ಯಕ್ಷಗಾನ ಮೂಲ ಮೂರನೇ ಶತಮಾನವೇ?

ಅಧಿಕೃತವಾಗಿ ನಾಲ್ಕು ನೂರರಿಂದ ಐದು ನೂರು ವರ್ಷಗಳ ಇತಿಹಾಸವುಳ್ಳ; ಎರಡುವರೆ ಸಾವಿರದಿಂದ ಐದು ಸಾವಿರ ಪ್ರಸಂಗ ಪಠ್ಯವುಳ್ಳ; ಐದರಿಂದ ಆರು ಲಕ್ಷ ಪದ್ಯಗಳಿರುವ; ಒಂದು ಸಾವಿರಕ್ಕೂಮಿಕ್ಕಿ ವೃತ್ತಿ ಕಲಾವಿದರನ್ನೂ ಮೂರುಸಾವಿರಕ್ಕೂ ಮಿಕ್ಕಿ ಹವ್ಯಾಸಿ ಕಲಾವಿದರನ್ನು ಹೊಂದಿರುವ; ಒಂದು ಸಾವಿರಕ್ಕೂ ಮಿಕ್ಕಿ ತಾಳಮದ್ದಲೆ
ಅರ್ಥಧಾರಿಗಳಿರುವ ; ನಲ್ವತ್ತು ವೃತ್ತಿ ಮೇಳಹಾಗೂ ನೂರಕ್ಕೂ ಹೆಚ್ಚು ಹವ್ಯಾಸಿ ತಂಡಗಳಿರುವ;

ವರುಷವೊಂದಕ್ಕೆ ಹೆಚ್ಚು ಕಡಿಮೆ ಹನ್ನೆರಡು ಸಾವಿರಪ್ರದರ್ಶನಗಳನ್ನು ಕೊಡುವ; ಆರು ಕೋಟಿ ವಹಿವಾಟು ನಡೆಸುವ ಯಕ್ಷಗಾನ ರಂಗಭೂಮಿಯ ಬಗ್ಗೆ ಮಾತನಾಡುವುದು ಅಂದರೆ ಕುರುಡರು ಆನೆಯನ್ನು ವರ್ಣಿಸಿದಂತೆ ಎನ್ನುವುದು ನನ್ನ ಪ್ರಾಮಾಣಿಕ ಅನಿಸಿಕೆ. ಯಕ್ಷಗಾನ ಕಲಾವಿದರ ಮನೆಯಲ್ಲಿ ಹುಟ್ಟಿದ್ದೇನೆ ಎನ್ನುವುದನ್ನು ಬಿಟ್ಟರೆ ಬೃಹದಾಕಾರವಾಗಿ ಬೆಳೆದು ನಿಂತ ಈ ರಂಗಭೂಮಿಯ ಬಗ್ಗೆ ಮಾತನಾಡುವುದಕ್ಕೆ ಬೇರಾವ  ಅರ್ಹತೆಯೂ ನನಗಿಲ್ಲ. ಹವ್ಯಾಸಕ್ಕೆ ಬೆರಳೆಣಿಕೆಯ ಪಾತ್ರಗಳನ್ನು ಮಾಡಿದ್ದೇನೆ ಅನ್ನುವುದನ್ನು ಬಿಟ್ಟರೆ ನಾನೇನೂ ಯಕ್ಷಗಾನ ಕಲಾವಿದನೂ ಅಲ್ಲ, ವಿಮರ್ಶಕನೂ ಅಲ್ಲ. ಯಕ್ಷಗಾನ ಸಂಶೋಧಕನೂ ಅಲ್ಲ. ಯಕ್ಷಗಾನ ಕಲಾವಿದರನ್ನೂ ಯಕ್ಷಗಾನ ರಂಗ ಭೂಮಿಯನ್ನು ಹತಿರದಿಂದ ಬಲ್ಲವನು ಎಂಬ ನೆಲೆಯಲ್ಲಿ ನನ್ನಸಾಮರ್ಥ್ಯದ
ಇತಿಮಿತಿಯಲ್ಲಿ, ನನ್ನ ಓದಿನ ಇತಿಮಿತಿಯಲ್ಲಿ, ನನ್ನ ಅನುಭವದ ಇತಿಮಿತಿಯಲ್ಲಿ ಕನ್ನಡಿಯಲ್ಲಿ ಆನೆಯನ್ನು ತೋರಿಸಿದ ಹಾಗೆ ಹೇಳುವ ಪ್ರಯತ್ನ ಮಾಡುತ್ತೇನೆ.


              ಯಕ್ಷಗಾನದ ಮೂಲವನ್ನು ಹುಡುಕುತ್ತಾ ಹುಡುಕುತ್ತಾ  ಹೊರಟರೆ ನಾವು ಹೋಗಿನಿಲ್ಲುವುದು ಕ್ರಿ ಪೂ.೩ ನೇ ಶತಮಾನಕ್ಕೆ.  ಕ್ರಿ.ಪೂ ೩ನೇ ಶತಮಾನದಲ್ಲಿ ಇದ್ದನು ಎನ್ನಲಾದ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಒಂದು ಮಾತು ಬರುತ್ತದೆ. ಅವನ ಕಾಲದಲ್ಲಿ  ರಂಗೋಪಜೀವಿಗಳೆಂಬ ಮನರಂಜನಾ ತಂಡಗಳು ಊರೂರು ಸುತ್ತಿ ಪ್ರದರ್ಶನಗಳನ್ನು ನೀಡುತ್ತಿದ್ದವು. ಈ ಪ್ರದರ್ಶನಗಳು ಹೊಲಗೆಲಸಗಳ ಕಾಲವನ್ನು ಬಿಟ್ಟು ನಡೆಯಬೇಕೆಂಬುದು
ಅವನ ಆಜ್ಞೆಯಾಗಿತ್ತು ಎನ್ನುವ ವಿಚಾರ ಬರುತ್ತದೆ. ನಮ್ಮಲ್ಲಿಯೂ ಸುಗ್ಗಿ ಕಾಲ ಮುಗಿದ ಮೇಲೆ ಯಕ್ಷಗಾನದ ಸುಗ್ಗಿ ಆರಂಭವಾಗುತ್ತದೆ. ಸುಗ್ಗಿ ಕಾಲ ಮುಗಿಯುತ್ತಿದ್ದ ಹಾಗೆ ಯಕ್ಷಗಾನದ ಚಟುವಟಿಕೆಗಳು ಗರಿಗೆದರ ತೊಡಗುತ್ತವೆ. ಈ ಹೇಳಿಕೆಯಿಂದ ಯಕ್ಷಗಾನ ಕ್ರಿ.ಪೂ.3ನೇ ಶತಮಾನದಲ್ಲಿಯೇ ಇತ್ತು ಎಂದು ಊಹಿಸುವುದಕ್ಕೆ ಅವಕಾಶವಿದೆ. ಕೌಟಿಲ್ಯನ ಅರ್ಥ ಶಾಸ್ತ್ರದಲ್ಲಿ ಹೇಳಿದ ಈ ವಿಚಾರ ಯಕ್ಷಗಾನದ ಕುರಿತಾಗಿಯೇ ಹೇಳಿದಂತಿದೆ.


ವಿದ್ವಾಂಸರು ಯಕ್ಷಗಾನವು 11 ರಿಂದ 16 ನೇ ಶತಮಾನದ ಮಧ್ಯ ಭಾಗದಲ್ಲಿ ಉದಯಿಸಿರಬಹುದೆಂದು ಅಭಿಪ್ರಾಯಪಡುತ್ತಾರೆ. ಯಕ್ಷಗಾನ ಕಾವ್ಯ ಸಂಪ್ರದಾಯ ದಕ್ಷಿಣ ಭಾರತದಲ್ಲಿ ಬಹಳ ಹಿಂದೆಯೇ ರೂಢಿಯಲ್ಲಿತ್ತೆಂಬುದಕ್ಕೆ ಆಧಾರ ಸಿಗುತ್ತದೆ. ಹಲಗೂರು ಕೃಷ್ಣಾಚಾರ್ಯರು ತಮ್ಮ ಉಪನ್ಯಾಸ ಮಾಲಿಕೆಯಲ್ಲಿ ಭಾರತೀಯ ಸಂಗೀತ ಬೆಳೆದು ಬಂದ ವಿವಿಧ ಹಂತಗಳನ್ನು ವಿವರಿಸಿದ್ದಾರೆ. ಯಕ್ಷಗೀತಗಳು ಎನ್ನುವ ಒಂದು ಪ್ರಕಾರದ ಕುರಿತು ಅವರು ಉಲ್ಲೇಖಿಸಿದ್ದಾರೆ. ಈ ಯಕ್ಷಗೀತಗಳು ನೃತ್ಯಕ್ಕಾಗಿಯೇ  ರಚಿಸಲ್ಪಟ್ಟವುಗಳು. ಒಂದು ತಾಳದಿಂದ ಇನ್ನೊಂದಕ್ಕೆ ಬದಲಾಯಿಸುವ ಸೌಲಭ್ಯ ಇದರ ರಚನೆಯಲ್ಲಿಯೇ ಇರುತ್ತದೆ. ನಮ್ಮ ಯಕ್ಷಗಾನದ ಪದಗಳು ‘ ಯಕ್ಷಗೀತ ‘ ಗಳ ವರ್ಗಕ್ಕೆ ಸೇರಿದ್ದು ಎಂದು ಖಂಡಿತವಾಗಿ ತರ್ಕಿಸಬಹುದಾಗಿದೆ. ಸುಮಾರು ಕ್ರಿ.ಶ ಹನ್ನೆರಡನೇ ಶತಮಾನದಲ್ಲಿಯೇ ಈ ಯಕ್ಷಗಾನ ಕಾವ್ಯ ಸಂಪ್ರದಾಯ ಇತ್ತೆಂದು ಅಭಿಪ್ರಾಯಪಡಲಾಗಿದೆ. 12 ನೆಯ
ಶತಮಾನದಲ್ಲಿ ಕರ್ನಾಟಕದಲ್ಲಿ ಶಿವಭಕ್ತರಿಂದ ಶಿವಶರಣರ ಮೇಳಗಳು ಮತ್ತು ವಿಷ್ಣು ಭಕ್ತರಿಂದ ದೇವದಾಸರ ಮೇಳಗಳು ಊರಿಂದೂರಿಗೆ ಸಂಚರಿಸಿ ಬಯಲಾಟ ಪ್ರದರ್ಶನ ಮಾಡುತ್ತಿದ್ದುದನ್ನು ಯಕ್ಷಗಾನ ಸಂಶೋಧಕ ಡಾ.ರಾಘವ ನಂಬಿಯಾರ್ ತಮ್ಮ ಸಂಶೋಧನಾ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.


        ಯಕ್ಷಗಾನದ ಬಗ್ಗೆ ಮೊದಲ ಲಿಖಿತ ಉಲ್ಲೇಖ ದೊರಕುವುದು  ಹದಿಮೂರನೇ ಶತಮಾನದಲ್ಲಿ.ಹದಿಮೂರನೇ ಶತಮಾನದಲ್ಲಿ ಉತ್ತರ ಕನ್ನಡದ ಸಿದ್ದಾಪುರ ತಾಲೂಕಿನ ಕಂಚಿಮನೆಯಲ್ಲಿ ದೊರೆತ  ‘ ಆದಿಪರ್ವ ‘ ಎಂಬ ತಾಡವಾಲೆ ಗ್ರಂಥ ಯಕ್ಷಗಾನದ ಮೊದಲ ಕೃತಿ ಎಂದು ಯಕ್ಷಗಾನ ಸಂಶೋಧಕ,ಪ್ರಸಂಗ ಕರ್ತ,ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರೂ ಆದ ಪ್ರೊ. ಎಂ.ಎ ಹೆಗಡೆಯವರು ಅಭಿಪ್ರಾಯ ಪಡುತ್ತಾರೆ. ಯಕ್ಷಗಾನ ಮೂಲದ ಕುರಿತು ಸಿಗುವ ಇನ್ನೊಂದು ಲಿಖಿತ ದಾಖಲೆ  ಕ್ರಿ.ಶ 1556 ರದ್ದು. ಬಳ್ಳಾರಿ ಜಿಲ್ಲೆಯ ಸೋಮಸಮುದ್ರದ
ಕುರಗೋಡು ಲಕ್ಷ್ಮಿನಾರಾಯಣ ದೇವಸ್ಥಾನದ ಶಿಲಾ ಶಾಸನದಲ್ಲಿ ಕೆತ್ತಲ್ಪಟ್ಟಿರುವುದು. ಇದರ ಒಂದು ಪ್ರತಿ ಮದ್ರಾಸು ವಿಶ್ವ ವಿದ್ಯಾಲಯದಲ್ಲಿ ಲಭ್ಯವಿದೆ. ಆಸಕ್ತರು ಗಮನಿಸಬಹುದು. ಆ ಶಾಸನದಲ್ಲಿ ತಾಳ ಮದ್ದಲೆ ಅರ್ಥಧಾರಿಗಳಿಗೆ ತಾಳಮದ್ದಲೆ ಕಾರ್ಯಕ್ರಮ ನಡೆಸಲು ಮತ್ತು ಪ್ರೇಕ್ಷಕರಿಗೆ ಕುಳಿತು ಕೇಳಲು ಅನುಕೂಲವಾಗುವ ಹಾಗೆ ಸಭಾಗ್ರಹವನ್ನು ನಿರ್ಮಿಸಲು ಭೂಮಿಯನ್ನು ಉಂಬಳಿ ಕೊಟ್ಟ ಬಗ್ಗೆ ವಿವರಣೆ ಇದೆ.

ಯಕ್ಷಗಾನದ ಕುರಿತಾಗಿ ಸಿಗುವ ಮತ್ತೊಂದು ಮಹತ್ವದ ದಾಖಲೆ ಕರಾವಳಿ ಕರ್ನಾಟಕದಲ್ಲಿ ಕ್ರಿ.ಶ 1564 ರಲ್ಲಿ ದೊರೆತಿರುವ ಅಜಪುರ ವಿಷ್ಣು ವಿರಚಿತ ‘ ‘ವಿರಾಟ ಪರ್ವ ‘ ಎನ್ನುವ ತಾಳೆಗರಿಯಲ್ಲಿರುವ ಕಾವ್ಯ ಕೃತಿ. ಕ್ರಿ.ಶ 1614 ರಲ್ಲಿ ತಂಜಾವರದ ಅರಸು ಸಂಗೀತ ಪ್ರೇಮಿ ರಘುನಾಥ ನಾಯಕನು ಬರೆದ ‘ ‘ರುಕ್ಮಿಣಿ ಕೃಷ್ಣ ವಿವಾಹ ‘ ಎಂಬ ಯಕ್ಷಗಾನ ಪ್ರಬಂಧ ಕೃತಿ ಮಹತ್ವಪೂರ್ಣ ಲಿಖಿತ ದಾಖಲೆಯಾಗಿದೆ. ಮತ್ತೊಂದು ಐತಿಹಾಸಿಕ ದಾಖಲೆ ಎಂದರೆ ಕ್ರಿ.ಶ 1621 ರಲ್ಲಿ  ದೊರಕಿದ ತಾಳೆಗರಿಯಲ್ಲಿರುವ ‘ ಸಭಾ ಲಕ್ಷಣ ‘ ಅಥವಾ ‘ ಪೂರ್ವರಂಗ ‘ ಗ್ರಂಥ. 16 ನೇ ಶತಮಾನದ ದ್ವಿತಿಯಾರ್ಧದಲ್ಲಿ ಸೋದೆಯ ಅರಸನಾಗಿದ್ದ ಸದಾಶಿವ ರಾಯನು ಕಕ್ಕಳ್ಳಿ ಮೇಳವನ್ನು  ಕರೆದುಕೊಂಡು ಹೋಗಿ ಬಿಜಾಪುರದ ಆದಿಲ್ ಷಾಹಿಯ ಆಸ್ಥಾನದಲ್ಲಿ ದಶಾವತಾರ ಆಟ ಆಡಿಸಿದ ಬಗ್ಗೆ ದಾಖಲೆಯನ್ನು ಇತಿಹಾಸ ತಜ್ಞ ಲಕ್ಮೀಶ್ ಹೆಗಡೆ ಸೋಂದಾ ತಮ್ಮಲೇಖನದಲ್ಲಿ ಪ್ರಸ್ತುತಪಡಿಸಿದ್ದಾರೆ. 

ನಮ್ಮಲ್ಲಿನ ನರ್ತನದ ಪೂರ್ವರಂಗವನ್ನು ಕಥಾತ್ಮಕವೆನಿಸಿದ ತಮ್ಮ ಪ್ರಬಂಧಗಳಿಗೆ ಜೋಡಿಸಿ ದಾಸಕೂಟವು ಇಂದಿನಯಕ್ಷಗಾನವನ್ನು ರೂಪಿಸಿರಬೇಕು ಎಂಬ ಹೇಳಿಕೆ ಕೂಡ ಒಪ್ಪುವಂಥದ್ದು. ವಿದ್ಯಾರಣ್ಯರ ಕಾಲದಲ್ಲಿಯೇ ಭಾಗವತ ವಾಙ್ಮಯವು ವಿಫುಲವಾಗಿ ಬೆಳೆದಿದ್ದು ಇದರ ಒಂದು ಶಾಖೆಯಾಗಿ ದಾಸ ಸಾಹಿತ್ಯ ಪ್ರಚಲಿತಗೊಂಡ ವಿಷಯ ಸರ್ವ ವಿಧಿತ. ಪುರಂಧರ ದಾಸರು ‘ ಅನಸೂಯ ಕಥೆ ‘ ಎಂಬ ಯಕ್ಷಗಾನ ಪ್ರಬಂಧವನ್ನು ರಚಿಸಿದ್ದರೆಂದು ಹೇಳಲಾ ಗುತ್ತಿದೆ. ಅವರ ಮಗ ಮಧ್ವಪತಿ ದಾಸರು ‘ ಅಭಿಮನ್ಯು ಕಾಳಗ ‘ ‘ ಇಂದ್ರಜಿತು ಕಾಳಗ ‘ ‘ಉದ್ದಾಳೀಕನ ಕಥೆ ”ಐರಾವತ ‘ ‘ ಕಂಸ ವಧೆ ‘ ಎಂಬ ಯಕ್ಷಗಾನ ಪ್ರಬಂಧಗಳನ್ನು ರಚಿಸಿದ್ದರೆಂಬ ಊಹೆಗಳೂ ಇವೆ.ಅಂದರೆ ಯಕ್ಷಗಾನ ಆಟವೆಂಬುದು ೧೫ ನೇ ಶತಮಾನದಲ್ಲಿ ರೂಪುಗೊಂಡು 17 ನೇ ಶತಮಾನದಲ್ಲಿ ಬೆಳೆದು 19 ನೇ ಶತಮಾನದಲ್ಲಿ ಪೂರ್ಣ ವಿಕಾಸ ಹೊಂದಿತು ಎಂದು ಡಾ.ಭೀಮರಾವ್ ಚಿಟಗುಪ್ಪಿ ಅಭಿಪ್ರಾಯಪಟ್ಟಿದ್ದಾರೆ. ಡಾ.ಸುನಿತಾ ಶೆಟ್ಟಿಯವರ ಅಭಿಪ್ರಾಯದಲ್ಲಿ ಕರ್ನಾಟಕದಲ್ಲಿ ಕೆಳದಿಯ ಅರಸರು ಮತ್ತು ಮೈಸೂರು ಅರಸರು ಈ ಕಲೆಯನ್ನು ಪೋಷಿಸಿದರು. ಕಂಠೀರವ ನರಸರಾಜ ಒಡೆಯರು (1704 -1714) ಬೇರೆ ಬೇರೆ ಭಾಷೆಗಳಲ್ಲಿ 14 ಪ್ರಸಂಗಗಳನ್ನು ರಚಿಸಿದ್ದಾರೆ. ಅವುಗಳಲ್ಲಿ 12 ಪ್ರಸಂಗಗಳು ಕನ್ನಡ ಭಾಷೆಯಲ್ಲಿವೆ.ಮುಮ್ಮಡಿ ಕೃಷ್ಣರಾಜ ಒಡೆಯರು (1794-1868) ‘ಸೌಗಂಧಿಕಾ ಪರಿಣಯ’ ವನ್ನೊಳಗೊಂಡು ಅನೇಕ ಪ್ರಸಂಗಗಳನ್ನು ರಚಿಸಿದ್ದಾರೆ.

(ಮುಂದಿನ ಸಂಚಿಕೆಗೆ…)

One thought on “ಯಕ್ಷಗಾನ ಮೂಲ ಮೂರನೇ ಶತಮಾನವೇ?

  1. ಯಕ್ಷಗಾನ ಉಗಮ, ಮೂಲದ ಕುರಿತ ಉತ್ತಮ ಲೇಖನವಿದು. ಆದರೆ ಇನ್ನಷ್ಟು ವಿವರಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಸವಿವರ ಲೇಖನವನ್ನು ಬರೆಯಬಹುದೇ ಗಣಪತಿ ಕೊಂಡದಕುಳಿಯವರೇ?

Leave a Reply

Your email address will not be published. Required fields are marked *