ಬೋರ್ಡು ಇರದ ಬಸ್ಸು..

ಆಗತಾನೆ ಎಸ್. ಎಸ್ .ಎಲ್ .ಸಿ. ಯಲ್ಲಿ ತೇರ್ಗಡೆಯಾಗಿದ್ದ ವಿದ್ಯಾರ್ಥಿಯೊಬ್ಬನಿಗೆ ಕೇಳಿದೆ.. ‘ಮುಂದೇನು ಮಾಡುತ್ತೀಯಾ’ ಅಂತ.. ‘ಕೆಲವು ಫ್ರೆಂಡ್ಸ್ ಅದನ್ನು ಮಾಡೋಣ ಅಂತ, ಇನ್ನೂ ಕೆಲವರು ಇದನ್ನು ಮಾಡುವ ಅಂತ ಹೇಳ್ತಿದ್ದಾರೆ… ನೋಡಬೇಕು’ ಅನ್ನುವ ರೀತಿಯಲ್ಲಿ ಅವನ ಉತ್ತರ ಬಂತು…

ಅವನಿಗಿನ್ನೂ ತಾನು ಯಾವ ಸಬ್ಜೆಕ್ಟ್ ಅಥವಾ ರಂಗದಲ್ಲಿ ಮುಂದುವರಿಯಬೇಕು ಎನ್ನುವುದು ಗೊತ್ತಿರಲಿಲ್ಲ ಅದಕ್ಕೆ ಅವನು ತನ್ನ ಸಹಪಾಠಿಗಳು ಯಾವುದು ಆರಿಸಿಕೊಳ್ಳುತ್ತಾರೆಯೋ ಅಥವಾ ತನ್ನ ಪಾಲಕರು ಯಾವುದರೆಡೆ ದೂಡುತ್ತಾರೆಯೋ : ಆ ಕಡೆಗೆ ಎನ್ನುವಂತಿತ್ತು ಅವನ ನಿರ್ಧಾರ. ಇದೆ ತರಹದ ಪರಿಸ್ಥಿತಿ ನಮ್ಮ ಅದೆಷ್ಟೋ ಜನ ವಿದ್ಯಾರ್ಥಿಗಳದ್ದು…

ನಾನು ಹೈಸ್ಕೂಲ್ ಓದುತ್ತಿದ್ದಾಗ, ಒಬ್ಬರು ನಮ್ಮ ಶಾಲೆಗೆ ಭೇಟಿ ನೀಡಿದ್ದರು.. ಅವರು ನಾನು ಓದುತ್ತಿದ್ದ ಶಾಲೆಯಲ್ಲಿ ಕಲಿತು, ಪೊಲೀಸ್ ಇಲಾಖೆಯಲ್ಲಿ ಒಂದು ಉನ್ನತ ಹುದ್ದೆಯನ್ನು ಅಲಂಕರಿಸಿದ್ದರು. ತಾನು ಓದಿದ ಶಾಲೆ ಎಂದುಕೊಂಡು ಭೇಟಿ ನೀಡಲು ಬಂದಿದ್ದರು. ಮುಖ್ಯೋಪಾದ್ಯಾಯರು ಬೆಳಗಿನ ಪ್ರಾರ್ಥನೆ ವೇಳೆಗೆ, ಅವರನ್ನು ನಮಗೆ ಪರಿಚಯಿಸಿದರು. ಹಾಗೆಯೇ ಅವರಿಗೆ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಲು ಅನುವು ಮಾಡಿಕೊಟ್ಟರು. ಅಂದು ವಿದ್ಯಾರ್ಥಿಗಳ ನಡುವೆ ವಿದ್ಯಾರ್ಥಿಯೋರ್ವನಾಗಿ ಇದ್ದ ನನಗೆ ‘ಅಯ್ಯೋ … ಇನ್ನೊಬ್ಬರ ಪ್ರವಚನ ಸಹಿಸಬೇಕಲ್ಲ ‘ ಎನಿಸಿತ್ತು . ಅವರು ತಮ್ಮ ಇಡೀ ಭಾಷಣದಲ್ಲಿ ಒತ್ತಿ ಒತ್ತಿ ಹೇಳಿದ್ದು ಒಂದೇ ಮಾತು ‘ ಎಸ್. ಎಸ್ .ಎಲ್ .ಸಿ. ಮುಗಿಯುತ್ತಿದ್ದಂತೆ, ತಮ್ಮ ಮುಂದಿನ ಭವಿಷ್ಯದ ಬಗೆಗೆ ಮೊದಲೇ ಯೋಜನೆಯನ್ನು ಹೊಂದಿ.. ನೀವು ಯಾವ ರಂಗದಲ್ಲಿ ಪರಿಣತಿ ಹಾಗು ಆಸಕ್ತಿ ಹೊಂದಿದ್ದೀರಿ ಮತ್ತು ಯಾವ ರಂಗವನ್ನು ಆರಿಸಿಕೊಳ್ಳಬೇಕೆಂದು ಎಂಬುದರ ಬಗೆಗೆ… ‘ ಎಂದು . ಅಂದೇಕೋ ಅವರ ಮಾತು ‘ ಎಲ್ಲರಂತೆಯೇ ಕೊರೆಯುತ್ತಿದ್ದಾರೆ ‘ ಎನಿಸಿತ್ತು.. ಆದರೆ ಆ ಮಾತುಗಳು ಪುನಃ ನೆನಪಾಗಲು ಬಹಳ ವರುಷಗಳು ಬೇಕಾಗಲಿಲ್ಲ…

ಸುಮಾರು 2007-08 ರ ಸಮಯಕ್ಕೆ, ನನ್ನ ಜೊತೆ ವಿದ್ಯಾಭ್ಯಾಸ ಮಾಡಿದವರಲ್ಲಿ ಹಲವಾರು ಬಿ.ಎಡ್ ಗೆ ತುಂಬಾ ಪ್ರಾಮುಖ್ಯತೆ ಇದೆ ಎಂದು ತಿಳಿದು ಅದನ್ನು ಆರಿಸಿಕೊಂಡರು.. ಆದರೆ ಅಂದುಕೊಂಡಿದ್ದು ಹಾಗು ನಡೆದದ್ದು ಬೇರೆ ಬೇರೆಯೇ ಆಗಿತ್ತು… ಅದೆಷ್ಟೋ ಮಂದಿ ಶಿಕ್ಷಣ ಕ್ಷೇತ್ರದ ಕನಸು ಕಂಡು ಬೇರೆ ಬೇರೆ ಬೇರೆ ಉದ್ಯೋಗಗಳಲ್ಲಿತೊಡಗಿಕೊಳ್ಳುವಂತಾಯ್ತು… ಹಾಗೆಯೇ 2010-12 ರ ವೇಳೆಗೆ ಅನಿಮೇಷನ್ ಉದ್ಯಮ ತುಂಬಾ ಸದ್ದು ಮಾಡುತ್ತಿತ್ತು. ಆಗ ಅದೆಷ್ಟೋ ಜನ ವಿದ್ಯಾರ್ಥಿಗಳು ಆ ರಂಗದತ್ತ ಆಕರ್ಷಿತರಾಗಿ ಲಕ್ಷಗಟ್ಟಲೆ ವೆಚ್ಚದ ದುಬಾರಿ ಕೋರ್ಸ್ ಗಳನ್ನು ಹೊಂದಿಬಿಟ್ಟಿದ್ದರು. ಈ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಪ್ರತಿ ಪ್ರಮುಖ ನಗರಗಳಲ್ಲಿ ಎನಿಮೇಶನ್ ಕೋರ್ಸ್ ಗಳ ಇನ್ಸ್ಟಿಟ್ಯೂಟ್ ಗಳು ತಲೆಯೆತ್ತಿದ್ದವು. ಆದರೆ ಎನಿಮೇಶನ್ ಇಂಡಸ್ಟ್ರಿ ಕೇವಲ ಸೃಜನಾತ್ಮಕ ವ್ಯಕ್ತಿಗಳಿಗಾಗಿ ಮಾತ್ರ ಹೊರತು ಎನಿಮೇಶನ್ ಸಾಫ್ಟ್ ವೇರ್ ಗೊತ್ತಿದ್ದವರಿಗೆ ಅಲ್ಲ ಎಂಬ ಸತ್ಯ ತಿಳಿಯಲು ಬಹಳ ಸಮಯ ಬೇಕಾಗಲಿಲ್ಲ. ಈ ಎಲ್ಲ ಸಂದರ್ಭಗಳಲ್ಲೂ ನನಗೆ ನೆನಪಾಗಿದ್ದು ಆ ಪೊಲೀಸ್ ಅಧಿಕಾರಿ ಹೇಳಿದ ‘ನೀವು ಯಾವ ರಂಗದಲ್ಲಿ ಪರಿಣತಿ ಹಾಗು ಆಸಕ್ತಿ ಹೊಂದಿದ್ದೀರಿ ಮತ್ತು ಯಾವ ರಂಗವನ್ನು ಆರಿಸಿಕೊಳ್ಳಬೇಕೆಂದು’ ಎಂಬ ಮಾತುಗಳು ಮಾತ್ರ… ಯಾಕೆಂದರೆ ಈ ಎರಡೂ ರಂಗಗಳಲ್ಲಿ ಪರಿಣತರು ಸೃಜನಾತ್ಮಕರು ಎನಿಸಿದವರು ಮಾತ್ರ ಪ್ರವೇಶ ಹಾಗು ಯಶಸ್ಸು ಕಂಡಿದ್ದನ್ನು ನಾನು ನೋಡಿದ್ದೆ.

ನಾವು ಬಸ್ ನಿಲ್ದಾಣದಲ್ಲಿ ಬೋರ್ಡು ಇರದ ಬಸ್ಸಿಗೆ ಏರುವುದೇ ಇಲ್ಲ.. ಯಾಕೆಂದರೆ ನಮಗೆ ಗೊತ್ತಿದೆ… ಎಲ್ಲಿಗೆ ಹೊರಟಿದೆ ಎಂಬುದು ನಮಗೆ ಖಚಿತವಿಲ್ಲ … ಹೀಗಿರುವಾಗ ಭವಿಷ್ಯ ರೂಪಿಸುವ ವಿಷಯದಲ್ಲಿ ‘ಬೋರ್ಡು ಇರದ ಬಸ್ಸು’ ಏರುವುದೇಕೆ ?

ಲೇಖಕರು :
ರಾಘವೇಂದ್ರ ಲಕ್ಷ್ಮೇಶ್ವರ್

Founder & Creative Head
Grapito Desings (Design and Marketing agency)

Leave a Reply

Your email address will not be published. Required fields are marked *