ಅದು 2012ರ ಅಕ್ಟೋಬರ್ ದಿನವೊಂದರ ಮುಂಜಾನೆ. ಶಾಲೆಗೆ ನಗುತ್ತ ಹೊರಟಿದ್ದ ಹಸುಳೆಯೊಂದರ ಮೇಲೆ ಭಯೋತ್ಪಾದಕರು ಗುಂಡಿಟ್ಟ ದಿನ. ಇಡೀ ಜಗತ್ತು ಸ್ತಬ್ಧವಾಗಿತ್ತು. ಹತ್ತಾರು ದಿನಗಳ ಕಾಲ ಆಸ್ಪತ್ರೆಯ ಐಸಿಯು ಒಳಗೆ ಪ್ರಜ್ಞೆ ಇಲ್ಲದೇ ಬದುಕಿದ್ದ ಆ ಹೆಣ್ಣು ಮಗು ಹಂತಕರ ಗುಂಡುಗಳಿಗೆ ಸೆಡ್ಡು ಹೊಡೆದು ಕಣ್ಣರಳಿಸಿದಾಗ ಜಗದ ಜನ ಹೂವಾಗಿ ಸಂಭ್ರಮಿಸಿದರು. ಆ ಹೂವಿನ ಹೆಸರು ಮಲಾಲ ಯೂಸಫ್ ಝಾಯಿ (Malala Yousafzai). ಘಟನೆ ನಡೆದದ್ದು ಪಕ್ಕದ ಪಾಕಿಸ್ತಾನದಲ್ಲಿ.
ಅದು 2016ರ ಜನವರಿ. ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆದು ಸಮಾಜಮುಖಿ ಸುಂದರ ಬದುಕೊಂದರ ಕನಸು ಕಟ್ಟಿದ್ದ ಹರೆಯದ ತರುಣನೊಬ್ಬ ತನ್ನ ಅಪರಿಮಿತ ಪ್ರತಿಭೆಯ ಕಾರಣಕ್ಕೆ ವಿ.ವಿ.ಆಡಳಿತದ ನಿರಂತರ ಕಿರುಕುಳಕ್ಕೊಳಗಾಗಿ ಹತಾಶೆಯಿಂದ ಪ್ರಾಣ ಚೆಲ್ಲಿದ್ದ. ಅರಳುವ ಭರವಸೆ ಹುಟ್ಟಿಸಿದ್ದ ಸುಮವೊಂದು ಅದು ಹುಟ್ಟಿದ ಜಾತಿಯ ಕಾರಣಕ್ಕಾಗಿ ಮಣ್ಣಾಗಿ ಹೋಗಿತ್ತು. ಆ ಕಾಡು ಕುಸುಮದ ಹೆಸರು ರೋಹಿತ್ ವೇಮುಲ (Rihit Vemula – Dalit social activist and research scholar). ಘಟನೆ ನಡೆದದ್ದು ನಮ್ಮದೇ ಭಾರತದಲ್ಲಿ.

ಮೇಲಿನ ಎರಡು ಘಟನೆಗಳು ವಿಶದಪಡಿಸುವ ಆತ್ಯಂತಿಕ ಸತ್ಯವಾದರೂ ಏನು?
ಮಹಿಳೆ ಮತ್ತು ಅಸ್ಪೃಶ್ಯನಿಗೆ ಶಿಕ್ಷಣ ನಿಷಿದ್ಧ. ಧರ್ಮ ಯಾವುದಾದರೂ ಮೂಲಭೂತವಾದ ಒಂದೇ…! ಭಾರತದ ಸಂವಿಧಾನ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಪ್ರತಿಪಾದಿಸಿದ್ದರೂ, ವರ್ತಮಾನ ಸಂವಿಧಾನದ ಆಶಯಕ್ಕೆ ಪೂರಕವಾಗಿ ವರ್ತಿಸುತ್ತಿಲ್ಲ ಎಂಬುದು ಸಾಮಾನ್ಯರ ಕಣ್ಣಿಗೂ ಢಾಳಾಗಿಯೇ ಗೋಚರಿಸುತ್ತದೆ.

ಇದು ಇಂದಿನ ಕಥೆಯಾದರೆ, ಬನ್ನಿ ಸ್ವಲ್ಪ ಹಿಂದಕ್ಕೆ ಹೋಗೋಣ. ಅದು ಎಲ್ಲ ಅಡೆತಡೆಗಳ ನಡುವೆಯೂ ಮಹಿಳೆ ಮತ್ತು ನಿಮ್ನ ವರ್ಗಗಳು 21ನೇ ಶತಮಾನದಲ್ಲಿ ಶಿಕ್ಷಣದ ಮುಖ್ಯವಾಹಿನಿಯಲ್ಲಿರಬೇಕಾದರೆ, ಅದಕ್ಕಾಗಿ ತ್ಯಾಗಮಯಿ ದಂಪತಿಯಾದ ಮಹಾತ್ಮ ಜೋತಿಬಾ ಫುಲೆ ಮತ್ತು ಮಾತೆ ಸಾವಿತ್ರಿಬಾಯಿ ಫುಲೆಯವರ ( Jyotiba Phule and Savitribai Phule) ದಣಿವರಿಯದ ಹೋರಾಟಗಾಥೆ ಹಾಗೂ ಈ ದಂಪತಿಗೆ ಬೆನ್ನೆಲುಬಾಗಿ ನಿಂತ ಫಾತಿಮಾ ಶೇಖ್ (Fatima SheiKh) ಅವರ ಧೀರಗಾಥೆ ಅರಿತಿರಬೇಕು.
ಮಹಾರಾಷ್ಟ್ರ ಸತಾರಾ ಜಿಲ್ಲೆಯ ‘ನೈಗಾಂಸ್’ ನಲ್ಲಿ 1831 ಜನವರಿ 3 ರಂದು ಜನಿಸಿದ ಸಾವಿತ್ರಿಬಾಯಿ ಫುಲೆ 8 ವರ್ಷದವರಿದ್ದಾಗ ವಿವಾಹವಾದದ್ದು 13ರ ಹರೆಯದ ಜ್ಯೋತಿಭಾರನ್ನು. ಪತಿಯ ನಿರಂತರ ಪ್ರೋತ್ಸಾಹದ ಕಾರಣಕ್ಕೆ ಶಿಕ್ಷಕಿಯಾಗುವ ತರಬೇತಿ ಪಡೆದ ಸಾವಿತ್ರಿಬಾಯಿ, ನಂತರದಲ್ಲಿ ಜ್ಯೋತಿಬಾರ ಕನಸುಗಳ ಹೆಗಲೆಣೆಯಾಗಿ ದುಡಿಯತೊಡಗಿದರು.
‘ಹೆಣ್ಣೊಂದು ಕಲಿತರೆ; ಶಾಲೆಯೊಂದು ತೆರೆದಂತೆ’ ಎಂಬುದು ಕ್ಲೀಷೆಯಾಗಿ ಬದಲಾಗಿದ್ದರೂ, ಅರ್ಥದ ಮಹತ್ವ ಮಂಕಾಗಿಲ್ಲ. ಹೆಣ್ಣುಮಕ್ಕಳು, ಬಾಲವಿಧವೆಯರು, ಅವಿವಾಹಿತ ಗರ್ಭಿಣಿಯರು ಮೊದಲಾದ ಅಶಕ್ತರ ಬದುಕು ಸಾವಿತ್ರಿಬಾಯಿಯವರ ಕಣ್ಣಿಗೆ ನಿತ್ಯವೂ ಸಪುರುಷ ಶ್ರೇಷ್ಠತೆಯ ವ್ಯಸನದ ಕರಾಳತೆಯನ್ನುತೆರೆದಿಡುತ್ತಿತ್ತು.
ಸಮಾಜದ ದ್ವಿತೀಯ ದರ್ಜೆಯ ಜೀವವಾಗಿ ನರಳುತ್ತಿದ್ದ ಹೆಣ್ಣುಮಕ್ಕಳ ಬದುಕು ಹಸನಾಗಲು ಇರುವ ಏಕೈಕ ಮಾರ್ಗ ಶಿಕ್ಷಣವೆಂಬುದನ್ನು ಅರಿತಿದ್ದ ಸಾವಿತ್ರಿಬಾಯಿ ತಡಮಾಡಲಿಲ್ಲ, ತಿರುಗಿನೋಡಲಿಲ್ಲ, ಎದೆಗುಂದಲಿಲ್ಲ.

1848ರಲ್ಲಿ ಸಂಗಾತಿ ಜ್ಯೋತಿಬಾ ಅವರೊಂದಿಗೆ ಸೇರಿ ತಳ ಸಮುದಾಯದ ಹೆಣ್ಣು ಮಕ್ಕಳಿಗಾಗಿ ಪುಣೆಯಲ್ಲಿ ಶಾಲೆಯನ್ನು ಆರಂಭಿಸಿಯೇ ಬಿಟ್ಟರು. ದಮನಿತ ಮಹಿಳೆಯರ ಬದುಕಿನ ಬರವಸೆಯಾಗಿ ಶಾಲೆ ತೆರೆದದ್ದಕ್ಕೆ ಫುಲೆ ದಂಪತಿಗೆ ದೊರಕಿದ್ದು ಕುಟುಂಬ ಮತ್ತು ಸಮುದಾಯಗಳ ಬಹಿಷ್ಕಾರದ ಪುರಸ್ಕಾರ. ಆ ಸ್ವಾಭಿಮಾನಿ ದಂಪತಿಗೆ ಆಪತ್ಕಾಲದ ಬಂಧುವಾಗಿ ದೊರಕಿದ್ದು ಫಾತಿಮಾ ಶೇಖ್. ತನ್ನ ಮನೆಯನ್ನೇ ಶಾಲೆಗಾಗಿ ಬಿಟ್ಟುಕೊಟ್ಟು ಶಿಕ್ಷಕಿಯಾಗಿ ಸಾವಿತ್ರಿಬಾಯಿಯವರ ಜೊತೆ ನಿಂತ ಅಪ್ಪಟ ಮಾನವತಾವಾದಿ ತಾಯಿ. ಈ ತಾಯಿ ಜನಿಸಿದ್ದು 1831 ಜನವರಿ 9 ರಂದು.

ಹೀಗೆ ಮಹಿಳಾ ಶಿಕ್ಷಣವನ್ನೇ ಧ್ಯೇಯವಾಗಿಸಿಕೊಂಡ ತಾಯಂದಿರಿಬ್ಬರು ಮುಂದೆ ನಡೆಸಿದ್ದು ಹಲವು ಹೋರಾಟಗಳು. ಬಾಲ್ಯವಿವಾಹ, ಸತಿ ಸಹಗಮನ, ವಿಧವೆ ಕೇಶಮುಂಡನ, ಮೊದಲಾದ ಸ್ತ್ರೀ ವಿರೋಧಿ ಸಾಮಾಜಿಕ ಅನಿಷ್ಟಗಳ ವಿರುದ್ಧ ಸಮರವನ್ನೇ ಸಾರಿದ ಸಾವಿತ್ರಿಬಾಯಿ ಕೇವಲ 4 ವರ್ಷಗಳೊಳಗಾಗಿ ಜ್ಯೋತಿಬಾ ಅವರೊಡಗೂಡಿ 18 ಶಾಲೆಗಳನ್ನು ತೆರೆಯುತ್ತಾರೆ. ತನ್ಮೂಲಕ ಭಾರತದ ಸಾಮುದಾಯಿಕ ಚರಿತ್ರೆಯಲ್ಲಿ ಮಹಿಳಾವಾದದ ಪ್ರಥಮ ಐಕಾನ್ ಆಗಿ ದಾಖಲಾಗುತ್ತಾರೆ.
ಮೊದಲಿಗೆ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಹೊರಟು ನಿಂತ ಸಾವಿತ್ರಿಬಾಯಿಯವರ ಮೇಲೆ ಸಗಣಿ-ಗಂಜಲ ಸುರಿದಿದ್ದ ಸೋಕಾಲ್ಡ್ ಜಾತಿವಂತರ ಮನೆಯ ಹೆಣ್ಣುಮಕ್ಕಳು ನಂತರದಲ್ಲಿ ಫುಲೆ ಶಾಲೆಗಳ ವಿದ್ಯಾರ್ಥಿನಿಯರಾದದ್ದು ವಿಪರ್ಯಾಸವಾದರೂ ಸೋಜಿಗದ ಸತ್ಯ.
ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲದೇ ಸೂಕ್ಷ್ಮ ಸಂವೇದನೆಯ ಕವಯತ್ರಿಯಾಗಿಯೂ ಗುರುತಿಸಿಕೊಂಡಿದ್ದ ಸಾವಿತ್ರಿಬಾಯಿ, ‘ಕಾವ್ಯಪೂಲೆ’ (ಕವನ ಸಂಕಲನ-ಕಾವ್ಯ ಅರಳಿದೆ), ‘ಭವನಕಾಶಿ ಸುಬೋಧ ರತ್ನಾಕರ್’ (ಆತ್ಮಕತೆ- ಅಪ್ಪಟ ಮುತ್ತುಗಳ ಸಾಗರ), ‘ಕರ್ಜೆ’(ಪ್ರಬಂಧ-ಸಾಲ) ಎಂಬ ಮಹತ್ವದ ಕೃತಿಗಳನ್ನೂ ಸಾಹಿತ್ಯಕ್ಕೆ ಲೋಕಕ್ಕೆ ಕೊಡುಗೆಯಾಗಿ ಅರ್ಪಿಸಿದ್ದಾರೆ. ಜೊತೆಗೆ ಜ್ಯೋತಿಬಾ ಫುಲೆ ಅವರ ಭಾಷಣಗಳ ಸಂಪಾದಿತ ಕೃತಿಯನ್ನು ಪ್ರಕಟಿಸಿದ್ದಾರೆ.

ಹೀಗೆ ಬದುಕಿನುದ್ದಕ್ಕೂ ಸಂಗಾತಿ ಜ್ಯೋತಿಬಾ ಕನಸುಗಳೊಂದಿಗೆ ಹೆಜ್ಜೆ ಹಾಕಿದ್ದ, ಬ್ರಾಹ್ಮಣ ವಿಧವೆಯೊಬ್ಬಳ ಪುತ್ರನನ್ನು ದತ್ತುವಾಗಿ ಸ್ವೀಕರಿಸಿ ಸಲಹಿದ್ದ, ಅಶಕ್ತ ಮಹಿಳೆಯರಿಗಾಗಿ ಅಬಲಾಶ್ರಮ ತೆರೆದಿದ್ದ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ 1897ರಲ್ಲಿ ಪ್ಲೇಗ್ ಪೀಡಿತರ ಆರೈಕೆಯಲ್ಲಿ ತೊಡಗಿದ್ದಾಗ, ಸ್ವತಃ ಸೋಂಕಿಗೆ ಬಲಿಯಾಗಿ ನಿಧನರಾದದ್ದು, ಆ ಮಹಾತಾಯಿಯ ದಣಿವರಿಯದ ಮಾನವ ಸೇವೆಯ ದ್ಯೋತಕವೆಂದರೆ ತಪ್ಪಾಗಲಾರದು.

ಮುಖೇಶ್ ಮಾನಸ್ ಅವರ ಅಭಿಪ್ರಾಯದೊಂದಿಗೆ ಟಿಪ್ಪಣಿಯನ್ನಿಲ್ಲಿಗೆ ಕೊನೆಗೊಳಿಸುತ್ತೇನೆ. ‘ಶಿಕ್ಷಣ ಕ್ಷೇತ್ರಕ್ಕೆ ಯಾವ ಬಗೆಯ ಕಾಣಿಕೆಯನ್ನೂ ನೀಡದಂತಹ ವಿದ್ವಾಂಸರ ಹೆಸರಿನಲ್ಲಿ ಇಂದು ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಆದರೆ ದಮನಿತ ಸಮುದಾಯಗಳ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆಯನ್ನು ಸ್ಥಾಪಿಸಿ, ಕ್ರಾಂತಿಕಾರ ಚಲುವಳಿ ಮಾಡಿದ ಸಾವಿತ್ರಿಬಾಯಿ ಫುಲೆ ಅವರ ಬಗ್ಗೆ ಎಷ್ಟು ಜನರಿಗೆ ಗೊತ್ತಿದೆ?’
ನಮ್ಮ ಆದರ್ಶಗಳನ್ನು ಸರಿಯಾಗಿ ಗುರುತಿಸಿಕೊಳ್ಳೋಣ. ಆ ಆದರ್ಶಗಳ ಬೆಳಕಿನಲ್ಲಿ ಸದಾ ಕಾಲ ನಡೆಯೋಣ.

ಲೇಖಕರು :
ಪ್ರೊ. ಸಂದೇಶ ಎಚ್ ರತ್ನಪುರಿ
ಮೈಸೂರು
ಇಂಗ್ಲಿಷ್ ಪ್ರಾದ್ಯಾಪಕರು