‘ಬೂಸಾ ಚಳುವಳಿ’ ಇನ್ನಷ್ಟು : ಕನ್ನಡದಲ್ಲೇನಿದೆ ಬೂಸಾ…?!| ದಮನಿತರ ಸ್ವಾಭಿಮಾನದ ಚಳುವಳಿಗೀಗ 50 ವರ್ಷ

(…ಹಿಂದಿನ ಸಂಚಿಕೆಯಿಂದ)

ಹೀಗೆ ಬಿ. ಬಸವಲಿಂಗಪ್ಪನವರ ( B.Basavalingappa) ಪ್ರಖರ ವೈಚಾರಿಕತೆಯ ಕಾರಣಕ್ಕಾಗಿ ಉದ್ಭವಗೊಂಡ ಬೂಸಾ ಪ್ರಕರಣ ಅಸಲಿಗೆ ಆವರೆಗಿನ ಕನ್ನಡ ಸಾಹಿತ್ಯ ನಡೆದುಬಂದ ಊಳಿಗಮಾನ್ಯ ಪರವಾದ ದಾರಿಯ ಕುರಿತಾಗಿನ ಆತ್ಮವಿಮರ್ಶೆಯ ಮಾತಾಗಬೇಕಿತ್ತು. ಆದರೆ, ಬಸವಲಿಂಗಪ್ಪನವರ ದಿಟ್ಟ,

ಪ್ರಗತಿಪರ ನಿಲುವುಗಳ ಕಾರಣಕ್ಕೆ ಅವರ ವಿರುದ್ಧ ಕುದಿಯುತ್ತಿದ್ದ ಬಲಿಷ್ಠ ಜಾತಿ ಸಮುದಾಯಗಳು ‘ಕನ್ನಡದಲ್ಲೇನಿದೆ ಬೂಸಾ…?’ ಎಂಬ ಮಾತನ್ನು ಕನ್ನಡ ಭಾಷೆ ಮತ್ತು ಕರ್ನಾಟಕ್ಕಾದ ಬಹುದೊಡ್ಡ ಅವಮಾನವೆಂಬಂತೆ ಬಿಂಬಿಸುವಲ್ಲಿಯಶಸ್ವಿಯಾದವು. ಸಂವಿಧಾನದ ಕಾರಣಕ್ಕೆ ಉನ್ನತ ಹುದ್ದೆಗಳಲ್ಲಿದ್ದ ಶೂದ್ರ ಸಮುದಾಯಗಳ ಜಾತಿವಾದಿಗಳೆಲ್ಲ ಮುಂದಿನ ಮುಖ್ಯಮಂತ್ರಿಯೆಂದೇ ಬಿಂಬಿತವಾಗುತ್ತಿದ್ದ ದಲಿತ ನಾಯಕನೊಬ್ಬನನ್ನು ರಾಜಕೀಯವಾಗಿ ಮುಗಿಸಲು ಒಟ್ಟಾಗಿಬಿಟ್ಟರು.

ಸ್ವತಃ ಕುವೆಂಪು,ಯು.ಆರ್. ಅನಂತಮೂರ್ತಿ, ಜೆ.ಎಚ್.ಪಟೇಲ್ (Kuvempu, U.R. Anantmoorti, J.H.Pate) ಮೊದಲಾದ ವೈಚಾರಿಕ ಚಿಂತಕರು ಬಸವಲಿಂಗಪ್ಪನವರ ಅಭಿಪ್ರಾಯ ಸರಿಯಾದುದೆಂದು ಸಮರ್ಥಿಸಿದರಾದರೂ ಶ್ರೇಣೀಕೃತ ವ್ಯವಸ್ಥೆಯ ಪರಿಪಾಲನೆಯ ಅಮಲಿನಲ್ಲಿದ್ದ ತಾವು ಶೂದ್ರ ಶ್ರೇಷ್ಠರೆಂಬ ವ್ಯವಸನದ (Superiority complex) ಜನರು ರಾಜ್ಯದಾದ್ಯಂತ ಬಸವಲಿಂಗಪ್ಪನವರ ವಿರುದ್ಧ ದೊಡ್ಡ ದನಿಯಲ್ಲಿ ಹುಯಿಲೆಬ್ಬಿಸಿದರು. ಅಲ್ಲಿಯವರೆಗೂ ಮೌನವಾಗಿಯೇ ಇದನ್ನೆಲ್ಲ ಗಮನಿಸುತ್ತಿದ್ದ ಮುಖ್ಯ ವಾಹಿನಿಯ ರಾಜಕಾರಣ ತನ್ನ ಚದುರಂಗದಾಟ ಆರಂಭಿಸಿತು. ಮಂತ್ರಿಮಂಡಲದ ಸಾಮೂಹಿಕ ರಾಜೀನಾಮೆಯೆಂಬ ಪ್ರಹಸನ ಸೃಷ್ಟಿಸಿ ಬಸವಲಿಂಗಪ್ಪನವರು ರಾಜೀನಾಮೆ ನೀಡಲೇಬೇಕಾದ ಅನಿವಾರ್ಯತೆ ಸೃಷ್ಟಿಸಲಾಯಿತು. ಬಸವಲಿಂಗಪ್ಪ ರಾಜೀನಾಮೆ ನೀಡಿದರು. ದೇವರಾಜ ಅರಸರ (Devaraj Urs) ಸಂಪುಟದ ಪುನರ್ ರಚನೆಯಲ್ಲಿ ಕ್ರಾಂತಿಕಾರ ಬಸವಲಿಂಗಪ್ಪನವರಿಗೆ ಸ್ಥಾನವಿರಲಿಲ್ಲ. ಈ ಸಮಾಜದ ಉಸಿರೋ ಎಂಬಂತೆ ವಿಜೃಂಭಿಸುವ ಜಾತಿ ವ್ಯವಸ್ಥೆಯ ಕರಾಳ ಹಸ್ತ ಮತ್ತೊಮ್ಮೆ ಮೇಲುಗೈ ಸಾಧಿಸಿತ್ತು.

ಹಾಗಾದರೆ ಇದು ಬೂಸಾ ಪ್ರಕರಣದ ಅಂತ್ಯವೇ ? ಬಸವಲಿಂಗಪ್ಪ ರಾಜಕಾರಣದ ಮುಖ್ಯವಾನಿಯಿಂದ ನೇಪಥ್ಯಕ್ಕೆ ಸರಿದರೇ? ಎಂಬ ಪ್ರಶ್ನೆಗಳೇಳುವುದು ಸಹಜ. ಅಧಿಕಾರ ರಾಜಕಾರಣದಲ್ಲಿ ಅಂಬೇಡ್ಕರ್ ಅರಿವಿನ ದಲಿತ ನಾಯಕರ ಪಾಲ್ಗೊಳ್ಳುವಿಕೆಯನ್ನು ಸಹಿಸದ ಫ್ಯೂಡಲ್ ಶಕ್ತಿಗಳು, ಬೂಸಾ ಪ್ರಕರಣದ ಮೂಲಕ ನಾಡಿನಾದ್ಯಂತ ಅಸ್ಪೃಷ್ಯ ಸಮುದಾಯಗಳಲ್ಲುಂಟಾದ ಸಾಮಾಜಿಕ ಜಾಗೃತಿಯನ್ನು ಗುರುತಿಸುವಲ್ಲಿ ವಿಫಲವಾದವು.

ಕರ್ನಾಟಕ ಇತಿಹಾಸದಲ್ಲಿ ಮೊದಲ ಬಾರಿಗೆ ದಲಿತ ಸಮುದಾಯಗಳು ಸಂಘಟಿತರಾಗಿ ಬಸವಲಿಂಗಪ್ಪನವರ ಪರ ನಿಂತಿದ್ದು. ಮುಂದೆ ಈ ನಾಡಿನ ಐತಿಹಾಸಿಕ ದಲಿತ ಚಳುವಳಿಯ ಹುಟ್ಟಿಗೆ ನಾಂದಿ ಹಾಡಿತ್ತು. ಮುಖ್ಯವಾಗಿ ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ದಲಿತ ಸಮುದಾಯದ ಹಾಸ್ಟೆಲ್ ಗಳು ಬಸವಲಿಂಗಪ್ಪನವರ ಪರವಾದ ಈ ಚಳುವಳಿಯ ನೇತೃತ್ವ ವಹಿಸಿದ್ದ ಯುವಪಡೆಯ ಆಶ್ರಯ ತಾಣಗಳಾಗಿದ್ದವು.

ಪ್ರೊ.ಕಾಳೇಗೌಡ ನಾಗವಾರ್, ಸಿದ್ದಲಿಂಗಯ್ಯ, ಅಗ್ರಹಾರ ಕೃಷ್ಣಮೂರ್ತಿ, ದೇವನೂರು ಮಹಾದೇವ್, ಹರಿಹರ ಆನಂದಸ್ವಾಮಿ, ರಾಜೇಂದ್ರ ಚೆನ್ನಿ, ಡಿ.ಆರ್.ನಾಗರಾಜ್ (Prof. Kalegouda Nagavar, Siddalingayya, Agrahar Krishnamoorti, Devanooru Mahadev, Harihara Anandaswami, Rajendra Chenni, D.R.Nagaraj) ಮೊದಲಾದ ತರುಣ ಪಡೆ ಚಳುವಳಿಯ ಆಂತರ್ಯವಾಗಿ ಕಾರ್ಯನಿರ್ವಹಿಸಿದರು. ಹಾಗೆಯೇ ಚಾಮರಾಜನಗರದ ಇಂದಿನ ಸಂಸದ ವಿ.ಶ್ರೀನಿವಾಸಪ್ರಸಾದ ಅವರು ರಾಜಕೀಯವಾಗಿ ಮಖ್ಯವಾಹಿನಿ ಪ್ರವೇಶಿಸಲು ಬೂಸಾ ಚಳುವಳಿ ಕಾರಣವಾಯಿತು.

ಇಲ್ಲೊಂದು ಘಟನೆ ಸ್ಮರಿಸಲೇಬೇಕು. ಮೈಸೂರಿನ ಅಶೋಕಪುರಂ ಎಲ್ಲಾ ಕಾಲಕ್ಕೂ ಸಾಮುದಾಯಿಕ ಹಾಗೂ ಸ್ವಾಭಿಮಾನಿ ಚಳುವಳಿಗಳ ತವರು. ಇವತ್ತಿಗೂ ಸಹ ಯಾವುದೇ ಅನ್ಯಾಯಗಳ ವಿರುದ್ಧ ಅಶೋಕಪುರಂ ನಲ್ಲಿ ಚಳುವಳಿ ರೂಪುಗೊಂಡಿತೆಂದರೆ ಅದು ತಾರ್ಕಿಕ ಅಂತ್ಯವನ್ನು ಕಾಣುತ್ತದೆಂಬುದು ಜನಜನಿತ. ಇಂತಹ ಪುರಂ ನ ಸ್ವಾಭಿಮಾನಿ ತಾಯಂದಿರು ಸಹ ಬಸವಲಿಂಗಪ್ಪ ಅವರ ಪರವಾದ ಪ್ರತಿಭಟನೆಗಳಲ್ಲಿ ಜಾತಿವಾದಿಗಳ ವಿರುದ್ಧವಾಗಿ ಛಲದಿಂದ ಹೋರಾಡಿದ್ದನ್ನು ಅಂದಿನ ಹೊರಾಟಗಾರರು ತುಂಬು ಹೃದಯದಿಂದ ಸ್ಮರಿಸುತ್ತಿರುತ್ತಾರೆ.

ಹೀಗೆ ರಾಜ್ಯದ ಮೂಲೆ ಮೂಲೆಗಳಲ್ಲಿ ಬಸವಲಿಂಗಪ್ಪನವರ ವಿರುದ್ಧ ಸಂಚನ್ನು ಖಂಡಿಸಿ, ಮೊಟ್ಟಮೊದಲಿಗೆ ದಲಿತ ಸಮುದಾಯ ಬಹಿರಂಗವಾಗಿ ದನಿಯೆತ್ತತೊಡಗಿತು. ಅಧಿಕಾರ ರಾಜಕಾರಣದ ಆಡಂಬೋಲದಲ್ಲಿ ಸುಖಾಸೀನವಾಗಿದ್ದ ಪುರೋಗಾಮಿ ವ್ಯವಸ್ಥೆ ತನ್ನ ಅಮಲಿನಿಂದ ಎಚ್ಚರಗೊಳ್ಳುವಷ್ಟರಲ್ಲಿ ನಾಡಿನ ದಲಿತ ಸಮುದಾಯದ ಸ್ವಾಭಿಮಾನ ಜಾಗೃತವಾಗಿಬಿಟ್ಟಿತ್ತು.

ಅದಾಗಲೇ ಭದ್ರಾವತಿಗೆ ಸೀಮಿತವಾಗಿ ಕಣ್ಣು ಬಿಡುತ್ತಿದ್ದ ದಲಿತ ಸಂಘರ್ಷ ಸಮಿತಿ ಬೆಂಗಳೂರಿನ ಪ್ರಗತಿಶೀಲ ತರುಣ ಪಡೆಯ ಯುವ ಬರಹಗಾರರ ಒಕ್ಕೂಟ ಹಾಗೂ ಭದ್ರಾವತಿಯಲ್ಲಿ ಬಸವಲಿಂಗಪ್ಪನವರೇ ಉದ್ಘಾಟಿಸಿದ ದಲಿತ ಲೇಖಕ ಮತ್ತು ಕಲಾವಿದ ಬಳಗ ಮೊದಲಾದ ಪ್ರಜಾಪ್ರಭುತ್ವವಾದಿ ಸಂಘಟನೆಗಳು ಒಂದೇ ವೇದಿಕೆಯ ಮೂಲಕ ಸಂಘಟಿತರಾಗಲು ನಿರ್ಧರಿಸಿದರು.

ಬಾಬಾ ಸಹೇಬರ ಆಶಯದಂತೆ ಶಿಕ್ಷಣ, ಹೋರಾಟ ಮತ್ತು ಸಂಘಟನೆಗಳ ಧ್ಯೇಯವಾಕ್ಯದೊಡನೆ ದಲಿತ ಸಂಘರ್ಷ ಸಮಿತಿಯಾಗಿ, ಮನುವಾದ ಪ್ರಣೀತ ಶ್ರೇಣೀಕರಣದ ವಿರುದ್ಧ ಸಮರ್ಥ ಹೋರಾಟಗಳನ್ನು ಕಟ್ಟುವಲ್ಲಿ ದಸಂಸ ಮಹತ್ವದ ಪಾತ್ರ ವಹಿಸತೊಡಗಿತು.

ಹೀಗೆ ಕರ್ನಾಟಕದಲ್ಲಿ ಜನ್ಮ ತಾಳಿದ ದಲಿತ ಚಳುವಳಿ, ಮುಂದೆ ರೈತ ಚಳುವಳಿ, ಮಹಿಳಾ ಚಳುವಳಿ, ಕಾರ್ಮಿಕ ಚಳುವಳಿ, ಭಾಷಾ ಚಳುವಳಿ ಪರಿಸರ ಚಳುವಳಿಗಳನ್ನೊಳಗೊಂಡಂತೆ ಆರೋಗ್ಯಕರ ಸಮಾಜಕ್ಕಾಗಿ ಆಗ್ರಹಿಸುವ ಎಲ್ಲ ಧ್ವನಿಗಳ ತಾಯಿ ಬೇರಾಗಿ ನೆಲೆ ನಿಂತಿತು.

ನಂತರದ್ದೆಲ್ಲವೂ ವರ್ತಮಾನ. ನಿರೀಕ್ಷಿತ ಗುರಿ ಮುಟ್ಟುವಲ್ಲಿ ಅಲ್ಲಲ್ಲಿ ಎಡುವುತ್ತಿರುವ ಕಾರಣ ತಡವಾಗುತ್ತಿದ್ದರೂ, ಪ್ರಜಾಪ್ರಭುತ್ವದ ಆಶಯಗಳ ಸಾಂವಿಧಾನಿಕ ಅನುಷ್ಠಾನಕ್ಕಾಗಿ ನಿರಂತರವಾಗಿ ದುಡಿಯುತ್ತಿರುವ ಚಳುವಳಿಗಳ ಎಲ್ಲ ಶ್ರೇಯ ಸಲ್ಲಬೇಕಾದದ್ದು ಅಂಬೇಡ್ಕರ್ ವಾದಿ ಬಸವಲಿಂಗಪ್ಪನವರ ‘ಕನ್ನಡದಲ್ಲೇನಿದೆ ಬೂಸಾ…?’ ಎಂಬ ಮಾತಿಗೆ.

1973ರಲ್ಲಿ ಆರಂಭವಾದ ಈ ಚಳುವಳಿಗೀಗ 50ರ ನಡುಪ್ರಾಯ. ಬಸವಲಿಂಗಪ್ಪನವರು ಭೌತಿಕವಾಗಿ ನಮ್ಮೊಡನೆ ಇಲ್ಲದೇ ಇದೀಗ (26-12-1993) 30 ವರ್ಷ. ಹೌದು, ಜನ ಚಳುವಳಿಗೆ ಅಂತ್ಯವಿಲ್ಲ.

ಎಲ್ಲಿಂದ ಬಂದಿರೆಂದು ಕೇಳಬಹುದು ನೀವು
ಜನರ ನಡುವಿನಿಂದ ಎಂದು
ಹೇಳುತ್ತೇವ ನಾವು…
ಮತ್ತೆ ಪಯಣ ಎಲ್ಲಿಗೆಂದು ಕೇಳಬಹುದು ನೀವು
ಮತ್ತೆ ಪಯಣ
ಜನರ ನಡುವೆ
ಎನ್ನುತ್ತೇವ ನಾವು…
(ಜನಾಂದೋಲನವೊಂದರ ಹಾಡು)

ಲೇಖಕರು :
ಪ್ರೊ. ಸಂದೇಶ ಎಚ್ ರತ್ನಪುರಿ
ಇಂಗ್ಲಿಷ್ ಪ್ರಾಧ್ಯಾಪಕರು
ಮೈಸೂರು

Leave a Reply

Your email address will not be published. Required fields are marked *