ಭಾರತೀಯ ಪ್ರಜ್ಞೆಗೆ ವಿಮರ್ಶೆಯ ಹಂಗು ಬೇಕಿಲ್ಲ!

ರಾಮಾಯಣ-ಮಹಾಭಾರತ ಮಹಾಕಾವ್ಯಗಳು ಈ ದೇಶದ ಮೂಲಧಾತುಗಳು. ಇವುಗಳ ಸಾಮಾನ್ಯಜ್ಞಾನವೂ ಇಲ್ಲದ ಭಾರತೀಯನಿಲ್ಲ. ಇವುಗಳಲ್ಲಿರುವ ಜೀವನಮೌಲ್ಯಗಳೇ ಭಾರತೀಯರ ನಿತ್ಯಬದುಕಿನಲ್ಲೂ ಹಾಸುಹೊಕ್ಕಾಗಿವೆ. ಮನುಷ್ಯ ಬದುಕಿಗೆ ಒದಗಬೇಕಾದ ನೈತಿಕ ಮೌಲ್ಯಗಳು ಇವುಗಳಲ್ಲಿವೆ.

ರಾಮಾಯಣ ಆದಿಕಾವ್ಯವಾದರೆ ವಾಲ್ಮೀಕಿ ಆದ್ಯಕವಿಯೂ ಆಡ್ಯಕವಿಯೂ ಆದ ಮೇರುಕವಿ. ವಾಲ್ಮೀಕಿ ರಾಮಾಯಣವನ್ನೇ ಆಧರಿಸಿ ನೂರಾರು ವಿಮರ್ಶೆಗಳು ದೇಶಭಾಷೆಯಲ್ಲಿವೆ. ಇದು ವಾಲ್ಮೀಕಿಯ ಪ್ರತಿಭಾ ಸಾಮರ್ಥ್ಯವನ್ನು ಹೇಳುತ್ತದೆ. ಇವುಗಳ ಸಾರ್ವಕಾಲಿಕ ಮೌಲ್ಯಗಳು ಜಾಗತೀಕರಣಕ್ಕೆ ಮುಖಾಮುಖಿಯಾಗಿ ಬದುಕುವ ಈ ಕಾಲಘಟ್ಟದಲ್ಲೂ ಮಹಾಕಾವ್ಯಗಳು ಮಾರಣಾಂತಿಕ ಆಕ್ರಮಣವನ್ನೆದುರಿಸಿ ಉಳಿದುಕೊಂಡಿವೆ. ಜಗತ್ತಿನ ಯಾವ ಮಹಾಕಾವ್ಯಗಳಿಗೂ ಈ ಶಕ್ತಿ ಸಾಮರ್ಥ್ಯವಿಲ್ಲ.

ಸಂಸ್ಕೃತದ ಅಭಿಜಾತವೆಂಬ ಕಾಳಿದಾಸ, ಭವಭೂತಿ, ಭಾಸ, ಹರ್ಷ, ಬಾಣಭಟ್ಟ, ಶೂದ್ರಕರೇ ಮುಂತಾದವರ ಕಾವ್ಯ ನಾಟಕಗಳೂ ವಿಮರ್ಶೆಗೊಳಪಟ್ಟು ಅವುಗಳ ಶ್ರೇಷ್ಠಾಂಶಗಳು ಬದುಕಿನ ಗತಿಬಿಂಬಕ್ಕಿಳಿದಿವೆ. ವಿಮರ್ಶೆಯೆಂಬುದು ಪಾಶ್ಚಾತ್ಯರ ಮಾರ್ಗವೇ ಹೊರತು ಭಾರತೀಯ ಮೂಲದ್ದಲ್ಲ. Plot Construction ಮತ್ತು Characterisation ಎಂಬೆರಡು ಕೋನಗಳನ್ನಿಟ್ಟು ಗ್ರೀಕ್ ನಾಟಕಗಳನ್ನು ವಿಮರ್ಶಿಸಿ ಪೋಷಿಸಿದವ ಅರಿಸ್ಟಾಟಲ್. ಭಾರತೀಯ ಕೃತಿಗಳಿಗೆ ವಿಮರ್ಶೆಯ ಹಂಗಿರಲಿಲ್ಲ. ಎಲ್ಲವೂ ಅಭಿಜಾತವೇ ಆಗಿದ್ದವು. ಸುಸೂತ್ರದೊಂದಿಗೆ ಸುಖಾಂತ್ಯವಿರುವ ಭಾರತೀಯ ಕಾವ್ಯಗಳಲ್ಲಿ ದುರಂತದ ಪ್ರಜ್ಞೆಯಿಲ್ಲ. ಪಾಶ್ಚಾತ್ಯರ ಕಾವ್ಯಗಳಲ್ಲಿ ದುರಂತವೂ ಮೌಲ್ಯವಾಗುತ್ತವೆ. ಪತಿಯನ್ನು ಬಿಟ್ಟು ಇನ್ನೊಬ್ಬನನ್ನು ಕೂಡುವುದು ಅವರಿಗೆ ಮೌಲ್ಯವಾಗುತ್ತದೆ. ಪತಿಯೇ ದೇವರೆನ್ನುವ ಮೌಲ್ಯಗಳಿಗೆ ಯಾವ ವಿಮರ್ಶೆಯ ಹಂಗಿನ ಅಗತ್ಯವಿಲ್ಲ, ಅಗತ್ಯವೂ ಇರುವುದಿಲ್ಲ. ಸಾಹಿತ್ಯದ ನೆಲೆಯಲ್ಲೂ ಪಾಶ್ಚಾತ್ಯರ ಬಹುಪಾಲು ಕೃತಿಗಳು ಬದುಕಿನ ಗತಿಗೆ ಅನುಸಂಧಿಸಲಾರವು. ಬದುಕಿನಲ್ಲಿ ಋಜುಮಾರ್ಗವನ್ನು ಕಂಡುಕೊಳ್ಳಲು ಇವು ಪ್ರೇರಣೆ ನೀಡಲಾರವು. ಆದರೆ, ನಮ್ಮ ಪುರಾಣೇತಿಹಾಸಗಳು, ಭಾರತೀಯ ಪ್ರಜ್ಞಾಮೂಲದ ನಾಟಕ, ಕಾದಂಬರಿ, ಕಾವ್ಯ, ಮಹಾಕಾವ್ಯಗಳನ್ನು, ಮುಖ್ಯವಾಗಿ ಸಂಸ್ಕೃತದಲ್ಲಿ ರಚನೆಗೊಂಡವು ಮತ್ತು ಅವುಗಳ ಪ್ರೇರಣೆಯಿಂದ ಸೃಜಿಸಿದಂಥವುಗಳನ್ನು ಪಾಶ್ಚಾತ್ಯ ದೃಷ್ಟಿಯ ವಿಮರ್ಶೆಗೊಳಪಡಿಸಿ ಅಪಸವ್ಯಗೊಳಿಸಿ, ಅಪದ್ಧಗೊಳಿಸಿ ಹೊರಗಿನ ಮಾಲಿನ್ಯವನ್ನು ನಮ್ಮ ಭಾರತೀಯ ಪ್ರಜ್ಞಾಮೂಲದ ಮಹಾಕಾವ್ಯಗಳಿಗೆ ತುಂಬುವ ದುಃಸ್ಸಾಹಸದ ದುಷ್ಟವ್ಯೂಹ ಲಾಗಾಯ್ತಿನಿಂದಲೂ ಬೆಳೆಯುತ್ತಲೇ ಇದೆ. ಹಾಗಂತ ವಿಮರ್ಶಿಸಬಾರದೆಂದಲ್ಲ. ನಮ್ಮ ಪ್ರಾಚೀನರು ಮನುಷ್ಯ ಸಂಕುಲದ ಔನ್ನತ್ಯವನ್ನು ನಾಶಗೊಳಿಸುವಂತೆ ಯಾವುದನ್ನೂ ರಚಿಸಲಿಲ್ಲ. ಆಧುನಿಕ ವಿಜ್ಞಾನವೂ ಕಾಣದ ಜಗತ್ತನ್ನು ಕಂಡು ಕಾಣಿಸಿದ ಹಿರಿಮೆ ಅವರದ್ದು. ಕಾವ್ಯ ಕೃತಿಗಳನ್ನೋದಿ ಕೈಮುಗಿದು ಭಯ-ಭಕ್ತಿ ತೋರುವ ಭರದಲ್ಲಿ ಏನೂ ಲಾಭ ಪಡೆಯದೆ ಆತ್ಮವಂಚನೆಯನ್ನೂ ಮಾಡಿಕೊಳ್ಳಬಾರದು. ಆತ್ಮವಂಚನೆ ಆತ್ಮಹತ್ಯೆಗೆ ಸಮ! ಅಭಾರತೀಯ ಪ್ರಜ್ಞೆಯ ಯಾವ ವಿಮರ್ಶೆಯೂ, ವಿಮರ್ಶೆಯ ಪ್ರಾಕಾರವೂ ಭಾರತೀಯ ಪ್ರಜ್ಞೆಯನ್ನು ಹಂಗಿಗೊಳಪಡಿಸಲು ಸಾಧ್ಯವಿಲ್ಲವೆಂಬುದೇ ಆತ್ಯಂತಿಕವಾದ ಸತ್ಯ! ಅಥವಾ ಯಾವ ವಿಮರ್ಶೆಯ ಹಂಗೂ ಭಾರತೀಯ ಪ್ರಜ್ಞೆಗಿಲ್ಲ

ವಿಮರ್ಶೆ ಎಂಬುದು ಒಂದು ಬೌದ್ಧಿಕ ಕ್ರಿಯೆ. ಯಾವುದೇ ಕೃತಿಯನ್ನು ತೂಗಿನೋಡಿ ಮೌಲ್ಯ ನಿರ್ಧರಿಸುವ ಸಾಮರ್ಥ್ಯ ಅಥವಾ ಕಲೆ (ಕ್ರಿಟಿಸಿಸಮ್). ಈ ಪದ ಗ್ರೀಕ್ ಮೂಲದ ಕ್ರಿನೈನ್‍ದಿಂದ ಬಂದದ್ದು. ಅಂದರೆ ಬೇರ್ಪಡಿಸು, ವಿವೇಕಿಸು, ವಿಶ್ಲೇಷಿಸು ಎಂದರ್ಥ. ಕ್ರಿಯಾಶೀಲ ಬರೆಹಗಾರರು, ಪ್ರಾರಂಭಿಕ ಬರೆಹಗಾರರು, ವೃತ್ತಿಶೀಲ ವಿಮರ್ಶಕರು ಎಲ್ಲರ ವಿಶ್ಲೇಷಣೆಯನ್ನು ವಿಮರ್ಶೆಯೆಂದೇ ಕರೆಯಲಾಗುತ್ತದೆ. ಇಂದು ಬಳಸುತ್ತಿರುವ ವಿಮರ್ಶೆ ಎಂಬ ಪದ ಇಂಗ್ಲಿಷ್‍ನ ಕ್ರಿಟಿಸಿಸಂ ಪದಕ್ಕೆ ಸಂವಾದಿಯಾಗಿದೆ. ವಿಮರ್ಶೆ ಈ ಮೇಲಿನ ಯಾವುದೇ ಕವಲಿಗೆ ಸಂಬಂಧಿಸಿರಬಹುದು. ಆದರೆ ಕೆಲವು ಲಕ್ಷಣಗಳಿರಬೇಕೆಂದು ವಿದ್ವಾಂಸರು ಒಂದಲ್ಲ ಒಂದು ರೀತಿಯಿಂದ ಪ್ರತಿಪಾದಿಸುತ್ತಲೇ ಬಂದಿದ್ದಾರೆ.

ಟಿ.ಎಸ್.ಎಲಿಯಟ್‍ನ ಪ್ರಕಾರ ವಿಮರ್ಶೆ ಕಲಾಕೃತಿಗಳನ್ನು ಅರ್ಥೈಸಬೇಕು ಹಾಗೂ ಓದುಗನ ಅಭಿರುಚಿಯನ್ನು ತಿದ್ದಬೇಕು. ಎಫ್.ಆರ್.ಲೀವಿಸ್‍ನ ಪ್ರಕಾರ ಉನ್ನತವಾದ ನೈತಿಕ ಪ್ರಜ್ಞೆಯನ್ನು ನಿರೂಪಿಸಬೇಕು ಹಾಗೂ ಕೃತಿಯಲ್ಲಿಯ ಮೌಲ್ಯಗಳು ಬದುಕಿನ ಪರವಾಗಿವೆಯೇ ಎಂದು ನಿರೂಪಿಸಬೇಕು. ಮ್ಯಾಥ್ಯೂ ಆರ್ನಾಲ್ಡ್‍ನ ಪ್ರಕಾರ ಮಾನವ ಮೌಲ್ಯಗಳನ್ನು ಪ್ರತಿಪಾದಿಸುವಂಥದಾಗಿರಬೇಕು ಹಾಗೂ ಸಾಹಿತಿ ತನ್ನ ಕೃತಿಯಲ್ಲಿ ಅಭಿವ್ಯಂಜಿಸಿದ ಅನುಭವಗಳ ಮಟ್ಟವನ್ನು ಪರಿಶೀಲಿಸಿ ಮೌಲ್ಯನಿರ್ಧರಿಸಬೇಕು. 1941ರ ಅನಂತರ, ಅಮೆರಿಕದ ಕವಿ, ವಿಮರ್ಶಕ ಜಾನ್‍ಕ್ರೋ ರ್ಯಾನ್‍ಸಮ್ `ನವ್ಯವಿಮರ್ಶೆಯೆಂಬ (ನ್ಯೂ ಕ್ರಿಟಿಸಿಸಮ್) ಗ್ರಂಥವನ್ನು ಹೊರತರುವುದರ ಮೂಲಕ ವಿಮರ್ಶಾಕ್ಷೇತ್ರದಲ್ಲಿ ಹೊಸತೊಂದು ಹಂತವನ್ನು ರೂಪಿಸಿದ. ಅವನ ಹಾದಿಯಲ್ಲೇ ಬಂದ ಇತರ ಮಹತ್ತ್ವದ ವಿಮರ್ಶಕರಾದ ಕ್ಲಿಯಂತ್ ಬ್ರೂಕ್ಸ್, ರಾಬರ್ಟ್ ಪೆನ್ ವಾರನ್ ಮತ್ತು ರಾಬರ್ಟ್ ಹೇಲ್ಮನ್ ಮೂವರು ಒಟ್ಟಿಗೆ ರಚಿಸಿದ ಅಂಡರ್‍ ಸ್ಟ್ಯಾಂಡಿಂಗ್ ಪೊಯೆಟ್ರಿ (ಕಾವ್ಯಾಸ್ವಾದ), ಅಂಡರ್‍ಸ್ಟ್ಯಾಂಡಿಂಗ್ ಫಿಕ್ಷನ್ (ಕಥನ ಸಾಹಿತ್ಯದ ಆಸ್ವಾದ) ಮತ್ತು ಅಂಡರ್ ಸ್ಟ್ಯಾಡಿಂಗ್ ಡ್ರಾಮಾ (ನಾಟಕದ ಆಸ್ವಾದ) ಕೃತಿಗಳು ಒಂದು ಕೃತಿಯನ್ನು ಅಭ್ಯಸಿಸುವಾಗ ಅವುಗಳ ಶಿಲ್ಪ ಮತ್ತು ಬಂಧ ಕರ್ಷಣ (ಟೆನ್ಶನ್) ವ್ಯಂಗ್ಯ ಮತ್ತು ವಿರೋಧಾಭಾಸ (ಐರನಿ ಅಂಡ್ ಪ್ಯಾರಡಾಕ್ಸ್), ಆಂಗಿಕ ಸಂಜ್ಞೆ (ಲ್ಯಾಂಗ್ವೇಜ್ ಆ್ಯಸ್ ಗೆಶ್ಚರ್), ಭ್ರಮೆ (ಫ್ಯಾಲಸಿ) ಮುಂತಾದ ವಿಷಯಗಳನ್ನು ಗ್ರಹಿಸಿ ವಿಮರ್ಶಿಸಬೇಕೆಂದು ಪ್ರತಿಪಾದಿಸುತ್ತಾರೆ.

ಮನುಷ್ಯನ ಬದುಕಿನ ಕ್ರಮ, ಚಿಂತನೆಯ ರೀತಿ, ಸಂವೇದನೆಯ ತೀವ್ರತೆ ಭಾಷೆಯ ಅರ್ಥ-ಲಯ-ಧ್ವನಿಗಳು, ಅಭಿವ್ಯಕ್ತಿ ತಂತ್ರಗಳು, ಓದುಗರ ಅಭಿರುಚಿ ಇವೇ ಕಾಲ ಕಾಲಕ್ಕೆ ನಿಧಾನವಾಗಿ ಆದರೆ ನಿರಂತರವಾಗಿ ಬದಲಾಗುತ್ತಲೇ ಹೋಗುವುದರಿಂದ ಒಂದು ಕೃತಿಗೆ ಒಂದು ಕಾಲಘಟ್ಟದಲ್ಲಿ ಇರುವ ವಿಶಿಷ್ಟವಾದ ಪ್ರಸ್ತುತ (ರೆಲೆವೆನ್ಸ್) ಸದಾಕಾಲ ಇರುತ್ತದೆ ಎಂಬ ಗ್ರಹಿಕೆಯಾಗಲಿ, ಇರಬೇಕು ಎಂಬ ಆಶಯವಾಗಲಿ ಎರಡೂ ಅಸಹಜ ಎಂಬುದು ಯಾವ ಸಾಹಿತ್ಯ ಚರಿತ್ರೆಯನ್ನೋದಿದರೂ ಗೊತ್ತಾಗುತ್ತದೆ, ಆದರೆ ಅನುಭವದ ಕೆಲವು ಆಕೃತಿಗಳು ಅನೇಕ ಕಾರಣಗಳಿಂದಾಗಿ ಮರುಕಳಿಸುವುದರಿಂದ ಯಾವುದೋ ಕಾಲಘಟ್ಟದ ಒಂದು ಕವಿತೆ, ನಾಟಕ, ಕಾದಂಬರಿ ನಮಗೆ ’ಇವತ್ತು’ ಪ್ರಸ್ತುತ ಎನ್ನಿಸಬಹುದು. ಇಂದಿನ ಪ್ರಸ್ತುತತೆಯ ಸಾಧ್ಯತೆಗಳನ್ನು ಹೆಚ್ಚು ಹೆಚ್ಚು ಒಳಗೊಂಡಿರುವ ಕೃತಿ ವಿಭಿನ್ನ ಕಾಲ ಘಟ್ಟಗಳಲ್ಲೂ “ಸಮಕಾಲೀನ” ವೆನ್ನಿಸುತ್ತದೆ. ಇದನ್ನೇ ಬೇಕೆಂದರೆ ಸಾರ್ವಕಾಲಿಕ ಅಥವಾ ಶಾಶ್ವತ ಎಂದು ಕರೆಯಬಹುದು- ಮೈಮೇಲೆ ತುಂಬ ಎಚ್ಚರ ಇಟ್ಟುಕೊಂಡು ’ಶಾಶ್ವತ’ ಆಶಯ-ಉದ್ದೇಶವಾಗಿರದೆ, ಕೃತಿ ರಚನೆಯಾದ ಎಷ್ಟೋ ಕಾಲಘಟ್ಟಗಳ ನಂತರ ತಾನಾಗಿಯೇ ರೂಪು ಪಡೆಯುವ ಮೌಲ್ಯ ನಿರ್ಣಯವಾಗಿರುತ್ತದೆ. ಭಾರತೀಯ ಪ್ರಜ್ಞೆಯಿಂದ ಸೃಜಿಸಲ್ಪಟ್ಟ ಸಾಹಿತ್ಯಗಳು ಸಾರ್ವಕಾಲಿಕ ಅಥವಾ ಶಾಶ್ವತ ಮೌಲ್ಯಗಳನ್ನು ಪ್ರತಿಪಾದಿಸುತ್ತವೆಂಬುದು ಬೆಳಕಿನಷ್ಟು ಸತ್ಯ! ಭಾರತೀಯ ಪ್ರಜ್ಞೆ ಸಮಕಾಲೀನವೂ ಅಹುದು, ಸಾರ್ವಕಾಲಿಕವೂ ಅಹುದು. ಆದ್ದರಿಂದ ವಿಮರ್ಶೆಯ ಹಂಗು ಅನಾವಶ್ಯಕ. ಅನಗತ್ಯ. ವಿಮರ್ಶೆ ಸೆರೆ ಬೇಕಾಗಿಲ್ಲ.

ಆಧುನಿಕ ವಿಮರ್ಶೆಯ ಪ್ರಜ್ಞೆಯೂ ಭಾರತೀಯ ಸಾಹಿತ್ಯ ಪರಂಪರೆಯು ಜೀವನಮೌಲ್ಯಗಳನ್ನು ಸಾಹಿತ್ಯ ಕೃತಿಗಳ ವಸ್ತುವಿಷಯಗಳಲ್ಲಿ, ಪಾತ್ರಗಳಲ್ಲಿ ಧಾರಾಳವಾಗಿ ಒದಗಿಸುತ್ತದೆ. ಯಾವ ಸಂದರ್ಭದಲ್ಲೂ ದುರಂತದ ಪರಿಕಲ್ಪನೆಯನ್ನು ಕಾಣಿಸುವುದಿಲ್ಲ. ಸುಸೂತ್ರವಾಗಿ ಆರಂಭವಾಗಿ ಸುಖಾಂತ್ಯವನ್ನು ಬಯಸುತ್ತದೆ. ಅದು ಕಾವ್ಯ ಆಗಿರಬಹುದು, ಮಹಾಕಾವ್ಯ ಆಗಿರಬಹುದು, ಕಾದಂಬರಿಯಾಗಿರಬಹುದು, ನಾಟಕವೇ ಆಗಿರಬಹುದು. ಎಲ್ಲಿಯೂ ದುರಂತದ ಪ್ರಜ್ಞೆ ಇರುವುದೇ ಇಲ್ಲ. ಆಫ್ ಕೋರ್ಸ್ ಇಲ್ಲವೇ ಇಲ್ಲ. ಒಂದು ಸಿದ್ಧ ಮಾದರಿಯನ್ನು ಇಟ್ಟುಕೊಂಡು ರಚನೆಗೊಳ್ಳುವ ಕೃತಿಗೆ ವಿಮರ್ಶೆಯ ಹಂಗು ಬೇಕಾದೀತು, ಭಾರತೀಯ ಪ್ರಜ್ಞೆ Plot Construction ಮತ್ತು Characterisation ಎಂಬೆರಡು ಕೋನಗಳನ್ನಿಟ್ಟು ಗ್ರೀಕ್ ನಾಟಕಗಳನ್ನು ವಿಮರ್ಶಿಸಿ ಪೋಷಿಸಿದಂತೆ ಹಾಗೆ ಸಿದ್ಧ ಮಾದರಿಯನ್ನು ಇಟ್ಟುಕೊಂಡು ರಚನೆಗೊಂಡ ಕೃತಿಯಲ್ಲ! ಮುಖ್ಯವಾಗಿ, ರಾಮಾಯಣ ಮತ್ತು ಮಹಾಭಾರತ ಎಂಬ ಇತಿಹಾಸಿಕ ಮಹಾಕಾವ್ಯಗಳು ಇದಕ್ಕೆ ಜ್ವಲಂತ ನಿದರ್ಶನಗಳು.

ಲೇಖಕರು
ದೇವಿದಾಸ್ ಟಿ.

Leave a Reply

Your email address will not be published. Required fields are marked *