ಮಾತೇಕೆ ತೀರಾ ಅವಶ್ಯಕ?

ಮಾತು ಮನ ಕೆಡಿಸಿತು ತೂತು ಒಲೆ ಕೆಡಿಸಿತು’ ಎಂಬ ಮಾತಿನಂತೆ ಮಾತು ವ್ಯಕ್ತಿ ವ್ಯಕ್ತಿಗಳ ಮಧ್ಯೆ ಸ್ನೇಹವನ್ನು ಬೆಳೆಸುವಲ್ಲಿ, ಸಂಬಂಧವನ್ನು ಕೆಡಿಸುವಲ್ಲಿ ವ್ಯಕ್ತಿಗಳ ನಡುವೆ ಸರಸವನ್ನು ಸೃಷ್ಟಿಸುವಲ್ಲಿ ಹಾಗೂ ವಿರಸವನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಬಲ್ಲುದು.

ನಮ್ಮ ಮಾತಿನ ಶೈಲಿಯಿಂದ ಬಲು ದೊಡ್ಡದಾದ ಸಂಘಟನೆಯನ್ನು ಯಶಸ್ವಿಯಾಗಿ ನಿರ್ಮಿಸಿದರೆ, ಅಸಂಬದ್ಧ ಮಾತಿನಿಂದ ಅದೇ ಸಂಘಟನೆಯು ಕ್ಷಣಾರ್ಧದಲ್ಲಿ ವಿಘಟಿಸಬಹುದು. ನಮ್ಮ ಮಾತಿನ ಶೈಲಿಯು ನಮಗೇ ಖುಷಿ, ವೈಮನಸ್ಸು, ದುಃಖವನ್ನೂ ತರಬಹುದಾಗಿದ್ದು, ಮಾತಿನ ಶೈಲಿಯು ಸಮುದಾಯದ ಜನರನ್ನು ಆಕರ್ಷಿಸಿದರೆ ಇದೇ ಮಾತು ಜನರನ್ನು ದೂರವಿಸುವ ಸಾಧ್ಯತೆಯೂ ಇದೆ. ‘ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು’ ಎಂಬ ನಾಣ್ಣುಡಿಯಂತೆ ಮಾತನ್ನಾಡುವಾಗ

ಪ್ರತಿಯೊಬ್ಬರೂ ಎಚ್ಚರ ವಹಿಸಬೇಕಾಗಿದ್ದು, ಇಂದಿನ ದಿನಗಳಲ್ಲಿ ತೂಗಿ ಅಳೆದು ಆಡುವ ಮಾತಿಗಷ್ಟೇ ಹೆಚ್ಚಿನ ಪ್ರಾಶಸ್ಕೃ ಹಾಗೂ ಮನ್ನಣೆ, ಎಲ್ಲಕ್ಕಿಂತಲೂ ಮೊದಲಾಗಿ ನಮ್ಮ ನಾಲಿಗೆಯ ಮೇಲೆ ನಿಯಂತ್ರಣ ಸಾಧಿಸಬೇಕು ಆಮೇಲೆಯೇ ಯಶಸ್ಸು ಸಿಗುವುದೆಂದು ಹಿರಿಯರು ಹೇಳುತ್ತಾರೆ. ‘ಸೂಜಿಯಂತೆ ನೂಲು, ತಾಯಿಯಂತೆ ಮಗಳು’ ಎಂಬಂತ ಮಾತಿನಿಂದಲೇ ವ್ಯಕ್ತಿಯೊಬ್ಬನ ಮನಸ್ಸನ್ನು ಅರಿಯಬಹುದಾಗಿದ್ದು, ವ್ಯಕ್ತಿಯ ಮನಸ್ಸಿನೊಳಗಿರುವ ವಿಚಾರವೇ ಶಬ್ದರೂಪದಲ್ಲಿ ವ್ಯಕ್ತವಾಗುವುದು. ಅದೇ ರೀತಿ ಮನಸ್ಸಿನೊಳಗಿರುವ ಭಾವನೆಗಳು ಶಬ್ದ ರೂಪವನ್ನು ಪಡೆದು ಉಚ್ಚರಿಸಲ್ಪಟ್ಟಾಗ ಆ ಧ್ವನಿಯಿಂದ ಅಭಿಪ್ರಾಯವು ವ್ಯಕ್ತವಾಗುತ್ತದೆ, ಆ ಕ್ಷಣದಲ್ಲಿ ವ್ಯಕ್ತಿಗಳ ಮನಸ್ಸಿನಲ್ಲಿ ಉಂಟಾಗುವ ಹಲವು ರೀತಿಯ ಗೊಂದಲಗಳನ್ನು ಆ ವ್ಯಕ್ತಿಯ ಮಾತಿನಿಂದ, ಮುಖದ ಚಹರೆಯಿಂದ, ಕಣೋಟದಿಂದ ಅರಿಯಲು ಸುಲಭವಾಗಿ ಸಾಧ್ಯವಾಗುತ್ತದೆ.

ವ್ಯಕ್ತಿಯೊಂದಿಗೆ ಮಾತನಾಡುವಾಗ ಆತ ವಿರುಧ್ವನಿಯಲ್ಲಿ ಮಾತನಾಡುತ್ತಿದ್ದರೆ ವ್ಯಕ್ತಿ ಕೋಪಗೊಂಡಿದ್ದಾನೆ ಎಂದರ್ಥ, ಕಣ್ಣು ಕೆಂಪಾಗಿ ಕಣ್ಣನೋಟದಲ್ಲಿ ತೀಕ್ಷ್ಯತೆಯಿದ್ದರೆ ವ್ಯಕ್ತಿಯು ಅಸಮಾಧಾನ, ಕೋಪ, ಬೇಸರಗೊಂಡಿದ್ದಾನೆಂದರ್ಥ. ಏನೇ ವಿಚಾರವನ್ನು ತಿಳಿಸಿದ ತಕ್ಷಣದಲ್ಲಿ ಅದಕ್ಕೆ ತಕ್ಷಣ ಆಗುವುದಿಲ್ಲ ಎಂದು ಪ್ರತಿಕ್ರಿಯಿಸುವ ಪ್ರವೃತ್ತಿಯನ್ನು ಹೊಂದಿದ್ದಾತನನ್ನು ನಕಾರಾತ್ಮಕ ಚಿಂತನೆಯ ವ್ಯಕ್ತಿ ಎಂದು ತಿಳಿಯಬಹುದು. ಎದುರುಗಡೆ ಮಾತನಾಡುತ್ತಿರುವಾತ ವ್ಯಕ್ತಿಯನ್ನು ನೇರ ನೋಟದೊಂದಿಗೆ ನೋಡದಿದ್ದರೆ ಆತನಿಗೆ ಎದುರಿನ ವ್ಯಕ್ತಿಯೊಡನೆ ಮಾತನಾಡಲು ಇಷ್ಟವಿಲ್ಲವೆಂದು ತಿಳಿಯಬಹುದಾಗಿದೆ.

(ಮುಂದಿನ ವಾರ ಉತ್ತಮ ಮಾತುಗಾರರಾಗಬೇಂದರೆ ಯಾವ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ಗಮನಿಸೋಣ)

ಲೇಖಕರು :
ಆರ್.ಕೆ. ಬಾಲಚಂದ್ರ
ನಿವೃತ್ತ ಮುಖ್ಯ ವ್ಯವಸ್ಥಾಪಕ, ಯೂನಿಯನ್ ಬ್ಯಾಂಕ್,
ಬೆಂಗಳೂರು

Leave a Reply

Your email address will not be published. Required fields are marked *