ಪಠ್ಯದಾಚೆಯ ಅತ್ಯತ್ತಮ ಪುಸ್ತಕಗಳ ಓದು ವಿದ್ಯಾರ್ಥಿ ಮನಸ್ಸಿನ ಕಿಟಕಿ ಬಾಗಿಲು ತೆರೆಯುತ್ತದೆ : ಡಾ. ಎಂ.ಜಿ.ಹೆಗಡೆ
ಕುಮಟಾ: ಶಾಲಾ ಪಠ್ಯದಲ್ಲಿರುವ ಪಾಠಗಳನ್ನು ಓದಿ ಅದನ್ನು ಪರೀಕ್ಷೆಯಲ್ಲಿ `ಪುನರುತ್ಪತ್ತಿ’ ಮಾಡಿ, ಅಂದರೆ ಯಥಾವತ್ತಾಗಿ ಬರೆದು ಹೆಚ್ಚು ಅಂಕ ಗಳಿಸುವುದು ಶಿಕ್ಷಣದ ವ್ಯವಸ್ಥೆಯಾಗಿದೆ. ಈ ಪ್ರಕ್ರಿಯೆ ವಿದ್ಯಾರ್ಥಿಗಳನ್ನು ದಣಿಸಿ, ಹೈರಾಣಿಗಿಸಿ ಕುಗ್ಗಿಸಿಬಿಡುತ್ತದೆ.
ಓದಿದ್ದನ್ನು ಇತರರೊಡನೆ ಹಂಚಿಕೊಳ್ಳುವ ಮನಸ್ಥಿತಿ ವಿದ್ಯಾರ್ಥಿಗಳಲ್ಲಿ ಬೆಳೆಯುವುದಿಲ್ಲ. ಪಠ್ಯದಾಚೆಯ ಎಷ್ಟೋ ಅತ್ಯುತ್ತಮ ಪುಸ್ತಕಗಳ ಓದು ವಿದ್ಯಾರ್ಥಿಗಳ ಮನಸ್ಸಿನ ಕಿಟಕಿ, ಬಾಗಿಲುಗಳನ್ನು ತೆರೆದು ವಿಕಸನ ಪ್ರಕ್ರಿಯೆಗೆ ಅಣಿಗೊಳಿಸುತ್ತದೆ ಎಂದು ರಾಜ್ಯ ಶಾಲಾ ಪಠ್ಯಪುಸ್ತಕ ಸಮಿತಿಗಳ ಸಂಚಾಲಕ, ಹಿರಿಯ ವಿಮರ್ಶಕ ಡಾ. ಎಂ.ಜಿ. ಹೆಗಡೆ ಅಭಿಪ್ರಾಯಪಟ್ಟರು.
ಕುಮಟಾದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಸರಸ್ವತಿ ಪಿಯು ಕಾಲೇಜಿನಲ್ಲಿ ಸಪ್ನಾ ಬುಕ್ ಹೌಸ್ ನವರು ಏರ್ಪಡಿಸಿದ್ದ ಮೂರು ದಿವಸಗಳ ಪುಸ್ತಕ ಮೇಳ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ವಿದ್ಯಾರ್ಥಿಗಳ ಪಾಲಕರು, ಮುಂದೆ ತಮ್ಮ ಮಕ್ಕಳಿಗೆ ಉದ್ಯೋಗ ನೀಡುವ ಕಂಪನಿಗಳು ಸೂಚಿಸಿದ ಮಾದರಿಯಲ್ಲಿ ಇಂದು ವಿದ್ಯಾರ್ಥಿಗಳ ಓದು ನಡೆದಿದೆ. ಅದೇ ಪಠ್ಯದಾಚೆಯ ಪುಸ್ತಕಗಳ ಏಕಾಂತದ ಓದು, ವಿದ್ಯಾರ್ಥಿಗಳನ್ನು ಓದಿನ ಪ್ರಕ್ರಿಯೆಯಲ್ಲಿ ಹಿಡಿದಿಡುತ್ತದೆ ಎಂದು ಹೇಳಿದರು.
ಪಠ್ಯದಾಚಿನ ಓದಿನ ಖುಷಿಯನ್ನು ತಮ್ಮ ಶಿಕ್ಷಕರು, ಗೆಳೆಯರ ಜೊತೆ ಹಂಚಿಕೊಳ್ಳಲು ವಿದ್ಯಾರ್ಥಿಗಳು ಕಾತರರಾಗುವಂತೆ ಮಾಡುತ್ತದೆ. ಅಂದರೆ ಇದು ವಿದ್ಯಾರ್ಥಿಗಳು ಮುಂದೆ ಸಮಾಜದ ಬೇರೆ ಬೇರೆ ಸವಾಲು, ಬದುಕಿನ ಸಂಕಿರ್ಣತೆಯನ್ನು ಅರಿಯುವ, ಎದುರಿಸುವ ಸಾಮರ್ಥ್ಯ ಪಡೆಯುತ್ತಾ ಬೆಳೆಯಲು ಸಹಕಾರಿಯಾಗುತ್ತದೆ ಎಂದ ಡಾ. ಎಂ.ಜಿ.ಹೆಗಡೆ ಎಲ್ಲ ಶಾಲೆಗಳಲ್ಲಿ ವಿದ್ಯಾರ್ಥಿಗಳು ಪಠ್ಯೇತರ ಪುಸ್ತಕಗಳನ್ನು ಹೇಗೆ ಓದಬಹುದು ಎಂಬುದನ್ನು ವಿವರಿಸಿದರು.
ಕೊಂಕಣ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ವಿ.ಆರ್.ನಾಯಕ, ವಿಧಾತ್ರಿ ಆಕಾಡೆಮಿ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ, ಪ್ರಾಂಶುಪಾಲ ಕಿರಣ ಭಟ್ಟ, ರಮೇಶ ಪ್ರಭು, ಆರ್.ಎಚ್. ದೇಶಭಂಡಾರಿ, ಕನ್ನಡ ಶಿಕ್ಷಕ ಚಿದಾನಂದ ಭಂಡಾರಿ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.