‘ಬಾಸ್ಕರ್ ಡಾಕ್ಟ್ರ ಕೈಗುಣ ಗನಾಕಿದ್ದು..ಅವ್ರು ಮೈ ಮುಟ್ಟಿ ನೋಡ್ದ್ರೆ ಶೀಕು ಸಂಕ್ಟ ಏನೇ ಇದ್ರೂ ಓಡ್ ಹೋತದೆ…’ ಇದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಕುಮಟಾ ಹೊನ್ನಾವರ ಭಾಗದ ಬಡಪಾಯಿ ಜನರು ಬಾಯ್ತುಂಬಿ ಹೇಳುವ ಮಾತಾಗಿತ್ತು.
ಡಾ. ಟಿ.ಎನ್.ಭಾಸ್ಕರ್ ಬಾಸ್ಕರ್ ಇನ್ನಿಲ್ಲ ಅನ್ನುವ ಸುದ್ದಿ ಹರಡುತ್ತಲೇ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಅಕ್ಷರಶಃ ಮೌನವಾಗಿತ್ತು. ಶುಕ್ರವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 89 ವರ್ಷ ವಯಸ್ಸಿನ ಡಾ. ಭಾಸ್ಕರ್ ನಿಧನರಾದರು. ಕೆಲ ದಿನಗಳ ಹಿಂದಷ್ಟೇ ಆರೋಗ್ಯದಲ್ಲಿ ಏರುಪೇರಾಗಿತ್ತು. ಅಲ್ಪ ಪ್ರಮಾಣದ ಹೃದಯಸ್ತಂಭನವಾಗಿ ಮಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸ ಪರಿಣಾಮಕಾರಿಯಾಗಿ ಫಲಿಸದೇ ಹೊರಟುಹೋದರು.

ಸುಮಾರು 60 ವರ್ಷಗಳವರೆಗೆ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿ ಸಾರ್ಥಕ ಸೇವೆ ನೀಡಿದ ಡಾ. ಬಾಸ್ಕರ್ ಮೂಲತಃ ಶೃಂಗೇರಿಯವರು. ಅಲ್ಲಿಯ ಶಾರದೆಯ ಆರಾಧಕರು. ಅದಕ್ಕಾಗಿಯೇ ತಾವು ನಿವೃತ್ತಿಯಾದ ನಂತರ ತುಂಬ ಮಹಾತ್ವಾಕಾಂಕ್ಷೆಯಿಂದ ಕಟ್ಟಿದ ಆಸ್ಪತ್ರೆಗೆ ‘ಶಾರದಾ ನರ್ಸಿಂಗ್ ಹೋಂ’ ಅಂತಲೇ ಹೆಸರಿಟ್ಟಿದ್ದರು. ಅವರ ಹೆಸರು ವಿವರವಾಗಿ ಹೇಳುವುದಾದರೆ ‘ತೀರ್ಥ ಮುತ್ತೂರು ನರಸಿಂಹ ಬಾಸ್ಕರ್’. ಸರಕಾರಿ ವೈದ್ಯರಾದರೂ ದೂರದ ಹಳ್ಳಿಯಲ್ಲಿ ರೋಗಿ ತುಂಬ ಗಂಭೀರ ಸ್ಥಿತಿಯಲ್ಲಿದ್ದರೆ, ಅಥವಾ ಗರ್ಭಿಣಿಯೊಬ್ಬಳು ವಿಪರೀತ ಪ್ರಸವ ವೇದನೆಯಿಂದ ಒದ್ದಾಡುತ್ತಿದ್ದರೆ ತಮಗೆ ಎಷ್ಟೇ ಕೆಲಸದ ಒತ್ತಡವಿದ್ದರೂ ಬೈಕ್ ಏರಿ ಚಿಕಿತ್ಸೆ ನೀಡಿಯೋ, ಪ್ರಸವ ಮಾಡಿಸಿಯೋ ಆ ಅಸಹಾಯಕ ಜೀವಗಳು ನಿರಾಳವಾಗಿ ಉಸಿರಾಡುವಂತೆ ಮಾಡಿ ಬರುತಿದ್ದರು. ರೋಗಿಗಳ ಚಿಕಿತ್ಸೆ ವಿಷಯಕ್ಕೆ ಬಂದರೆ ತಮ್ಮ ಮನೆ, ಸಂಸಾರವನ್ನೂ ಮರೆತು ರಾತ್ರಿ ಹಗಲು ಎನ್ನದೇ ಸೇವೆ ಸಲ್ಲಿಸಲು ಸಿದ್ದರಿರುತ್ತಿದ್ದರು.
ಅವರು ಗೋಕರ್ಣದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಇನ್ನೂ ಎಳೆಯ ಪ್ರಾಯದ ಹುಡುಗ. ಈ ಸಂದರ್ಭದಲ್ಲಿ ಊರಿಗೇ ಊರೇ ಮಲೇರಿಯಾ ಬಂದ ಸಂದರ್ಭ. ಆಸ್ಪತ್ರೆಗೆ ಮಲೇರಿಯಾ ಸೋಂಕಿತ ರೋಗಿಗಳೂ ಬಂದರೆ ಇನಿತೂ ಬೇಸರಿಸಿಕೊಳ್ಳದೇ, ಸಿಡುಕದೇ ಅವರನ್ನು ಮುಟ್ಟಿ ಧೈರ್ಯ ತುಂಬಿ ಚಿಕಿತ್ಸೆ ನೀಡಿ ಎಷ್ಟೋ ಜನರನ್ನು ಬದುಕಿಸಿದ್ದಾರೆ. ಊರ ಜನರೇ ಕಾಳಜಿಯಿಂದ ‘ಡಾಕ್ಟ್ರೇ ಹುಡುಗಾಟಿಕೆ ಬೇಡ, ನಿಮ್ಮ ಆರೋಗ್ಯದ ಬಗ್ಗೂ ಎಚ್ಚರಿಕೆಯಿಂದಿರಿ’ ಎಂದು ಕಿವಿ ಮಾತು ಹೇಳಿದರೆ ನಿರ್ಲಕ್ಷ್ಯ ಮಾಡಿ ಮತ್ತದೇ ರೋಗಿಗಳ ಹತ್ತಿರಕ್ಕೇ ಹೋಗಿ ಆರೈಕೆ ಮಾಡುತ್ತಿದ್ದರು. ಆ ದಿನಗಳಲ್ಲಿ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗೆ ಗೋಕರ್ಣದಿಂದ ಮಣಿಪಾಲ ಅಥವಾ ಮಂಗಳೂರಿಗೆ ಸಾಗಿಸಲು ಅಂಬುಲೆನ್ಸ್ ಇರಲಿಲ್ಲ. ಟ್ಯಾಕ್ಸಿಗಳೂ ಒಂದೆರಡು ಇದ್ದವು. ಅವುಗಳಿಗೆ ಹೆಚ್ಚಿನ ಬೆಲೆ ತೆತ್ತು ದೊಡ್ಡ ಆಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಹೋಗಲು ಅಲ್ಲಿಯ ಬಡ ಜನರಿಗೆ ಸಾಧ್ಯವಾಗುತ್ತಿರಲಿಲ್ಲ. ಅಂದಿನ ಆರೋಗ್ಯ ಸಚಿವರು ಗೋಕರ್ಣ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಕುಟುಂಬದೊಟ್ಟಿಗೆ ಬಂದಿರುತ್ತಾರೆ. ಡಾ. ಟಿ.ಎನ್.ಬಾಸ್ಕರ್ ಅವರು ಸಚಿವರನ್ನು ಭೇಟಿಯಾಗಿ ಗೋಕರ್ಣದ ಪರಿಸ್ಥಿತಿ ವಿವರಿಸಿ ಸರಕಾರದಿಂದ ಒಂದು ಅಂಬುಲೆನ್ಸ್ ಮಂಜೂರಿ ಮಾಡಿಕೊಡಬೇಕೆಂದು ಮನವಿ ಮಾಡುತ್ತಾರೆ. ಸಚಿವರು ‘ಮೆಟಡೋರ್ ಅಂಬುಲೆನ್ಸ್ ಖರೀದಿಸಿ ಕೊಡುವಷ್ಟು ಪೂರ್ತಿ ಹಣ ಮಂಜೂರಿ ಮಾಡುವಷ್ಟು ಹಣ ಇಲಾಖೆಯ ಬಜೆಟ್ ನಲ್ಲಿ ಇಲ್ಲ. ಈ ಊರಿನವರು ಅಂಬುಲೆನ್ಸ್ ಖರೀದಿಗೆ ಅರ್ಧ ಹಣ ಹಾಕುವುದಾದರೆ ಇನ್ನರ್ಧ ಹಣ ಸರಕಾರದಿಂದ ಮಂಜೂರಿ ಮಾಡಿಸುತ್ತೇನೆ’ ಎಂದು ಭರವಸೆ ನೀಡಿದರು. ಆಗ ಟಿ.ಎನ್.ಭಾಸ್ಕರ್ ಅವರು ಊರು, ಪರ ಊರಿನ ತಮ್ಮ ಆಪ್ತರನ್ನು, ವಿವಿಧ ಸಂಘ ಸಂಸ್ಥೆಗಳನ್ನೂ ಸಂಪರ್ಕಿಸಿ ಹಣ ಹೊಂದಿಸಿ ಗೋಕರ್ಣಕ್ಕೆ ಒಂದು ಹೊಸ ಅಂಬುಲೆನ್ಸ್ ತರಿಸೇ ಬಿಟ್ಟಿದ್ದರು.

ಹೊನ್ನಾವರ ತಾಲೂಕು ಆಸ್ಪತ್ರೆಗೆ ವರ್ಗವಾಗಿ ಬಂದ ಡಾ. ಬಾಸ್ಕರ್ ಅವರು ಇಲ್ಲೂ ಕೂಡ ಜನಾನುರಾಗಿ ಡಾಕ್ಟರ್ ಅಂತಲೇ ಹೆಸರು ಗಳಿಸಿದರು. ಇದು ತಾಲೂಕು ಆಸ್ಪತ್ರೆಯಾದರೂ ಹೆರಿಗೆ ಕೋಣೆ, ಜನರಲ್ ವಾರ್ಡ್ ಯಾವುದೂ ಇರಲಿಲ್ಲ. ಸ್ಥಳೀಯ ಲಯನ್ಸ್ ಕ್ಲಬ್ ಮತ್ತಿತರ ಸಂಘ ಸಂಸ್ಥೆಗಳಿಗೆ ವಿನಂತಿ ಮಾಡಿ ಆಸ್ಪತ್ರೆಯ ಆ ಕೊರತೆಯನ್ನೂ ನೀಗಿಸಿದರು. ಪ್ರತ್ಯೇಕ ಎರಡು ಕೋಣೆಯನ್ನೂ ಮಾಡಿಸಿದರು. ಎತ್ತರದ ಪ್ರದೇಶದಲ್ಲಿದ್ದ ಆಸ್ಪತ್ರೆಯಿಂದ ಬಂದರು ರಸ್ತೆಗೆ ಇಳಿದು ಹೋಗಲು ಎರಡು ಡಜನ್ ಮೆಟ್ಟಿಲುಗಳನ್ನೂ ಸ್ಥಳೀಯ ಲಯನ್ಸ್ ಕ್ಲಬ್, ಗಣ್ಯರಿಂದ ಹಣ ಪಡೆದು ಮಾಡಿಸಿದರು. ಇದರಿಂದ ಹೊಳೆಸಾಲು ಪ್ರದೇಶದಿಂದ ಲಾಂಚ್ ಮೂಲಕ ಬರುವ ರೋಗಿಗಳಿಗೆ ಪೇಟೆ ಸುತ್ತು ಹಾಕಿ ಆಸ್ಪತ್ರೆಗೆ ಬರುವ ಬದಲು ಬಂದರು ರಸ್ತೆಯಲ್ಲೇ ಮೆಟ್ಟಿಲು ಹತ್ತಿ ಆಸ್ಪತ್ರೆ ಸೇರಲು ಅನುಕೂಲವಾಗಿತ್ತು.
ಡಾ. ಭಾಸ್ಕರ್ ಅವರು ಎಷ್ಟರ ಮಟ್ಟಿಗೆ ಬಡವರಿಗೆ ಸಹಾಯ ಮಾಡಲು ಮುಂದಾಗುತ್ತಿದ್ದರು ಅನ್ನುವುದಕ್ಕೆ ಒಂದು ಉದಾಹರಣೆಯನ್ನು ಇಲ್ಲಿ ದಾಖಲಿಸಲೇಬೇಕು : ಒಮ್ಮೆ ಹೊಳೆಸಾಲಿನ ಓರ್ವ ಗರ್ಬಿಣಿ ಸರಕಾರಿ ಆಸ್ಪತ್ರೆಗೆ ತನ್ನ ಕುಟುಂಬದವರೊಂದಿಗೆ ಬರುತ್ತಾಳೆ. ಆ ಮಹಿಳೆಗೆ ಗರ್ಭ ನಿಲ್ಲುವುದು ತುಂಬ ತೊಂದರೆಯಾಗಿತ್ತು. ಪದೇ ಪದೇ ಲಾಂಚು, ದೋಣಿ ಮೂಲಕ ಶರಾವತಿ ನದಿಯುಲ್ಲಿ ಪ್ರಯಾಣ ಮಾಡುವುದು ಅಪಾಯ. ಮೂರು ತಿಂಗಳು ಆಸ್ಪತ್ರೆಯಲ್ಲೇ ಇರಲು ಸೂಚಿಸುತ್ತಾರೆ. ಆದರೆ ಕುಟುಂಬದವರಿಗೆ ನಿತ್ಯ ಊಟ ತಿಂಡಿಯನ್ನೂ ಹೊಟೆಲ್ ನಿಂದ ತರುವುದಕ್ಕೂ, ಅಥವಾ ನಿತ್ಯ ಲಾಂಚ್ ನಲ್ಲಿ ಮನೆಗೆ ಹೋಗಿ ತರುವುದು ಕಷ್ಟಸಾಧ್ಯದ ಸಂದರ್ಭವಿತ್ತು. ಬಡತನದ ಬವಣೆ ಗ್ರಹಿಸಿದ ಡಾ. ಬಾಸ್ಕರ್ ಸರಕಾರಿ ಆಸ್ಪತ್ರೆಯಲ್ಲೇ ಅಡಿಗೆ ಮಾಡಿ ಊಟ ಮಾಡಿ ಎಂದು ಪ್ರತ್ಯೇಕವಾಗಿ ಕಟ್ಟಿದ ಕೋಣೆಯನ್ನು ಆ ಗರ್ಭಿಣಿ ಕುಟುಂಬಕ್ಕೆ ಕೊಡಿಸಿದರು. ಎಷ್ಟರ ಮಟ್ಟಿಗೆ ಆ ಬಡಕುಟುಂಬಕ್ಕೆ ಅನುಕೂಲ ಕಲ್ಪಿಸಿದರು ಅಂದರೆ ಗರ್ಣಿಣಿ ಪೌಷ್ಠಿಕ ಆಹಾರ ಸಿಗಲಿ ಎಂದು ಮೀನು ಸಾರು ಮಾಡಿ ಊಟ ಮಾಡಲು ಅವಕಾಶ ಮಾಡಿಕೊಟ್ಟರು. ಆ ಮಹಿಳೆಯ ಜೊತೆಗಿದ್ದ ಇನ್ನೋರ್ವಳು ಬಂದರಿಗೆ ಹೋಗಿ ಮೀನು ತಂದು ಸ್ಪಚ್ಚ ಮಾಡಿ ಅಲ್ಲಿಯೇ ಸಾರು ಕುದಿಸಿ ಗರ್ಭಿಣಿಗೆ ನಿತ್ಯ ಅಡಿಗೆ ಮಾಡಿ ಬಡಿಸುತ್ತಿದ್ದಳು. ಕೆಲ ತಿಂಗಳುಗಳ ನಂತರ ಆ ಗರ್ಭಣಿ ನಿರಾಯಾಸವಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿ ಮನೆಗೆ ಮರಳಿದಳು.

ಕೊಡಗು, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಂಗನ ಕಾಯಿಲೆ (ಕ್ಯಾಸನೂರು ಅರಣ್ಯ ಕಾಯಿಲೆ-Kyasanur Forest Disease) ಕಳೆದ ಕೆಲವು ವರ್ಷಗಳ ಹಿಂದೆ ವಿಪರೀತವಾಗಿತ್ತು. ಸರಿಯಾದ ಚಿಕಿತ್ಸೆಯೂ ಇರಲಿಲ್ಲ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಮತ್ತು ಜೋಯಿಡಾದ ಅರಣ್ಯ ಪ್ರದೇಶದ ಅಂಚಿನಲ್ಲಿದ್ದ ಗ್ರಾಮಗಳಲ್ಲಿ ಮಂಗನ ಕಾಯಿಲೆ ಹರಡಿ ಜನತೆಯಲ್ಲಿ ಗಾಬರಿ ಹುಟ್ಟಿಸಿತ್ತು. ಆಗ ಸರಕಾರ ಇವರನ್ನೇ ಮಂಗನ ಕಾಯಿಲೆ ಚಿಕಿತ್ಸೆಗಾಗಿ ವಿಶಷವಾಗಿ ನೇಮಕ ಮಾಡಿತ್ತು. ಈ ತಾಲೂಕುಗಳಲ್ಲಿ ಬೇಸಿಗೆ ಸಂದರ್ಭ ಬಂತು ಅಂದರೆ ಮಂಗಗಳ ಸಾವು ಅಲ್ಲಲ್ಲಿ ಸಾಮಾನ್ಯವಾಗಿತ್ತು. ಹಾಗೆ ಮಂಗ ಸತ್ತ ಸುದ್ದಿ ಬಂದ ತಕ್ಷಣ ಡಾ. ಬಾಸ್ಕರ್ ಹೊನ್ನಾವರದ ಅರಣ್ಯ ಪ್ರದೇಶಕ್ಕೋ, ಜೋಯಿಡಾದ ಅರಣ್ಯ ಪ್ರದೇಶಕ್ಕೋ ನುಗ್ಗಬೇಕಾಗಿತ್ತು. ಅಲ್ಲಿ ಸತ್ತು ಬಿದ್ದ ಮಂಗನ ಹೊಟ್ಟೆ ಭಾಗ ಕತ್ತರಿಸಿ ಒಳಗಿದ್ದ ಕರುಳಿನ ತುಂಡು, ಯಕೃತ್ ಗಳೆಲ್ಲವನ್ನು ಒಂದು ಬಾಟಲಿಯಲ್ಲಿ ಹಾಕಿ ಶಿವಮೊಗ್ಗದ ಲ್ಯಾಬ್ ಗೆ ಕಳುಹಿಸಬೇಕಿತ್ತು. ಹಾಗೆ ಪೋಸ್ಟ್ ಮಾರ್ಟಮ್ ಮಾಡುವಾಗೆಲ್ಲ ಅದರ ಉಣ್ಣೆಗಳು, ರಕ್ತ ಹನಿಗಳು ಇವರ ಮೈಗೆ, ಬಟ್ಟೆಗೆ ತಾಗದಂತೆ ಎಚ್ಚರ ವಹಿಸಬೇಕಿತ್ತು. ಅಷ್ಟೇ ಅಲ್ಲ, ಮತ್ತೆ ಆಸ್ಪತ್ರೆಗೆ ಬಂದರೆ ಮಂಗನ ಕಾಯಿಲೆ ಪೀಡಿತ ರೋಗಿಗಳು ಇವರ ಬರುವಿಕೆಗೆ ಸರದಿಯಲ್ಲಿ ನಿಂತಿರುತ್ತಿದ್ದರು. ಎಲ್ಲರಿಗೂ ಅಷ್ಟೇ ಸಂಯಮದಿಂದ ಚಿಕಿತ್ಸೆ ನೀಡುತ್ತಿದ್ದ ಡಾ. ಟಿ.ಎನ್.ಬಾಸ್ಕರ್ ಎಂದೂ ಮಂಗನ ಕಾಯಿಲೆ ಡ್ಯೂಟಿಗೆ ಹೆದರಿದವರಲ್ಲ, ಜಿಗುಪ್ಸೆ ಪಟ್ಟು ಗೊಣಗಿದವರಲ್ಲ.
ಇಂಥ ಎಷ್ಟೋ ಕಥೆಗಳು ಭಾಸ್ಕರ್ ಡಾಕ್ಟ್ರ ಬದುಕಿನಲ್ಲಿ ಆಗಿ ಹೋಗಿವೆ. ಶರಣರ ಬದುಕನ್ನು ಮರಣದಲ್ಲಿ ನೋಡು ಎಂಬ ಮಾತನ್ನು ಡಾ. ಟಿ.ಎನ್.ಭಾಸ್ಕರ್ ಅವರ ಹೊರಟು ಹೋದ ಈ ವಿಷಾದದ ಸಮಯದಲ್ಲಿ ನೆನಪು ಮಾಡಿಕೊಳ್ಳಬೇಕು.
ಓಂ ಶಾಂತಿಃ 🌷🙏