ಕೆನರಾ ಸಂಸದರ ಮನೆಯೆದುರು ಧರೆಣಿ ಕುಳಿತ ಅಭಿಮಾನಿ ಕಾರ್ಯಕರ್ತರಿಗೆ ಕೆಲವು ಪ್ರಶ್ನೆಗಳು

ಕಳೆದ ವಾರ ದಿನ ಬಿಡದೇ ಕೆನರಾ ಸಂಸದ ಅನಂತಕುಮಾರ ಹೆಗಡೆ ಮನೆ ಮುಂದೆ ಉತ್ತರ ಕನ್ನಡ ಜಿಲ್ಲೆಯ ಕೆಲ ತಾಲೂಕುಗಳಿಂದ ಬಂದ ಅವರ ‘ಅಭಿಮಾನಿ’ ಕಾರ್ಯಕರ್ತರು ಧರಣಿ ಕುಳಿತು ಮತ್ತೊಮ್ಮೆ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಒತ್ತಡ ಹೇರಿದರು.

ಹೊನ್ನಾವರ, ಸಿದ್ದಾಪುರ, ಜೋಯಿಡಾ, ಹಳಿಯಾಳ ಹೀಗೆ ಜಿಲ್ಲೆಯ ಬಹುತೇಕ ಎಲ್ಲ ತಾಲೂಕುಗಳ ಅನಂತಕುಮಾರ ನಿಷ್ಠ ಕಾರ್ಯಕರ್ತರು ಶಿರಸಿಯಲ್ಲಿನ ಸಂಸದರ ಮನೆಗೆ ತೆರಳಿ ಅವರಿಗೆ ಕೈ ಮುಗಿದು ‘ಮತ್ತೊಮ್ಮೆ ಅನಂತಕುಮಾರ್ ಹೆಗಡೆ’ ಘೋಷ ವಾಕ್ಯದೊಡನೆ ಚುನಾವಣೆಗೆ ಸ್ಪರ್ಧಿಸಲೇ ಬೇಕು ಎಂದು ‘ಕಳಕಳಿಯಿಂದ ಬೇಡಿಕೊಂಡರು’. ಇವರೊಟ್ಟಿಗೆ ಕಿತ್ತೂರು, ಖಾನಾಪುರದ ಕೆಲವರೂ ಸೇರಿಕೊಂಡು ನೆಚ್ಚಿನ ಸಂಸದರ ದರ್ಶನ ಪಡೆದರು.

ಮನೆಯಿಂದ ಹೊರಬಂದ ಸಂಸದರು ತಮ್ಮ ಮೇಲೆ ‘ಒತ್ತಡ ಹೇರಲು’ ಬಂದ ಕಾರ್ಯಕರ್ತರನ್ನುದ್ದೇಶಿಸಿ ‘ಅಯೋಧ್ಯೆ ರಾಮಮಂದಿರ ಉದ್ಘಾಟನೆಯಾದ ನಂತರ ಕುಳಿತು ಚರ್ಚಿಸಿ ನಿರ್ಧಾರ ಪ್ರಕಟಿಸುತ್ತೇನೆ, ಕಾರ್ಯಕರ್ತರ ಇಚ್ಛೆಯನ್ನು ತಕ್ಷಣಕ್ಕೆ ನಿರಾಕರಿಸಲು ಸಾಧ್ಯವಿಲ್ಲ’ ಎಂದು ಹೇಳಿದರು. ಸಂಸದರ ಮಾತು ಕೇಳಿ ಕಾರ್ಯಕರ್ತರು ಖುಷಿಯಿಂದ ತಮ್ಮ ತಮ್ಮ ತಾಲೂಕಿಗೆ ಮರಳಿದ್ದಾರೆ. ಖುಷಿ ಯಾಕೆ ಅಂದರೆ ಸಂಸದರು ಮತ್ತೆ ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಸಂಜ್ಞೆ ಪರೋಕ್ಷವಾಗಿ ಸಿಕ್ಕಿದ ಕಾರಣಕ್ಕೆ.

ಸಂಸದ ಅನಂತಕುಮಾರ ಹೆಗಡೆ ಅವರು ತಟಸ್ಥರಾಗಿ ತಿಂಗಳುಗಳಲ್ಲ, ವರ್ಷಗಳೇ ಆಗಿ ಹೋಗಿವೆ. ಆನಾರೋಗ್ಯದ ಕಾರಣವಿರಬಹುದೆಂದು ಜನ ತೆಪ್ಪಗಿದ್ದರು. ಆದರೆ ಸಂಸದರು ಬಿಜೆಪಿ ವರಿಷ್ಠರ ಮೇಲೆ ಮುನಿಸಿಕೊಂಡು ಮನೆಯೊಳಗಿದ್ದಾರೆ ಎಂಬ ಸುದ್ದಿ ಕೂಡ ಕೆನರಾ ಲೋಕಸಭಾ ಕ್ಷೇತ್ರದಾದ್ಯಂತ ಹರಡಿತ್ತು. ಸಂಸದರ ಮೌನ ನಾನಾ ಅರ್ಥಕ್ಕೆ ಇಂಬುಕೊಟ್ಟಿತ್ತು.

ನಮ್ಮ ಸಂಸದರು ಬಾಯಿ ಬಿಟ್ಟುರೂ ಸುದ್ದಿ, ಬಾಯಿ ಮುಚ್ಚಿದರೂ ಸುದ್ದಿ ಅಂತ ಅವರ ಅಭಿಮಾನಿ ಕಾರ್ಯಕರ್ತರು ಹುಳುಳ್ಳಗೆ ನಗುತ್ತ ಹೇಳುತ್ತಿದ್ದರು.

ಸಂಸದರ ಮನೆ ಮುಂದಿನ ಧರಣಿ ವಿಷಯಕ್ಕೆ ಮರಳೋಣ. ನೂರಾರು ಕಾರ್ಯಕರ್ತರು ‘ಮೌನ ಮುನಿ’ಯಾದ ಸಂಸದರನ್ನು ಚುನಾವಣೆಗೆ ಸ್ಪರ್ಧಿಸಲು ಒತ್ತಾಯಿಸಿದ ಸುದ್ದಿ ಕೇವಲ ಜಿಲ್ಲೆ ಮಾತ್ರವಲ್ಲ, ರಾಜ್ಯದಾದ್ಯಂತ, ಅಷ್ಟೇ ಏಕೆ ದೆಹಲಿ ಬಿಜೆಪಿ ವರಿಷ್ಠರ ಮನೆ ಬಾಗಿಲವರೆಗೂ ಹರಡಿರುವುದು ಸುಳ್ಳಲ್ಲ. ಅನಂತಕುಮಾರ್ ಅಷ್ಟರ ಮಟ್ಟಿಗೆ ತಮ್ಮ ಕಾವು ಉಳಿಸಿಕೊಂಡ ರಾಜಕಾರಣಿ. ಬಾಯಿ ಬಿಟ್ಟರೆ ಬೆಂಕಿ ಉಗುಳುತ್ತಾರೆಂಬ ಸರ್ಟಿಫಿಕೇಟನ್ನು ನಮ್ಮ ಮಾಧ್ಯಮಗಳು ಅವರಿಗೆ ಪದೇ ಪದೇ ನೀಡಿ ಅವರ ಸುತ್ತ ಪ್ರಭಾವಳಿ ನಿರ್ಮಿಸಿಬಿಟ್ಟಿದೆ. ಅದಕ್ಕೆ ‘ಫೈರ್ ಬ್ರ್ಯಾಂಡ್’ ಅಂತ ಹೆಸರನ್ನೂ ಕೊಟ್ಟಿದ್ದಾರೆ. ಈ ಬ್ರ್ಯಾಂಡ್ ನಿಂದ ಜನರಿಗೆ ಏನು ಪ್ರಯೋಜನ? ಕ್ಷೇತ್ರಕ್ಕೇನು ಅನುಕೂಲ? ನಮ್ಮ ಸಂಸದರು ಹಿಂದುತ್ವಕ್ಕಾಗಿ ಬೆಂಕಿ ಉಗುಳಿದರೇ ಹೊರತು ಕೆನರಾ ಕ್ಷೇತ್ರದ ಅಭಿವೃದ್ಧಿಗಾಗಿ ಎಂದೂ ಬೆಂಕಿಯಾಗಲೇ ಇಲ್ಲ.

ಇದೇ ಅನಂತಕುಮಾರ್ ಹೆಗಡೆ 1915 ಸೆಪ್ಟೆಂಬರ್ 1 ರಂದು ಕುಮಟಾ ತಾಲೂಕಿನ ಬರ್ಗಿಯಲ್ಲಿ ಎಲ್.ಪಿ.ಜಿ. ಅನಿಲ ದುರಂತ ಆದಾಗ ಹಲವಾರು ಅಮಾಯಕರ ಸಾವು ನೋವು ಸಂಭವಿಸಿತು. ಈ ದುರ್ಘಟನೆನೆಯಲ್ಲಿ ಬಿಜೆಪಿ ಪಕ್ಷದ ತಾಲೂಕು ಮಹಿಳಾ ಪದಾಧಿಕಾರಿಯೊಬ್ಬರೂ ಪ್ರಾಣಬಿಟ್ಟರು. ಆಗ ಕ್ಷಣ ಮಾತ್ರಕ್ಕಾದರೂ ಜವಾಬ್ದಾರಿ ಸ್ಥಾನದಲ್ಲಿರುವ ಸಂಸದ ಅನಂತಕುಮಾರ ಹೆಗಡೆ ಬರ್ಗಿ ಅನಿಲ ದುರಂತ ನಡೆದ ಸ್ಥಳಕ್ಕೆ, ಸಂತ್ರಸ್ತರ ಮನೆಗೆ ಭೇಟಿ ಕೊಟ್ಟು ಸಮಾಧಾನದ ಮಾತು ಹೇಳಿಲ್ಲ. ಯಾಕೆ ಬರಲಿಲ್ಲ ಅಂತ ಸಂಸದರ ಮನೆ ಮುಂದೆ ಆಗ ಅಭಿಮಾನಿ ಕಾರ್ಯಕರ್ತರು ಧರಣಿ ಮಾಡಿದರೇ?

ಮುಂಡಗೋಡದ ಸಭೆಯೊಂದರಲ್ಲಿ ಸಂಸದರು ಏರು ಧ್ವನಿಯಲ್ಲಿ ಮಾತನಾಡುತ್ತ ಮುಸ್ಲಿಮರ ಮತ ತನಗೆ ಬೇಡವೇ ಬೇಡವೆಂದು ಸಂವಿಧಾನ ವಿರೋಧಿ ಹೇಳಿಕೆ ನೀಡಿದಾಗ ಜವಾಬ್ದಾರಿಯುತ ಅಭಿಮಾನಿ ಕಾರ್ಯಕರ್ತರು ಸಂಸದರ ಮನೆ ಮುಂದೆ ಧರಣಿ ಹೂಡಿದ್ದರೇ?

ಅಂಕೋಲಾ-ಹುಬ್ಬಳ್ಳಿ ರೇಲ್ವೇ ಮಾರ್ಗಕ್ಕಾಗಿ ಕಳೆದ ಎರಡುವರೆ ದಶಕಗಳಿಂದ ಜಿಲ್ಲೆಯ ಜನ ತೀವ್ರ ಹೋರಾಟ ನಡೆಸುತ್ತಿರುವಾಗ, ದೆಹಲಿಗೂ ನಿಯೋಗ ಹೋದಾಗ ಸಂಸದರು ಸ್ಪಂದಿಸದೇ ಇದ್ದಾಗ ಅಭಿಮಾನಿ ಕಾರ್ಯಕರ್ತರು ಅವರ ಮನೆ ಮುಂದೆ ಧರಣಿ ಕುಳಿತಿದ್ದರೇ?

ಕಳೆದ ಕೆಲವಾರು ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಗೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಅಂತ ಸ್ಥಳೀಯ ಜನರು ಗಂಟಲು ಹರಿಯುವವರೆಗೆ ಒದರುತ್ತ ಹೋರಾಟ ಮಾಡುತ್ತಿರುವಾಗ ಮಂಜೂರಿ ಮಾಡಿಸುವುದು ಸಂಸದರ ಕೆಲಸವಲ್ಲ ಅಂತ ಜಾರಿಕೊಂಡ ಅನಂತಕುಮಾರರ ಮನೆ ಮುಂದೆ ಅಭಿಮಾನಿ ಕಾರ್ಯಕರ್ತರು ಧರಣಿ ನಡೆಸಿದರೆ?

ಹೊನ್ನಾವರದ ಅಮಾಯಕ ಹುಡುಗ ಪರೇಶ್ ಮೇಸ್ತ ಕೊಲೆಯಾದಾಗ ನೆಲಕ್ಕೆ ಬಿದ್ದ ಆತನ ಒಂದೊಂದು ಹನಿ ರಕ್ತಕ್ಕೂ ಪ್ರತಿಕಾರ ತೀರಿಸುತ್ತೇನೆ, ನ್ಯಾಯ ಕೊಡಿಸುತ್ತೇನೆ ಅಂತ ಸುಖಾಸುಮ್ಮನೆ ಹೇಳಿ ಹೋರಟು ಹೋದ ಅಂದಿನ ಕೇಂದ್ರ ಕೌಶಲ್ಯ ಮಂತ್ರಿ ಅನಂತಕುಮಾರ ಹೆಗಡೆ ಮತ್ತೆ ಈ ಬಗ್ಗೆ ತುಟಿಪಿಟಕ್ ಅನ್ನದೇ ಇದ್ದಾಗ ಸಮಾನ ಮನಸ್ಕ ಅಭಿಮಾನಿ ಕಾರ್ಯಕರ್ತರು ಗುಂಪು ಗುಂಪಾಗಿ ಸಂಸದರ ಮನೆ ಮುಂದೆ ಧರಣಿ ಕುಳಿತಿದ್ರಾ?

ಕೌಶಲ್ಯಾಭಿವೃದ್ಧಿ ಮಂತ್ರಿಗಿರಿಯನ್ನು ಪ್ರದಾನಿ ನರೇಂದ್ರ ಮೋದಿಯವರು ದಯಪಾಲಿಸಿದಾಗ ಎನನ್ನೂ ಮಾಡದೇ ತಿರುಗಾಡುತ್ತಿದ್ದ ಅನಂತಕುಮಾರ ಹೆಗಡೆ ಅವರು ‘ನೀರಿಲ್ಲದ ಬಾವಿಯನ್ನು ತಗೊಂಡು ನಾನೇನು ಮಾಡಲಿ’ ಅಂತ ಗೌರವಯುತ ಜವಾಬ್ದಾರಿಯನ್ನೂ, ದಯಪಾಲಿಸಿದ ನರೇಂದ್ರ ಮೋದಿಯವರನ್ನೂ ಅವಮಾನಿಸಿದಾಗ ಅಭಿಮಾನಿ ಕಾರ್ಯಕರ್ತರು ಯಾಕೆ ಸಂಸದರ ಮನೆ ಮುಂದೆ ಧರಣಿ ಕುಳಿತಿಲ್ಲ?

ಹೊನ್ನಾವರ ತಾಲೂಕಿನ ಧರ್ಮಶಾಲೆ ಅಂಸಳ್ಳಿಯಲ್ಲಿ ಹಾಲಿನ ಡೈರಿಯೊಂದನ್ನು ಉದ್ಘಾಟಿಸಲು ಬಂದಾಗ ನಿರುದ್ಯೋಗಿ ಯುವಕರು ಈ ಬಾಗದಲ್ಲಿ ಉದ್ಯೋಗ ಸೃಷ್ಟಿಸುವ ಉದ್ಯಮವೊಂದನ್ನು ಕೇಂದ್ರ ಸರಕಾರದಿಂದ ತನ್ನಿ ಅಂತ ಮನವಿ ಮಾಡಿದಾಗ ಅನಂತಕುಮಾರ ಅವರು, ಮನೆಯಂಗಳದಲ್ಲೇ ಬಣ್ಣದ ಮೀನು ಕೃಷಿ, ಮುತ್ತು ಬೆಳೆಯುವ ಕೃಷಿ ಮಾಡಿ ಅಂತ ಪೇಲವ ಉತ್ತರ ನೀಡಿ ಕಾರು ಹತ್ತಿ ಹೋದರು. ಆಗ ಸಂಸದರ ಮನೆ ಮುಂದೆ ಅಭಿಮಾನಿ ಕಾರ್ಯಕರ್ತರು ಯಾಕೆ ಧರಣಿ ಕುಳಿತಿಲ್ಲ?

ಹೊನ್ನಾವರ ತಾಲೂಕಿನ ಕಾಸರಕೋಡು ಟೊಂಕದಲ್ಲಿ ಬೃಹತ್ ಖಾಸಗಿ ಬಂದರು ಯೋಜನೆಯ ಕಾಮಗಾರಿ ನಡೆಯುತ್ತಿದ್ದು ಅಲ್ಲಿದ್ದ ಮೀನುಗಾರರನ್ನು ಎಬ್ಬಿಸಲು ಸರಕಾರದ ಬೆಂಬಲದಿಂದ ಗುತ್ತಿಗೆದಾರ ಕಂಪನಿ ಇನ್ನಿಲ್ಲದಂತೆ ದೌರ್ಜನ್ಯ ಎಸೆದಾಗ ಅಸಹಾಯಕ ಬೆಸ್ತರ ಚೀರಾಟ ಗೋಳಾಟ ಕೇಳಲು ಯಾರಿಗೇ ಆದರೂ ನೋವಾಗುತ್ತಿತ್ತು. ಬೆಸ್ತರ ಗುಡಿಸಲು, ಬಲೆ, ಒಣಮೀನು ಶೆಡ್ ಗಳನ್ನೆಲ್ಲ ಬುಲ್ಡೋಜರ್ ನಿಂದ ಕಿತ್ತೆಸೆಯಲು ಗುತ್ತಿಗೆದಾರ ಕಂಪನಿ ಮುಂದಾದಾಗ ಹತಾಶ ಮಹಿಳೆಯರು, ಮಕ್ಕಳೆಲ್ಲ ಸುಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದರು. ಆದರೆ ಸಂಸದ ಅನಂತಕುಮಾರರು ಮಾತ್ರ ಜಾಣ ಕಿವುಡರಾಗಿ ಈ ಕಡೆ ಸುಳಿಯಲೇ ಇಲ್ಲ. ಆಗ ಅಭಿಮಾನಿ ಕಾರ್ಯಕರ್ತರು ಯಾಕೆ ತಮ್ಮ ಸಂಸದರ ಮನೆ ಮುಂದೆ ಧರಣಿ ಕುಳಿತುಕೊಳ್ಳಲಿಲ್ಲ?

ಕೆನರಾ ಲೋಕಸಭಾ ಕ್ಷೇತ್ರದ ಕಿತ್ತೂರು ಖಾನಾಪುರದ ಜನ ತಮಗೆ ಯಾತಕ್ಕೂ ಸ್ಪಂದಿಸದ, ಮುಖ ತೋರಿಸದ ಸಂಸದರ ವಿರುದ್ಧ ಕಳೆದ ವರ್ಷ ಬಿತ್ತಿಪತ್ರ ಗೋಡೆಗೆ ಅಂಟಿಸುವ ಅಭಿಯಾನ ಕೈಗೊಂಡು ‘ನಮ್ಮ ಸಂಸದ ಅನಂತಕುಮಾರ ಹೆಗಡೆಯವರನ್ನು ಹುಡುಕಿಕೊಡಿ’ ಅಂತ ಸಂದೇಶ ರವಾನಿಸಿದರು. ಆಗ ಯಾಕೆ ಅಭಿಮಾನಿ ಕಾರ್ಯಕರ್ತರು ನೆಚ್ಚಿನ ಸಂಸದರ ಮನೆ ಮುಂದೆ ಧರಣಿ ಕುಳಿತುಕೊಳ್ಳಲಿಲ್ಲ?

ಆಗೆಲ್ಲ ಧರಣಿ ಕುಳಿತುಕೊಳ್ಳದ ಅಭಿಮಾನಿ ಕಾರ್ಯಕರ್ತರು ಈಗ ಸಂಸದ ಅನಂತಕುಮಾರ ಹೆಗಡೆ- ತಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂಬ ಇಂಗಿತವನ್ನು ಆಪ್ತವಲಯದಲ್ಲಿ ಹೇಳಿಕೊಳ್ಳುತ್ತಿದ್ದಂತೆಯೇ ರೆಕ್ಕೆಪುಕ್ಕ ಬಂದವರಂತೆ ಇವರೆಲ್ಲ ಹಿಂಡು ಹಿಂಡಾಗಿ ಹೋಗಿ ಸಿರಸಿಯಲ್ಲಿನ ಸಂಸದರ ಮನೆ ಮುಂದೆ ಧರಣಿ ಕುಳಿತು, ಮತ್ತೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಕೂಗಿ ಕೂಗಿ ಒತ್ತಡ ಹಾಕುವ ಹೈ ಡ್ರಾಮಾ ಮಾಡಿದ್ದಾರೆ ಮತ್ತು ಇವರೆಲ್ಲ ಕೇವಲ ಅಭಿಮಾನಿ ಕಾರ್ಯಕರ್ತರು ಮಾತ್ರವಲ್ಲ. ಭಾರತದ ಜವಾಬ್ದಾರಿಯುತ ಮತದಾರರೂ ಹೌದು. ತಮ್ಮ ನಾಯಕನನನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ ಪ್ರತಿಯೊಬ್ಬ ಮತದಾರನಿಗೂ ಇದೆ. ಅದು ಚುನಾವಣೆಯ ಸೌಂದರ್ಯ ಕೂಡ ಹೌದು. ಆದರೆ ಎಂಥ ನಾಯಕನನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಕೂಡ ಮತದಾರ ಯೋಚಿಸಬೇಕು ತಾನೆ?

ತಾವು ಆರು ಬಾರಿ ಆಯ್ಕೆ ಮಾಡಿ ಕಳುಹಿಸಿದ ಸಂಸದ ಯಾರಿಗೂ ಲಭ್ಯವಿಲ್ಲದಿದ್ದಾಗ, ಅವರಿಂದ ಏನೂ ಕೆಲಸವಾಗದೇ ಇದ್ದಾಗ ಅಭಿಮಾನಿ ಕಾರ್ಯುಕರ್ತರೂ, ಮತದಾರರೂ ಆದ ಇವರೆಲ್ಲ ಸಂಸದರ ಮನೆ ಮುಂದೆ ಈಗಿನಂತೆ ಆಗಲೂ ಧರಣಿ ಕುಳಿತು ಎಚ್ಚರಿಸಬಹುದಿತ್ತು. ಅನಂತಕುಮಾರ್ ಓರ್ವ ದಾಡಸಿ ನಾಯಕ. ಪ್ರತಿಭಾವಂತ ಕೂಡ ಹೌದು. ಚುಂಬಕಶಕ್ತಿಯುಳ್ಳ ಮುಖಂಡ. ಜನರಿಗೆ ಮನ ಮುಟ್ಟುವಂತೆ ತನ್ನ ಮಾತನ್ನು ದಾಟಿಸುವ

ಭಾಷಾಪ್ರೌಢಿಮೆ ಇದೆ. ಇಷ್ಟೆಲ್ಲ ಸಂಪತ್ತು ಅವರೊಳಗೆ ಇದ್ದರೂ ಪರಿಣಾಮಕಾರಿಯಾಗಿ ಕೆನರಾ ಲೋಕಸಭಾ ಕ್ಷೇತ್ರವನ್ನು ಮುನ್ನಡೆಸಲಿಲ್ಲ. ಕೇವಲ ಹಿಂದುತ್ವದ ಅಜೆಂಡಾವನ್ನು ಮಾತ್ರ ಪ್ರತಿ ಗೆಲುವಿನ ಅಸ್ತ್ರವನ್ನಾಗಿ ಮಾಡಿಕೊಂಡುಬಿಟ್ಟರು. ಇದನ್ನು ಅಭಿಮಾನಿ ಕಾರ್ಯಕರ್ತರು ಪರಾಮರ್ಶಿಸಬೇಕು. ಸರಕಾರ ಓರ್ವ ಸಂಸದನಿಗೆ ಯಾವೆಲ್ಲ ಸೌಲಭ್ಯ ಕೊಡುತ್ತಿದೆ, ಅದಕ್ಕಾಗಿ ಸರಕಾರದ ಬೊಕ್ಕಸಕ್ಕೆ ಎಷ್ಟು ಹೊರೆ ಬೀಳುತ್ತದೆ ಎಂಬುದೆಲ್ಲ ಅಭಿಮಾನಿ ಕಾರ್ಯಕರ್ತರೆಲ್ಲರಿಗೆ ಗೊತ್ತಿದೆ. ಅಷ್ಟಕ್ಕೂ ಬೊಕ್ಕಸದ ಹಣ ಯಾರದ್ದು?

ಮತದಾರರು ಎಚ್ಚರಗೊಳ್ಳಬೇಕು. ಚುನಾವಣೆ ಹತ್ತಿರ ಬಂದಿದೆ. ಓರ್ವ ಜವಾಬ್ದಾರಿಯುತ ಸಂಸದನನ್ನು ಆಯ್ಕೆ ಮಾಡಿಕೊಳ್ಳುವತ್ತ ಚಿಂತಿಸುವ ತುರ್ತು ಸದ್ಯಕ್ಕಿದೆ. ಬಲಿಷ್ಠ ಮತ್ತು ಜಾತ್ಯತೀತ ಬಾರತ ಕಟ್ಟುವ ಹೊಣೆ ಎಲ್ಲ ಮತದಾರರ ಮೇಲಿದೆ.

Arvind karkikodi

ಲೇಖಕರು
ಅರವಿಂದ ಕರ್ಕಿಕೋಡಿ
ಪ್ರಧಾನ ಸಂಪಾದಕರು
ಹಣತೆವಾಹಿನಿ

Leave a Reply

Your email address will not be published. Required fields are marked *