ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಪ್ರದೇಶಲ್ಲಿಸುಪ್ರಿಂ ಕೋರ್ಟ್ ಮಾರ್ಗಸೂಚಿ ಲೆಕ್ಕಕ್ಕಿಲ್ಲ !

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಕಾಳಿ ಹುಲಿ ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಸುಪ್ರಿಂ
ಕೋರ್ಟ್ ‘ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ’ ಅನುಸರಿಸಬೇಕಾದ ಕ್ರಮಗಳ ಕುರಿತು
ಮಾರ್ಗಸೂಚಿಯ  ಮೂಲಕ ನಿರ್ದೇಶನ ನೀಡಿದೆ. ಸುಪ್ರಿಂ ಕೋರ್ಟ್ (Supreme Court)
ನಿರ್ದೇಶನವನ್ನು ಸ್ಥಳೀಯ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು ಪಾಲಿಸುತ್ತಿಲ್ಲ
ಎನ್ನುವ   ಕೂಗು ಕೇಳಿ ಬಂದ ಬೆನ್ನಲ್ಲೇ ಸಾಕಷ್ಟು ದೂರುಗಳು ರಾಷ್ಟ್ರೀಯ ಹುಲಿ
ಸಂರಕ್ಷಣಾ ಪ್ರಾಧಿಕಾರಕ್ಕೆ(National Tiger conservation authority)
ಸಲ್ಲಿಕೆಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಾಧಿಕಾರ ಕ್ರಮ ಕೈಗೊಳ್ಳುವ
ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಂದ ವರದಿಯನ್ನು ಕೇಳಿದೆ.
 
ಹುಲಿ ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ವಾಣಿಜ್ಯ ಉದ್ದೇಶದಿಂದ ಕೂಡಿದ ಯಾವುದೇ
ಕಾಮಗಾರಿಯನ್ನು ನಡೆಸುವಂತಿಲ್ಲ. ಪ್ರವಾಸೋದ್ಯಮದಿಂದ ಹಿಡಿದು ಬೇರೆ ಯಾವುದೇ
ಚಟುವಟಿಕೆ ಕೈಗೊಳ್ಳುವಂತಿಲ್ಲ.ಇಂತಹ ಯಾವುದೇ ಚಟುವಟಿಕೆ ಕೈಗೊಳ್ಳಬೇಕೆಂದರೂ ಈ
ಕುರಿತಂತೆ ಹುಲಿ ಸಂರಕ್ಷಣಾ ಯೋಜನೆಯಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿರಬೇಕು ಎಂದು
ಸುಪ್ರಿಂ ಕೋರ್ಟ ಸೂಚಿಸಿದ ಮಾರ್ಗಸೂಚಿಯಲ್ಲಿ ಹೇಳಿದೆ.
ದಾಂಡೇಲಿಯ ‘ಕಾಳಿ ಹುಲಿ ಅರಣ್ಯ ಸಂರಕ್ಷಿತ ಪ್ರದೇಶ’ದಲ್ಲಿ( Kali Tiger Reserve)
ವಾಣಿಜ್ಯ ಉದ್ದೇಶದಿಂದ ಕೂಡಿದ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿರುವುದು
ಕಂಡುಬರುತ್ತದೆ. ಸುಪ್ರಿಂಕೋರ್ಟ್ ನಿರ್ದೇಶನದ ಸ್ಪಷ್ಟ ಉಲ್ಲಂಘನೆಯಾಗುತ್ತಿದೆ. ಅರಣ್ಯ
ಮತ್ತು ವನ್ಯಜೀವಿ ಕಾಯ್ದೆಯ ಉಲ್ಲಂಘನೆ ಮಾಡಿ ಪ್ರವಾಸೋದ್ಯಮ ಮತ್ತಿತರ
ಚಟುವಟಿಕೆಗಳು ಇಲಾಖೆಯ ಸುಪರ್ದಿಯಲ್ಲೇ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲೇ
ನಡೆಸುತ್ತಿರುವ ಕುರಿತು ಸ್ಥಳೀಯ ಪರಿಸರ ಸಂಘಟನೆಗಳು ರಾಷ್ಟ್ರೀಯ ಹುಲಿ ಸಂರಕ್ಷಣಾ
ಪ್ರಾಧಿಕಾರದ ಗಮನ ಸೆಳೆದಿದೆ. ಉನ್ನತ ಮಟ್ಟದ ತನಿಖೆಗೆ ಆಗ್ರಹಿಸುವ ಮೂಲಕ ಇದರಲ್ಲಿ
ಶಾಮೀಲಾಗಿರುವ ಅರಣ್ಯ ಇಲಾಖೆಯ ಅಧಿಕಾರಿ ವರ್ಗದ ವಿರುದ್ಧ ಕ್ರಮಕ್ಕಾಗಿ
ಒತ್ತಾಯಿಸಿದ್ದಾರೆ.

ಹುಲಿ ಯೋಜನೆಯ ವಿವಿಧ ಕಾಮಗಾರಿಗಾಗಿ ಕೇಂದ್ರ ಸರ್ಕಾರದಿಂದ ಸಾಕಷ್ಟು ಹಣ ಬರುತ್ತಿದೆ.
ಆದರೆ ಇದರ ಸದುಪಯೋಗವಾಗದೇ ಅಕ್ರಮ ಕಾಮಗಾರಿಗಳಿಗೆ ಅವಕಾಶ ಕೊಟ್ಟು
ಅಧಿಕಾರಿಗಳು ಹಾಗು ಇಲಾಖೆಯೊಳಗಿನ ಗುತ್ತಿಗೆದಾರರ ಗುಂಪೊಂದು (ಪಾರದರ್ಶಕವಲ್ಲದ)
ವ್ಯವಸ್ಥಿತವಾಗಿ ಅನುದಾನದ ದುರ್ಬಳಕೆ ಮಾಡುತ್ತಿದ್ದಾರೆನ್ನಲಾಗಿದೆ. ಹುಲಿ ಯೋಜನೆಗಾಗಿ
ಮೀಸಲಿಟ್ಟ ಪ್ರದೇಶದಲ್ಲಿ ಯಾವುದೇ ಹೊಸ ನಿರ್ಮಾಣ ಮಾಡುವಂತಿಲ್ಲ. ಕಾಮಗಾರಿಗಳಿಗೆ
ಜೆಸಿಬಿ, ಯಂತ್ರೋಪಕರಣಗಳನ್ನು ಬಳಕೆ ಮಾಡುವಂತಿಲ್ಲ. ನಿಯಮಗಳು
ಕಟ್ಟುನಿಟ್ಟಾಗಿದ್ದರೂ ಎಲ್ಲವೂ ಇಲ್ಲಿ ಉಲ್ಲಂಘನೆಯಾಗುತ್ತಿದೆ. ಹುಲಿ ಯೋಜನೆಯ
ಪ್ರದೇಶದಲ್ಲಿರುವ ಗ್ರಾಮಸ್ಥರಿಗೆ ನಿಯಮಗಳ ಅನ್ವಯ ದಿನ ನಿತ್ಯ ಸಿಬ್ಬಂದಿಯಿಂದ
ಕಿರುಕುಳ. ಇದರಿಂದ ಗ್ರಾಮಸ್ಥರು ಹಾಗು ಇಲಾಖೆಯ ಸಿಬ್ಬಂದಿಗಳ ನಡುವೆ
ಹೊಂದಾಣಿಕೆಯಿಲ್ಲದೆ ಸಂಘರ್ಷ ಏರ್ಪಟ್ಟಿದೆ. ಹುಲಿ ಯೋಜನಾ ಪ್ರದೇಶದ ವ್ಯಾಪ್ತಿಯೊಳಗೆ
ಮರಗಳನ್ನು ಕಡಿಯುವಂತಿಲ್ಲ. ಆದರೆ ಇಲ್ಲಿ ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ
ಬ್ರಹತ್ ಮರಗಳನ್ನು ಕಡಿದು ಆರ್ಕಿಡೇರಿಯಂ, ಕೆನೋಫಿ ವಾಕ್ ವೇ ಕಾಮಗಾರಿಗಳನ್ನು
ಯಾವುದೇ ಅನುಮತಿ ಇಲ್ಲದೇ ಮಾಡಿ ಮುಗಿಸಿದ್ದಾರೆ. ಸಂರಕ್ಷಿತ ಪ್ರದೇಶದಲ್ಲಿ ಯಾವುದೇ
ಹೊಸ ನಿರ್ಮಾಣವನ್ನು ಮಾಡಬಾರದೆನ್ನುವ ತೀರ್ಮಾನವನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ
ಪ್ರಾಧಿಕಾರದಿಂದ ಕೈಗೊಳ್ಳಲಾಗಿದ್ದರೂ, ಸ್ಥಳೀಯ ಉನ್ನತ ಅಧಿಕಾರಿಗಳು ತಮ್ಮಿಷ್ಟದಂತೆ
ತೀರ್ಮಾನ ತೆಗೆದುಕೊಳ್ಳುವ ಮೂಲಕ ಕಾಮಗಾರಿ ಮಾಡಿಸಿದ್ದಾರೆ. ಹುಲಿ ಯೋಜನಾ
ಪ್ರದೇಶದ ಆಡಳಿತ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳು ಸಿಎಸ್ಆರ್
ಅಡಿಯಲ್ಲಿ ಹಣಕಾಸಿನ ನೆರವು ಪಡೆಯಲು ಹಾಗು ಹುಲಿ ಯೋಜನಾ ಪ್ರತಿಷ್ಠಾನದ
ಹಣದಲ್ಲಿ ಮನಸ್ಸಿಗೆ ತೋಚಿದಂತೆ ಖರ್ಚು ಮಾಡಿದ್ದಾರೆನ್ನುವ ಆರೋಪಗಳಿವೆ. ಸಾಕಷ್ಟು
ದೂರಿನ ಹಿನ್ನೆಲೆಯಲ್ಲಿ ಬೆದರಿದ ಅಧಿಕಾರಿವರ್ಗ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ
ವರದಿ   ಕೇಳಿದ ಬೆನ್ನಲ್ಲೆ ಹುಲಿ ಯೋಜನಾ ಪ್ರದೇಶದ ಪ್ರವಾಸೋದ್ಯಮ ಹಾಗು ವಾಣಿಜ್ಯ
ಉದ್ದೇಶದ ಕಾಮಗಾರಿಗಳನ್ನು ಸಮರ್ಥಿಸಿಕೊಳ್ಳುವ ಮೂಲಕ ಮುಚ್ಚಿ ಹಾಕುವ ಪ್ರಯತ್ನ
ನಡೆದಿದೆಯೆನ್ನಲಾಗಿದೆ. ದೂರು ನೀಡಿದ ಸಂಘಟನೆಗಳು ಸ್ಥಳೀಯ  ಪರಿಶೀಲನೆಯಿಂದ
ವಾಸ್ತವಿಕ ವರದಿಯನ್ವಯ ಕ್ರಮ ಕೈಗೊಳ್ಳದಿದ್ದಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗುವ
ಸಿದ್ದತೆ ನಡೆಸಿದ್ದಾರೆ.

ಕೆನೋಫಿ ವಾಕ್ ವೇ

ಮಲೇಶಿಯ  ಮಾದರಿಯಲ್ಲಿ ಮರಗಳ ಮೇಲಿನ ನಡಿಗೆಯ ಮೂಲಕ ನಿಸರ್ಗದತ್ತ ಸೌಂದರ್ಯವನ್ನು ಆಸ್ವಾದಿಸುವ ಒಂದು ಹೊಸ ಕಲ್ಪನೆ ಕೆನೋಫಿವಾಕ್ ವೇ (Canopy walk way). ದೇಶದಲ್ಲೇ ಪ್ರಥಮವಾದ ಕೆನೋಫಿವಾಕ್ ವೇ ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಪ್ರದೇಶವಾದ ಜೋಯಿಡಾ ತಾಲ್ಲೂಕಿನ ಕ್ಯಾಸಲ್ ರಾಕ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುವೇಶಿ ಗ್ರಾಮದ ದಟ್ಟಾರಣ್ಯದಲ್ಲಿ ನಿರ್ಮಾಣಗೊಂಡಿದೆ.

ಇದರ ನಿರ್ಮಾಣ ಕಾರ್ಯಕ್ಕಾಗಿ ಅರಣ್ಯ ಇಲಾಖೆ,ಕಾಳಿ ಹುಲಿ ಸಂರಕ್ಷಿತ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆಯ ಸಹಕಾರದೊಂದಿಗೆ ಅಂದಾಜು 1 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆನ್ನುವ ಮಾಹಿತಿ ಇದೆ. ಮರಗಳ ಮೇಲೆ 30 ಅಡಿ ಎತ್ತರದಲ್ಲಿ ತೂಗುಸೇತುವೆಯ ಮಾದರಿಯಲ್ಲಿ 250 ಮೀಟರ್ ಉದ್ದದ ನಡೆಯುವ ವಾಕಿಂಗ್ ಪಾಥ್ ನಿರ್ಮಿಸಲಾಗಿದೆ. ಮರಗಳ ಮೇಲೆ ನಿರ್ಮಿಸಲಾದ ಈ ತೂಗುವ ಸೇತುವೆಯ ಮೇಲೆ ನಡೆಯುವದೇ ಸೊಗಸಾದ ಅನುಭವ. ನಿಸರ್ಗದ ವಿಶಿಷ್ಟತೆಯನ್ನು ವೀಕ್ಷಿಸಬಹುದು.ಇಲ್ಲಿಗೆ ತೀರಾ ಸಮೀಪದಲ್ಲೇ ಗೋವಾ ಗಡಿಯ  ದೂಧಸಾಗರ ಜಲಪಾತವನ್ನು ಸ್ರಷ್ಠಿಸುವ  ಹಳ್ಳವಿದೆ. ಇದೀಗ ದೇಶ, ವಿದೇಶಗಳಿಂದ ಬರುವ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದು ಕ್ಯಾಸಲ್ ರಾಕ್ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ನಿಗದಿತ ಶುಲ್ಕ ತುಂಬಿ ವೀಕ್ಷಿಸಬಹುದು. ದಿ ಗ್ರೇಟ್ ಕೆನರಾ ಟ್ರೇಲ್ಸ ನ ಕೊನೆಯ ಹಂತ ಇದಾಗಿದೆ ಎನ್ನಲಾಗಿದೆ. ಪಶ್ಚಿಮಘಟ್ಟಗಳಿಗೆ ಈ ಯೋಜನೆಯಿಂದ ಹಾನಿಯಾಗಲಿದೆ ಎಂದು ಪರಿಸರವಾದಿಗಳ ವಿರೋಧದ ನಂತರ ಈ ಯೋಜನೆ ಕಾನೂನಿನ ತೊಡಕುಗಳ ಮಧ್ಯೆ ಕೆಲ ಕಾಲ ಸ್ಥಗಿತಗೊಂಡು ಪುನಃ ಪ್ರಾರಂಭವಾಗಿ ಕೊನೆಯ ಹಂತದ 250 ಮೀಟರ್ ಮಾತ್ರಮುಕ್ತಾಯ ಗೊಂಡಿದೆ

ಲೇಖಕರು :
ಎನ್. ಜಯಚಂದ್ರನ್,
ದಾಂಡೇಲಿ

Leave a Reply

Your email address will not be published. Required fields are marked *