ಭಾರತ ಸ್ವಾತಂತ್ರ್ಯ ಹೋರಾಟದ ಮೂಲಕ ಬ್ರಿಟಿಷರ ನಿದ್ದೆಗೆಡಿಸಿರುವ ಸಂದರ್ಭದಲ್ಲಿ ಅದೇ ಭಾರತದ ಒಂದು ಮೂಲೆಯ ಪುಟ್ಟ ತಾಲೂಕು ಸಿದ್ದಾಪುರದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ರೋಚಕತೆಯನಿಂದ ಕೂಡಿದೆ.
ಪತ್ರಕರ್ತ ನಾಗರಾಜ ಭಟ್ಟ ಕೆಕ್ಕಾರ ಅವರು ಈ ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರ ಕಥನಗಳನ್ನು ಅಧ್ಯಯನ ಮಾಡಿ ಸಂಗ್ರಹಿಸಿ ಪ್ರಕಟಿಸಿದ ‘ದಕ್ಷಿಣದ ಬಾರ್ಡೋಲಿ ಸಿದ್ದಾಪುರದ ಗಂಡುಗಲಿಗಳು’ ಕೃತಿಯನ್ನು ಲೋಕಕ್ಕೆ ಅರ್ಪಿಸಲು ತಮ್ಮ ಊರು ಸಿದ್ದಾಪುರದಲ್ಲಿಯೇ ಒಂದು ಪುಟ್ಟ ಕಾರ್ಯಕ್ರಮವನ್ನು ಸ್ಥಳೀಯ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಹಮ್ಮಿಕೊಂಡಿದ್ದರು.


ಈ ಮಹತ್ವದ ಕಾರ್ಯುಕ್ರಮದಲ್ಲಿ ಪುಸ್ತಕ ಬಿಡುಗಡೆಯ ಅಧ್ಯಕ್ಷತೆ ವಹಿಸಿದವರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿ. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡವರು ಸಿದ್ಧಾಪುರದ ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ, ಸಾಗರ ತಹಸೀಲ್ದರರು ಹಾಗೂ ಸ್ವಾತಂತ್ರ್ಯ ಹೋರಾಟಗಾರ ಹೊಸೂರು ರಾಮ ನಾಯ್ಕ-ಲಕ್ಷ್ಮಣ ನಾಯ್ಕ ಸಹೋದರರ ಕುಟುಂಬದವರಾದ ಚಂದ್ರಶೇಖರ ನಾಯ್ಕ, ಶಿಕ್ಷಣ ಪ್ರಸಾರಕ ಸಮಿತಿಯ ಉಪಾಧ್ಯಕ್ಷ ಶಶಿಭೂಷಣ ಹೆಗಡೆ ದೊಡ್ಮನೆ ಅವರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಮುಖ್ಯಘಟ್ಟದಲ್ಲಿ ‘ದಕ್ಷಿಣದ ಬಾರ್ಡೋಲಿ ಸಿದ್ದಾಪುರದ ಗಂಡುಗಲಿಗಳು’ ಕೃತಿಯನ್ನು ಲೋಕಕ್ಕೆ ಅರ್ಪಿಸಿದವರು ಸಾಹಿತಿ, ಸಂಶೋಧಕ ಡಾ. ಗಜಾನನ ಶರ್ಮ ಅವರು, ನಾವಿಂದು ಸಿದ್ದಾಪುರ ಪಟ್ಟಣದ ವೃತ್ತಗಳಿಗೆ, ಮೈದಾನಗಳಿಗೆ ಭಗತ್ ಸಿಂಗ್, ನೆಹರೂ ಹೆಸರು ಇಟ್ಟಿದ್ದನ್ನು ಗಮನಿಸಬಹುದು. ಯಾಕೆ ನಮ್ಮ ತಾಲೂಕಿನಲ್ಲಿಯೇ ಇರುವ ಹೋರಾಟಗಾರರ ಹೆಸರನ್ನು ವೃತ್ತಗಳಿಗೆ, ಮೈದಾನಗಳಿಗೆ ಇಡುವುದಿಲ್ಲ? ಬೇಡ್ಕಣಿ ಚೌಡಾ ನಾಯ್ಕರು, ರಾಮ- ಲಕ್ಷ್ಮಣ ನಾಯ್ಕರು, ಕನ್ನಳ್ಳಿ ಶಿವರಾಮ ಹೆಗಡೆರು, ಕಲ್ಲಾಳ ಭಟ್ಟರು ಇವರ ಹೆಸರನ್ನು ಯಾಕೆ ಸೂಚಿಸುತ್ತಿಲ್ಲ? ಇದರ ಬಗ್ಗೆ ನಾವು ಅವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದ ಮಾತು ಅರ್ಥಪೂರ್ಣವಾಗಿತ್ತು. ಹೊನ್ನಾವರ ತಾಲೂಕಿನ ಕೆಕ್ಕಾರಿನಿಂದ ಬಂದ ನಾಗರಾಜ ಭಟ್ಟ ಅವರು ಕುಟುಂಬದೊಟ್ಟಿಗೆ ಸಿದ್ದಾಪುರಕ್ಕೆ ಎಂದು ಇಲ್ಲಿಯವರೇ ಆಗಿ ಇದೇ ನೆಲದ ಇತಿಹಾಸವನ್ನು ಕೆದಕಿ ಕೆದಕಿ ಬರೆಯುತ್ತಿರುವುದು ಅಭಿಮಾನದ ಸಂಗತಿ ಎಂದು ಡಾ. ಶರ್ಮ ಅಭಿಪ್ರಾಯಪಟ್ಟರು.

ಲೇಖಕ ಕೆಕ್ಕಾರ ನಾಗರಾಜ ಭಟ್ಟ ಪ್ರಾಸ್ತಾವಿಕ ಮಾತನಾಡುತ್ತ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿದ್ದಾಪುರ ತಾಲೂಕು ಚಿಕ್ಕದಾದರೂ ಅತ್ಯಂತ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿದೆ. ಅವರ ರೋಚಕ ಚರಿತ್ರೆಯನ್ನು ಈ ಕೃತಿಯಲ್ಲಿ ಉಲ್ಲೇಖ ಮಾಡಲಾಗಿದೆ. ಕೃತಿ ರಚನೆಗೆ ಮಾಹಿತಿ ನೀಡಿದ ಸಹಕರಿಸಿದ ಎಲ್ಲ ದೇಶಾಭಿಮಾನದ ಮನಸ್ಸುಗಳಿಗೆ ಧನ್ಯವಾದ ತಿಳಿಸದರು.
ಸ್ವಾತಂತ್ರ್ಯ ಸೇನಾನಿಗಳ ಕುಟುಂಬದವರಿಗೆ ಗೌರವ ಪ್ರತಿ ನೀಡಲಾಯಿತು. ಪತ್ರಕರ್ತ ನಾಗರಾಜ ಮತ್ತಿಗಾರ ಕೃತಿ ಒಳಪುಟಗಳನ್ನು ತೆರೆದಿಟ್ಟರು. ಹಾರ್ಸಿಕಟ್ಟಾದ ಶ್ರೀನಿವಾಸ ಶಾನಭಾಗ ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿ ಕಟ್ಟಿಕೊಟ್ಟ ಕೆಕ್ಕಾರ ನಾಗರಾಜ ಭಟ್ಟ ಅವರನ್ನು ಸನ್ಮಾನಿಸಿದರು.