶಿಸಿದರು.

ಉತ್ತರ ಕನ್ನಡ ಜಿಲ್ಲೆ ಹಲವು ಸಮುದಾಯಗಳ ಆಡುಮಾತಿನ ಆಡುಂಬೊಲ. ಹವ್ಯಕ, ಹಾಲಕ್ಕಿ, ನಾಡವ, ಮುಕ್ರಿ, ಆಗೇರ, ಗಾಮೊಕ್ಕಲು, ಗೊಂಡ ಮುಂತಾದ ಸಮುದಾಯಗಳ ಆಡು ಮಾತಿನಲ್ಲಿ ಕಾವ್ಯ ಸೃಷ್ಟಿಯಾದರೆ ಆ ಭಾಷೆಯ ಸೊಗಡನ್ನು ಆಸ್ವಾದಿಸಬಹುದಾಗಿದೆ. ಈ ಸಮುದಾಯಗಳ ಉಪಭಾಷೆಯ ಕೋಶವನ್ನು ರಚಿಸಬೇಕು ಎಂದು ಸಮ್ಮೇಳನದ ವೇದಿಕೆಯ ಮೂಲಕ ಬರಹಗಾರರಿಗೆ, ಭಾಷಾ ವಿಜ್ಞಾನಿಗಳಿಗೆ ಸರ್ವಾಧ್ಯಕ್ಷರು ಕರೆ ನೀಡಿ – ಸಿದ್ದಿ, ಗೌಳಿ, ಕುಣಬಿ, ,ಮುಕ್ರಿ, ಹಳ್ಳೇರು, ಹರಿಕಾಂತ, ಕರೆ ಒಕ್ಕಲು, ಕರೆಒಕ್ಕಲು, ಗಾಮೊಕ್ಕಲು, ಆಗೇರ, ಮೇದರು, ಡುಂಗ್ರಿ, ಗರಾಸಿಯ, ಗೊಂಡ, ಹಸಲ ಮುಂತಾದ ವಿಶಿಷ್ಟ ಸಮುದಾಯಗಳಿಗೆ ಬುಡಕಟ್ಟು ಲಕ್ಷಣಗಳಿದ್ದು ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲೆಸಿದ್ದಾರೆ. ಅದರಲ್ಲಿ ಮೇದ, ಡುಂಗ್ರಿ, , ಗರಾಸಿಯಾ, ಸಿದ್ದಿ, ಗೊಂಡ , ಹಲಸರು ಮಾತ್ರ ಸರಕಾರದ ಘೋಷಿತ ಪರಿಶಿಷ್ಟಿ ಪಂಗಡಗಳ ಪಟ್ಟಿಯಲ್ಲಿದ್ದಾರೆ. ಆದರೆ ಈ ಮೇಲೆ ಉಲ್ಲೇಖಿಸಿದ ಎಲ್ಲ ಸಮುದಾಯಗಳು ದಟ್ಟ ಬುಡಕಟ್ಟು ಲಕ್ಷಣಗಳನ್ನು ಹೊಂದಿವೆ. ಮಾನವ ಶಾಸ್ತ್ರೀ ಮಾನದಂಡಗಳ ಮೂಲಕ ಅಧ್ಯಯನಕ್ಕೊಳಪಡಿಸಿದರೆ ಈ ಸಮುದಾಯಗಳನ್ನು ಆದಿವಾಸಿ ಸಮುದಾಯಗಳೆಂದು ಪರಿಗಣಿಸಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಬುಡಕಟ್ಟು ವಿಶ್ವವಿದ್ಯಾಲಯ ಮಂಜೂರಿ ಆಗಬೇಕಾದ ಅಗತ್ಯವಿದೆ. ಈ ವಿಶ್ವವಿದ್ಯಾಲಯದಲ್ಲಿ ಜಾನಪದ ಮತ್ತು ಬುಡಕಟ್ಟು ಅಧ್ಯಯನದ ಥೀಮ್ ಪಾರ್ಕ್ ಮಾಡಬೇಕು ಎಂಬ ಮಹಾತ್ವಾಕಾಂಕ್ಷೆಯನ್ನು ಸಮ್ಮೇಳನಾಧ್ಯಕ್ಷರು ಉತ್ತರ ಕನ್ನಡಿಗರೆದುರು ತೆರೆದಿಟ್ಟರು.

Leave a Reply

Your email address will not be published. Required fields are marked *