ತಾಲೂಕು ಕಚೇರಿಗಳಲ್ಲಿ ನಿಲ್ಲದ ಭ್ರಷ್ಟಾಚಾರ

ಸಮಾಜದಲ್ಲಿ ಪ್ರತಿ ನಿತ್ಯ ಜರುಗುವ ಅನ್ಯಾಯ, ಅತ್ಯಾಚಾರ, ಅಕ್ರಮಗಳಿಗೆ ಮನ್ನಣೆ ಇಲ್ಲದಿದ್ದರೂ, ಸುಲಿಗೆಯ ಅಸ್ತ್ರವನ್ನೆ ಬಳಸಿ ಯಶಸ್ಸುಗಳಿಸುವ ತಂತ್ರಗಾರಿಕೆ, ದಬ್ಬಾಳಿಕೆ ಈ ರಾಜ್ಯದ ರಾಜಕೀಯ ಸೂತ್ರದ ಅನಿವಾರ್ಯ ಅಂಗವಾಗಿದೆ. ಭ್ರಷ್ಟಾಚಾರದ ಅಲೆ ಎಲ್ಲೆಡೆಯೂ ವ್ಯಾಪಕವಾಗಿ ಹರಡಿಕೊಂಡಿದೆ. ಅದನ್ನೊಂದು ಪ್ರತಿಷ್ಠೆಯ ಸಂಕೇತವಾಗಿ ಬೆಳೆಸಿಕೊಳ್ಳುವ ಅಯೋಗ್ಯರಿಗೂ ಇಲ್ಲಿ ಕೊರತೆಯಿಲ್ಲ. ಬಹುತೇಕ ಭ್ರಷ್ಟ ಅಧಿಕಾರಿಗಳನ್ನು ಕಂಡರೆ ಅಕ್ಷರಶಃ ನಿಜವೆನಿಸುತ್ತದೆ.

ಅಕ್ರಮ ಹಣಕಾಸಿಗೆ ರಹದಾರಿ ಮಾಡಿಕೊಂಡ ಜೋಯಿಡಾ ತಹಸೀಲ್ದಾರ ಕಚೇರಿಯೊಳಗೆ ಪ್ರಭಾರ ಅಧಿಕಾರಿಯೋರ್ವನ ಆಡಳಿತದಲ್ಲಿ ನಡೆದ ಒಂದು ಸ್ಯಾಂಪಲ್ ಇಲ್ಲಿದೆ ನೋಡಿ.

ಬಡ ಕೃಷಿಕನೊಬ್ಬ ತನ್ನ ಭೂ ವಿವಾದಕ್ಕೆ ಸಂಬಂಧಪಟ್ಟ ಕೆಲಸಕ್ಕಾಗಿ ಅಧಿಕಾರಿಯೊಬ್ಬರನ್ನು ಕಾಣಲು ತಾಲ್ಲೂಕಾ ಕಛೇರಿಯ ಬಾಗಿಲಿಗೆ ಬಂದಿದ್ದಾನೆ. ಸಾಕಷ್ಟು ಕಾದು ನಿಂತರೂ ಅಧಿಕಾರಿಯ ಬಳಿ ಹೋಗಲು ಸಂಬಂಧಿಸಿದ ಕೇಸ್ ವರ್ಕರ್ ಬಿಡುವುದಿಲ್ಲ. ಕಾದು, ಕಾದು ಸಮಯ ಮೀರುವ ಹೊತ್ತಿಗೆ ಮತ್ತೆ ಅಧಿಕಾರಿಯ ಭೇಟಿಗೆ ಅವಕಾಶ ಕೋರಿದ. ಆಗ ಕೇಸ್ ವರ್ಕರ್ ಕಣ್ಣುಕಿಸಿದು, ‘ಈಗ  ಸಾಹೇಬರಿಗೆ ಟೈಮಿಲ್ಲ. ಸಾಯಂಕಾಲ ಬಾ ನೋಡೋಣ’ ಎಂದ. ‘ಮಧ್ಯಾಹ್ನದ ಊಟದ ಬಿಡುವಿಗೆ ಇನ್ನೂ ಅರ್ಧ ಗಂಟೆಯಿದೆಯಲ್ಲ ಸರ್…’ ‘ನಮ್ಮ ಸಾಹೇಬರ ಭೇಟಿಯ ಸಮಯ ಮುಗಿದಿದೆ’. ಅಷ್ಟರಲ್ಲೇ ಪಕ್ಕದಲ್ಲಿದ್ದ  ಸಿಬ್ಬಂದಿಯೋರ್ವ ಹತ್ತಿರ ಬಂದು, ‘ಮಾತು ಸಾಕು, ನಿಮ್ಮ ಫೈಲು ಕ್ಲಿಯರ್ ಮಾಡಲು ಹತ್ತುಸಾವಿರ ಕೊಡಬೇಕು. ಈಗ ಐದುನೂರು ಕೊಡು.ಭೇಟಿ ಮಾಡಸ್ತೀವಿ’. ಕೇಸ್ ವರ್ಕರ್ ತಲೆ ಅಲ್ಲಾಡಿಸಿದ. ‘ಐದು ನಿಮಿಷದ ಭೇಟಿಗೆ ದುಡ್ಡು ಕೊಡಬೇಕೆ ? ನೀವು ಹೇಳಿದ ಸಮಯಕ್ಕೆ ಬಂದಿದ್ದೇನೆ’ ಎಂದ ಬಡ ಕೃಷಿಕ.

‘ನೋಡಿ ನಿಮ್ಮ ಕೆಲಸ ಆಗ ಬೇಕಿದ್ದರೆ ಕೊಡಿ.ಇಲ್ಲದಿದ್ದರೆ ನೀವು ಹೋಗಬಹುದು. ಸಾಹೇಬರು ಬಿಜಿ ಇದ್ದಾರೆ. ಹೋಗಿ,ಹೋಗಿ. ನಿಮ್ಮ ಕೇಸು  ತಹಸೀಲ್ದಾರ  ಕೋರ್ಟಗೆ  ಹಾಕುತ್ತೇವೆ. ವಕೀಲರನ್ನಿಟ್ಟು  ಬಗೆಹರಿಸಿಕೋ’ ಎಂದ ಆ ಸಿಬ್ಬಂದಿ. ಕೊಡಲು ಹಣವಿಲ್ಲದ್ದರಿಂದ ಬಡರೈತ ಅಧಿಕಾರಿಯನ್ನು ಭೇಟಿಯಾಗದೆ ಮನೆಗೆ ಮರಳಿದ. ಕೊನೆಗೂ ಕೆಲಸವಂತೂ ಆಗಲಿಲ್ಲ. ಇಂತಹ ಅದೆಷ್ಟೋ ಘಟನೆಗಳಿಂದ ಬಡವರು ಬಿಪಿಎಲ್ ಕಾರ್ಡ, ಗ್ಯಾರಂಟಿ ಯೋಜನೆಯ ಪ್ರಮಾಣ ಪತ್ರ ಮತ್ತಿತರ ಕೆಲಸಗಳಿಗಾಗಿ ಭ್ರಷ್ಟ ನೌಕರರಿಂದ ನೊಂದಿರುವ ಸಾಧ್ಯತೆಯೇ ಹೆಚ್ಚಿದೆ.

ವ್ಯವಸ್ಥೆ ಹೀಗಿರುವಾಗ ರಾಜ್ಯದ ಉಳಿದ ತಾಲ್ಲೂಕಾ ಕಛೇರಿಯ ಸ್ಥಿತಿಗತಿ ಇದಕ್ಕಿಂತ ಭಿನ್ನವಾಗಿಲ್ಲ. ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಸರ್ಕಾರ ಕಂಕಣಬದ್ದವಾದರೂ ಬಡವರ, ರೈತರ ಕೆಲಸ ಮಾಡಿ ಕೊಡಬೇಕಾದ ತಾಣದಲ್ಲಿಯೇ ನೌಕರರಾಗಿ ಭ್ರಷ್ಟಾಚಾರವೆಸಗುವ ಇಂಥವರಿಗೆ ಶಿಕ್ಷೆ ಇಲ್ಲವೇ.?

ಬಡವರ, ರೈತರ ಅಸಹಾಯಕತೆ ಕಾಣುತ್ತಲೇ ಪಾಠ ಕಲಿಯುವ ವಿವೇಚನಾಶಕ್ತಿಯಾದರೂ ಇಲ್ಲಿನ ಸರ್ಕಾರಿ ನೌಕರರಿಗೆ ಬೇಡವೇ?  ಬೇಲಿಯೇ ಎದ್ದು ಹೊಲ ಮೇಯ್ದರೆ ಸಾಮಾನ್ಯ  ಜನರ ಪಾಡೇನು ?  ಸರ್ಕಾರ, ಜಿಲ್ಲಾಡಳಿತ ಜನ ಸಂಪರ್ಕ ಸಭೆಯ ಮೂಲಕ ಬಡ ಜನರ ಸಮಸ್ಯೆಗಳಿಗೆ ಪರಿಹಾರ ನೀಡಲು ಯತ್ನಿಸಿದರೂ ಕಛೇರಿಯಲ್ಲೇ ಇರುವ ಇಂಥಹ  ಧನ ಪಿಶಾಚಿಗಳ ಕ್ರೌರ್ಯಕ್ಕೆ ಅದೇಷ್ಟು ಅಮಾಯಕ ಗ್ರಾಮೀಣ ಜನರು ಕೆಲಸ ಮಾಡಿಸಿಕೊಳ್ಳಲಾಗದೇ ನರಳುತ್ತಿರುವಾಗ ಉತ್ತರಿಸುವವರು ಯಾರು? ಇಂಥಹ  ವ್ಯವಸ್ಥೆಗೆ ಕೊನೆ ಯಾವಾಗ ? ಪಾರದರ್ಶಕ ಆಡಳಿತ ಬರಿ ಬೊಗಳೆಯೇ? ಸರಕಾರಿ ಕಚೇರಿಗಳ ಹೆಗ್ಗಣಗಳನ್ನು ಹಿಡಿದು ಹಾಕುವ ಪಂಜರಗಳೆಲ್ಲ ತುಕ್ಕು ಹಿಡಿದಿವೆ.

ಲೇಖಕರು :
ಎನ್. ಜಯಚಂದ್ರನ್,
ದಾಂಡೇಲಿ

Leave a Reply

Your email address will not be published. Required fields are marked *