ಪ್ರಭು ಯೇಸು ನಮ್ಮನ್ನು ಕ್ಷಮಿಸು ;ನಿನ್ನ ಹುಟ್ಟೂರು ಬೆತ್ಲೆಹೆಮ್ ನಲ್ಲಿ ಕ್ರಿಸ್ ಮಸ್ ಆಚರಿಸಿಲ್ಲ…

ಇಡೀ ಜಗತ್ತು ಕ್ರಿಸ್ ಮಸ್ ಹಬ್ಬದ ಸಂದರ್ಭದಲ್ಲಿ ಸಂಭ್ರಮ ಪಡುತ್ತಿರುವಾಗ ಬೆತ್ಲೆ ಹೆಮ್ ಎಂಬ ಮುದ್ದಾದ ಊರಿನಲ್ಲಿ ಮಾತ್ರ ಹಬ್ಬ ಇಲ್ಲದೇ ಸ್ಮಶಾನ ಮೌನವಾಗಿತ್ತು. ಹಬ್ಬ ಆಚರಿಸದ ಈ ನೆಲ ಬೇರೆ ಯಾವುದೋ ಪ್ರದೇಶವಾಗಿದ್ದರೆ ಯಾರ ಹೃದಯದ ತಂತು ಹಂದುತ್ತಿರಲಿಲ್ಲ.

ಆದರೆ ಇದೇ ಬೆತ್ಲೆಹೆಮ್ ನ ಪುಟ್ಟ ಕೊಟ್ಟಿಗೆಯಲ್ಲಿ ಶಾಂತಿದೂತನಾದ ಮುದ್ದಾದ ಕಂದನಿಗೆ ಮಾತೆ ಮೇರಿ ಜನ್ಮನೀಡಿದ ಪವಿತ್ರ ನೆಲವಾದಗಿತ್ತು ಎಂಬುದು ಎಲ್ಲರಿಗೂ ಮಹತ್ವದ ಸಂಗತಿ. ನಿಜ, ಪ್ರಭು ಏಸುವಿಗೆ ಜನ್ಮಕೊಟ್ಟ ಈ ಪವಿತ್ರ ನೆಲದಲ್ಲೇ ಈ ವರ್ಷ ಕ್ರಿಸ್ ಮಸ್ ಆಚರಿಸಲೇ ಇಲ್ಲ!

ಗಾಝಾಪಟ್ಟಿಯ ಪ್ಯಾಲೆಸ್ತೇನಿನ ಜೆರುಸಲೇಮ್ ಪಟ್ಟಣದ  ಪಶ್ಚಿಮ ಭಾಗದ ಪುಟ್ಟ ಊರು, ಆಗಲೇ ಹೇಳಿದಂತೆ ಮುದ್ದಾದ ಊರು ಬೆತ್ಲೆಹೆಮ್(Bethlehem). ಇತ್ತೀಚೆಗೆ ಇಡೀ ಜಗತ್ತಿನ ಗಮನ ಸೆಳೆದ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನದಲ್ಲಿ (Israel-Hamas War) ತತ್ತರಿಸಿ ಹೋದ ನೆಲ ಇದು. ವಿಪರ್ಯಾಸವೆಂದರೆ ಶಾಂತಿ ದೂತ ಜನಸಿದ ನೆಲದಲ್ಲಿ ಯುದ್ಧ ಪಿಪಾಸುಗಳು ಅಟ್ಟಹಾಸದಲ್ಲಿ ಮೆರದರು. ಮುರಿದ ಕಟ್ಟಡ, ರಕ್ತ ಬತ್ತಿದ ನೆಲ, ಕೆಲವರು ಗಂಡನನ್ನು ಕಳೆದುಕೊಂಡರೆ ಮತ್ತೆ ಕೆಲವರು ಹೆಂಡತಿಯನ್ನು ಕಳೆದುಕೊಂಡಿದ್ದಾರೆ. ಮಕ್ಕಳನ್ನೆಲ್ಲ ಕಳೆದುಕೊಂಡ ಹೆತ್ತವರೂ ಇದ್ದಾರೆ, ಹೆತ್ತವರನ್ನು ಕಳೆದುಕೊಂಡ ಅನಾಥ ಮಕ್ಕಳೂ ಇದ್ದಾರೆ. ನೋಡು ನೋಡುತ್ತಿದ್ದಂತೆ ಪಿರಂಗಿಗಳ ದಾಳಿಗೆ ಹಸಿ ಹಸಿ ಜೀವಗಳೇ ಉರುಳುವ ಕಟ್ಟಡಗಳ ಕೆಳಗೆ ನೆಲಸಮವಾದವು. ಸೋತ ಜೀವಗಳ ಆಕ್ರಂದನಗಳ ನಡುವೆ ಏಸುಪ್ರಭುವಿನ ಶಾಂತಿ ಸಂದೇಶದ ಕಾಗದಗಳು ತರಗೆಲೆಯಂತೆ ಹಾರಿ ಹೋಗುತ್ತಿರುವಂತೆ ಭಾಸವಾಗುತ್ತಿತ್ತು. 

ಪ್ರಭು ಏಸು ಹುಟ್ಟಿದ ಬೆತ್ಲೆಹೆಮ್ ನಲ್ಲಿ ಕ್ರಿಸ್ ಮಸ್ ಆಚರಿಸದಿದ್ದರೂ ಈ ಊರಿನ ಚರ್ಚ್ ಹೊರಗೆ  ಕರಾಳ ಯುದ್ಧವನ್ನು ವಿರೋಧಿಸುವ ಸಂಕೇತ ಎಂಬಂತೆ ಕೊಟ್ಟಿಗೆಯ ಬದಲಾಗಿ ಯುದ್ಧದಲ್ಲಿ ಉರುಳಿದ ಕಾಂಕ್ರೀಟ್ ಕಟ್ಟಡಗಳ ತುಂಡುಗಳು. ಕಬ್ಬಿಣದಗಳನ್ನೂ ಪೇರಿಸಿಟ್ಟು ಅದರ ಸಂದಿಯಲ್ಲೇ ಬಾಲ ಏಸು ಮಲಗಿಸಿದ್ದಾರೆ. ಆದರೆ ಅದು ಬಾಲ ಏಸು ಅಲ್ಲ! ಬದಲಾಗಿ ಪುಟ್ಟ ಮಗು ಆಟ ಆಡುವ ಗೊಂಬೆ. ಯುದ್ಧದ ಪರಿಣಾಮ ಕಟ್ಟಡದ ಅಡಿಯಲ್ಲಿ ಸಿಲುಕಿದ ಮಗುವಿನ ಭೀಕರ ಚಿತ್ರಣದ ರೂಪಕ ಅದು.  ಅಲ್ಲಿ ಬಣ್ಣಬಣ್ಣದ ವಿದ್ಯುತ್ ದೀಪಗಳಿಲ್ಲ, ಕ್ರಿಸ್ ಮಸ್ ಟ್ರೀ ಗಳಿಲ್ಲ. ಕೇಕ್ ಗಳಿಲ್ಲ, ಅಲ್ಲಿ ಚರ್ಚ್ ಪಾದರ್ ಪ್ರವಚನವಿಲ್ಲ, ಜನರ ಓಡಾಟವೂ ಇಲ್ಲ. ಒಟ್ಟಾರೆ ಏಸು ಹುಟ್ಟಿದ ಊರಿನಲ್ಲಿ ಕ್ರಿಸ್ ಮಸ್ ಹಬ್ಬದಂದು ಶೂನ್ಯ ಶೂನ್ಯ ಶೂನ್ಯ. 

ಮನುಷ್ಯನ ಹಪಹಪಿತನಕ್ಕೆ ಮಿತಿಯೇ ಇಲ್ಲವೇ? ಪ್ರಭು ಏಸು ದುರುಳರ ತಪ್ಪುಗಳ್ನೆಲ್ಲ ಕ್ಷಮಿಸಿದ ಶಾಂತಿದೂತ. ಆದರೆ ಬೆತ್ಲೆಹೆಮ್ ನಲ್ಲಿ ಯಾರು ಯಾರನ್ನೂ ಕ್ಷಮಿಸಬೇಕು? ಯಾರಿಗೆ ಬೇಕಾಗಿದೆ ಕ್ಷಮೆ.   

ನಾನು ಶಾಲೆಗೆ ಹೋಗುವಾಗ ರಾಷ್ಟ್ರೋತ್ಥಾನ ಪ್ರಕಾಶನದವರು ನಡೆಸುತ್ತಿದ್ದ ರಾಮಾಯಣ, ಮಹಾಭಾರತ ಪರೀಕ್ಷೆ ಬರೆದಿದ್ದೆ. ಅಕಸ್ಮಾತ್ ಬೆಂಗಳೂರಿನ ದಿ ಬೈಬಲ್ ಸೊಸೈಟಿ ಆಫ್ ಇಂಡಿಯಾ (The Bible Society of India) ಸಂಸ್ಥೆಯವರು ನಡೆಸುತ್ತಿದ್ದ ಶಾಂತಿ ಸಂದೇಶ ಪರೀಕ್ಷೆಯನ್ನೂ ಬರೆದಿದ್ದೆ. ಅನಂತರ ಅವರು ನನಗೆ ಪ್ರಶಸ್ತಿಯ ಜೊತೆಗೆ ‘ಹೊಸ ಒಡಂಬಡಿಕೆ’ ಎಂಬ ಗ್ರಂಥವನ್ನೂ ಕಳುಹಿಸಿಕೊಟ್ಟಿದ್ದರು. ಹಾಗೇಯೇ ಇಸ್ಮಿಕಾ ಸಂಸ್ಥೆಯವರು ನಡೆಸಿದ ಕುರಾನ್ ಬಗೆಗಿನ ಪರೀಕ್ಷೆಯನ್ನೂ ಬರೆದಿದ್ದೆ. ಯಾಕೆ ಈ ಮಾತನ್ನು ಇಲ್ಲಿ ಪ್ರಸ್ತಾಪಿಸಿದೆ ಅಂದರೆ ಯಾವ ಧರ್ಮವೂ ಕ್ರೂರತೆಯನ್ನು ಬಿಂಬಿಸಿಲ್ಲ. ಶಾಂತಿಯನ್ನೇ ಬೋಧಿಸಿವೆ.ನಾವು ಅವುಗಳನ್ನು ಅರ್ಥೈಸಿಕೊಳ್ಳವಲ್ಲಿ ಎಡವಿದ್ದೇವೆ. ಪರಿಣಾಮ, ನಮ್ಮ ಬದುಕು, ದೇಶ, ಕೊನೆಯಲ್ಲಿ ಇಡೀ ಜಗತ್ತೇ ಎಡವುತ್ತಿವೆ. 

ಪ್ರಭು ಯೇಸು ನಮ್ಮನ್ನು ಕ್ಷಮಿಸು ; ನಿನ್ನ ಹುಟ್ಟೂರು ಬೆತ್ಲೆಹೆಮ್ ನಲ್ಲಿ ನಿನ್ನ ಹುಟ್ಟು ಹಬ್ಬ ಕ್ರಿಸ್ ಮಸ್ ಆಚರಿಸಿಲ್ಲ…!

Arvind karkikodi

ಲೇಖಕರು
ಅರವಿಂದ ಕರ್ಕಿಕೋಡಿ
ಪ್ರಧಾನ ಸಂಪಾದಕರು
ಹಣತೆವಾಹಿನಿ

One thought on “ಪ್ರಭು ಯೇಸು ನಮ್ಮನ್ನು ಕ್ಷಮಿಸು ;ನಿನ್ನ ಹುಟ್ಟೂರು ಬೆತ್ಲೆಹೆಮ್ ನಲ್ಲಿ ಕ್ರಿಸ್ ಮಸ್ ಆಚರಿಸಿಲ್ಲ…

  1. ಕ್ರೂರತ್ವಕ್ಕೆ ಎಲ್ಲಿದೆ ಧರ್ಮ !? ಏಸುವಿನ ಜನ್ಮದ ವಿಚಾರ ತಿಳಿದ ಕೂಡಲೆ ಅದೆಷ್ಟೊ ಶಿಶುಗಳ ಹತ್ಯೆ ಮಾಡಲಾಯಿತು ಕಾರಣವಿಷ್ಟೆ “ಇಸ್ರೇಲ್ ನ ದೊರೆಯ ಜನ್ಮವಾಗಿದೆ ” ಎಂಬ ಸಂದೇಶ ಅಂದಿನ ಆಡಳಿತಗಾರನಿಗೆ ಸಿಕ್ಕಾಗ ತನ್ನ ಸಿಂಹಾಸನಕ್ಕೆ ಎಲ್ಲಿ ಧಕ್ಕೆ ಬರುತ್ತದೊ ಅನ್ನುವ ಭಯದಲ್ಲಿ ನಿರ್ದಿಷ್ಟ ವಯಸ್ಸಿನ ಶಿಶುಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಲಾಯಿತು ,ಆದರೆ ಏಸು ಆಡಳಿತ ನಡೆಸುವ ರಾಜನಾಗಿರಲಿಲ್ಲ ಅನ್ನುವುದು ಗುರುತಿಸುವಲ್ಲಿ ಅಂದಿನ ಮೂರ್ಖರು ಸೋತರು ಹಾಗೆ ಸದಾ ಸಮಾನತೆ ಬಗ್ಗೆ ಬೋಧನೆ ನೀಡಿದ ಏಸುವನ್ನು ದೈವ ದೋಷ ಆರೋಪ ಹೊರಿಸಿ ಶಿಲುಭೆಗೆ ಏರಿಸಿದರು ತನ್ನ ಕೊನೆ ಕ್ಷಣದಲ್ಲೂಕೂಡ ಅಹಿಂಸೆ ಪರವಾಗಿಯೇ ಇದ್ದ ಏಸು ಎಂದು ಹಿಂಸೆಯನ್ನು ಬೆಂಬಲಿಸಿರಲ್ಲಿಲ್ಲ .ಅಂದು ಏಸುವನ್ನು ಗಲ್ಲಿಗೇರಿಸಿದ ಸಂತತಿಯೇ (ಯಹೂದಿಗಳು) ಇಂದು ಗಾಜಾಪಟ್ಟಿಯಲ್ಲಿ ಹಿಂಸೆ ನಡೆಸುತ್ತಿದೆ ಸುರಕ್ಷತೆ ಹೆಸರಿನಲ್ಲಿ ಮಾರಣ ಹೋಮ ನಡೆಸುವದು ಯಾವ ನ್ಯಾಯ ! ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಇದೇ ಯಹೂದಿ ಸಂತತಿಗಳನ್ನು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಸಾಮೂಹಿಕ ಹತ್ಯೆ ಮಾಡಿದ್ದು ಅಷ್ಟೇನೂ ಹಳೆಯ ವಿಚಾರ ಎನಿಸದು .ಏಸು ಯಾವತ್ತು ತನ್ನ ಜನ್ಮದಿನ ಆಚರಣೆಗೆ ಆಚರಿಸಲಿಲ್ಲವೆಂದು ಸಂಕಟ ಪಡಲಾರ ಆದರೆ ತನ್ನ ಜನ್ಮಸ್ಥಳದಲ್ಲಿ ಮಾನವ ಜನಾಂಗದ ಹತ್ಯೆ ನಡೆದಾಗ ಖಂಡಿತವಾಗಿ ಮರಗುತ್ತಾನೆ.

Leave a Reply

Your email address will not be published. Required fields are marked *